ಕಾಂಗ್ರೆಸ್ ಶಾಸಕರಿಗೇ ಸಿಎಂ ಸಿದ್ದರಾಮಯ್ಯ ಮೇಲೆ ವಿಶ್ವಾಸವಿಲ್ಲ, ಜನರಿಗೂ ಇಲ್ಲ: ವಿಜಯೇಂದ್ರ ಟೀಕೆ
ರಾಜ್ಯದಲ್ಲಿ ರಾಜಕೀಯ ಅನಿಶ್ಚಿತತೆ ಕಾಡುತ್ತಿದೆ. ಸುರ್ಜೇವಾಲಾ ಅವರು ಪದೇಪದೇ ಬೆಂಗಳೂರಿಗೆ ಬರುತ್ತಿದ್ದಾರೆ. ಶಾಸಕರ ಅಭಿಪ್ರಾಯ ಪಡೆದುಕೊಳ್ಳುತ್ತಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.;
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ
ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಶಾಸಕರಿಗೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ವಿಶ್ವಾಸವಿಲ್ಲ, ರಾಜ್ಯದ ಜನರಿಗೂ ವಿಶ್ವಾಸವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಸೋಮವಾರ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಸ್ಥಾನಪಲ್ಲಟಗಳು ನಡೆಯುವ ಸಾಧ್ಯತೆಗಳನ್ನು 'ನಾವು ಕಾದು ನೋಡುತ್ತೇವೆ' ಎಂದ ವಿಜಯೇಂದ್ರ, ಸಿಎಂ ಬದಲಾದರೂ ರಾಜ್ಯಕ್ಕಾಗಲಿ, ಜನರಿಗಾಗಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ಹೇಳಿದರು. "15 ಬಜೆಟ್ ಮಂಡಿಸಿದ ಅನುಭವಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತದಲ್ಲಿ ಹಣಕಾಸು ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಯಾರೇ ಮುಖ್ಯಮಂತ್ರಿ ಆದರೂ ರಾಜ್ಯವು ಅಭಿವೃದ್ಧಿ ಕಾಣಲು ಸಾಧ್ಯವಾಗದು" ಎಂದು ಅವರು ಅಭಿಪ್ರಾಯಪಟ್ಟರು.
ರಾಜಕೀಯ ಅನಿಶ್ಚಿತತೆ ಮತ್ತು ಸುರ್ಜೇವಾಲಾ ಭೇಟಿ
ರಾಜ್ಯದಲ್ಲಿ ತೀವ್ರ ರಾಜಕೀಯ ಅನಿಶ್ಚಿತತೆ ಇದೆ ಎಂದು ವಿಜಯೇಂದ್ರ ವಿಶ್ಲೇಷಿಸಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಪದೇಪದೇ ಬೆಂಗಳೂರಿಗೆ ಭೇಟಿ ನೀಡಿ ಶಾಸಕರ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದ್ದಾರೆ, ಇಂದೂ ಕೂಡ ಮೂರು ದಿನಗಳ ಕಾಲ ರಾಜ್ಯದಲ್ಲಿದ್ದಾರೆ ಎಂದು ಅವರು ಉಲ್ಲೇಖಿಸಿದರು. "ಡಿ.ಕೆ. ಶಿವಕುಮಾರ್ ಜೊತೆ 100 ಶಾಸಕರಿದ್ದಾರೆ, ಅವರಿಗೂ ಅವಕಾಶ ಕೊಡಬೇಕೆಂಬ ನಾನಾ ಹೇಳಿಕೆಗಳು ಬರುತ್ತಿವೆ. ಬಿ.ಆರ್. ಪಾಟೀಲ್ ಮತ್ತು ರಾಜು ಕಾಗೆಯವರ ಹೇಳಿಕೆಗಳನ್ನು ಗಮನಿಸಿದರೆ ಆಡಳಿತ ಪಕ್ಷದ ಶಾಸಕರು ಮುಖ್ಯಮಂತ್ರಿಗಳ ಮೇಲಿನ ವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ ಎಂಬುದು ಸ್ಪಷ್ಟ" ಎಂದರು. ಸುರ್ಜೇವಾಲಾ ಅವರ ಪದೇಪದೇ ಭೇಟಿ ಸುಮ್ಮನೆ ಅಲ್ಲ, ಅವರ ಹಿಂದೆ ಒಂದು ನಿಗದಿತ ಕಾರ್ಯಸೂಚಿ ಇದೆ, ಅದು ಮುಖ್ಯಮಂತ್ರಿ ಸೇರಿದಂತೆ ಎಲ್ಲ ಆಡಳಿತ ಪಕ್ಷದವರಿಗೂ ತಿಳಿದಿದೆ ಎಂದು ವಿಜಯೇಂದ್ರ ನುಡಿದರು.
