CM Video Conference | ಮಳೆಹಾನಿ ಮಾಹಿತಿ ಪಡೆದ ಸಿಎಂ; ತುರ್ತು ಪರಿಹಾರ ನೀಡಲು ಸೂಚನೆ
ಸತತ ಮಳೆಯಿಂದ ವಿವಿಧ ಜಿಲ್ಲೆಗಳ ಮಳೆಹಾನಿ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಡಿಯೋ ಸಂವಾದ ನಡೆಸಿ ಮಾಹಿತಿ ಪಡೆದರು.
ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನ ಅ.25ರವರೆಗೆ ಶೇ.58 ರಷ್ಟು ಹೆಚ್ಚುವರಿ ಮಳೆಯಾಗಿದೆ. ಬೆಂಗಳೂರು ನಗರ ಒಂದರಲ್ಲೇ 275 ಮಿ.ಮೀ. ಮಳೆಯಾಗಿದೆ. ಅತಿವೃಷ್ಟಿಯಿಂದ ಮನೆ ಹಾನಿ ಹಾಗೂ ಪ್ರಾಣಹಾನಿ ಸಂಭವಿಸಿದರೆ 48 ಗಂಟೆಗಳಲ್ಲಿ ಪರಿಹಾರ ವಿತರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದಲ್ಲಿ ಶನಿವಾರ ಅವರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಸಿಇಒಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಹಿಂಗಾರು ಅವಧಿಯಲ್ಲಿ ಅತಿವೃಷ್ಟಿಯಿಂದ ಒಟ್ಟು 25 ಸಾವು ಸಂಭವಿಸಿದ್ದು, ತುರ್ತು ಪರಿಹಾರ ನೀಡಲಾಗಿದೆ. 84ಮನೆಗಳು ಸಂಪೂರ್ಣ ಹಾನಿಗೀಡಾಗಿದ್ದು, 2077ಮನೆಗಳು ಭಾಗಶಃ ಹಾನಿಗೀಡಾಗಿವೆ. ಪೂರ್ತಿ ಮನೆಗೆ 1.20ಲಕ್ಷ ರೂ ಪರಿಹಾರ ನೀಡುವ ಜೊತೆಗೆ ಮನೆ ನಿರ್ಮಿಸಿಕೊಡಲು ಆದೇಶಿಸಲಾಗಿದೆ. ಭಾಗಶಃ ಹಾನಿಗೀಡಾದ ಮನೆಗಳಿಗೆ ರೂ.50 ಸಾವಿರದವರೆಗೆ ಪರಿಹಾರ ಒದಗಿಸಲಾಗುವುದು ಎಂದು ಹೇಳಿದರು.
ಅತಿವೃಷ್ಟಿಯಿಂದ ಅಂದಾಜು 74,993 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ, 30,941ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆ ಹಾನಿಗೊಳಗಾಗಿದೆ. ಬೆಳೆ ಹಾನಿಯ ಕುರಿತು ಜಂಟಿ ಸಮೀಕ್ಷೆ ನಡೆಯುತ್ತಿದ್ದು, 3-4ದಿನಗಳಲ್ಲಿ ಸಮೀಕ್ಷೆ ಪೂರ್ಣಗೊಳ್ಳಲಿದೆ. ಜಂಟಿ ಸಮೀಕ್ಷೆ ವರದಿಯನ್ನು ತ್ವರಿತವಾಗಿ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತುರ್ತು ಪರಿಹಾರ ಕಾರ್ಯಗಳಿಗೆ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಗಳ ಖಾತೆಯಲ್ಲಿ ಒಟ್ಟು ರೂ. 666.96 ಕೋಟಿ ಹಣ ಲಭ್ಯವಿದೆ ಎಂದು ತಿಳಿಸಿದರು.
