ವಕ್ಫ್ ಬೋರ್ಡ್ ಕಾನೂನು ತಿದ್ದುಪಡಿಗೆ ಮುಂದಾದ ಕೇಂದ್ರ: ಸಂವಿಧಾನ ಬಾಹಿರ ಎಂದ ಸಿಎಂ ಸಿದ್ದರಾಮಯ್ಯ

Update: 2024-08-08 11:18 GMT

ವಕ್ಫ್ ಬೋರ್ಡ್ ಕಾನೂನು ತಿದ್ದುಪಡಿ ತರಲು ಮುಂದಾಗಿರುವ ಕೇಂದ್ರದ ಕ್ರಮವನ್ನು, ಸಂವಿಧಾನದ ತತ್ವಗಳಲ್ಲಿ ನಂಬಿಕೆಯಿರಿಸಿರುವ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ವಿರೋಧಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕೇಂದ್ರ ಸರ್ಕಾರ ವಕ್ಫ್ ಬೋರ್ಡ್ ತಿದ್ದುಪಡಿ ಬಿಲ್ ತರುತ್ತಿರುವ ಬಗ್ಗೆ ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʻʻಬಿಜೆಪಿ ಹಾಗೂ ಎನ್‌ಡಿಎʼನವರಿಗೆ ಅಲ್ಪಸಂಖ್ಯಾತರ ಮೇಲೆ ಕೋಪವಿರುವಂತಿದೆ. ಬಿಜೆಪಿಯವರು ಎಂದಿಗೂ ಜಾತ್ಯಾತೀತತೆ, ಸಾಮಾಜಿಕ ನ್ಯಾಯದ ಪರವಾಗಿ ನಿಂತವರಲ್ಲ. ಬಿಜೆಪಿ ಮೊದಲಿನಿಂದಲೂ ಕೋಮುವಾದಿ ಪಕ್ಷವಾಗಿಯೇ ಗುರುತಿಸಿಕೊಂಡಿದ್ದು, ಜಾತ್ಯಾತೀತ ತತ್ವವನ್ನು ನಂಬುವುದಿಲ್ಲʼʼ ಎಂದು ವಾಗ್ದಾಳಿ ನಡೆಸಿದರು.

ʻʻಮತಾಂತರ ನಿಷೇಧ ಕಾನೂನು, ಗೋಹತ್ಯೆ ತಿದ್ದುಪಡಿಗಳನ್ನು ಜಾರಿಗೆ ತಂದ ಬಿಜೆಪಿಯವರು ಇಂದು ವಕ್ಫ ಬೋರ್ಡ್ ತಿದ್ದುಪಡಿ ಪ್ರಯತ್ನಕ್ಕೂ ಕೈಹಾಕಿದ್ದಾರೆ. ವಕ್ಫ್ ಬೋರ್ಡ್ ಕಾನೂನು ಆ ಸಮುದಾಯದ ವೈಯಕ್ತಿಕ ಕಾನೂನಾಗಿದ್ದು, ಅದರಲ್ಲಿ ಮಧ್ಯಪ್ರವೇಶಿಸುವುದು ಸಂವಿಧಾನ ಬಾಹಿರ. ಸಂವಿಧಾನದ ತತ್ವಗಳಲ್ಲಿ ನಂಬಿಕೆಯಿರಿಸಿರುವ ಕಾಂಗ್ರೆಸ್ ಹಾಗೂ ಇಂಡಿ ಒಕ್ಕೂಟ, ಕೇಂದ್ರದ ಈ ನಿಲುವನ್ನು ಸಂಪೂರ್ಣವಾಗಿ ವಿರೋಧಿಸುತ್ತೇವೆʼʼ ಎಂದರು.

ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು, ʻʻಬಿಜೆಪಿ ಹಾಗೂ ಎನ್ ಡಿ ಎ ಸರ್ಕಾರ ದೇಶದ ಅಲ್ಪಸಂಖ್ಯಾತರ ವಿರೋಧಿಗಳು ಎಂಬುದನ್ನು ಅವರ ಈ ನಡೆ ನಿರೂಪಿಸುತ್ತಿದೆ. ಅವರು ಜಾತ್ಯಾತೀತ, ಸಾಮಾಜಿಕ ನ್ಯಾಯದ ಸಿದ್ದಾಂತಗಳನ್ನು ಬೆಂಬಲಿಸದ ಕೋಮುವಾದಿ ಪಕ್ಷವಾಗಿದ್ದಾರೆʼʼ ಎಂದು ಹೇಳಿದರು.

ತಿದ್ದುಪಡಿ ಮಸೂದೆಯಲ್ಲಿ ಏನಿದೆ?

ವಕ್ಫ್‌ ಮಂಡಳಿಯ ಕಾರ್ಯದಲ್ಲಿ ಹೆಚ್ಚು ಪಾರದರ್ಶಕತೆ ಮತ್ತು ಹೊಣೆಗಾರಿಕೆ ತರುವ ನಿಟ್ಟಿನಲ್ಲಿ ಹಾಗೂ ವಕ್ಫ್ ಮಂಡಳಿಯಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ 1995 ರ ಕಾಯ್ದೆಗೆ ತಿದ್ದುಪಡಿ ತರಲು ಸಜ್ಜಾಗಿದೆ. ಈ ನಿಟ್ಟಿನಲ್ಲಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಿದೆ. ಇದು ತೀವ್ರ ವಿರೋಧಕ್ಕೆ ಕಾರಣವಾಗಿದೆ.

ವಕ್ಫ್ ( ತಿದ್ದುಪಡಿ) ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಏಕೀಕೃತ ವಕ್ಫ್‌ ನಿರ್ವಹಣೆ, ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ದಿ ಕಾಯ್ದೆ ಎಂದು ಮರುನಾಮಾಕರಣ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಅಲ್ಲದೆ ಬೋಹರಾ ಮತ್ತು ಅಘಖಾನಿಗಳಿಗೆ ಪ್ರತ್ಯೇಕ ವಕ್ಫ್‌ ಮಂಡಳಿಯನ್ನು ಸ್ಥಾಪನೆ ಮಾಡಲು ಮಸೂದೆಯಲ್ಲಿ ಪ್ರಸ್ತಾಪ ಮಾಡಲಾಗಿದೆ. ಕರಡು ಕಾನೂನು ಮುಸ್ಲಿಂ ಸಮುದಾಯದಲ್ಲಿ ಶಿಯಾಗಳು, ಸುನ್ನಿಗಳು, ಬೊಹ್ರಾಗಳು ಮತ್ತು ಅಘಾಖಾನಿಗಳು ಮತ್ತು ಇತರ ಹಿಂದುಳಿದ ವರ್ಗಗಳಗೆ ಪ್ರಾತಿನಿಧ್ಯವನ್ನು ಒದಗಿಸುತ್ತದೆ ಎಂದು ಸರ್ಕಾರ ಹೇಳಿದೆ.

Tags:    

Similar News