ರಾಜ್ಯದಲ್ಲಿ ನಿಲ್ಲದ ಗುತ್ತಿಗೆದಾರರ ಆತ್ಮಹತ್ಯೆ; ಆಗ ಕಾಂಗ್ರೆಸ್‌ಗೆ ಆಟ, ಈಗ ಪ್ರಾಣ ಸಂಕಟ
ಬಿಜೆಪಿ ಅವಧಿಯಲ್ಲಿ ಗುತ್ತಿಗೆದಾರರ ಆತ್ಮಹತ್ಯೆ, ಶೇ 40 ಕಮಿಷನ್ ಆರೋಪವನ್ನೇ ಅಸ್ತ್ರ ಮಾಡಿ ಪ್ರಚಾರ ನಡೆಸಿತ್ತು ಕಾಂಗ್ರೆಸ್. ಈಗ ಅಂತಹ ಪ್ರಕರಣಗಳೇ ಕಾಂಗ್ರೆಸ್ ಸರ್ಕಾರಕ್ಕೆ ತಿರುಗುಬಾಣವಾಗಿದೆ..
ರಾಜ್ಯದಲ್ಲಿ ಕಳೆದ ಎರಡು ಅವಧಿಯಲ್ಲಿ ಆಡಳಿತದ ಚುಕ್ಕಾಣಿ ಹಿಡಿದ ಸರ್ಕಾರಗಳಿಗೆ ʼಗುತ್ತಿಗೆದಾರರ ಆತ್ಮಹತ್ಯೆʼ ಪ್ರಕರಣಗಳು ಬೆಂಬಿಡದ ಭೂತದಂತೆ ಕಾಡುತ್ತಿವೆ. 2022ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಇಬ್ಬರು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದರು. ಗುತ್ತಿಗೆದಾರರ ಆತ್ಮಹತ್ಯೆ ಹಾಗೂ ಕಮಿಷನ್ ಆರೋಪವನ್ನೇ ಪ್ರಮುಖ ದಾಳವನ್ನಾಗಿ ಬಳಸಿಕೊಂಡು ಚುನಾವಣೆ ಗೆದ್ದು ಅಧಿಕಾರ ಹಿಡಿದ ಕಾಂಗ್ರೆಸ್ ಅವಧಿಯಲ್ಲೂ ಗುತ್ತಿಗೆದಾರರ ಆತ್ಮಹತ್ಯೆ ಪ್ರಕರಣಗಳು ನಿಂತಿಲ್ಲ. ಪ್ರಸಕ್ತ ವರ್ಷದಲ್ಲಿ( 2024) ಇಬ್ಬರು ಗುತ್ತಿಗೆದಾರರು, ಇಬ್ಬರು ಅಧಿಕಾರಿಗಳು ಹಾಗೂ ಇಬ್ಬರು ಇನ್‌ಸ್ಪೆಕ್ಟರ್‌ಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಇದನ್ನೇ ಅಸ್ತ್ರವನ್ನಾಗಿಟ್ಟುಕೊಂಡು ಈಗ ಪ್ರತಿಪಕ್ಷ ಬಿಜೆಪಿ ಹೋರಾಟಕ್ಕೆ ಅಣಿಯಾಗಿದೆ.
ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಅಂದಿನ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ತಲೆದಂಡವಾಗಿತ್ತು. ಇದೇ ಅವಧಿಯಲ್ಲಿ ಎದುರಾದ ವಿಧಾನಸಭೆ ಚುನಾವಣೆಯಲ್ಲಿ ಅಂದಿನ ಆಡಳಿತಾರೂಢ ಬಿಜೆಪಿ ಸರ್ಕಾರ ಅಧಿಕಾರ ಕಳೆದುಕೊಂಡಿತ್ತು.
