ಕಮಿಷನ್ ಆರೋಪ | ಬಿಲ್ ಬಾಕಿ: ಗುತ್ತಿಗೆದಾರರ ಮನವಿಗೆ ಸೊಪ್ಪು ಹಾಕದ ಸಚಿವರು
ಮೂರು ವರ್ಷಗಳ ಹಿಂದೆ ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡಿ ಪ್ರಧಾನಿ ಮೋದಿಯವರಿಗೆ ಪತ್ರ ಬರೆಯುವ ಮೂಲಕ ರಾಜಕೀಯ ಬದಲಾವಣೆಗೆ ನಾಂದಿ ಹಾಡಿದ್ದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ, ಇದೀಗ ಮತ್ತೊಮ್ಮೆ 'ಪತ್ರ ಚಳವಳಿ' ಆರಂಭಿಸಿದೆ.;
ಮೂರು ವರ್ಷಗಳ ಹಿಂದೆ ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡಿ ಪ್ರಧಾನಿ ಮೋದಿಯವರಿಗೆ ಪತ್ರ ಬರೆಯುವ ಮೂಲಕ ರಾಜಕೀಯ ಬದಲಾವಣೆಗೆ ನಾಂದಿ ಹಾಡಿದ್ದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ, ಇದೀಗ ಮತ್ತೊಮ್ಮೆ 'ಪತ್ರ ಚಳವಳಿ' ಆರಂಭಿಸಿದೆ. ಆದರೆ, ಸಂಘ ಏಳು ದಿನಗಳ ಗಡುವು ನೀಡಿ ಪತ್ರ ಬರೆದು ಆರು ದಿನ ಕಳೆದರೂ ಏಳು ಸಚಿವರಲ್ಲಿ ಯಾರೊಬ್ಬರೂ ಪತ್ರಕ್ಕೆ ಸೊಪ್ಪು ಹಾಕಿಲ್ಲ!
2022ರ ಆರಂಭದಲ್ಲಿ ಅಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಹಲವು ಸಚಿವರು ಮತ್ತು ಅಧಿಕಾರಿಗಳು ಅಭಿವೃದ್ಧಿ ಯೋಜನೆಗಳ ಕಾಮಗಾರಿ ಬಾಕಿ ಬಿಲ್ ಬಿಡುಗಡೆ ಮಾಡಲು ಗುತ್ತಿಗೆದಾರರಿಂದ ಶೇ.40 ರಷ್ಟು ಕಮಿಷನ್ ಕೇಳುತ್ತಿದ್ದು, ಆ ಮೊತ್ತದ ಲಂಚ ನೀಡಲಾಗದೆ ಹಲವು ಗುತ್ತಿಗೆದಾರರು ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ ಎಂಬ ಗಂಭೀರ ಆರೋಪವನ್ನು ಮಾಡಿ ಪ್ರಧಾನಿ ಮೋದಿಯವರಿಗೆ ಗುತ್ತಿಗೆದಾರರ ಸಂಘ ದೂರು ನೀಡಿತ್ತು.
ಅದಾದ ಕೆಲವೇ ತಿಂಗಳಲ್ಲಿ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಅಂದಿನ ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಅವರೇ ತನ್ನ ಸಾವಿಗೆ ನೇರ ಕಾರಣ ಎಂದು ವಾಟ್ಸಪ್ ಸಂದೇಶ ಕಳಿಸಿ ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಘಟನೆ ರಾಷ್ಟ್ರಮಟ್ಟದಲ್ಲಿ ಭಾರಿ ಸದ್ದು ಮಾಡಿತ್ತು. ಪ್ರತಿಪಕ್ಷ ಕಾಂಗ್ರೆಸ್ ರಾಷ್ಟ್ರವ್ಯಾಪಿ ಹೋರಾಟ ಮಾಡಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿತ್ತು. ಆ ಹಿನ್ನೆಲೆಯಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಆ ಬಳಿಕ, 2023ರ ವಿಧಾನಸಭಾ ಚುನಾವಣೆಯವರೆಗೆ ಕಾಂಗ್ರೆಸ್ ಪಕ್ಷ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ವಿಷಯವನ್ನೇ ಮುಂದಿಟ್ಟುಕೊಂಡು 'ಪೇ ಸಿಎಂ' ಸೇರಿದಂತೆ ಹಲವು ಸರಣಿ ಅಭಿಯಾನಗಳನ್ನು ಮಾಡಿ, ಭ್ರಷ್ಟಾಚಾರವನ್ನೇ ಚುನಾವಣಾ ವಿಷಯವನ್ನಾಗಿ ಮಾಡಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು.
ಆದರೆ, ತಮ್ಮದೇ ಸಮಸ್ಯೆ, ಆರೋಪಗಳನ್ನು ಮುಂದಿಟ್ಟುಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ತಮ್ಮ ಬಾಕಿ ಬಿಲ್ ಪಾವತಿ ಸೇರಿದಂತೆ ಕಮಿಷನ್ ಮತ್ತಿತರ ವಿಷಯಗಳನ್ನು ಇತ್ಯರ್ಥಪಡಿಸಲಿದೆ. ತಮ್ಮ ಸಂಕಷ್ಟ ತಿಳಿದಿರುವ ಕಾಂಗ್ರೆಸ್ ಸ್ಪಂದಿಸಲಿದೆ ಎಂಬ ನಿರೀಕ್ಷೆಗಳು ನಿಜವಾಗಲಿಲ್ಲ ಎಂದು ಇದೀಗ ಅದೇ ರಾಜ್ಯ ಗುತ್ತಿಗೆದಾರರ ಸಂಘ ಈಗ ಕಾಂಗ್ರೆಸ್ ಸರ್ಕಾರದ ಪ್ರಮುಖ ಖಾತೆಗಳ ಸಚಿವರಿಗೇ ಪತ್ರ ಬರೆದಿದೆ.
ರಾಜ್ಯದಲ್ಲಿ ವಿವಿಧ ಕಾಮಗಾರಿಗಳ ಬರೋಬ್ಬರಿ 32 ಸಾವಿರ ಕೋಟಿಯಷ್ಟು ಬಾಕಿ ಪಾವತಿಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸಂಘ, ಬಾಕಿ ಬಿಲ್ ಪಾವತಿಯ ಕುರಿತು ಅಧಿಕಾರಿಗಳನ್ನು ಕೇಳಿದರೆ ಸಚಿವರನ್ನು ಭೇಟಿಯಾಗಲು ಹೇಳುತ್ತಾರೆ. ಜೊತೆಗೆ ಜ್ಯೇಷ್ಠತೆ ಉಲ್ಲಂಘಿಸಿ ಬಿಲ್ ಪಾವತಿ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪವನ್ನೂ ಮಾಡಿದೆ.
ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಸಚಿವರಾದ ಪ್ರಿಯಾಂಕ್ ಖರ್ಗೆ, ಎಚ್ ಸಿ ಮಹದೇವಪ್ಪ, ದಿನೇಶ್ ಗುಂಡೂರಾವ್, ಜಮೀರ್ ಅಹಮದ್, ಎನ್ ಎಸ್ ಬೋಸರಾಜ್ ಮತ್ತು ರಹೀಂಖಾನ್ ಅವರಿಗೆ ಪತ್ರ ಬರೆದಿರುವ ಸಂಘ, ಮುಂದಿನ ಏಳು ದಿನಗಳ ಒಳಗಾಗಿ ತಮ್ಮ ಸಭೆ ಕರೆದು ಇತ್ಯರ್ಥಪಡಿಸದೇ ಹೋದರೆ ಹೋರಾಟ ನಡೆಸುವುದಾಗಿ ಹೇಳಿದೆ.
ಮನವಿಗೆ ಸೊಪ್ಪು ಹಾಕದ ಸಚಿವರು!
