ಸಿದ್ದರಾಮಯ್ಯ ʼಸ್ವಾಭಿಮಾನಿʼ ಸಮಾವೇಶಕ್ಕೆ ಹೈಕಮಾಂಡ್ ಕಡಿವಾಣ
ಸಮಾವೇಶದ ಕುರಿತು ಚರ್ಚಿಸಲು ಪೂರ್ವ ಸಿದ್ಧತಾ ಸಭೆಯನ್ನು ಕರೆಯುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಮಾವೇಶ ಪಕ್ಷದ ವೇದಿಕೆಯಡಿಯೇ ನಡೆಯುತ್ತದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಸಮಾವೇಶದ ಕುರಿತು ಚರ್ಚಿಸಲು ಡಿಸೆಂಬರ್ 1 ರಂದು ಕೆಪಿಸಿಸಿ ಕಚೇರಿಯಲ್ಲಿ ಕರೆಯಲಾಗಿದೆ.
ಹಾಸನದಲ್ಲಿ ʼಸ್ವಾಭಿಮಾನಿʼ ಸಮಾವೇಶ ನಡೆಸುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆಗೆ ಕಾಂಗ್ರೆಸ್ ಹೈಕಮಾಂಡ್ ಕಡಿವಾಣ ಹಾಕಿದೆ. ಸಮಾವೇಶದ ಮಾಡುವುದರ ಮೂಲಕ, ಮುಡಾ ಸೇರಿದಂತೆ ಹಲವು ಪ್ರಕರಣಗಳಲ್ಲಿ ರಾಜಕೀಯ ಹಿನ್ನೆಡೆ ಅನುಭವಿಸಿದ್ದ ಸಿದ್ದರಾಮಯ್ಯ ವರ್ಚಸ್ಸು ಹೆಚ್ಚಿಸಲು ಅವರ ಆಪ್ತರು ಮುಂದಾಗಿದ್ದರು. ಆದರೆ, ಸಮಾವೇಶ ಮಾಡುವುದಾದರೆ ಪಕ್ಷದ ಚಿಹ್ನೆಯಡಿಯೇ ಮಾಡಬೇಕು ಎಂಬ ಆಗ್ರಹ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಕೇಳಿ ಬಂದಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕರ್ತರು ಹೈಕಮಾಂಡ್ಗೆ ದೂರನ್ನೂ ಕೊಟ್ಟಿದ್ದರು. ಇದೀಗ ಹೈಕಮಾಂಡ್ ಈ ಪ್ರಯತ್ನಕ್ಕೆ ಬ್ರೇಕ್ ಹಾಕಿದೆ.
ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಸಮಾವೇಶವನ್ನು ಪಕ್ಷದ ಚಿಹ್ನೆಯಡಿಯೇ ಮಾಡಲು ಕೆಪಿಸಿಸಿ ನಿರ್ಧರಿಸಿದೆ. ಈ ಕುರಿತು ಚರ್ಚಿಸಲು ಪೂರ್ವ ಸಿದ್ಧತಾ ಸಭೆʼ ಕರೆಯನ್ನೂ ಕರೆದಿದೆ, ಈ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಿದ್ದರಾಮಯ್ಯ ಅಭಿಮಾನಿಗಳ ಪ್ರತ್ಯೇಕ ಸಮಾವೇಶ ಇಲ್ಲ ಎಂಬ ಸಂದೇಶವನ್ನು ನೇರವಾಗಿ ರವಾನಿಸಿದ್ದಾರೆ. ಸಮಾವೇಶದ ಕುರಿತು ಚರ್ಚಿಸಲು ಡಿಸೆಂಬರ್ 1 ರಂದು ಕೆಪಿಸಿಸಿ ಕಚೇರಿಯಲ್ಲಿ ಸಭೆ ಕರೆಯಲಾಗಿದೆ. ಪಕ್ಷದ ಪ್ರಮುಖರು ತಪ್ಪದೆ ಭಾಗವಹಿಸುವಂತೆ ಸೂಚನೆ ನೀಡಲಾಗಿದೆ.
ಪೂರ್ವಸಿದ್ಧತಾ ಸಭೆಯಲ್ಲಿ ಭಾಗವಹಿಸಲು ಯಾರಿಗೆಲ್ಲ ಸೂಚನೆ?
ಹಾಸನ ಸಮಾವೇಶದ ಕುರಿತು ಚರ್ಚಿಸಲು ಸಭೆಯಲ್ಲಿ ಭಾಗವಹಿಸುವಂತೆ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರು, ಮೈಸೂರು ಭಾಗದ ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಸಚಿವರು, ಸಂಸದರು, ಶಾಸಕರು, 2024ರ ಲೋಕಸಭಾ ಅಭ್ಯರ್ಥಿಗಳು, ಕೆಪಿಸಿಸಿ ಉಸ್ತುವಾರಿ ಪದಾಧಿಕಾರಿಗಳು, 2023ರ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳು, ಡಿಸಿಸಿ ಅಧ್ಯಕ್ಷರುಗಳು, ರಾಜ್ಯ ಮುಂಚೂಣಿ ಘಟಕ, ವಿಭಾಗ, ಸೆಲ್ ರಾಜ್ಯಾಧ್ಯಕ್ಷರುಗಳು ಸಭೆಯಲ್ಲಿ ಭಾಗವಹಿಸಬೇಕು ಎಂದು ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ.
ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದ ಸಿದ್ದರಾಮಯ್ಯ
ʼಸ್ವಾಭಿಮಾನಿʼ ಸಮಾವೇಶದ ಮೂಲಕ ಆಂತರಿಕ ಹಾಗೂ ಬಾಹ್ಯ ವಿರೋಧಿಗಳಿಗೆ ಸಂದೇಶ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಲು ಮುಂದಾಗಿದ್ದರು. ಇಡಿ ರೇಡ್, ಮುಡಾ, ಮುಖ್ಯಮಂತ್ರಿ ಬದಲಾವಣೆ ಮುಂತಾದ ಬೆಳವಣಿಗೆಗಳಿಗೆ ಅಭಿಮಾನಿಗಳ ಜನಾಂದೋಲನದ ಮೂಲಕ ಶಕ್ತಿ ಪ್ರದರ್ಶಿಸಲು ಸಿದ್ದರಾಮಯ್ಯ ಮುಂದಾಗಿದ್ದರು.
ಕಡಿವಾಣ ಹಾಕಿದ ಹೈಕಮಾಂಡ್
ಪಕ್ಷದ ಚಿಹ್ನೆಯಡಿಯೇ ಸಮಾವೇಶ ಮಾಡಬೇಕು ಎಂಬ ಆಗ್ರಹ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿಯೇ ಕೇಳಿ ಬಂದಿತ್ತು. ಹಾಸನ ಸಮಾವೇಶದ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ನ ಕೆಲ ನಾಯಕರು ಕಾರ್ಯಕರ್ತರ ಮೂಲಕ ದೂರು ಕೊಡಿಸಿದ್ದರು ಎನ್ನಲಾಗಿದೆ. ಇದೀಗ ಹೈಕಮಾಂಡ್ ಮೂಲಕ ಸಿದ್ದರಾಮಯ್ಯಗೆ ಕಡಿವಾಣ ಹಾಕಿಸುವಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಯಶಸ್ವಿಯಾಗಿದ್ದಾರೆ. ಹೈಕಮಾಂಡ್ ಸೂಚನೆಯಂತೆ ಸಮಾವೇಶವನ್ನು ಪಕ್ಷದ ವೇದಿಕೆಯಡಿ ಮಾಡಲಾಗುತ್ತಿದೆ.
ಸಮಾವೇಶ ಕುರಿತು ಹಾಸನದಲ್ಲಿ ಮಾತನಾಡಿದ್ದ ಸಚಿವ ಎಚ್.ಸಿ. ಹಮಾದೇವಪ್ಪ, 'ಶೋಷಿತ ಸಮುದಾಯಗಳ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಸ್ವಾಭಿಮಾನಿ ಸಮಾವೇಶ ಮಾಡಲಾಗುತ್ತದೆ. ಕಳೆದ ಹಲವು ವರ್ಷಗಳಿಂದ ಹಿಂದುಳಿದ ವರ್ಗಗಳು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿವೆ. ಹೀಗಾಗಿ ಸಮಾವೇಶದಲ್ಲಿ ಕಾಂಗ್ರೆಸ್ನ ಚಿಹ್ನೆ ಬಾವುಟಗಳೊಂದಿಗೆ ಶೋಷಿತ ಸಮುದಾಯಗಳ ಒಕ್ಕೂಟದ ಚಿಹ್ನೆ, ಬಾವುಟಗಳನ್ನು ಹಾಕುತ್ತೇವೆ' ಎಂದು ಹೇಳಿದ್ದರು. ನಂತರ ಬಿಡುಗಡೆ ಮಾಡಲಾಗಿದ್ದ ಪೋಸ್ಟರ್ನಲ್ಲಿ ಶೋಷಿತ ಸಮುದಾಯಗಳ ಒಕ್ಕೂಟದ ಬದಲಿಗೆ ವಿವಿಧ ಪ್ರಗತಿಪರ ಸಂಘಟನೆಗಳು ಹಾಗೂ ಇತರೆ ಎಲ್ಲಾ ವರ್ಗಗಳ ಒಕ್ಕೂಟಗಳ ಆಶ್ರಯದಲ್ಲಿ ಸಮಾವೇಶ ನಡೆಸಲಾಗುವುದು ಎಂದು ಹಾಕಲಾಗಿತ್ತು. ಇದು ಗೊಂದಲಗಳಿಗೆ ಕಾರಣವಾಗಿತ್ತು. ಎಲ್ಲ ಗೊಂದಲಗಳಿಗೆ ತೆರೆ ಎಳೆಯಳು ಸಮಾವೇಶವನ್ನು ಕಾಂಗ್ರೆಸ್ ಪಕ್ಷದ ಚಿಹ್ನೆಯಡಿ ಮಾಡಲು ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದೆ. ಸ್ವಾಭಿಮಾನಿ ಸಮಾವೇಶ ಮಾಡುವ ಮೂಲಕ ತಮಗಿರುವ ಜನಬೆಂಬಲದ ಶಕ್ತಿ ಪ್ರದರ್ಶನ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದರು.