ಬೆಂಗಳೂರು ವಿಮಾನ ನಿಲ್ದಾಣದ ರಾಮೇಶ್ವರಂ ಕೆಫೆ ಪೊಂಗಲ್‌ನಲ್ಲಿ ಜಿರಳೆ ಪತ್ತೆ

ಹುಳು ಇರುವ ಪೊಂಗಲ್‌ನ ವೀಡಿಯೊವನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿದಾಗ ಮಾತ್ರ ಅವರು ಸಮಸ್ಯೆಯನ್ನು ಒಪ್ಪಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.;

Update: 2025-07-24 08:31 GMT

ರಾಮೇಶ್ವರಂ ಕೆಫೆ ಪೊಂಗಲ್‌ನಲ್ಲಿ ಜಿರಳೆ ಪತ್ತೆಯಾಗಿದೆ. 

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ (ಕೆಐಎ) ರಾಮೇಶ್ವರಂ ಕೆಫೆ ಔಟ್‌ಲೆಟ್‌ನಲ್ಲಿ ಗ್ರಾಹಕರಿಗೆ ನೀಡಿದ ಉಪಹಾರ ಪೊಂಗಲ್‌ನಲ್ಲಿ ಜಿರಳೆ ಪತ್ತೆಯಾಗಿರುವ ಘಟನೆ ನಡೆದಿದೆ. 

ಗುರುವಾರ (ಜುಲೈ 24) ಬೆಳಗ್ಗೆ ಲೋಕನಾಥ್ ಎಂಬುವವರು ವಿಮಾನ ನಿಲ್ದಾಣದ ರಾಮೇಶ್ವರಂ ಕೆಫೆಯಿಂದ 300 ರೂಪಾಯಿ ಹಣ ನೀಡಿ ಪೊಂಗಲ್ ಮತ್ತು 180 ರೂಪಾಯಿಗೆ ಫಿಲ್ಟರ್ ಕಾಫಿ ಖರೀದಿ ಮಾಡಿದ್ದರು. ಒಟ್ಟು ಬಿಲ್ 504 ರೂಪಾಯಿ ಆಗಿತ್ತು ಎಂದು ವರದಿಯಾಗಿದೆ. ಅವರು ಅದನ್ನು ತಿನ್ನುವ ವೇಳೆ ಅದರಲ್ಲಿ ಜಿರಳೆ ಪತ್ತೆಯಾಗಿದೆ. 

ಗ್ರಾಹಕನಿಂದ ದೂರು

ಗ್ರಾಹಕರು ಆರೋಪಿಸಿದಂತೆ, ಕೆಫೆ ಸಿಬ್ಬಂದಿ ಮೊದಲು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷಿಸಲು ಪ್ರಯತ್ನಿಸಿದ್ದಾರೆ. ಹುಳು ಇರುವ ಪೊಂಗಲ್‌ನ ವೀಡಿಯೊವನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿದಾಗ ಮಾತ್ರ ಅವರು ಸಮಸ್ಯೆಯನ್ನು ಒಪ್ಪಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. 

ಕೆಫೆ ಸಿಬ್ಬಂದಿ ಕ್ಷಮೆಯಾಚಿಸಿದರು ಮತ್ತು ಚಿತ್ರೀಕರಣ ಪ್ರಾರಂಭಿಸಿದ ನಂತರವೇ 300 ರೂ. ಮರುಪಾವತಿಯನ್ನು ನೀಡಿದರು ಎಂದು ಆ ವ್ಯಕ್ತಿ ಹೇಳಿಕೊಂಡಿದ್ದಾನೆ. ಆಹಾರ ಪದಾರ್ಥದ ಸಂಪೂರ್ಣ ಮರುಪಾವತಿಯನ್ನು ಅವರು ಪಡೆದಿದ್ದಾರೆ ಎಂದು ವರದಿಯಾಗಿದೆ. ಘಟನೆಯ ವೀಡಿಯೊದಲ್ಲಿ, ಗ್ರಾಹಕರು ಪೊಂಗಲ್‌ನ ಚಮಚದಲ್ಲಿರುವ ಹುಳುವನ್ನು ಎತ್ತಿ ತೋರಿಸಿರುವ ವಿಡಿಯೋ ವೈರಲ್‌ ಆಗಿದೆ. 