ಕಾನೂನು ಮತ್ತು ಸುವ್ಯವಸ್ಥೆ ಕುರಿತು ಆಡಳಿತ ಪಕ್ಷದ ಮೇಲೆ ಹರಿಹಾಯ್ದ ವಿಜಯೇಂದ್ರ
ಶಿವಮೊಗ್ಗದಲ್ಲಿ ವಿಗ್ರಹಗಳಿಗೆ ಅವಮಾನವಾದ ಘಟನೆ ಕುರಿತು ಪ್ರತಿಕ್ರಿಯಿಸಿದ ವಿಜಯೇಂದ್ರ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸರಿಯಾಗಿಲ್ಲ ಎಂದು ಆರೋಪಿಸಿದರು. "ಎರಡು ಧರ್ಮಗಳ ನಡುವೆ ಸಂಘರ್ಷ ನಡೆಯುತ್ತಿರಬೇಕೆಂಬ ದುರುದ್ದೇಶದಿಂದ ಅಹಿತಕರ ಘಟನೆಗಳು ನಡೆಯುತ್ತಿವೆ. ರಾಜ್ಯ ಸರಕಾರವು ಇದನ್ನು ಗಂಭೀರವಾಗಿ ತೆಗೆದುಕೊಳ್ಳದೆ ಇರುವುದು ದುರಂತ" ಎಂದು ಟೀಕಿಸಿದರು.
ಮಂಗಳೂರಿನ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ, ಮೈಸೂರಿನಲ್ಲಿ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರನ್ನೇ ಬೆದರಿಸಿದ ಘಟನೆ, ಮತ್ತು ಶಿವಮೊಗ್ಗದಲ್ಲಿ (ಟಿಪ್ಪು ಜಯಂತಿ, ಗಣೇಶ ಹಬ್ಬದ ಸಂದರ್ಭದಲ್ಲಿ) ಪದೇಪದೇ ನಡೆಯುತ್ತಿರುವ ಅಹಿತಕರ ಘಟನೆಗಳನ್ನು ಉಲ್ಲೇಖಿಸಿದ ಅವರು, ಇವೆಲ್ಲವೂ "ವ್ಯವಸ್ಥಿತ ಷಡ್ಯಂತ್ರ" ಎಂದು ಆರೋಪಿಸಿದರು. "ಈ ಷಡ್ಯಂತ್ರದ ವಿರುದ್ಧ ರಾಜ್ಯ ಸರಕಾರವು ಯಾವುದೇ ಕ್ರಮ ಕೈಗೊಳ್ಳದ ಕಾರಣ ಇಂಥ ದೇಶದ್ರೋಹಿಗಳಿಗೂ ಧೈರ್ಯ ಬರುತ್ತಿದೆ" ಎಂದು ಅವರು ಹೇಳಿದರು. "ರಾಜ್ಯದಲ್ಲಿ ಬೇಲಿಯೇ ಎದ್ದು ಹೊಲ ಮೇಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ದುಷ್ಕೃತ್ಯಗಳು ನಡೆಯುತ್ತಿವೆ. ಬಿಜೆಪಿ ಇದನ್ನು ಬಲವಾಗಿ ಖಂಡಿಸುತ್ತದೆ. ರಾಜ್ಯದ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಈ ಬಗ್ಗೆ ಗಮನಹರಿಸಬೇಕು" ಎಂದು ವಿಜಯೇಂದ್ರ ಒತ್ತಾಯಿಸಿದರು.
