Congress Unrest | ರಾಜ್ಯ ಉಸ್ತುವಾರಿ ಸುರ್ಜೇವಾಲ ವಿರುದ್ಧ ಹೈಕಮಾಂಡ್‌ಗೆ ದೂರು?

ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರು ಉದ್ದೇಶಪೂರ್ವಕವಾಗಿ ಸಿಎಂ ಸಿದ್ದರಾಮಯ್ಯ ಬೆಂಬಲಿಗರನ್ನೇ ಗುರಿಯಾಗಿಸಿಕೊಂಡು ತೀರ್ಮಾನ ಕೈಗೊಳ್ಳುತ್ತಿದ್ದಾರೆ ಎಂಬುದು ಆಪ್ತರ ಆರೋಪ.;

Update: 2025-01-20 09:16 GMT
ರಣದೀಪ್‌ ಸಿಂಗ್‌ ಸುರ್ಜೇವಾಲ

ಸಿಎಂ ಬದಲಾವಣೆ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರವಾಗಿ ರಾಜ್ಯ ಕಾಂಗ್ರೆಸ್‌ನಲ್ಲಿ ಭುಗಿಲೆದ್ದಿದ್ದ ಆಂತಃಕಲಹ ಮತ್ತಷ್ಟು ತೀವ್ರಗೊಂಡಿದೆ.

ಭಿನ್ನಮತ ಶಮನಗೊಳಿಸಲು ರಾಜ್ಯ  ಪ್ರವಾಸ ಕೈಗೊಂಡಿದ್ದ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ವಿರುದ್ಧವೇ ಇದೀಗ ಕಾಂಗ್ರೆಸ್‌ ಹೈಕಮಾಂಡ್‌ಗೆ ದೂರು ಸಲ್ಲಿಸಲು ಸಿಎಂ ಆಪ್ತರು ಮುಂದಾಗಿದ್ದಾರೆ. ಸುರ್ಜೇವಾಲ ಅವರು ಏಕಪಕ್ಷೀಯವಾಗಿ ವರ್ತಿಸುತ್ತಿದ್ದಾರೆ ಎಂಬ ಆರೋಪ ಕಾಂಗ್ರೆಸ್‌ ಪಾಳಯದಲ್ಲಿ ಭುಗಿಲೆದ್ದಿದೆ. 

ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪರವಾಗಿ ಸುರ್ಜೇವಾಲ ಅವರು ವಕಾಲತು ವಹಿಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಅವರ ಆಪ್ತ ಬಳಗದ ಸಚಿವರು ಹಾಗೂ ಶಾಸಕರು ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೇ ಈ ಸಂಬಂಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ದೂರು ನೀಡಲೂ ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ. 

ಪ್ರತಿ ಬಾರಿ ರಾಜ್ಯಕ್ಕೆ ಆಗಮಿಸುವ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರು ಉದ್ದೇಶಪೂರ್ವಕವಾಗಿ ಸಿಎಂ ಸಿದ್ದರಾಮಯ್ಯ ಬೆಂಬಲಿಗರನ್ನೇ ಗುರಿಯಾಗಿಸಿಕೊಂಡು ತೀರ್ಮಾನ ಕೈಗೊಳ್ಳುತ್ತಿದ್ದಾರೆ. ಉಸ್ತುವಾರಿಯಾದವರು ಪಕ್ಷದಲ್ಲಿನ ಭಿನ್ನಮತ ಕುರಿತಂತೆ ಎರಡೂ ಕಡೆಯವರಿಂದ ಅಹವಾಲು ಆಲಿಸಬೇಕು. ಆದರೆ, ಇದ್ಯಾವುದನ್ನೂ ಸುರ್ಜೇವಾಲ ಅವರು ಮಾಡುತ್ತಿಲ್ಲ. ಹಾಗಾಗಿ ಕೂಡಲೇ ಉಸ್ತುವಾರಿ ಸ್ಥಾನದಿಂದ ಅವರನ್ನು ವಾಪಸ್‌ ಕರೆಸಿಕೊಳ್ಳಲು ಹೈಕಮಾಂಡ್‌ ಮೇಲೆ ಒತ್ತಡ ಹೇರಬೇಕು ಎಂದು ಕೆಲ ಸಚಿವರು ಹಾಗೂ ಶಾಸಕರು ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ. 

ಸುರ್ಜೇವಾಲ ವಿರುದ್ಧ ಆಕ್ರೋಶಕ್ಕೆ ಕಾರಣವೇನು?