ಬಿಜೆಪಿ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ ಶೇ 40 ರಷ್ಟು ಕಮಿಷನ್‌ಗೆ ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಎಂಬುವರು 2022 ಏ.11 ರಂದು ಉಡುಪಿಯ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಡೆತ್ ನೋಟ್‌ನಲ್ಲಿ ಕೆ.ಎಸ್.ಈಶ್ವರಪ್ಪ ಹೆಸರು ಉಲ್ಲೇಖಿಸಿದ್ದರು. ಇದರಿಂದ ಈಶ್ವರಪ್ಪ ರಾಜೀನಾಮೆ ನೀಡಬೇಕಾಗಿ ಬಂದಿತ್ತು.
ಇನ್ನು ತುಮಕೂರಿನ ಗುತ್ತಿಗೆದಾರ ಟಿ.ಎನ್. ಪ್ರಸಾದ್ ಎಂಬುವರು ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಬಿಲ್ ಪಾವತಿ ವಿಳಂಬದ ಬಗ್ಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ಇಬ್ಬರೂ ಗುತ್ತಿಗೆದಾರರ ಆತ್ಮಹತ್ಯೆ ಹಾಗೂ ಶೇ 40ರಷ್ಟು ಕಮಿಷನ್ ಆರೋಪ ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಬಿಜೆಪಿ ವಿರುದ್ಧ ಪೇ ಸಿಎಂ ಅಭಿಯಾನ, ವಿಧಾನಸಭೆಯಲ್ಲಿ ಧರಣಿ, ರಾಜ್ಯವ್ಯಾಪಿ ಪ್ರತಿಭಟನೆ ಮೂಲಕ ಪ್ರಚಾರ ನಡೆಸಿತ್ತು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ತಪ್ಪಿಲ್ಲ ಆತ್ಮಹತ್ಯೆ
ಗುತ್ತಿಗೆದಾರರ ಆತ್ಮಹತ್ಯೆ, ಶೇ 40 ಕಮಿಷನ್ ಆರೋಪವನ್ನೇ ದಾಳವಾಗಿ ಬಳಸಿಕೊಂಡು ಅಧಿಕಾರಕ್ಕೇರಿದ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲೂ ಗುತ್ತಿಗೆದಾರರ ಆತ್ಮಹತ್ಯೆ ಮುಂದುವರಿದಿದೆ. ಶಾಸಕರು, ಶಾಸಕರ ಆಪ್ತರ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಿದೆ. ಗುತ್ತಿಗೆದಾರರ ಈ ಆತ್ಮಹತ್ಯೆ ಪ್ರಕರಣಗಳು ಸರ್ಕಾರಕ್ಕೆ ಮುಳುವಾಗಿ ಪರಿಣಮಿಸಿವೆ.
ಇನ್ನು ವಿವಿಧ ಹಗರಣಗಳು, ಅಧಿಕಾರಿಗಳ ಆತ್ಮಹತ್ಯೆ ಪ್ರಕರಣಗಳು ಕೂಡ ವಿಪಕ್ಷಗಳಿಗೆ ಅಸ್ತ್ರವಾಗಿ ದೊರೆತಿದ್ದು, ಇದು ರಾಜ್ಯ ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಕಾಡುತ್ತಿದೆ.
ದಾವಣಗೆರೆ ಮೂಲದ ಗುತ್ತಿಗೆದಾರ ಆತ್ಮಹತ್ಯೆ
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್‌ಡಿಸಿಎಲ್)ನಲ್ಲಿ ಕಾಮಗಾರಿ ಬಿಲ್ ಪಾವತಿಸದ ಕಾರಣ ದಾವಣಗೆರೆ ಮೂಲದ ಗುತ್ತಿಗೆದಾರ ಜಿ. ಪ್ರಸನ್ನ ಅವರು ಸಂತೇಬೆನ್ನೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್ ಬರೆದು, ಅಧಿಕಾರಿಗಳ ಭ್ರಷ್ಟಾಚಾರದ ಬಗ್ಗೆ ಉಲ್ಲೇಖಿಸಿದ್ದರು.