ಹಾಸನ ಘಟನೆ ಮತ್ತು ರಾಜ್ಯದ ಹದಗೆಟ್ಟ ಆರ್ಥಿಕ ಸ್ಥಿತಿ
ಹಾಸನ ಜಿಲ್ಲೆಯಲ್ಲಿ ಯುವಜನರು ಸರಣಿ ಸಾವನ್ನಪ್ಪುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ವಿಜಯೇಂದ್ರ, "ಅಲ್ಲಿನ ಉಸ್ತುವಾರಿ ಸಚಿವರು ಕಳೆದ 3 ತಿಂಗಳುಗಳಿಂದ ಭೇಟಿ ಕೊಟ್ಟಿಲ್ಲ; ಇದು ಅವರ ಬೇಜವಾಬ್ದಾರಿಯನ್ನು ತೋರಿಸುತ್ತದೆ" ಎಂದು ಆಕ್ಷೇಪಿಸಿದರು. ರಾಜ್ಯ ಸರಕಾರ ಎಷ್ಟು ಬೇಜವಾಬ್ದಾರಿಯಿಂದ ವರ್ತಿಸುತ್ತದೆ ಎಂಬುದಕ್ಕೆ ಇದಕ್ಕಿಂತ ಬೇರೆ ಪುರಾವೆ ಬೇಕಿಲ್ಲ ಎಂದು ಟೀಕಿಸಿದರು.
ರಾಜ್ಯದ ಆಡಳಿತ ಸಂಪೂರ್ಣ ಕುಸಿದಿದ್ದು, ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ ಎಂಬುದಕ್ಕೆ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರ ಹೇಳಿಕೆಯೇ ಸ್ಪಷ್ಟ ಪುರಾವೆ ಎಂದು ವಿಜಯೇಂದ್ರ ಪ್ರತಿಪಾದಿಸಿದರು. "ರಸ್ತೆಗಳು, ಅಭಿವೃದ್ಧಿ ಕೆಲಸ ಆಗಬೇಕೆಂದಿದ್ದರೆ ಗ್ಯಾರಂಟಿಗಳನ್ನು ನಾವು ನಿಲ್ಲಿಸುತ್ತೇವೆ" ಎಂದು ರಾಯರೆಡ್ಡಿ ಹೇಳಿರುವುದನ್ನು ಉಲ್ಲೇಖಿಸಿ, "ಇದು ರಾಯರೆಡ್ಡಿ ಅವರ ಹೇಳಿಕೆ ಅಲ್ಲ; ಸ್ವತಃ ಮುಖ್ಯಮಂತ್ರಿಗಳೇ ಗ್ಯಾರಂಟಿ ಅನುಷ್ಠಾನಕ್ಕೆ ಹಣ ಕ್ರೋಡೀಕರಿಸಲು ಸಾಧ್ಯವಾಗದೇ ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ ಎಂಬುದನ್ನು ಹಾಗೂ ಅಭಿವೃದ್ಧಿಗೆ ಹಣ ಕೊಡಲು ಸಾಧ್ಯವಿಲ್ಲ ಎಂಬುದನ್ನು ಅವರ ಮೂಲಕ ಹೇಳಿಸಿದ್ದಾರೆ" ಎಂದು ವಿಜಯೇಂದ್ರ ವಿಶ್ಲೇಷಿಸಿದರು.
ಅಂತಿಮವಾಗಿ, "ರಾಜ್ಯ ಸರಕಾರದ ಬಗ್ಗೆ ಜನರು ಬೇಸತ್ತಿದ್ದಾರೆ. ನಾಡಿನ ಜನರು ಭ್ರಷ್ಟ, ಜನವಿರೋಧಿ, ರೈತವಿರೋಧಿ ಸರಕಾರಕ್ಕೆ ಮತ ಕೊಟ್ಟು ಅಧಿಕಾರಕ್ಕೆ ತಂದಿರುವುದಕ್ಕೆ ಪಶ್ಚಾತ್ತಾಪ ಪಡುತ್ತಿದ್ದಾರೆ" ಎಂದು ವಿಜಯೇಂದ್ರ ಹೇಳಿದರು.