BJP MLA’s Suspension |18 ಬಿಜೆಪಿ ಶಾಸಕರ ಅಮಾನತು ಆದೇಶ ಹಿಂಪಡೆದ ಸ್ಪೀಕರ್‌

ವಿಧಾನಸಭೆ ಅಧಿವೇಶನದಲ್ಲಿ ಹನಿಟ್ರ್ಯಾಪ್​ ಹಾಗೂ ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ನೀಡಿದ್ದ ವಿಚಾರವಾಗಿ ನಡೆದ ಚರ್ಚೆಯ ವೇಳೆ ಪ್ರತಿ ಪಕ್ಷ ಬಿಜೆಪಿ ಶಾಸಕರು ಗದ್ದಲ ನಡೆಸಿದ್ದರು.;

Update: 2025-05-25 13:58 GMT

ಚಳಿಗಾಲದ ಅಧಿವೇಶನದ ಕೊನೆಯ ದಿನ ಸ್ಫೀಕರ್‌ ಪೀಠದ ಮುಂದೆ ಗದ್ದಲ ನಡೆಸಿ ಅಮಾನಾತಾಗಿದ್ದ ಬಿಜೆಪಿಯ 18 ಶಾಸಕರ ಅಮಾನತು ಆದೇಶವನ್ನು ವಿಧಾನಸಭಾಧ್ಯಕ್ಷರು ಭಾನುವಾರ ಹಿಂಪಡೆದಿದ್ದಾರೆ.

ಸ್ಪೀಕರ್ ಯು.ಟಿ. ಖಾದರ್ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ವಿಧಾನಸಭೆ ಅಧಿವೇಶನದಲ್ಲಿ ಹನಿಟ್ರ್ಯಾಪ್​ ಹಾಗೂ ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ನೀಡಿದ್ದ ವಿಚಾರವಾಗಿ ನಡೆದ ಚರ್ಚೆಯ ವೇಳೆ ಪ್ರತಿ ಪಕ್ಷ ಬಿಎಪಿ ನಾಯಕರು ಗದ್ದಲ ನಡೆಸಿದ್ದರು.

ಬಿಜೆಪಿ ಶಾಸಕರು ಸ್ಪೀಕರ್ ಯು.ಟಿ ಖಾದರ್ ಅವರ ಪೀಠದ ಮುಂದೆ ಜಮಾಯಿಸಿ ಅವರ ಮೇಲೆ ಪೇಪರ್ ತೂರಿ ಆಕ್ರೋಶ ವ್ಯಕ್ತಪಡಿಸಿದ್ದರು. ವಿಧಾನಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿದ ಆರೋಪದ ಮೇಲೆ ಬಿಜೆಪಿ 18 ಶಾಸಕರನ್ನು 6 ತಿಂಗಳು ಕಾಲ ಅಮಾನತು ಮಾಡಿ ಸ್ಪೀಕರ್‌ ಯು.ಟಿ.ಖಾದರ್‌ ಅವರು ​ ಆದೇಶಿಸಿದ್ದರು.

ಬಿಜೆಪಿ ಶಾಸಕರ ಅಮಾನತು ಆದೇಶ ಹಿಂಪಡೆಯುವಂತೆ ಪ್ರತಿಪಕ್ಷ ಬಿಜೆಪಿಯ ನಾಯಕರು ಮುಖ್ಯಮಂತ್ರಿ, ಸ್ಪೀಕರ್‌ ಅವರಿಗೆ ಮನವಿ ಮಾಡಿದ್ದರು. ಅಲ್ಲದೇ ಈ ಸಂಬಂಧ ರಾಜ್ಯಪಾಲರಿಗೂ ದೂರು ನೀಡಿ, ಸ್ಪೀಕರ್‌ ಆದೇಶ ಹಿಂಪಡೆಯಲು ಸೂಚಿಸುವಂತೆ ಕೋರಿದ್ದರು.

ವಿಧಾನಸಭೆಯಲ್ಲಿ ಭಾನುವಾರ ಸಿಎಂ ಸಿದ್ದರಾಮಯ್ಯ, ಸ್ಪೀಕರ್‌ ಯು.ಟಿ. ಖಾದರ್‌, ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಆರ್​. ಅಶೋಕ್, ಕಾನೂನು ಸಚಿವ ಹೆಚ್​.ಕೆ.ಪಾಟೀಲ್ ಭಾಗವಹಿಸಿದ್ದ ಸಂಧಾನ ಸಭೆಯಲ್ಲಿ ಬಿಜೆಪಿಯ 18 ಶಾಸಕರ ಅಮಾನತು ಆದೇಶ ಹಿಂಪಡೆಯಲು ತೀರ್ಮಾನಿಸಲಾಯಿತು.