ಹಾಸನದಲ್ಲಿ ಸಿಎಂ ಸಿದ್ದರಾಮಯ್ಯ ಬೆಂಬಲಿಗರು ಆಯೋಜಿಸಲು ಮುಂದಾಗಿದ್ದ ಅಹಿಂದ ಸಮಾವೇಶದ ಬಗ್ಗೆ ಹೈಕಮಾಂಡ್‌ಗೆ ಇಲ್ಲಸಲ್ಲದ ದೂರು ಹೇಳಿ ಸ್ವಾಭಿಮಾನ ಸಮಾವೇಶ ಎಂದು ಬದಲಾವಣೆ ಮಾಡಿದ್ದಾರೆ. ಅಲ್ಲದೆ ಡಾ.ಜಿ.ಪರಮೇಶ್ವರ್‌ ನಿವಾಸದಲ್ಲಿ ದಲಿತ ಸಚಿವರ ಔತಣಕೂಟವನ್ನು ಡಿ.ಕೆ.ಶಿವಕುಮಾರ್‌ ಮಾತು ಕೇಳಿ ತಡೆದಿದ್ದಾರೆ. ಸಿಎಂ ಸಿದ್ದರಾಮಯ್ಯ ವಿರುದ್ಧದ ಆರೋಪಗಳ ಕುರಿತು ದೆಹಲಿಯಲ್ಲಿ ಬೆಜೆಪಿ ನಾಯಕರಿಗೆ ಸರಿಯಾದ ತಿರುಗೇಟು ನೀಡುತ್ತಿಲ್ಲ. ಇದರಿಂದ ಕೇಂದ್ರದ ಬಿಜೆಪಿ ನಾಯಕರು ಸಿಎಂ ಸಿದ್ದರಾಮಯ್ಯ ವಿರುದ್ಧದ ಕ್ಷುಲ್ಲಕ ವಿಚಾರಗಳನ್ನು ಬೆಟ್ಟದಂತೆ ಬಿಂಬಿಸುತ್ತಿದ್ದಾರೆ. ಜ.18 ರಂದು ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಡಿ.ಕೆ. ಸಹೋದರರೊಂದಿಗೆ ಪ್ರತ್ಯೇಕ ಸಭೆ ನಡೆಸಿ, ಚರ್ಚಿಸಿದ್ದಾರೆ. ಆದರೆ, ಹಿರಿಯ ಸಚಿವರ ಸಭೆ ನಡೆಸಲು ಅವರಿಂದ ಸಾಧ್ಯವಾಗಿಲ್ಲ. ಈ ಎಲ್ಲಾ ಕಾರಣಗಳಿಂದ ರಣದೀಪ್‌ ಸಿಂಗ್‌ ಸುಜ್ರೇವಾಲ ಅವರನ್ನು ಉಸ್ತುವಾರಿ ಸ್ಥಾನದಿಂದ ವಾಪಸ್‌ ಕರೆಸಿಕೊಳ್ಳಬೇಕು ಎಂದು ದೂರು ನೀಡಲು ತೀರ್ಮಾನಿಸಿದ್ದಾರೆ. 

ಕಾಂಗ್ರೆಸ್ ಉಸ್ತುವಾರಿಯಾದವರು ಪಕ್ಷದಲ್ಲಿರುವ ಸಮಸ್ಯೆಗಳೇನು?, ನಾಯಕರ ಅಹವಾಲು ಏನು, ಬಹಿರಂಗ ಹೇಳಿಕೆಗಳನ್ನು ನೀಡುತ್ತಿರುವುದೇಕೆ ಎಂಬಿತ್ಯಾದಿ ಸಮಸ್ಯೆಗಳನ್ನು ಚರ್ಚಿಸಿ, ಪರಿಹರಿಸಬೇಕು. ಆದರೆ, ಸುರ್ಜೇವಾಲ ಅವರು ಈವರೆಗೂ ಪಕ್ಷದ ಹಿರಿಯ ಸಚಿವರ ಅಹವಾಲು ಪರಿಗಣಿಸಿಲ್ಲ. ಕನಿಷ್ಠ ಸಭೆಯನ್ನೂ ನಡೆಸಿಲ್ಲ ಎಂದು ದೂರಿದ್ದಾರೆ.

ಪಕ್ಷದಲ್ಲಿ ತಲೆದೋರುವ ಸಣ್ಣಪುಟ್ಟ ಸಮಸ್ಯೆಗಳ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರ ಗಮನಕ್ಕೆ ತಂದು, ಭಿನ್ನಮತದಂತೆ ಬಿಂಬಿಸುತ್ತಿದ್ದಾರೆ. ಸುರ್ಜೇವಾಲರ ಈ ಪಕ್ಷಪಾತಿ ಧೋರಣೆ ಸಹಿಸಲಾಗದು ಎಂದು ಸಚಿವರು ಹಾಗೂ ಶಾಸಕರು ಸಿಎಂ ಸಿದ್ದರಾಮಯ್ಯ ಎದುರು ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.

ಸುರ್ಜೇವಾಲಗೆ ತಟ್ಟಿದ ಸಂಘರ್ಷದ ಬಿಸಿ

ಈ ಮಧ್ಯೆ ಬೆಳಗಾವಿಯಲ್ಲಿ ಆಯೋಜಿಸಿರುವ ʼಜೈ ಭಾಪು, ಜೈ ಭೀಮ್‌, ಜೈ ಸಂವಿಧಾನʼ ಸಮಾವೇಶದ ಪೂರ್ವಭಾವಿ ಸಭೆಗೆ ಬಂದಿದ್ದ ಸುರ್ಜೇವಾಲಾ ಅವರಿಗೆ ಸಚಿವ ಸತೀಶ್‌ ಜಾರಕಿಹೊಳಿ ಬೆಂಬಲಿಗರು ಸಾರ್ವಜನಿಕರವಾಗಿಯೇ ತರಾಟೆಗೆ ತೆಗೆದುಕೊಂಡಿದ್ದರು.

ಬೆಳಗಾವಿಯಲ್ಲಿ ಕಾಂಗ್ರೆಸ್‌ ಭವನ ತಲೆ ಎತ್ತಲು ಸತೀಶ್ ಜಾರಕಿಗೊಳಿ ಕಾರಣ. ಜಿಲ್ಲೆಗೆ ಅವರ ಕೊಡುಗೆ ಸಾಕಷ್ಟಿದೆ. ಆದರೆ, ಈಗ ಕಾಂಗ್ರೆಸ್‌ ಭವನ ನಿರ್ಮಾಣದ ಲಾಭ ಪಡೆಯಲು ಕೆಲವರು ಬರುತ್ತಿದ್ದಾರೆ. ಅಂತಹವರಿಗೆ ಹೈಕಮಾಂಡ್‌ ಮಣೆ ಹಾಕಬಾರದು ಎಂದು ಆಗ್ರಹಿಸಿದ್ದರು. ಸತೀಶ್‌ ಜಾರಕಿಹೊಳಿ ಬೆಂಬಲಿಗರ ಈ ಹಠಾತ್‌ ಗದ್ದಲ ಸುರ್ಜೇವಾಲ ಅವರಿಗೆ ಇರಿಸುಮುರಿಸು ತಂದಿತ್ತು. 

ಚುನಾವಣೆಯಲ್ಲೂ ಸಿದ್ದರಾಮಯ್ಯ ವಿರೋಧಿ ನೀತಿ

ಕಳೆದ ವಿಧಾನಸಭೆ ಚುನಾವಣೆ ಅವಧಿಯಿಂದಲೂ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರು ಸಿದ್ದರಾಮಯ್ಯ ವಿರೋಧಿ ಧೋರಣೆಗಳನ್ನೇ ಅನುಸರಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಕೋಲಾರದಿಂದ ಟಿಕೆಟ್‌ ನೀಡುವಂತೆ ಕಾರ್ಯಕರ್ತರು ಒತ್ತಾಯಿಸಿದ್ದರು. ಆದರೆ, ಸಿದ್ದರಾಮಯ್ಯ ಅವರಿಗೆ ಕೋಲಾರದಿಂದ ಟಿಕೆಟ್‌ ಘೋಷಣೆ ಮಾಡಿರಲಿಲ್ಲ. ಸಿಎಂ ಸ್ಥಾನ ಬದಲಾವಣೆ ಕುರಿತು ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಸಚಿವರಾದ ಡಾ.ಜಿ. ಪರಮೇಶ್ವರ್‌, ಸತೀಶ್‌ ಜಾರಕಿಹೊಳಿ ಹಾಗೂ ಕೆ.ಎನ್‌. ರಾಜಣ್ಣ ಅವರು ಆಕ್ಷೇಪ ವ್ಯಕ್ತಪಡಿಸಿ ಡಿಕೆಶಿ ವಿರುದ್ಧ ಬಹಿರಂಗ ಹೇಳಿಕೆ ನೀಡಿದ್ದರು. ಸುರ್ಜೇವಾಲ ಅವರು ಕಾಂಗ್ರೆಸ್‌ ಸರ್ವಸದಸ್ಯರ ಸಭೆಯಲ್ಲಿ ಸಿಎಂ ಆಪ್ತ ಸಚಿವರ ವಿರುದ್ಧ ಕಿಡಿಕಾರಿದ್ದರು. 

ಇಲ್ಲಿ ಪಕ್ಷ ತಾಯಿ ಇದ್ದಂತೆ, ಸರ್ಕಾರ ಅದರ ಮಗುವಿನಂತೆ. ಪಕ್ಷ ಇದ್ದಾಗ ಮಾತ್ರ ಯಾರು ಬೇಕಾದರೂ ಸರ್ಕಾರ ರಚಿಸಬಹುದು. ಹಾಗಾಗಿ ಯಾರೂ ಬಹಿರಂಗ ಹೇಳಿಕೆ ನೀಡಬಾರದು ಎಂದು ಸಿಎಂ ಆಪ್ತ ಬಳಗದ ಸಚಿವರನ್ನೇ ಗುರಿಯಾಗಿಸಿಕೊಂಡು ಎಚ್ಚರಿಕೆ ನೀಡಿದ್ದರು. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಸುರ್ಜೇವಾಲ ಅವರು ಏಕಪಕ್ಷೀಯವಾಗಿ ವರ್ತಿಸುತ್ತಿದ್ದಾರೆ ಎಂದು ಸಿಎಂ ಆಪ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿಎಂ ಸ್ಥಾನದ ಅಧಿಕಾರ ಹಂಚಿಕೆ ಕುರಿತು ಡಿ.ಕೆ. ಶಿವಕುಮಾರ್ ಪ್ರಸ್ತಾಪಕ್ಕೆ ತಿರುಗೇಟು ನೀಡಿದ್ದ ಸಿಎಂ ಆಪ್ತ ಸಚಿವರು ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಿಸುವಂತೆ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಉದಯಪುರ ಘೋಷಣೆಯಂತೆ ʼಒಬ್ಬ ವ್ಯಕ್ತಿ-ಒಂದು ಹುದ್ದೆʼ ನಿಯಮ ಪಾಲಿಸುವಂತೆ ಒತ್ತಾಯಿಸಿದ್ದರು. ಡಿ.ಕೆ. ಶಿವಕುಮಾರ್ ಅವರು ಡಿಸಿಎಂ ಆಗಿದ್ದು, ಅವರಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಿಂಪಡೆಯಬೇಕು ಎಂದು ಕೆಲ ಸಚಿವರು ಆಗ್ರಹಿಸಿದ್ದರು.

ಯಾರದ್ದೋ ಸುಳ್ಳನ್ನು ನಂಬಬೇಡಿ

ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರನ್ನು ಬದಲಾವಣೆ ಮಾಡಬೇಕೆಂದು ಕೆಲ ಸಚಿವರು ರಾಹುಲ್ ಗಾಂಧಿ ಅವರಿಗೆ ದೂರು ನೀಡುತ್ತಿರುವ ವಿಚಾರವಾಗಿ ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು, “ಯಾರೋ ಸುಳ್ಳು ಮಾಹಿತಿ ನೀಡಿ ಮಾಧ್ಯಮಗಳ ಘನತೆ ಹಾಳು ಮಾಡುತ್ತಿದ್ದಾರೆ. ಮಾಧ್ಯಮಗಳು ಏನೇನೋ ವರದಿ ಬಿತ್ತರ ಮಾಡುತ್ತಿವೆ. ಯಾರೋ ಸ್ಟೋರಿ ಪ್ಲಾಂಟ್ ಮಾಡಿದ್ದನ್ನು ನಂಬಿ ಮಾಧ್ಯಮಗಳು ತಮ್ಮ ಘನತೆ ಹಾಳು ಮಾಡಿಕೊಳ್ಳಬಾರದು” ಎಂದು ಹೇಳಿದರು.

ಕಾಂಗ್ರೆಸ್‌ನ 60 ಶಾಸಕರು ಬಿಜೆಪಿಗೆ ಬರುತ್ತಾರೆ ಎಂಬ ಯತ್ನಾಳ್ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಇಂತಹ ನೀಚ ರಾಜಕಾರಣದ ಬಗ್ಗೆ ನೀವು ಪ್ರಶ್ನೆ ಮಾಡಿದರೆ ಹೇಗೆ?, ಇಂತಹ ಪ್ರಶ್ನೆಗಳಿಗೆ ನಾನು ಉತ್ತರಿಸುವುದಿಲ್ಲ. ನಿಮಗೆ ಯಾರು ಏನೇ ಹೇಳಿದ್ದರೂ ಅದೆಲ್ಲಾ ಸುಳ್ಳಿನ ಕಂತೆ. ಕಾಂಗ್ರೆಸ್ ಗೆ ಶಕ್ತಿ ತುಂಬಲು ಅನೇಕರು ಹೋರಾಟ, ತ್ಯಾಗ ಮಾಡಿದ್ದಾರೆ. ಬೆಳಗಾವಿ ಭೂಮಿಯಿಂದಲೇ ಗಾಂಧಿ ಬಾವಿಯಿಂದ ನೀರು ತೆಗೆದು ಸ್ವಚ್ಚಗೊಳಿಸಿ ಪಕ್ಷವನ್ನು ಅಧಿಕಾರಕ್ಕೆ ತರಲಾಗಿದೆ” ಎಂದರು.

"ಪಕ್ಷದ ಅಧ್ಯಕ್ಷನಾಗಿ ನಾನು ಎಲ್ಲರನ್ನೂ ಸಮಾನವಾಗಿ ಕಂಡಿದ್ದೇನೆ. ಪಕ್ಷ ಹಾಗೂ ಸರ್ಕಾರವನ್ನು ಕಾಯುವುದೇ ನನ್ನ ಕರ್ತವ್ಯ. ಕಾರ್ಯಕರ್ತರು, ಶಾಸಕರು, ಸಚಿವರು ಎಲ್ಲರೂ ಒಂದೇ. ನಮ್ಮ ಪಕ್ಷದ ಶಿಸ್ತಿನ ಚೌಕಟ್ಟಿನಲ್ಲಿ ಕೆಲಸ ಮಾಡುವವರ ಎದುರು ತಲೆಬಾಗಿ ಸೇವೆ ಮಾಡುತ್ತೇನೆ. ನನಗೆ ಪಕ್ಷವೇ ಮುಖ್ಯ. ನನಗೆ ಕೊಟ್ಟಿರುವ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿಕೊಂಡು ಬಂದಿದ್ದೇನೆ” ಎಂದು ಹೇಳಿದರು.

ಪಕ್ಷಕ್ಕಾಗಿ ತ್ಯಾಗ ಮಾಡಿದ್ದೇನೆ 

“ಪಕ್ಷಕ್ಕಾಗಿ ಮೊದಲಿನಿಂದಲೂ ಹಲವಾರು ತ್ಯಾಗಗಳನ್ನು ಮಾಡಿದ್ದೇನೆ. ಧರಂಸಿಂಗ್ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರ ಹಾಗೂ ಸಿದ್ದರಾಮಯ್ಯ ಅವರ ಹಿಂದಿನ ಸರ್ಕಾರದಲ್ಲಿಯೂ ಉಸಿರು ಬಿಗಿ ಹಿಡಿದುಕೊಂಡು ತ್ಯಾಗ ಮಾಡಿದ್ದೇನೆ. ನನಗೆ ಪಕ್ಷವೇ ಮುಖ್ಯ. ನಾನು ಪಕ್ಷದಿಂದ ಬೆಳೆದವನು. ವಿದ್ಯಾರ್ಥಿ ನಾಯಕನಾಗಿದ್ದ ನನ್ನನ್ನು ಗುರುತಿಸಿ ಪಕ್ಷ ಟಿಕೆಟ್ ನೀಡಿತ್ತು. ಮಾಧ್ಯಮದವರು ಯಾರ ಮಾತನ್ನೋ ಕೇಳಬೇಡಿ” ಎಂದರು.

ಎಷ್ಟು ದಿನ ಶಿವಕುಮಾರ್ ತ್ಯಾಗ ಮಾಡುತ್ತಾರೆ, ತ್ಯಾಗಕ್ಕೆ ಫಲ ಯಾವಾಗ ಸಿಗುತ್ತದೆ ಎಂದು ಕೇಳಿದಾಗ, “ನಾನು ತ್ಯಾಗ ಮಾಡಿಕೊಂಡೆ ಬರುತ್ತೇನೆ. ನನಗೆ ಫಲದ ಅವಶ್ಯಕತೆಯೇ ಇಲ್ಲ. ಜನಕ್ಕೆ ಒಳೆಯದಾಗುತ್ತಿದೆಯಲ್ಲ, ಅಷ್ಟು ಸಾಕು ನನಗೆ” ಎಂದು ಹೇಳಿದರು. 

Tags:    

Similar News