ಕೆಆರ್‌ಎಸ್| ಕಾಂಗ್ರೆಸ್ ನಾಯಕರಿಂದ ಮೈಸೂರು ರಾಜಮನೆತನಕ್ಕೆ ಅಪಮಾನ, ಬಿಜೆಪಿ ನಾಯಕರಿಂದ ವಾಗ್ದಾಳಿ
ಟಿಪ್ಪು ಶಂಕುಸ್ಥಾಪನೆ ಮಾಡಿದ್ದರೆ ಆಗಲೇ ಹೆಸರು ಇಡಬೇಕಿತ್ತಲ್ಲವೇ? ಕೆಆರ್‌ಎಸ್ ಜಲಾಶಯಕ್ಕೆ ಟಿಪ್ಪು ಹೆಸರು ತಳಕು ಹಾಕುತ್ತಿರುವುದು ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ಮಾಡಿದ ಅಪಮಾನ ಎಂದು ಆರ್. ಅಶೋಕ್ ತಿಳಿಸಿದ್ದಾರೆ.;
ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್, ಸಚಿವ ಹೆಚ್.ಸಿ. ಮಹದೇವಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ
ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಕೃಷ್ಣರಾಜಸಾಗರ (ಕೆಆರ್‌ಎಸ್) ಅಣೆಕಟ್ಟಿಗೆ ಮೊದಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ನೀಡಿರುವ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ. ಸಚಿವರ ಈ ಹೇಳಿಕೆಯನ್ನು ವಿರೋಧ ಪಕ್ಷದ ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದು, ಕಾಂಗ್ರೆಸ್ ಸರ್ಕಾರ ಮೈಸೂರು ರಾಜಮನೆತನಕ್ಕೆ ಪದೇ ಪದೇ ಅಪಮಾನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಟಿಪ್ಪು ಓಲೈಕೆ ರಾಜಕಾರಣ' ಎಂದು ಆರ್. ಅಶೋಕ್ ವಾಗ್ದಾಳಿ
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಸಚಿವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಕೃಷ್ಣರಾಜಸಾಗರ ಜಲಾಶಯಕ್ಕೆ 'ಟಿಪ್ಪು ಸುಲ್ತಾನ್ ಸಾಗರ' ಎಂದು ಮರುನಾಮಕರಣ ಮಾಡಲು ಕಾಂಗ್ರೆಸ್ ಹುನ್ನಾರ ನಡೆಸುತ್ತಿದೆ" ಎಂದು ಅವರು ಆರೋಪಿಸಿದ್ದಾರೆ. "ಟಿಪ್ಪು ಸುಲ್ತಾನ್ 1799ರಲ್ಲಿ ಮೃತಪಟ್ಟರೆ, ಕೆಆರ್‌ಎಸ್ ಅಣೆಕಟ್ಟಿನ ನಿರ್ಮಾಣ ಆರಂಭವಾಗಿದ್ದು 1911ರಲ್ಲಿ. ಟಿಪ್ಪು ಸತ್ತು 112 ವರ್ಷಗಳ ನಂತರ ನಿರ್ಮಾಣವಾದ ಜಲಾಶಯಕ್ಕೆ ಆತ ಹೇಗೆ ಅಡಿಗಲ್ಲು ಹಾಕಲು ಸಾಧ್ಯ? ಇದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಮಾಡಿದ ಘೋರ ಅಪಮಾನ" ಎಂದು ಆಕ್ರೋಶ ಹೊರಹಾಕಿದ್ದಾರೆ.
"ಟಿಪ್ಪು ಒಬ್ಬ ನಾಡದ್ರೋಹಿ, ಮತಾಂಧ. ಸಾವಿರಾರು ಹಿಂದೂಗಳನ್ನು ಕೊಂದು ದೇವಸ್ಥಾನಗಳನ್ನು ಕೆಡವಿದವನು. ಅಂತಹ ವ್ಯಕ್ತಿಯ ಹೆಸರನ್ನು ಕೆಆರ್‌ಎಸ್ ಜಲಾಶಯಕ್ಕೆ ತಳುಕು ಹಾಕುವುದು ಕಾಂಗ್ರೆಸ್ ಪಕ್ಷದ ಮನಸ್ಥಿತಿಯನ್ನು ತೋರಿಸುತ್ತದೆ. ಕಾಂಗ್ರೆಸ್ ನಾಯಕರು ಕೂಡಲೇ ರಾಜ್ಯದ ಜನತೆಯ ಕ್ಷಮೆ ಕೇಳಬೇಕು" ಎಂದು ಅಶೋಕ್ ಆಗ್ರಹಿಸಿದ್ದಾರೆ.