ಕಳೆದ ಬುಧವಾರ(ಜ.8) ಸಂಘ ಏಳು ಸಚಿವರಿಗೆ ಪತ್ರ ಬರೆದಿದ್ದು, ಮಂಗಳವಾರ(ಜ.14)ಕ್ಕೆ ಅದು ನೀಡಿರುವ ಗಡುವು ಮುಕ್ತಾಯವಾಗಲಿದೆ.
ಆ ಹಿನ್ನೆಲೆಯಲ್ಲಿ 'ದ ಫೆಡರಲ್ ಕರ್ನಾಟಕ' ರಾಜ್ಯ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಜಿ ಎಂ ರವೀಂದ್ರ ಅವರನ್ನು ಸಂಪರ್ಕಿಸಿದಾಗ, ಈ ವರೆಗೂ ಯಾವುದೇ ಸಚಿವರಿಂದ ತಮ್ಮ ಪತ್ರಕ್ಕೆ ಪ್ರತಿಕ್ರಿಯೆ ಬಂದಿಲ್ಲ ಎಂದು ಖಚಿತಪಡಿಸಿದರು.
ಅಲ್ಲದೆ, "ಹಿಂದಿನ ಸರ್ಕಾರದ ಅವಧಿಯಲ್ಲಿ ಸಂಘ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಾಗ ಇದ್ದ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೂ ಯಾವುದೇ ವ್ಯತ್ಯಾಸವಿಲ್ಲ. ಸರ್ಕಾರ 32 ಸಾವಿರ ಕೋಟಿ ಬಾಕಿ ಉಳಿಸಿಕೊಂಡಿದ್ದು, ಗುತ್ತಿಗೆದಾರರ ಹತ್ತಾರು ಮನವಿ, ಕೋರಿಕೆಗಳಿಗೆ ಸರ್ಕಾರ ಕುರುಡಾಗಿದೆ. ಇಂತಹ ವರ್ತನೆಯನ್ನು ನಾವು ಸರ್ಕಾರದಿಂದ ನಿರೀಕ್ಷಿಸಿರಲಿಲ್ಲ" ಎಂದು ಅವರು ಹೇಳಿದರು.
ಈ ನಡುವೆ, ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷರಾದ ಜಗನ್ನಾಥ ಬಿ ಶೇಗಜಿ ಅವರು ಕಲಬುರಗಿಯಲ್ಲಿ ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಕಮಿಷನ್ ನೀಡದೆ ಯಾವೊಂದು ಕಡತಗಳೂ ಒಂದಿಂಚೂ ಕದಲುವುದಿಲ್ಲ. ಸರ್ಕಾರದ ಧೋರಣೆಯಿಂದ ನಾವು ನೊಂದಿದ್ದೇವೆ ಎಂದು ಹೇಳುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಒಟ್ಟಾರೆ 40% ಕಮಿಷನ್ ಆರೋಪವನ್ನೇ ಅಸ್ತ್ರವಾಗಿಸಿಕೊಂಡು ಬಿಜೆಪಿ ವಿರುದ್ಧ ಸಾಲು ಸಾಲು ಅಭಿಯಾನಗಳನ್ನು ನಡೆಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಅವಧಿಯಲ್ಲೂ ರಾಜ್ಯ ಗುತ್ತಿಗೆದಾರರ ಆರೋಪಗಳು ಮುಂದುವರಿದಿವೆ. ಕಮಿಷನ್ ಮತ್ತು ಭ್ರಷ್ಟಾಚಾರದ ವಿಷಯದಲ್ಲಿ ಸದ್ಯ ಊದುವುದನ್ನು ಕೊಟ್ಟು ಬಾರಿಸುವುದನ್ನು ತೆಗೆದುಕೊಂಡರು ಎಂಬ ಸ್ಥಿತಿ ರಾಜ್ಯ ಗುತ್ತಿಗೆದಾರರದ್ದು ಎಂಬಂತಾಗಿದೆ.