ಮಳೆಯಿಂದ ಪ್ರಮುಖ ಜಲಾಶಯಗಳ ಒಟ್ಟು ಸಂಗ್ರಹಣಾ ಸಾಮರ್ಥ್ಯ 895.62 ಟಿಎಂಸಿ ಆಗಿದ್ದು, ಪ್ರಸ್ತುತ 871.26 ಟಿಎಂಸಿ ನೀರು ಸಂಗ್ರಹವಿದೆ. ಜಲವಿದ್ಯುತ್ ಉತ್ಪಾದನೆಗೆ ಅಗತ್ಯವಾದ ನೀರಿನ ಪ್ರಮಾಣ ಇರುವುದರಿಂದ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಕೆರೆಗಳ ಒತ್ತುವರಿ ತೆರವು, ಹೂಳೆತ್ತುವ ಕೆಲಸವನ್ನು ಶೀಘ್ರದಲ್ಲಿ ಮುಗಿಸಲು ಆದೇಶಿಸಲಾಗಿದೆ ಎಂದರು.
ರಾಜ್ಯಾದ್ಯಂತ 12,553ಕಿ.ಮೀ ಗ್ರಾಮೀಣ ರಸ್ತೆಗಳು ಹಾನಿಯಾಗಿವೆ. ಅದೇ ರೀತಿ 1106 ಸಣ್ಣ ಸೇತುವೆ, ಮೋರಿಗಳು ಹಾನಿಗೊಳಗಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯಗಳಿಗೆ ಉಂಟಾಗಿರುವ ಹಾನಿ ಕುರಿತು ಸಮಗ್ರ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ವಿವರಿಸಿದರು.
ರಾಜಕಾಲುವೆಗೆ ತಡೆಗೋಡೆ ನಿರ್ಮಾಣ
ಬೆಂಗಳೂರು ನಗರದಲ್ಲಿ ಬಾಕಿ ಉಳಿದಿರುವ 173 ಕಿ.ಮೀ. ಉದ್ದದ ರಾಜಕಾಲುವೆಗಳಿಗೆ ತಡೆಗೋಡೆ ನಿರ್ಮಿಸುವ ಯೋಜನೆ ಹಾಗೂ 80 ಕಿ.ಮೀ ಉದ್ದದ ಕಲ್ಲುಕಟ್ಟಡದ ರಾಜಕಾಲುವೆಗಳ ಸಬಲೀಕರಣ ಯೋಜನೆಗೆ ವಿಶ್ವಬ್ಯಾಂಕ್ 2ಸಾವಿರ ಕೋಟಿ ರೂ. ಆರ್ಥಿಕ ನೆರವು ನೀಡಲು ತಾತ್ವಿಕ ಒಪ್ಪಿಗೆ ನೀಡಲಾಗಿದೆ. ವಿಸ್ತೃತ ಯೋಜನಾ ವರದಿಯ ಅಂದಾಜು ಪಟ್ಟಿಗಳಿಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗುವುದು. ಆದಷ್ಟ ಬೇಗ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಮುಂದಿನ ವರ್ಷದ ಆರಂಭದೊಳಗೆ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಸಿಎಂ ಹೇಳಿದರು.
ರಾಷ್ಟ್ರೀಯ ನೈಸರ್ಗಿಕ ವಿಕೋಪ ನಿರ್ವಹಣಾ ಪ್ರಾಧಿಕಾರದ ವತಿಯಿಂದ ರಾಜಕಾಲುವೆ ಕಿರು ಸೇತುವೆಗಳ ಅಗಲೀಕರಣ ಮತ್ತು ಕೆರೆಗಳ ಅಭಿವೃದ್ಧಿಗಾಗಿ ರೂ.275ಕೋಟಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಕೆರೆಗಳಿಗೆ ರೂ.50 ಕೋಟಿ ವೆಚ್ಚದಲ್ಲಿ ತುರ್ತು ತೂಬುಗಾಲುವೆ ನಿರ್ಮಿಸಲಾಗುವುದು. ನಗರ ವ್ಯಾಪ್ತಿಯ ಪ್ರಮುಖ ರಸ್ತೆಗಳ ಅಭಿವೃದ್ಧಿಗಾಗಿ ರೂ. 669 ಕೋಟಿ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಮಳೆಯಿಂದ ಹಾನಿಗೀಡಾಗಿರುವ ರಸ್ತೆಗಳ ದುರಸ್ತಿಗೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ಅನಧಿಕೃತ ಕಟ್ಟಡಗಳ ತಡೆಗೆ ಕಠಿಣ ಕಾನೂನು
ಬೆಂಗಳೂರು ನಗರದಲ್ಲಿ ಅಕ್ರಮ ನಿರ್ಮಾಣ ತಡೆಗಟ್ಟಲು ಹೊಸ ಕಠಿಣ ಕಾನೂನು ತಂದು ಬಿಬಿಎಂಪಿ, ಬಿಡಿಎ ಹಾಗೂ ಬಿಎಂಆರ್‌ಡಿಎಗೆ ಹೆಚ್ಚು ಅಧಿಕಾರ ನೀಡಲು ನಿರ್ಧರಿಸಲಾಗಿದೆ. ಅಕ್ರಮ ನಿರ್ಮಾಣ, ಇದರಿಂದಾಗುವ ಅನಾಹುತ ತಡೆಯಲು ಕಾನೂನು ಬಿಗಿಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಬಿಜೆಪಿ-ಜೆಡಿಎಸ್ ನಾಯಕರ ರಾಜಕೀಯ ಆರೋಪಗಳಿಗೆ ಉತ್ತರ ಕೊಡಲ್ಲ. ಅವರ ಕಾಲದಲ್ಲಿ ಆದ ಅನಾಹುತಗಳಿಗೆ ಸರಿಯಾಗಿ ಕ್ರಮ ತೆಗೆದುಕೊಂಡಿಲ್ಲ. ರಾಜಕಾಲುವೆ ಒತ್ತುವರಿ ತೆರವಿಗೆ ಅವರು ಏನೂ ಮಾಡಿಲ್ಲ ಎಂದು ತಿರುಗೇಟು ನೀಡಿದರು.
ಹಸಿರು ಪಟಾಕಿ ಬಳಸಲು ಕಟ್ಟುನಿಟ್ಟಿನ ಕ್ರಮ
ದೀಪಾವಳಿ ಸಂದರ್ಭದಲ್ಲಿ ಹಸಿರು ಪಟಾಕಿ ಬಳಕೆಗೆ ಮಾತ್ರ ಅವಕಾಶ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚಿಸಿದರು. ಪರಿಸರಕ್ಕೆ ಹಾನಿಯಾಗುವ ಪಟಾಕಿಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಪಟಾಕಿ ದಾಸ್ತಾನು, ಮಾರಾಟ ಪ್ರಕ್ರಿಯೆಯಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ನೋಡಿಕೊಳ್ಳಬೇಕು. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಸಿಎಂ ಹೇಳಿದರು.
ಡಿಸಿ, ಜಿ.ಪಂ.ಸಿಇಒಗಳೊಂದಿಗೆ ವಿಡಿಯೋ ಸಂವಾದ
ಇದಕ್ಕೂ ಮುನ್ನ ಮಳೆಹಾನಿ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಡಿಯೋ ಸಂವಾದ ನಡೆಸಿ ಮಾಹಿತಿ ಪಡೆದರು.
ಅತಿವೃಷ್ಟಿ, ಪ್ರವಾಹ, ನೆರೆ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿಗಳು ಸ್ವತಃ ಭೇಟಿ ನೀಡಿ ಪರಿಶೀಲಿಸಿ ನಿಯಮಾವಳಿ ಪ್ರಕಾರ ಪರಿಹಾರ ಒದಗಿಸಬೇಕು ಎಂದು ಸಿಎಂ ಸೂಚಿಸಿದರು.
ಸಭೆಯಲ್ಲಿ ಕೃಷಿ ಸಚಿವರಾದ ಚೆಲುವರಾಯಸ್ವಾಮಿ, ಕಂದಾಯ ಇಲಾಖೆ ಸಚಿವರಾದ ಕೃಷ್ಣ ಬೈರೇಗೌಡ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ ಖರ್ಗೆ, ಕಾರ್ಮಿಕ ಇಲಾಖೆ ಸಚಿವರಾದ ಸಂತೋಷ್ ಲಾಡ್ , ಮುಖ್ಯ ಸಚೇತಕರಾದ ಅಶೋಕ್ ಪಟ್ಟಣ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್, ಸೇರಿದಂತೆ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.