'ಮಹಾರಾಜರಿಗೆ ಅಪಮಾನಿಸುವುದೇ ಕಾಂಗ್ರೆಸ್ ಸಂಸ್ಕೃತಿ': ಬಿ.ವೈ. ವಿಜಯೇಂದ್ರ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡ ಸಚಿವ ಮಹದೇವಪ್ಪ ಅವರ ಹೇಳಿಕೆಯನ್ನು "ಅಕ್ಷಮ್ಯ ಅಪರಾಧ" ಎಂದು ಬಣ್ಣಿಸಿದ್ದಾರೆ. "ಮೈಸೂರಿನ ಇತಿಹಾಸ ತಿಳಿದಿದ್ದರೂ ಈ ರೀತಿ ಹೇಳಿಕೆ ನೀಡಿರುವುದು ಖಂಡನೀಯ. ಸಿದ್ದರಾಮಯ್ಯ, ಮಹದೇವಪ್ಪ ಮತ್ತು ಕಾಂಗ್ರೆಸ್ ನಾಯಕರಿಗೆ ಮೈಸೂರು ಮಹಾರಾಜರಿಗೆ ಅಪಮಾನ ಮಾಡುವುದರಲ್ಲಿ ಅದೇನು ಸಂತೋಷ ಸಿಗುತ್ತದೆಯೋ ಅರ್ಥವಾಗುತ್ತಿಲ್ಲ" ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
"1902ರ ನಂತರ ಕೆಆರ್‌ಎಸ್ ಅಣೆಕಟ್ಟು ಕಟ್ಟುವ ಚಿಂತನೆ ಆರಂಭವಾಗಿ 1911ರಲ್ಲಿ ಅನುಮತಿ ಪಡೆದು, 1931ರಲ್ಲಿ ನಿರ್ಮಾಣ ಪೂರ್ಣಗೊಂಡಿತ್ತು. ಇತಿಹಾಸ ಹೀಗಿರುವಾಗ ಕಾಂಗ್ರೆಸ್ ನಾಯಕರು ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ" ಎಂದು ವಿಜಯೇಂದ್ರ ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ಹಾಗೂ ಸಾರಿಗೆ ಮುಷ್ಕರಕ್ಕೆ ಬೆಂಬಲ
ಇದೇ ಸಂದರ್ಭದಲ್ಲಿ, ಆರ್. ಅಶೋಕ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧವೂ ಹರಿಹಾಯ್ದಿದ್ದಾರೆ. "ಕಳೆದ ಎರಡು ವರ್ಷಗಳಿಂದ ಕಾಣೆಯಾಗಿದ್ದ ರಾಹುಲ್ ಗಾಂಧಿ ಈಗ ಚುನಾವಣೆಗಾಗಿ ಕರ್ನಾಟಕಕ್ಕೆ ಬಂದಿದ್ದಾರೆ. ರೈತರು ಆತ್ಮಹತ್ಯೆ ಮಾಡಿಕೊಂಡಾಗ, ಐಪಿಎಲ್ ವಿಜಯೋತ್ಸವದಲ್ಲಿ ಯುವಕರು ಕಾಲ್ತುಳಿತಕ್ಕೆ ಬಲಿಯಾದಾಗ ಅವರು ಎಲ್ಲಿದ್ದರು?" ಎಂದು ಪ್ರಶ್ನಿಸಿದ್ದಾರೆ. ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲ ಸೂಚಿಸಿದ ಅವರು, "ನಾನು ಸಾರಿಗೆ ಸಚಿವನಾಗಿದ್ದಾಗ ಅವರ ಬೇಡಿಕೆಗಳನ್ನು ಈಡೇರಿಸಿದ್ದೆ. ಆದರೆ, ಕಾಂಗ್ರೆಸ್ ಸರ್ಕಾರ ಹಿಂಬಾಕಿ ನೀಡದೆ ನೌಕರರಿಗೆ ತೊಂದರೆ ಕೊಡುತ್ತಿದೆ" ಎಂದು ಆರೋಪಿಸಿದ್ದಾರೆ.