ಅಧಿವೇಶನದಲ್ಲಿ ನಡೆದ ಘಟನೆ ಬಗ್ಗೆ ಎಲ್ಲ ಶಾಸಕರು ವಿಷಾದ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಅಮಾನತು ಆದೇಶ ಹಿಂಪಡೆಯಲಾಗಿದೆ ಎಂದು ಸ್ಪೀಕರ್‌ ಯು..ಟಿ.ಖಾದರ್‌ ತಿಳಿಸಿದರು.

18 ಶಾಸಕರನ್ನು ಅಮಾನತು ಮಾಡಿ ಎರಡು ತಿಂಗಳಾಗಿದೆ. ಸಂತೋಷದಿಂದ ಶಾಸಕರ ಅಮಾನತು ಹಿಂಪಡೆದಿದ್ದೇನೆ. ಆದೇಶ ಹಿಂಪಡೆಯಲು ಯಾವುದೇ ಷರತ್ತು ವಿಧಿಸಿಲ್ಲ. ಎಲ್ಲರೂ ನಮ್ಮ ಮಿತ್ರರು. ಆ ಸಮಯದಲ್ಲಿ ದುರ್ನಡತೆ ತೋರಿದ್ದಕ್ಕೆ ಕ್ರಮ ಕೈಗೊಳ್ಳಬೇಕಾಯಿತು ಎಂದು ಖಾದರ್​ ಹೇಳಿದರು.

ಪ್ರತಿಪಕ್ಷ ನಾಯಕ ಆರ್‌. ಅಶೋಕ್ ಮಾತನಾಡಿ, ನಮ್ಮ ಶಾಸಕರು ಘಟನೆ ಕುರಿತಂತೆ ವಿಷಾದ ವ್ಯಕ್ತಪಡಿಸಿದ್ದಾರೆ. 6 ತಿಂಗಳು ವಿಪಕ್ಷ ಶಾಸಕರು ಇಲ್ಲದಿದ್ದರೆ ಸದನದಲ್ಲಿ ಆಡಳಿತ ಪಕ್ಷವೇ ಇರಬೇಕಾಗುತ್ತದೆ. ಹಾಗಾಗಿ ಅಮಾನತು ಆದೇಶ ಹಿಂಪಡೆಯಲು ಮನವಿ ಮಾಡಿದ್ದೆವು ಎಂದು ಹೇಳಿದರು.

ಅಮಾನತಾಗಿದ್ದವರು ಯಾರು? 

ಶಾಸಕರಾದ ದೊಡ್ಡನಗೌಡ ಪಾಟೀಲ್, ಡಾ. ಅಶ್ವಥ್ ನಾರಾಯಣ, ಬೈರತಿ ಬಸವರಾಜ, ಡಾ. ಶೈಲೇಂದ್ರ ಬೆಲ್ದಾಳೆ, ಮುನಿರತ್ನ, ಧೀರಜ್ ಮುನಿರಾಜು, ಬಿ.ಪಿ. ಹರೀಶ್, ಡಾ. ಭರತ್ ಶೆಟ್ಟಿ, ಚಂದ್ರು ಲಮಾಣಿ, ಉಮಾನಾಥ ಕೋಟ್ಯಾನ್, ಸಿ.ಕೆ. ರಾಮಮೂರ್ತಿ, ಯಶಪಾಲ್ ಸುವರ್ಣ, ಬಿ. ಸುರೇಶ್ ಗೌಡ, ಶರಣು ಸಲಗಾರ್, ಚನ್ನಬಸಪ್ಪ, ಬಸವರಾಜ ಮತ್ತಿಮೂಡ, ಎಸ್. ಆರ್. ವಿಶ್ವನಾಥ್, ಎಂ.ಆರ್. ಪಾಟೀಲ್ ಅವರನ್ನು ಕಲಾಪದಿಂದ ಆರು ತಿಂಗಳ ಕಾಲ ಅಮಾನತು ಮಾಡಿ ಸ್ಪೀಕರ್ ಯುಟಿ ಖಾದರ್ ರೂಲಿಂಗ್ ಹೊರಡಿಸಿದ್ದರು.

Tags:    

Similar News