ಯಾವುದೇ ಸ್ಪಷ್ಟನೆ ನೀಡದ ಹೋಟೆಲ್​  

ವೀಡಿಯೊದಲ್ಲಿ, ಗ್ರಾಹಕರು ಮತ್ತೊಬ್ಬ ಗ್ರಾಹಕರೊಂದಿಗೆ ಇನ್‌ಸ್ಟಾಗ್ರಾಮ್ ಮೂಲಕ ಕೆಫೆ ಮಾಲೀಕರಿಗೆ ದೂರು ನೀಡುವ ಬಗ್ಗೆ ಚರ್ಚಿಸುತ್ತಿರುವುದು ಕೇಳಿಬಂದಿದೆ. ಅಲ್ಲದೆ, ಸಿಬ್ಬಂದಿಯೊಬ್ಬರು ಅನುಚಿತವಾಗಿ ಮಾತನಾಡಿದ್ದಾರೆಯೇ ಎಂದು ಕೇಳುತ್ತಿರುವ ಧ್ವನಿ ಸಹ ಕೇಳಿಬಂದಿದೆ. ಈ ಘಟನೆಯ ಬಗ್ಗೆ ರಾಮೇಶ್ವರಂ ಕೆಫೆ ಆಡಳಿತ ಮಂಡಳಿಯು ಇಲ್ಲಿಯವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಜನಪ್ರಿಯ ರೆಸ್ಟೋರೆಂಟ್

2021ರಲ್ಲಿ ಆರಂಭವಾದ ರಾಮೇಶ್ವರಂ ಕೆಫೆ ಕೆಲವೇ ವರ್ಷಗಳಲ್ಲಿ ನಗರದಲ್ಲಿ ಜನಪ್ರಿಯವಾದ ಹೋಟೆಲ್‌. ಇಲ್ಲಿನ ದೋಸೆ, ತುಪ್ಪದ ಬಳಕೆ, ಉತ್ತಮ ಗುಣಮಟ್ಟದ ಕಾಫಿಗೆ ಹಲವಾರು ಜನರು ಮಾರು ಹೋಗಿದ್ದಾರೆ. ನಗರದಕ್ಕೆ ಆಗಮಿಸುವ ಹಲವಾರು ಜನರು ಈ ಹೋಟೆಲ್‌ಗೆ ತಪ್ಪದೇ ಭೇಟಿ ನೀಡುತ್ತಾರೆ. ಇತ್ತೀಚೆಗಷ್ಟೇ ರಾಮೇಶ್ವರಂ ಕೆಫೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತನ್ನ ಮಳಿಗೆಯನ್ನು ಆರಂಭಿಸಿತ್ತು. ಇತ್ತೀಚೆಗೆ ಕೇಂದ್ರ ಟೆಲಿಕಾಮ್‌ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಬೆಂಗಳೂರಿಗೆ ಭೇಟಿ ನೀಡಿದ್ದ ವೇಳೆ ರಾಮೇಶ್ವರಂ ಕೆಫೆಗೆ ಭೇಟಿ ನೀಡಿ ಆಹಾರ ಸವಿದಿದ್ದರು. ಇಲ್ಲಿನ ದೋಸೆ ಹಾಗೂ ಫಿಲ್ಟರ್‌ ಕಾಫಿಗೆ ತಾವು ಮಾರು ಹೋಗಿದದಾಗಿ ತಿಳಿಸಿದ್ದರು. ದಕ್ಷಿಣ ಭಾರತದ ಪಾಕಪದ್ಧತಿಗೆ ಹೆಸರುವಾಸಿಯಾಗಿರುವ ಈ ಬ್ರ್ಯಾಂಡ್ ಹೈದರಾಬಾದ್ ಸೇರಿದಂತೆ ಇತರೆ ನಗರಗಳಿಗೂ ವಿಸ್ತರಿಸಿದೆ. 

ರಾಮೇಶ್ವರಂ ಕೆಫೆ ವಿವಾದಕ್ಕೆ ಸಿಲುಕಿರುವುದು ಇದೇ ಮೊದಲಲ್ಲ. ಮೇ 2024 ರಲ್ಲಿ, ಹೈದರಾಬಾದ್‌ನಲ್ಲಿರುವ ಅದರ ಹಲವಾರು ಮಳಿಗೆಗಳು ತೆಲಂಗಾಣ ಆಹಾರ ಸುರಕ್ಷತಾ ಇಲಾಖೆಯ ಪರಿಶೀಲನೆಗೆ ಒಳಪಟ್ಟಿದ್ದವು. ಆ ಸಮಯದಲ್ಲಿ, ಅಧಿಕಾರಿಗಳು ತಪಾಸಣೆ ವೇಳೆ ಹೆಚ್ಚಿನ ಪ್ರಮಾಣದ ಅವಧಿ ಮೀರಿದ ಮತ್ತು ತಪ್ಪಾಗಿ ಲೇಬಲ್ ಮಾಡಲಾದ ಆಹಾರ ಪದಾರ್ಥಗಳನ್ನು ಪತ್ತೆ ಮಾಡಿದ್ದರು. ಇದರಲ್ಲಿ ಮಾರ್ಚ್ 2024 ರಲ್ಲಿ ಅವಧಿ ಮೀರಿದ 100 ಕೆಜಿ ಉದ್ದಿನ ಬೇಳೆ ಹಾಗೂ ಅವಧಿ ಮೀರಿದ ಮೊಸರು ಮತ್ತು ಹಾಲು ರಾಮೇಶ್ವರಂ ಕೆಫೆಯಲ್ಲಿ ಪತ್ತೆಯಾಗಿದ್ದವು. 

Tags:    

Similar News