ಮುಖ್ಯಮಂತ್ರಿ ಸಂಧಾನ ಸಫಲ: ಮದ್ಯ ಮಾರಾಟ ಬಂದ್‌ ವಾಪಸ್

Update: 2024-11-19 13:09 GMT

ವಿವಿಧ ಬೇಡಿಕೆ ಮುಂದಿಟ್ಟು ರಾಜ್ಯಾದ್ಯಂತ ನವೆಂಬರ್ 20ರಂದು ಬಾರ್ ಬಂದ್ ನಡೆಸುವುದಾಗಿ ಕರೆ ನೀಡಿದ್ದ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ತನ್ನ ಪ್ರತಿಭಟನೆಯನ್ನು ವಾಪಸ್ ಪಡೆದಿದೆ.

ನ.19ರ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಡೆದ ಸಂಧಾನ ಸಭೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಈ ಬಂದ್ ಕರೆಯನ್ನು ಹಿಂತೆಗೆದುಕೊಂಡಿರುವುದಾಗಿ ಸಂಘಟನೆ ಹೇಳಿದೆ.

ಕರುಣಾಕರ ಹೆಗಡೆ ನೇತೃತ್ವದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದು, ತಮ್ಮ ಬೇಡಿಕೆಗಳಿಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹೀಗಾಗಿ ಬಾರ್ ಅಸೋಸಿಯೇಷನ್ ಕರೆ ನೀಡಿದ್ದ ಮದ್ಯ ಮಾರಾಟ ಬಂದ್ ಪ್ರತಿಭಟನೆಯನ್ನು ವಾಪಸ್ ಪಡೆಯಲಾಗಿದೆ ಎಂದು ಸಂಘಟನೆ ಹೇಳಿದೆ.

ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಕಡಿಮೆ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ನ.20ರಂದು ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ರಾಜ್ಯಾದ್ಯಂತ ಎಲ್ಲಾ ವೈನ್ ಸ್ಟೋರ್ ಬಂದ್ಗೆ ಕರೆ ನೀಡಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ನಡೆಸಿದ ಮಾತುಕತೆ ಸಫಲವಾಗಿದೆ. ಹೀಗಾಗಿ ಬಾರ್ ಅಸೋಸಿಯೇಷನ್ ನೀಡಿದ್ದ ನಾಳಿನ ಬಂದ್ ವಾಪಸ್ ಪಡೆದುಕೊಂಡಿದೆ. ಸಿಎಂ ಭೇಟಿ ಬಳಿಕ ಸ್ವತಃ ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗೋವಿಂದ್ ರಾಜ್ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

ಸಿದ್ದರಾಮಯ್ಯನವರ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಬೇಡಿಕೆ ಮತ್ತು ಸಮಸ್ಯೆಗಳ ಕುರಿತು ಸರ್ಕಾರ ಗಮನಹರಿಸಬೇಕೆಂದು ನಾಳೆ ರಾಜ್ಯವ್ಯಾಪಿ ಬಂದ್ ಕೊಟ್ಟಿದ್ದವು. ಆದರೆ, ಈಗ ನಮ್ಮ ಕುಂದು ಕೊರತೆಗಳನ್ನು ಸಿಎಂ ಸಿದ್ದರಾಮಯ್ಯನವರು ಕೇಳಿದ್ದಾರೆ. ಹಾಗೆಯೇ ಎಸಿಎಸ್, ಕಮಿಷನರ್ ಗೆ ನಮ್ಮ ಬೇಡಿಕೆ ಕುರಿತು ವರದಿ ನೀಡಲು ಹೇಳಿದ್ದು, ನಮ್ಮ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ನಾಳೆ ಮದ್ಯ ಮಾರಾಟ ಬಂದ್ ವಾಪಸ್ ಪಡೆದಿದ್ದೇವೆ ಎಂದು ಸ್ಪಷ್ಟಪಡಿಸಿದರು.

Tags:    

Similar News