ಬೆಂಗಳೂರಿನ ಪ್ರತಿಷ್ಠೆ ಹಾಳು ಮಾಡುತ್ತಿರುವ ಕಾಂಗ್ರೆಸ್: ನಿರ್ಮಲಾ ಸೀತಾರಾಮನ್

ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗುತ್ತಿದೆ. ಜನ ಬೇರೆ ದಾರಿ ಇಲ್ಲದೆ ಕಲುಷಿತ ನೀರು ಕುಡಿಯುತ್ತಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಆರೋಪಿಸಿದ್ದಾರೆ.;

Update: 2024-04-07 15:08 GMT
ನಿರ್ಮಲಾ ಸೀತಾರಾಮನ್‌

ರಾಜ್ಯ ಕಾಂಗ್ರೆಸ್ ಸರ್ಕಾರವು ಬೆಂಗಳೂರಿನ ಪ್ರತಿಷ್ಠೆ ಕಳೆಯುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಮಾಧ್ಯಮ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗುತ್ತಿದೆ. ಬೆಂಗಳೂರಿನಲ್ಲಿ ಜನ ಬೇರೆ ದಾರಿ ಇಲ್ಲದೆ ಕಲುಷಿತ ನೀರು ಕುಡಿಯುತ್ತಿದ್ದು, ಕಾಲರಾ ಸೇರಿದಂತೆ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಕಾಂಗ್ರೆಸ್‌ನ ದುರಾಡಳಿತದಿಂದ ಈ ಹಂತಕ್ಕೆ ಬೆಂಗಳೂರು ತಲುಪಿದೆ ಎಂದು ದೂರಿದರು.

ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ ತುಷ್ಟೀಕರಣದಲ್ಲಿ ತೊಡಗಿದ್ದು, ಇದು ಅಪಾಯಕ್ಕೆ ದಾರಿ ಮಾಡಿಕೊಡುತ್ತಿದೆ. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟಕ್ಕೂ ಕಾಂಗ್ರೆಸ್ ಪಕ್ಷದ ತುಷ್ಟೀಕರಣ ರಾಜಕೀಯವೇ ಕಾರಣ. ಪ್ರಕರಣದ ಸಾಕ್ಷಿದಾರರನ್ನು ಆರೋಪಿ ಎಂದು ಬಿಂಬಿಸುಲು ಕಾಂಗ್ರೆಸ್ ಮುಂದಾಗಿದೆ. ಪ್ರಕರಣದ ಸಾಕ್ಷಿದಾರರ ಗುರುತು ಕಾಂಗ್ರೆಸ್‌ನಿಂದ ಬಹಿರಂಗವಾಗಿದ್ದು, ಅವರ ಜೀವಕ್ಕೆ ಅಪಾಯ ಎದುರಾಗಿದೆ ಎಂದರು.

ಬಾಂಬ್ ಸ್ಫೋಟದ ಪ್ರಕರಣದಲ್ಲಿ ರಾಜ್ಯದ ಜನರ ಗಮನವನ್ನು ಬೇರೆ ಕಡೆ ಸೆಳೆಯುವ ಉದ್ದೇಶದಿಂದ ಕರ್ನಾಟಕದ ಸಚಿವರೇ ಸುಳ್ಳು ಹೇಳಲು ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ ಪಶು ಆಸ್ಪತ್ರೆ ನಿರ್ಮಾಣಕ್ಕೆ ದಾನಿಯೊಬ್ಬರು ನೀಡಿದ್ದ ಜಮೀನನ್ನು ಈಗ ಅಲ್ಪಸಂಖ್ಯಾತ ಸಮುದಾಯದ ಸಂಸ್ಥೆಯೊಂದಕ್ಕೆ ನೀಡಿದ್ದಾರೆ. ಇದು ತುಷ್ಟೀಕರಣದ ಪರಮಾವಧಿ ಎಂದರು.

ನೀರು ಪೂರೈಕೆ ಮತ್ತು ನೀರಾವರಿ ಕಾಮಗಾರಿಗಳ ಬಗ್ಗೆ ಈಗ ಮಾತನಾಡುತ್ತಿದ್ದಾರೆ. 2023ರ ಮೇ ತಿಂಗಳಿನಲ್ಲಿಯೇ 20,000 ಕೋಟಿ ವೆಚ್ಚದ ನೀರಾವರಿ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ನಡೆದಿತ್ತು. ಆದರೆ, ಎಲ್ಲವೂ ಸ್ಥಗಿತಗೊಂಡಿವೆ ಎಂದರು. 

Tags:    

Similar News