ಫೇಸ್ಬುಕ್ನಲ್ಲಿ ದೋಷಪೂರಿತ ಕನ್ನಡ ಸ್ವಯಂ ಅನುವಾದಕ್ಕೆ ಸಿಎಂ ಸಿದ್ದರಾಮಯ್ಯ ಆಕ್ಷೇಪ; ಇಮೇಲ್ ರವಾನೆ
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರು ಮೆಟಾ ಸಂಸ್ಥೆಗೆ ಔಪಚಾರಿಕವಾಗಿ ಮೇಲ್ ರವಾನಿಸಿದ್ದು, ಅನುವಾದದಲ್ಲಿನ ದೋಷಗಳನ್ನು ತಕ್ಷಣವೇ ಸರಿಪಡಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.;
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಟಾ ಸಂಸ್ಥೆಯ ಒಡೆತನದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಸೇರಿದಂತೆ ವಿವಿಧ ಡಿಜಿಟಲ್ ವೇದಿಕೆಗಳಲ್ಲಿ ಕನ್ನಡ ವಿಷಯದ ಸ್ವಯಂಚಾಲಿತ ಅನುವಾದದಲ್ಲಿನ ಲೋಪದೋಷಗಳ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಸ್ವಯಂ ಅನುವಾದಗಳು "ವಾಸ್ತವಗಳನ್ನು ವಿಕೃತಿಗೆ ಒಳಪಡಿಸುತ್ತಿವೆ ಮತ್ತು ಬಳಕೆದಾರರನ್ನು ದಾರಿತಪ್ಪಿಸುತ್ತಿವೆ" ಎಂದು ಗುರುವಾರ (ಜುಲೈ 17) ಅವರು ಹೇಳಿದ್ದಾರೆ.
ಈ ಗಂಭೀರ ವಿಷಯಕ್ಕೆ ಸಂಬಂಧಿಸಿದಂತೆ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರು ಮೆಟಾ ಸಂಸ್ಥೆಗೆ ಔಪಚಾರಿಕವಾಗಿ ಮೇಲ್ ರವಾನಿಸಿದ್ದು, ಅನುವಾದದಲ್ಲಿನ ದೋಷಗಳನ್ನು ತಕ್ಷಣವೇ ಸರಿಪಡಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿಯ ಗಂಭೀರ ಅಭಿಪ್ರಾಯ
ಸಾಮಾಜಿಕ ಮಾಧ್ಯಮ ವೇದಿಕೆಗಳು, ವಿಶೇಷವಾಗಿ ಅಧಿಕೃತ ಸಂವಹನಗಳಿಗೆ ಸಂಬಂಧಿಸಿದಂತೆ, ಅತ್ಯಂತ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಈ ವೇದಿಕೆಗಳಲ್ಲಿ ಪ್ರದರ್ಶಿತವಾಗುವ ಸ್ವಯಂಚಾಲಿತ ಅನುವಾದಗಳು ಸಾಮಾನ್ಯವಾಗಿ ನಿಖರವಾಗಿರುವುದಿಲ್ಲ ಎಂಬುದರ ಕುರಿತು ಸಾರ್ವಜನಿಕರಿಗೆ ಅವರು ಎಚ್ಚರಿಕೆ ನೀಡಿದ್ದಾರೆ.
ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಮಾಡಿರುವ ಪೋಸ್ಟ್ನಲ್ಲಿ ಅವರು, "ಮೆಟಾ ಪ್ಲಾಟ್‌ಫಾರ್ಮ್‌ಗಳಲ್ಲಿ ಕನ್ನಡ ವಿಷಯದ ದೋಷಪೂರಿತ ಸ್ವಯಂ ಅನುವಾದವು ವಾಸ್ತವಗಳನ್ನು ವಿರೂಪಗೊಳಿಸಿ, ಬಳಕೆದಾರರನ್ನು ದಾರಿತಪ್ಪಿಸುತ್ತಿದೆ. ಇದು ಅಧಿಕೃತ ಸಂವಹನದಲ್ಲಿ ಮತ್ತಷ್ಟು ಅಪಾಯಕಾರಿ ಪರಿಣಾಮಗಳನ್ನು ಬೀರಬಹುದು. ತಕ್ಷಣ ಸರಿಪಡಿಸುವಂತೆ ಒತ್ತಾಯಿಸಿ ನನ್ನ ಮಾಧ್ಯಮ ಸಲಹೆಗಾರರು ಮೆಟಾಗೆ ಪತ್ರ ಬರೆದಿದ್ದಾರೆ" ಎಂದು ಹೇಳಿದ್ದಾರೆ. "ತಂತ್ರಜ್ಞಾನ ದೈತ್ಯರ ಈ ನಿರ್ಲಕ್ಷ್ಯವು ಸಾರ್ವಜನಿಕರ ತಿಳಿವಳಿಕೆ ಮತ್ತು ವಿಶ್ವಾಸಕ್ಕೆ ಗಂಭೀರ ಧಕ್ಕೆ ತರುತ್ತದೆ" ಎಂದು ಅವರು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.
ಮಾಧ್ಯಮ ಸಲಹೆಗಾರರ ಪತ್ರ
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅವರು ಜುಲೈ 16 ರಂದು ಮೆಟಾಕ್ಕೆ ಇ-ಮೇಲ್ ಮೂಲಕ ಬರೆದ ಪತ್ರದಲ್ಲಿ, ಕನ್ನಡದಿಂದ ಇಂಗ್ಲಿಷ್‌ಗೆ ಆಗುವ ಸ್ವಯಂಚಾಲಿತ ಅನುವಾದವು ಪದೇಪದೇ ತಪ್ಪಾಗಿದ್ದು, ಕೆಲವು ಸಂದರ್ಭಗಳಲ್ಲಿ ಸಾರಾಸಗಟಾಗಿ ದಾರಿತಪ್ಪಿಸುತ್ತಿದೆ ಎಂದು ಉಲ್ಲೇಖಿಸಿದ್ದಾರೆ.
"ಸಾರ್ವಜನಿಕ ಸಂವಹನಗಳು, ಅಧಿಕೃತ ಹೇಳಿಕೆಗಳು ಅಥವಾ ಮುಖ್ಯಮಂತ್ರಿ ಮತ್ತು ಸರ್ಕಾರದಿಂದ ಬರುವ ಪ್ರಮುಖ ಸಂದೇಶಗಳು ತಪ್ಪಾಗಿ ಅನುವಾದಗೊಂಡಾಗ ಇದು ಭಾರಿ ಅಪಾಯವನ್ನು ಒಡ್ಡುತ್ತದೆ. ತಾವು ಓದುತ್ತಿರುವುದು ಸ್ವಯಂಚಾಲಿತ ಮತ್ತು ದೋಷಪೂರಿತ ಅನುವಾದವೆಂದು ಅನೇಕ ಬಳಕೆದಾರರಿಗೆ ಅರಿವಿರದ ಕಾರಣ ತಪ್ಪು ತಿಳುವಳಿಕೆ ಉಂಟಾಗುವ ಸಾಧ್ಯತೆ ಅಧಿಕವಾಗಿದೆ," ಎಂದು ಪ್ರಭಾಕರ್ ಪತ್ರದಲ್ಲಿ ವಿಸ್ತೃತವಾಗಿ ವಿವರಿಸಿದ್ದಾರೆ.
ಭಾಷಾ ತಜ್ಞರ ಸಹಯೋಗಕ್ಕೆ ಕರೆ
ಮುಖ್ಯಮಂತ್ರಿಯಂತಹ ಸಾಂವಿಧಾನಿಕ ಅಧಿಕಾರದಿಂದ ಹೊರಬೀಳುವ ಸಾರ್ವಜನಿಕ ಸಂವಹನದ ಸೂಕ್ಷ್ಮತೆಯನ್ನು ಪರಿಗಣಿಸಿದರೆ, ದೋಷಪೂರಿತ ಅನುವಾದ ಸಾಧನಗಳಿಂದ ಉಂಟಾಗುವ ಇಂತಹ ತಪ್ಪು ನಿರೂಪಣೆಗಳು ಯಾವುದೇ ಕಾರಣಕ್ಕೂ ಸ್ವೀಕಾರಾರ್ಹವಲ್ಲ ಎಂದು ಮೇಲ್ನಲ್ಲಿ ಪ್ರತಿಪಾದಿಸಲಾಗಿದೆ.
