ಪತ್ರಿಕಾಗೋಷ್ಠಿಯಲ್ಲೇ ಹೃದಯಾಘಾತ: ಕಾಂಗ್ರೆಸ್‌ ಕಾರ್ಯಕರ್ತ ಸಾವು

Update: 2024-08-19 12:07 GMT

ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರ ಕ್ರಮ ಖಂಡಿಸಿ ಪತ್ರಿಕಾಗೋಷ್ಠಿ ನಡೆಸುತ್ತಿರುವಾಗಲೇ ಕಾಂಗ್ರೆಸ್‌ ಕಾರ್ಯಕರ್ತರೊಬ್ಬರು ಹೃದಯಾಘಾತದಿಂದ ಸಾವು ಕಂಡ ಘಟನೆ ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ನಡೆದಿದೆ.

ಪ್ರೆಸ್‌ ಕ್ಲಬ್‌ನಲ್ಲಿ ಸೋಮವಾರ ಬೆಳಿಗ್ಗೆ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿರುವಾಗಲೇ ಕಾಂಗ್ರೆಸ್‌ ಮುಖಂಡ ಸಿ.ಕೆ. ರವಿಚಂದ್ರನ್ (61) ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಅವರು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಸಂಘದ ಮುಖಂಡರಾಗಿದ್ದು, ಕಾಂಗ್ರೆಸ್‌ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದರು.

ಸಿಎಂ ವಿರುದ್ಧ ತನಿಖೆಗೆ ಅನುಮತಿ ನೀಡಿದ ರಾಜ್ಯಪಾಲ ತಾವರ್‌ ಚಂದ್‌ ಗೆಹ್ಲೋಟ್‌ ಕ್ರಮವನ್ನು ಖಂಡಿಸಿ ಪತ್ರಿಕಾಗೋಷ್ಠಿ ಕರೆಯಲಾಗಿತ್ತು. ಗೋಷ್ಠಿಯಲ್ಲಿ ಮಾತನಾಡುತ್ತಿರುವಾಗಲೇ ಕುಸಿದು ಬಿದ್ದ ಅವರನ್ನು ಕೂಡಲೇ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಯಿತು. ಆದರೆ, ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ರವಿಚಂದ್ರನ್‌ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದರು.

ಆರ್.ಆರ್. ನಗರದ ಚೆನ್ನಸಂದ್ರದಲ್ಲಿ ವಾಸವಿದ್ದ ರವಿಚಂದ್ರನ್‌ ಅವರು ಜನತಾ ರಂಗದ ಅಧ್ಯಕ್ಷರಾಗಿದ್ದರು. ಆರು ತಿಂಗಳ ಹಿಂದೆ ಡಿ ಕೆ ಶಿವಕುಮಾರ್‌ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರು. ಜಯನಗರ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ಅವರು, ಸಮಾಜವಾದಿ ಪಾರ್ಟಿಯಿಂದ ಒಂದು ಬಾರಿ ಹಾಗೂ ಜೆಡಿಯು ನಿಂದ ಒಂದು ಬಾರಿ ಸ್ವರ್ಧೆ ಮಾಡಿದ್ದರು. ರವಿಚಂದ್ರನ್ ಮೂಲತಃ ಚಿಂತಾವಣಿ ಮೂಲದವರಾಗಿದ್ದು ಚನ್ನಸಂದ್ರದಲ್ಲಿ ನೆಲೆಸಿದ್ದರು.

Tags:    

Similar News