ರೈಲಿಗೆ ತಲೆಕೊಟ್ಟ ಯುವ ಗುತ್ತಿಗೆದಾರ
ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ಎಂಬಾತ ಟೆಂಡರ್ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಯುವ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಮಾಡಿಕೊಂಡಿದ್ದರು.
ಕಾಮಗಾರಿಗಳ ಟೆಂಡರ್ ಕೊಡಿಸಲು ತಮ್ಮಿಂದ 15 ಲಕ್ಷ ಹಣ ಪಡೆದು, ಟೆಂಡರ್ ಕೊಡಿಸದೇ ವಂಚಿಸಿದ್ದಾರೆ ಎಂದು ದೂರಿ ಗುತ್ತಿಗೆದಾರ ಸಚಿನ್ ಏಳು ಪುಟಗಳ ಡೆತ್‌ನೋಟ್ ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಂಡಿದ್ದರು. ಟೆಂಡರ್ ವಿಚಾರವಾಗಿ ರಾಜು ಕಪನೂರ ಅವರು ಸಚಿವ ಪ್ರಿಯಾಂಕ್ ಖರ್ಗೆ ಅವರನ್ನೂ ಭೇಟಿ ಮಾಡಿಸಿದ್ದರು ಎಂದು ಉಲ್ಲೇಖಿಸಿದ್ದರು.
ಪ್ರಿಯಾಂಕ್ ಖರ್ಗೆ ಆಪ್ತನಾದ ರವಿ ಕಪನೂರ ಹಾಗೂ ಅವರ ಸಹಚರರು ಬಿಜೆಪಿ ಶಾಸಕ ಬಸವರಾಜ ಮತ್ತಿಮೂಡ್ ಹಾಗೂ ಇತರ ನಾಯಕರ ಹತ್ಯೆಗೂ ಸಂಚು ರೂಪಿಸಿದ್ದರು ಎಂಬ ಉಲ್ಲೇಖ ಈಗ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಪ್ರತಿಪಕ್ಷಗಳು ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಒತ್ತಾಯಿಸುತ್ತಿವೆ.
ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ
ಕರ್ನಾಟಕ ಮಹರ್ಷಿ ವಾಲ್ಮೀಕಿ ನಿಗಮದ ಅವ್ಯವಹಾರಕ್ಕೆ ಸಂಬಂಧಿಸಿ ಬೆಂಗಳೂರು ಕಚೇರಿಯ ಸೂಪರಿಂಟೆಂಡೆಂಟ್ ಚಂದ್ರಶೇಖರ್ ಅವರು ಶಿವಮೊಗ್ಗ ವಿನೋಬನಗರದ ಮನೆಯಲ್ಲಿ 2024ರ ಮೇ.26 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್ ಬರೆದು, ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ನಿಗಮದ ಲೆಕ್ಕಾಧಿಕಾರಿ ಕಿರುಕುಳ ಬಗ್ಗೆ ಉಲ್ಲೇಖಿಸಿದ್ದರು.
ಭೋವಿ ನಿಗಮ ಹಗರಣದಲ್ಲಿ ಯುವ ಉದ್ಯಮಿ ಆತ್ಮಹತ್ಯೆ
ರಾಜ್ಯ ಭೋವಿ ಅಭಿವೃದ್ಧಿ ನಿಗಮಕ್ಕೆ ಸಾಮಗ್ರಿ ಪೂರೈಸುವ ಟೆಂಡರ್ ಪಡೆದಿದ್ದ ಉದ್ಯಮಿ ಜೀವಾ ಎಂಬುವರು ನಿಗಮದಲ್ಲಿ ನಡೆದಿದ್ದ ಹಗರಣದ ತನಿಖೆ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದರು.
