ಒಳಮೀಸಲಾತಿ ಸಮೀಕ್ಷೆ ಅವಧಿ ವಿಸ್ತರಣೆ ಸಿಎಂ ನಿರ್ಧಾರ: ಡಾ.ಜಿ. ಪರಮೇಶ್ವರ್‌

ಸಚಿವ ಸಂಪುಟ ಪುನಾರಚನೆ ಬಗ್ಗೆ ಆಹಾರ ಸಚಿವ ಮುನಿಯಪ್ಪನವರ ಹೇಳಿಕೆ ಬಗ್ಗೆ ನಾನು ಮಾತನಾಡುವುದಿಲ್ಲ, ಸಚಿವ ಸ್ಥಾನ ಸಿಗುತ್ತದೆಯೋ ಇಲ್ಲವೋ ಎಂಬುದನ್ನು ಪಕ್ಷದ ಹೈಕಮಾಂಡ್‌ ಹಾಗೂ ಮುಖ್ಯಮಂತ್ರಿಗಳು ತೀರ್ಮಾನ ಮಾಡುತ್ತಾರೆ.;

Update: 2025-05-16 06:51 GMT

ಗೃಹ ಸಚಿವ ಡಾ.ಜಿ. ಪರಮೇಶ್ವರ್‌

ಪರಿಶಿಷ್ಟ ಜಾತಿ ಒಳ ಮೀಸಲಾತಿ ಸಮೀಕ್ಷೆಯ ದತ್ತಾಂಶ ಸಂಗ್ರಹಣೆಗೆ ಅವಧಿ ವಿಸ್ತರಿಸುವಂತೆ ನನ್ನ ಬಳಿಯು ಸಾಕಷ್ಟು ಜನ ಬಂದು ಮನವಿ ಮಾಡಿದ್ದಾರೆ. ಸಮಯ ವಿಸ್ತರಿಸಬೇಕೆ ಅಥವಾ ಬೇಡವೆ, ಇಲ್ಲಿಯವರೆಗೂ ಎಷ್ಟು ದತ್ತಾಂಶ ಸಂಗ್ರಹಣೆಯಾಗಿದೆ ಎಂದು ನೋಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಸಮಿತಿ ಈ ಬಗ್ಗೆ ಶುಕ್ರವಾರ(ಮೇ16) ತೀರ್ಮಾನ ಕೈಗೊಳ್ಳಬಹುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ತಿಳಿಸಿದ್ದಾರೆ.

ಸಚಿವ ಸಂಪುಟ ಪುನಾರಚನೆ ಬಗ್ಗೆ ಆಹಾರ ಸಚಿವ ಮುನಿಯಪ್ಪನವರ ಹೇಳಿಕೆ ಬಗ್ಗೆ ನಾನು ಮಾತನಾಡುವುದಿಲ್ಲ. ಸಚಿವ ಸ್ಥಾನ ಸಿಗುತ್ತದೆಯೋ ಇಲ್ಲವೋ ಎಂಬುದನ್ನು ಪಕ್ಷದ ಹೈಕಮಾಂಡ್‌ ಹಾಗೂ ಮುಖ್ಯಮಂತ್ರಿಗಳು ತೀರ್ಮಾನ ಮಾಡುತ್ತಾರೆ ಎಂದರು.

ಬೆಂಗಳೂರು ನಗರ ಸೇಫ್ ಸಿಟಿ ಎಂಬ ಸರ್ವೇ ಬಂದಿದ್ದು ನಾನು ಮೊದಲಿನಿಂದಲೂ ಹೇಳಿಕೊಂಡೇ ಬರುತ್ತಿದ್ದೇನೆ. ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಬಿಜೆಪಿಯವರು ಸದನದ ಒಳಗೂ, ಹೊರಗೂ ಟೀಕೆ ಮಾಡಿದ್ದಾರೆ. ಮುಂಬೈ, ಕೊಲ್ಕತ್ತಾ, ಚೆನ್ನೈ ಹಾಗೂ ಹೈದರಾಬಾದ್‌ ನಂತಹ ಮಹಾನಗರಗಳು ಏನಾಗಿವೆ ಎಂಬುದನ್ನು ಹೋಲಿಕೆ ಮಾಡಿ ನೋಡಿ ನಂತರ ಪ್ರತಿಪಕ್ಷಗಳು ಟೀಕಿಸಲಿ ಎಂದು ತಿಳಿಸಿದರು.

ಸುಪ್ರೀಂಕೋರ್ಟ್‌ ತೀರ್ಪಿನ ಬಳಿಕವೂ ರಾಜ್ಯಪಾಲರು ಮಸೂದೆಗಳನ್ನು ವಾಪಸ್ ಕಳುಹಿಸಿದ್ದಾರೆ. ಈ ನಡವಳಿಕೆ ಬಗ್ಗೆ ಮುಂದಿನ ದಿನದಲ್ಲಿ ಏನು ಮಾಡಬೇಕು ಎಂದು ಮುಖ್ಯಮಂತ್ರಿಗಳ ಜತೆ ಸಚಿವ ಸಂಪುಟದಲ್ಲಿ ಯೋಚನೆ ಮಾಡುತ್ತೇವೆ. ಕಾನೂನು ಏನು ಹೇಳುತ್ತೆ ನೋಡಬೇಕು. ಈ ವಿಚಾರದಲ್ಲಿ ರಾಷ್ಟ್ರಪತಿಗಳ ಕಚೇರಿಯಿಂದಲೂ ಪ್ರತಿಕ್ರಿಯೆ ಕೋರಲಾಗಿದೆ. ಈ ಬೆಳವಣಿಗೆ ಗಮನಿಸಿ ನಂತರ ತೀರ್ಮಾನ ಮಾಡುತ್ತೇವೆ ಎಂದರು.

ಭಾರತ ಹಾಗೂ ಪಾಕಿಸ್ತಾನ ಯುದ್ಧದ ಬಗ್ಗೆ ಮುಳಬಾಗಿಲು ಶಾಸಕ ಕೊತ್ತೂರು ಮಂಜುನಾಥ ಅವರ ಹೇಳಿಕೆಯನ್ನು ನಾನು ನೋಡಿಲ್ಲ. ಬಿಜೆಪಿ ಶಾಸಕರ ಅಮಾನತು ಬಗ್ಗೆ ಕೋರ್ಟ್ ಮೆಟ್ಟಿಲೇರುವ ವಿಚಾರದ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದರು. 

Tags:    

Similar News