Cabinet Reshuffle | ಸಂಪುಟ ಪುನಾರಚನೆ: ವರ್ಷದ ಆರಂಭದಲ್ಲೇ ಶಾಸಕರಿಗೆ ಸಿಹಿ ಸುದ್ದಿ ಕೊಟ್ಟ ಸಿಎಂ
ಐದರಿಂದ ಆರು ಮಂದಿ ಹಾಲಿ ಸಚಿವರನ್ನು ಕೈಬಿಟ್ಟು ಆ ಸ್ಥಾನಗಳಿಗೆ ಪಕ್ಷದ ಹಿರಿಯ ನಾಯಕರಿಗೆ ಅವಕಾಶ ಮಾಡಿಕೊಡುವ ಲೆಕ್ಕಾಚಾರ ಸಿದ್ದರಾಮಯ್ಯ ಅವರದ್ದು ಎನ್ನಲಾಗಿದೆ. ಆ ಹಿನ್ನೆಲೆಯಲ್ಲಿ ಸಚಿವ ಸಂಪುಟ ಆಕಾಂಕ್ಷಿಗಳು ಇದೀಗ ಮತ್ತೊಮ್ಮೆ ತುದಿಗಾಲ ಮೇಲೆ ನಿಂತಿದ್ದಾರೆ.;
ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಕಾಂಗ್ರೆಸ್ ಶಾಸಕರಲ್ಲಿ ಮತ್ತೆ ಆಸೆ ಗರಿಗೆದರಿದೆ. ಅದಕ್ಕೆ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ವರ್ಷದ ಮೊದಲ ದಿನ (ಜ.1) ಕಾಂಗ್ರೆಸ್ ಶಾಸಕರಿಗೆ ಕೊಟ್ಟಿರುವ ಶುಭ ಸುದ್ದಿ.
ಒಂದೆಡೆ ಹಗರಣಗಳ ಆರೋಪಗಳ ಸರಮಾಲೆ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಕಾಡುತ್ತಿದೆ. ವಾಲ್ಮೀಕಿ ನಿಗಮ ಹಗರಣ ತಣ್ಣಗಾಗುವ ಮುನ್ನ ಮುಡಾ ಹಗರಣದ ಆರೋಪ ಮುಖ್ಯಮಂತ್ರಿ ಸಿದ್ದರಾಮಯ್ಯ ನೆಮ್ಮದಿ ಕೆಡೆಸಿತ್ತು. ಹೀಗಾಗಿ ಹಲವು ತಿಂಗಳುಗಳಿಂದ ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಕಾಲ ಕೂಡಿ ಬಂದಿರಲಿಲ್ಲ. ಮತ್ತೊಂದೆಡೆ ಸಂಪುಟ ಪುನಾರಚನೆ ಕುರಿತು ಸಿಎಂ ಸಿದ್ದರಾಮಯ್ಯಗೆ ಒಲವಿದ್ದರೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಆ ಬಗ್ಗೆ ಆಸಕ್ತಿ ಇರಲಿಲ್ಲ ಎಂಬ ಮಾತುಗಳೂ ಕೇಳಿ ಬಂದಿದ್ದವು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ಪುನಾಚರನೆ ಕುರಿತು ಮಾತನಾಡಿದ್ದಾರೆ.
ಜೊತೆಗೆ ಮಂಗಳವಾರ ಡಿ. 31 ರಂದು ತುಮಕೂರಿನಲ್ಲಿ ಸಚಿವ ಕೆ.ಜೆ. ಜಾರ್ಜ್ ಅವರು, ಟಿ.ಬಿ. ಜಯಚಂದ್ರ ನಮ್ಮ ಹಿರಿಯ ನಾಯಕರು. ಶೀಘ್ರದಲ್ಲಿಯೇ ಸಂಪುಟ ಸೇರಲಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರೊಬ್ಬರಿಗೆ ಹೇಳಿರುವುದು ಕುತೂಹಲ ಮೂಡಿಸಿತ್ತು. ಕೆಜೆ ಜಾರ್ಜ್ ಹೇಳಿಕೆ ಸಚಿವ ಸಂಪುಟ ಪುನಾರಚನೆ ಆಗಲಿದೆ ಎಂಬ ಪರೋಕ್ಷ ಸಂದೇಶವನ್ನು ಕಾಂಗ್ರೆಸ್ ಸಚಿವರಿಗೆ, ಶಾಸಕರಿಗೆ ಕೊಟ್ಟಿತ್ತು.
ನಿಷ್ಕ್ರಿಯ ಸಚಿವರಿಗೆ ಕೋಕ್?
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ಸರ್ಕಾರ ಇನ್ನು ಎರಡು ವರ್ಷಗಳನ್ನು ಪೂರೈಸಿಲ್ಲ. ಆದರೆ ಕೆಲವು ಸಚಿವರ ಕಾರ್ಯವೈಖರಿ ಸಿದ್ದರಾಮಯ್ಯ ಸೇರಿದಂತೆ ಹೈಕಮಾಂಡ್ಗೆ ಅಸಮಾಧಾನಕ್ಕೆ ಕಾರಣವಾಗಿದೆ. ಸಂಬಂಧಿಸಿದ ಇಲಾಖೆಯ ಕೆಲಸಗಳಲ್ಲಿ ಅಭಿವೃದ್ಧಿ ಸೇರಿದಂತೆ ಸರಿಯಾಗಿ ಕೆಲಸ ಮಾಡದಿರುವ 5 ರಿಂದ 6 ಜನ ಸಚಿವರನ್ನು ಸಂಪುಟದಿಂದ ಕೈಬಿಡಲು ತೀರ್ಮಾನಿಸಲಾಗಿದೆ ಎಂಬ ಸುದ್ದಿ ಕಾಂಗ್ರೆಸ್ ವಲಯದಲ್ಲಿಯೇ ಇದೆ. ಹೀಗಾಗಿ ಸಿದ್ದರಾಮಯ್ಯ ಜ.1 ರಂದು ಕೊಟ್ಟಿರುವ ಹೇಳಿಕೆ ಕುತೂಹಲ ಮೂಡಿಸಿದೆ.
ಸಂಪುಟ ಪುನಾರಚನೆ ಕುರಿತು ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಡಿ. 31ರಂದು ಸಿದ್ದರಾಮಯ್ಯ ಆಪ್ತ ಸಚಿವ ಕೆ.ಜೆ. ಜಾರ್ಜ್ ಕೊಟ್ಟಿರುವ ಹೇಳಿಕೆ ಹಾಗೂ ಜ.1 ರಂದು ಸಿದ್ದರಾಮಯ್ಯ ಕೊಟ್ಟಿರುವ ಹೇಳಿಕೆಯಿಂದಾಗಿ ಸಂಪುಟ ಪುನಾರಚನೆ ಜನವರಿ ತಿಂಗಳಿನಲ್ಲಿ ಆಗುವ ಸಾಧ್ಯತೆ ಹೆಚ್ಚಿದೆ ಎಂಬ ಸೂಚನೆ ಇದೆ.
ಮುಂದಿನ ವಾರ ಸಂಪುಟ ಪುನಾರಚನೆ
ಜನವರಿ ಎರಡನೇ ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿ ಮಾಡುವ ಕಾರ್ಯಕ್ರಮ ಮೊದಲೇ ನಿಗದಿಯಾಗಿದೆ. ಆದರೆ ಅದಕ್ಕಿಂತ ಮೊದಲೇ ರಾಜ್ಯ ಸಚಿವ ಸಂಪುಟ ಪುನಾರಚನೆ ಆಗಲಿದೆ. ಜನವರಿ ಮೊದಲ ಅಥವಾ ಎರಡನೇ ವಾರದಲ್ಲಿ ಸಚಿವ ಸಂಪುಟ ಪುನಾರಚನೆ ಆಗಲಿದೆ. ಹೀಗಾಗಿಯೇ ಸಿದ್ದರಾಮಯ್ಯ ಹೈಕಮಾಂಡ್ ತೀರ್ಮಾನ ಎಂಬ ಹೇಳಿಕೆಯನ್ನು ಕೊಟ್ಟಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಒಂದು ಮೂಲದ ಪ್ರಕಾರ ಇಷ್ಟರಲ್ಲಿಯೇ ರಾಜ್ಯ ಸಚಿವ ಸಂಪುಟ ಪುನಾರಚನೆ ಆಗಬೇಕಿತ್ತು. ಆದರೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಮಧ್ಯ ಅಧಿಕಾರ ಹಂಚಿಕೆ ಒಪ್ಪಂದವಾಗಿದೆ ಎಂಬ ಗುಸುಗುಸು ಸುದ್ದಿ ಕಾಂಗ್ರೆಸ್ ವಲಯದಲ್ಲಿಯೇ ಇದೆ. ಒಪ್ಪಂದ ಆಗಿರುವುದನ್ನು ಇಬ್ಬರೂ ನಾಯಕರು ಈಗಾಗಲೇ ತಳ್ಳಿ ಹಾಕಿದ್ದಾರೆ. ಆದರೆ ಎರಡು ವರ್ಷಗಳ ಅಧಿಕಾರದ ನಂತರ ಸಿದ್ದರಾಮಯ್ಯ ಸಿಎಂ ಹುದ್ದೆಯನ್ನು ಡಿ.ಕೆ. ಶಿವಕುಮಾರ್ ಅವರಿಗೆ ಬಿಟ್ಟುಕೊಡುತ್ತಾರೆ ಎಂಬ ಚರ್ಚೆಗಳು ಕಾಂಗ್ರೆಸ್ ವಲಯದಲ್ಲಿ ದಟ್ಟವಾಗಿದೆ. ಹೀಗಾಗಿ ಈಗ ಸಂಪುಟ ಪುನಾರಚನೆ ಬೇಡ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಒತ್ತಾಸೆಯಾಗಿದೆ ಎನ್ನಲಾಗಿದೆ.
ಪುನಾರಚನೆ ಬೇಡ ಎನ್ನುತ್ತಿದ್ದಾರಾ ಡಿಸಿಎಂ?
ನಿರೀಕ್ಷಿತ ಪ್ರಮಾಣದಲ್ಲಿ ಕೆಲಸ ಮಾಡದ ಸಚಿವರುಗಳನ್ನು ಸಂಪುಟದಿಂದ ಕೈಬಿಡಲು ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ. ಆದರೆ ಅದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಒಪ್ಪಿಗೆ ಕೊಟ್ಟಿಲ್ಲ ಎಂಬ ಮಾಹಿತಿಯಿದೆ. ಡಿಕೆಶಿ ಒಪ್ಪಿಗೆ ಕೊಡದಿದ್ದರಿಂದಲೇ ಪುನಾರಚನೆ ಮುಂದೂಡಿಕೆಯಾಗಿದೆ ಎನ್ನಲಾಗಿದೆ. ಆದರೆ ಈ ಸಲ ಹೈಕಮಾಂಡ್ ಸಂಪುಟ ಪುನಾರಚನೆಗೆ ಒಪ್ಪಿಗೆ ನೀಡಲಿದೆ ಎಂಬ ಭರವಸೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾರೆ ಎನ್ನಲಾಗಿದೆ. ಹೀಗಾಗಿ ಕಾಂಗ್ರೆಸ್ ಶಾಸಕರು ಹೊಸ ವರ್ಷದ ಆರಂಭದಲ್ಲಿಯೇ ಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ.
ಸದ್ಯ ವಾಲ್ಮೀಕಿ ಹಗರಣದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿರುವ ಬಿ ನಾಗೇಂದ್ರ ಅವರ ಸ್ಥಾನಕ್ಕೆ ಅವರನ್ನೇ ತೆಗೆದುಕೊಳ್ಳುವುದು, ಇನ್ನುಳಿದಂತೆ ಐದರಿಂದ ಆರು ಮಂದಿ ಹಾಲಿ ಸಚಿವರನ್ನು ಕೈಬಿಟ್ಟು ಆ ಸ್ಥಾನಗಳಿಗೆ ಪಕ್ಷದ ಹಿರಿಯ ನಾಯಕರಿಗೆ ಅವಕಾಶ ಮಾಡಿಕೊಡುವ ಲೆಕ್ಕಾಚಾರ ಸಿದ್ದರಾಮಯ್ಯ ಅವರದ್ದು ಎನ್ನಲಾಗಿದೆ. ಆ ಹಿನ್ನೆಲೆಯಲ್ಲಿ ಸಚಿವ ಸಂಪುಟ ಆಕಾಂಕ್ಷಿಗಳು ಇದೀಗ ಮತ್ತೊಮ್ಮೆ ತುದಿಗಾಲ ಮೇಲೆ ನಿಂತಿದ್ದಾರೆ.