ನಿಗಮದಲ್ಲಿ ನಡೆದ ಅವ್ಯವಹಾರಗಳ ತನಿಖೆ ನಡೆಸುತ್ತಿದ್ದ ಸಿಐಡಿ ಡಿವೈಎಸ್ಪಿ ಅವರು ಹಣಕ್ಕೆ ಬೇಡಿಕೆ ಇಟ್ಟಿದ್ದರು. ನಿಂದನೆ ಮೂಲಕ ಮಾನಸಿಕ ಹಿಂಸೆ ನೀಡಿದ್ದರು ಎಂದು ಆರೋಪಿಸಿ ಜೀವಾ ಅವರು ಬೆಂಗಳೂರಿನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಿಐಡಿ ತನಿಖಾಧಿಕಾರಿಯ ವಿರುದ್ಧ 11 ಪುಟಗಳ ಡೆತ್‌ನೋಟ್ ಬರೆದಿಟ್ಟಿದ್ದರು.
ಬೆಳಗಾವಿಯಲ್ಲಿ ಅಧಿಕಾರಿ ಆತ್ಮಹತ್ಯೆ
ಬೆಳಗಾವಿಯ ತಹಶೀಲ್ದಾರ್ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ರುದ್ರಣ್ಣ ಯಡವಣ್ಣನವರ ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನಬರೆದಿದ್ದ ಡೆತ್‌ನೋಟ್ನಲ್ಲಿ ತಮ್ಮ ಸಾವಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಆಪ್ತ ಸೇರಿ ಮೂವರು ಕಾರಣ ಎಂದು ದೂರಿ, ವಾಟ್ಸ್ ಆಪ್ ಗ್ರೂಪ್ ನಲ್ಲಿ ಸಂದೇಶ ಹಾಕಿದ್ದರು.
ಯಾದಗಿರಿ ಇನ್‌ಸ್ಪೆಕ್ಟರ್ ಆತ್ಮಹತ್ಯೆ
ಯಾದಗಿರಿ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಅವರ ಪುತ್ರನ ಕಿರುಕುಳದಿಂದ ಬೇಸತ್ತು ಯಾದಗಿರಿ ಠಾಣೆಯ ಇನ್‌ಸ್ಪೆಕ್ಟರ್ ಪರಶುರಾಮ್ ಅವರು 2024 ಆಗಸ್ಟ್ 3 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಶಾಸಕ ಚೆನ್ನಾರೆಡ್ಡಿ ಪುತ್ರ ವರ್ಗಾವಣೆ ಮಾಡಿಸಲು ಹಣಕ್ಕಾಗಿ ಬೇಡಿಕೆ ಇಟ್ಟಿರುವ ಕುರಿತು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.
ಸಿಸಿಬಿ ಇನ್‌ಸ್ಪೆಕ್ಟರ್ ಆತ್ಮಹತ್ಯೆ
ಇನ್ನು ಇದೇ ವರ್ಷ ಸಿಸಿಬಿ ಪೊಲೀಸ್ ಇನ್‌ಸ್ಪೆಕ್ಟರ್ ತಿಮ್ಮೇಗೌಡ ಅವರು ರಾಮನಗರ ಜಿಲ್ಲೆ ಕಗ್ಗಲಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ತಗಚಗುಪ್ಪೆ ಗ್ರಾಮದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅಧಿಕಾರಿಗಳ ಒತ್ತಡವೇ ಆತ್ಮಹತ್ಯೆ ಕಾರಣ ಎಂದು ತಿಮ್ಮೇಗೌಡ ಕುಟುಂಬಸ್ಥರು ದೂರಿದ್ದರು.
ಹೀಗೆ, ಕಾಂಗ್ರೆಸ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರರು, ಅಧಿಕಾರಿಗಳು ಡೆತ್‌ನೋಟ್ ಬರೆದಿಟ್ಟು, ರಾಜಕಾರಣಿ, ಅಧಿಕಾರಿಗಳ ಕಿರುಕುಳದ ಬಗ್ಗೆ ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಸರ್ಕಾರಕ್ಕೆ ಕಂಟಕವಾಗಿ ಪರಿಣಮಿಸಿದೆ. ಸರ್ಕಾರದ ಪ್ರತಿ ಹಂತದಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ , ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿವೆ.