ಭೂಸ್ವಾಧೀನದಲ್ಲಿ ಅಕ್ರಮ ಪರಿಹಾರ ವಿತರಣೆ: ತನಿಖೆಗೆ ಸಚಿವ ಎಂ.ಬಿ. ಪಾಟೀಲ್ ಸೂಚನೆ
ಧಾರವಾಡ ಜಿಲ್ಲೆಯ ಕೆಳಗೇರಿ, ಮುಮ್ಮಿಗಟ್ಟಿ, ಕೋಟೂರು ಮತ್ತು ಬೇಲೂರು ಕೈಗಾರಿಕಾ ಪ್ರದೇಶಗಳಲ್ಲಿ ಬಿಜೆಪಿ ಸರ್ಕಾರವಿದ್ದಾಗ ಕೆಲವು ಜಮೀನುಗಳಿಗೆ ಎರಡು ಬಾರಿ ಪರಿಹಾರ ವಿತರಣೆಯಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.;
ಸಚಿವ ಎಂ.ಬಿ. ಪಾಟೀಲ್
ಕೈಗಾರಿಕಾ ಉದ್ದೇಶಗಳಿಗಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮೂಲಕ ಭೂಸ್ವಾಧೀನಪಡಿಸಿಕೊಂಡಿರುವ ಕೆಲವು ಪ್ರದೇಶಗಳಲ್ಲಿ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಂತ್ರಸ್ತ ರೈತರಿಗೆ ಎರಡು ಬಾರಿ ಪರಿಹಾರ ನೀಡಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಮಂಗಳವಾರ ವಿಧಾನಸಭಾ ಅಧಿವೇಶನದಲ್ಲಿ ತಿಳಿಸಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
"ಇಂತಹ ಪ್ರಕರಣಗಳ ಸಂಬಂಧ ಒಬ್ಬರು ಈಗಾಗಲೇ ಜೈಲಿನಲ್ಲಿದ್ದಾರೆ. ಇಲ್ಲಿ ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಹೆಚ್ಚುವರಿಯಾಗಿ ಪಾವತಿಯಾಗಿರುವ ಹಣವನ್ನು ಕಾನೂನು ರೀತಿ ವಸೂಲು ಮಾಡಲಾಗುವುದು," ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದರು.
ಧಾರವಾಡ ಜಿಲ್ಲೆ: ಧಾರವಾಡ ಜಿಲ್ಲೆಯ ಕೆಳಗೇರಿ, ಮುಮ್ಮಿಗಟ್ಟಿ, ಕೋಟೂರು ಮತ್ತು ಬೇಲೂರು ಕೈಗಾರಿಕಾ ಪ್ರದೇಶಗಳಲ್ಲಿ ಬಿಜೆಪಿ ಸರ್ಕಾರವಿದ್ದಾಗ ಕೆಲವು ಜಮೀನುಗಳಿಗೆ ಎರಡು ಬಾರಿ ಪರಿಹಾರ ವಿತರಣೆಯಾಗಿದೆ. ಇದರಲ್ಲಿ ಭೂಮಿಯ ಮೂಲ ಮಾಲೀಕರು ಮತ್ತು ಅಧಿಕಾರಿಗಳು ಶಾಮೀಲಾಗಿದ್ದು, 19.99 ಕೋಟಿ ರೂಪಾಯಿಗೂ ಹೆಚ್ಚಿನ ಹಣ ಎರಡನೇ ಬಾರಿ ಹೆಚ್ಚುವರಿಯಾಗಿ ಪರಿಹಾರ ರೂಪದಲ್ಲಿ ನೀಡಲಾಗಿದೆ. ಇದು ತನಿಖೆಯಿಂದ ದೃಢಪಟ್ಟಿದೆ. ಆಗ ಇದ್ದ ವಿಶೇಷ ಭೂಸ್ವಾಧೀನಾಧಿಕಾರಿ ಮತ್ತು ಇತರ ಸಿಬ್ಬಂದಿ ಮೇಲೆ ಪ್ರಕರಣ ದಾಖಲಾಗಿದೆ. ಇದರ ವಿಚಾರಣೆ ಕೂಡ ಪ್ರಗತಿಯಲ್ಲಿದ್ದು, ಹೆಚ್ಚುವರಿಯಾಗಿ ನೀಡಿರುವ ಹಣವನ್ನು ಹಿಂಪಡೆಯುವ ಪ್ರಕ್ರಿಯೆ ಕೂಡ ನಡೆಯುತ್ತಿದೆ. ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ಕೂಡ ತನಿಖೆ ನಡೆಸಿದೆ ಎಂದು ಸಚಿವರು ಮಾಹಿತಿ ನೀಡಿದರು.
ರಾಮನಗರ ಜಿಲ್ಲೆ: ರಾಮನಗರ ಜಿಲ್ಲೆಯ ಬನ್ನಿಕುಪ್ಪೆ ಗ್ರಾಮದಲ್ಲೂ ಒಂದು ಜಮೀನಿಗೆ ಎರಡನೇ ಬಾರಿ ₹1.58 ಕೋಟಿ ಹಣವನ್ನು ಪರಿಹಾರವೆಂದು ನೀಡಲಾಗಿದೆ. ಈ ಪ್ರಕರಣದಲ್ಲಿ ಹಿಂದೆ ಸಣ್ಣ ನೀರಾವರಿ ಇಲಾಖೆ ಸ್ವಾಧೀನಪಡಿಸಿಕೊಂಡಿದ್ದ ಜಮೀನನ್ನು ನಂತರದ ದಿನಗಳಲ್ಲಿ ಕೆಐಎಡಿಬಿ ತನ್ನ ವಶಕ್ಕೆ ತೆಗೆದುಕೊಂಡಿದೆ. ಈ ಸಂಬಂಧ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದ್ದು, ಭೂಮಿಯ ಮಾಲೀಕರು 75 ಲಕ್ಷ ರೂಪಾಯಿ ನ್ಯಾಯಾಲಯದಲ್ಲಿ ಠೇವಣಿ ಇಟ್ಟಿದ್ದಾರೆ. ಸದರಿ ಪ್ರಕರಣದಲ್ಲಿ ಅಂತಿಮ ಆದೇಶ ಬಾಕಿ ಇದ್ದು, ಸಂಬಂಧಿಸಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ್ ಸದನಕ್ಕೆ ತಿಳಿಸಿದರು.
ಈ ಪ್ರಕರಣಗಳ ಕುರಿತು ಸರ್ಕಾರವು ಗಂಭೀರವಾಗಿದೆ ಎಂದು ಸಚಿವರು ಪುನರುಚ್ಚರಿಸಿದ್ದು, ಅಕ್ರಮಗಳಿಗೆ ಕಾರಣರಾದ ಎಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.