ದೇವದಾಸಿ ಪದ್ಧತಿ ನಿರ್ಮೂಲನೆಗೆ ಸಮಗ್ರ ಯೋಜನೆ ರೂಪಿಸಲು ಸಿಎಂ ಸೂಚನೆ
ಈ ಹಿಂದಿನ ಸಮೀಕ್ಷೆಗಳಲ್ಲಿದ್ದ ಲೋಪಗಳನ್ನು ಸರಿಪಡಿಸಿ, ಯಾವುದೇ ವಯಸ್ಸಿನ ಮಿತಿಯಿಲ್ಲದೆ, ಮನೆ-ಮನೆಗೆ ತೆರಳಿ ಸಮೀಕ್ಷೆ ನಡೆಸಲಾಗುತ್ತದೆ.;
ರಾಜ್ಯದಲ್ಲಿ ದೇವದಾಸಿ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದುಹಾಕಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಸೋಮವಾರ ನಡೆದ ರಾಜ್ಯ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅವರು ಪುನರುಚ್ಚರಿಸಿದ್ದಾರೆ.
ರಾಜ್ಯಾದ್ಯಂತ ದೇವದಾಸಿಯರ ಸಮೀಕ್ಷಾ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಈ ಸಮೀಕ್ಷೆ ಪೂರ್ಣಗೊಂಡ ನಂತರ, ದೇವದಾಸಿಯರ ಪುನರ್ವಸತಿ ಮತ್ತು ಈ ಅನಿಷ್ಟ ಪದ್ಧತಿಯ ಸಂಪೂರ್ಣ ನಿರ್ಮೂಲನೆಗಾಗಿ ಸಮಗ್ರ ಯೋಜನೆಯನ್ನು ರೂಪಿಸಲಾಗುವುದು ಎಂದು ಸಿಎಂ ಭರವಸೆ ನೀಡಿದರು. ಯೋಜನೆಗೆ ಅಗತ್ಯವಿರುವ ವಿಶೇಷ ಅನುದಾನ ಒದಗಿಸುವ ಬಗ್ಗೆಯೂ ಸರ್ಕಾರ ಪರಿಶೀಲನೆ ನಡೆಸಲಿದೆ ಎಂದು ಅವರು ತಿಳಿಸಿದರು.
ಸಭೆಯ ಪ್ರಮುಖ ನಿರ್ಧಾರಗಳು
ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, "ಸಮೀಕ್ಷೆಯ ವರದಿ ಬಂದ ನಂತರ, ದೇವದಾಸಿ ಮಹಿಳೆಯರು ಮತ್ತು ಅವರ ಮಕ್ಕಳಿಗೆ ಘನತೆಯುತ ಜೀವನವನ್ನು ಒದಗಿಸಲು ಬೇಕಾದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಅವರ ಶಿಕ್ಷಣ, ಉದ್ಯೋಗ ಮತ್ತು ಸಾಮಾಜಿಕ ಭದ್ರತೆಗೆ ಸರ್ಕಾರ ಆದ್ಯತೆ ನೀಡಲಿದೆ" ಎಂದರು.
ಈ ಸಮೀಕ್ಷೆಯನ್ನು ರಾಜ್ಯ ಮಾನವ ಹಕ್ಕುಗಳ ಆಯೋಗದ ನಿರ್ದೇಶನದಂತೆ ನಡೆಸಲಾಗುತ್ತಿದ್ದು, ಈ ಹಿಂದಿನ ಸಮೀಕ್ಷೆಗಳಲ್ಲಿದ್ದ ಲೋಪಗಳನ್ನು ಸರಿಪಡಿಸಿ, ಯಾವುದೇ ವಯಸ್ಸಿನ ಮಿತಿಯಿಲ್ಲದೆ, ಮನೆ-ಮನೆಗೆ ತೆರಳಿ ಸಮೀಕ್ಷೆ ನಡೆಸಲಾಗುತ್ತದೆ. ಸೆಪ್ಟೆಂಬರ್‌ನಿಂದ ಆರಂಭವಾಗಲಿರುವ ಈ ಹೊಸ ಸಮೀಕ್ಷೆಯು ಹೆಚ್ಚು ಸಮಗ್ರವಾಗಿರಲಿದ್ದು, ಗುರುತಿಸಲ್ಪಟ್ಟ ಎಲ್ಲಾ ದೇವದಾಸಿಯರಿಗೆ ಪುನರ್ವಸತಿ ಕಲ್ಪಿಸುವುದು ಸರ್ಕಾರದ ಮುಖ್ಯ ಗುರಿಯಾಗಿದೆ.
, "ಕರ್ನಾಟಕ ದೇವದಾಸಿ (ತಡೆಗಟ್ಟುವಿಕೆ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ಮಸೂದೆ, 2025" ಅನ್ನು ಜಾರಿಗೆ ತರುವ ಮೂಲಕ ಈ ಅನಿಷ್ಟ ಪದ್ಧತಿಯನ್ನು ಕಾನೂನಾತ್ಮಕವಾಗಿ ಬೇರುಸಹಿತ ಕಿತ್ತುಹಾಕಲು ಸರ್ಕಾರ ಮುಂದಾಗಿದೆ.