"ಅನುವಾದದ ನಿಖರತೆಯನ್ನು ವಿಶ್ವಾಸಾರ್ಹವಾಗಿ ಸುಧಾರಿಸುವವರೆಗೆ ಕನ್ನಡ ವಿಷಯಕ್ಕಾಗಿ ಸ್ವಯಂ-ಅನುವಾದ ವೈಶಿಷ್ಟ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ನಾವು ಮೆಟಾವನ್ನು ಒತ್ತಾಯಿಸುತ್ತೇವೆ," ಎಂದು ಮೇಲ್ ಮೂಲಕ ಆಗ್ರಹಿಸಲಾಗಿದೆ. ಕನ್ನಡ ಮತ್ತು ಇಂಗ್ಲಿಷ್ ನಡುವಿನ ಅನುವಾದಗಳ ಗುಣಮಟ್ಟ ಹಾಗೂ ಸಂದರ್ಭದ ನಿಖರತೆಯನ್ನು ಹೆಚ್ಚಿಸಲು ಅರ್ಹ ಕನ್ನಡ ಭಾಷಾ ತಜ್ಞರು ಮತ್ತು ಭಾಷಾಶಾಸ್ತ್ರದ ವೃತ್ತಿಪರರೊಂದಿಗೆ ಸಹಕರಿಸುವಂತೆ ಮೆಟಾ ಸಂಸ್ಥೆಗೆ ಮನವಿ ಮಾಡಲಾಗಿದೆ.
ಏನು ಎಡವಟ್ಟು ಆಗಿತ್ತು?
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಫೇಸ್‌ಬುಕ್‌ನ ಸ್ವಯಂಚಾಲಿತ ಅನುವಾದ ವೈಶಿಷ್ಟ್ಯದಿಂದಾಗಿ ಮುಜುಗರಕ್ಕೊಳಗಾಗುವ ಘಟನೆ ನಡೆದಿತ್ತು. ಜುಲೈ 15ರಂದು ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಬಹುಭಾಷಾ ನಟಿ ಮತ್ತು ಹಿರಿಯ ಕಲಾವಿದೆ ಬಿ. ಸರೋಜಾದೇವಿ ಅವರ ನಿಧನಕ್ಕೆ ಸಂತಾಪ ಸೂಚಿಸಿ ಸಿದ್ದರಾಮಯ್ಯನವರು ಕನ್ನಡದಲ್ಲಿ ಪೋಸ್ಟ್ ಮಾಡಿದ್ದರು.
ಇಂಗ್ಲಿಷ್ ಪೋಸ್ಟ್ನಲ್ಲಿ "ಮುಖ್ಯಮಂತ್ರಿ ಸಿದ್ದರಾಮಯ್ಯ ನಿಧನರಾದ ಬಹುಭಾಷಾ ತಾರೆ, ಹಿರಿಯ ನಟಿ ಬಿ. ಸರೋಜಾದೇವಿ ಅವರ ದೇಹದ ದರ್ಶನ ಪಡೆದು ಕೊನೆಯ ಗೌರವ ಸಲ್ಲಿಸಿದರು" ಎಂದು ಬರೆಯಲಾಗಿತ್ತು. ಆದರೆ, ಸ್ವಯಂ ಅನುವಾದವು ಸಿದ್ದರಾಮಯ್ಯ ಅವರೇ ನಿಧನರಾದಂತೆ ತಪ್ಪು ಭಾವನೆಯನ್ನು ಸೃಷ್ಟಿಸಿತ್ತು. ಇದು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು.