ತಪ್ಪು ಮಾಡಿಲ್ಲ, ರಾಜೀನಾಮೆ ಕೊಡಲ್ಲ ಎಂದ ಸಿಎಂ; ಕಾಂಗ್ರೆಸ್ ಕಳ್ಳಾಟ ಎಂದು ಜರಿದ ಎಚ್‌ಡಿಕೆ
ಮೂಡಾ ಹಗರಣದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮಾತೇ ಇಲ್ಲ;
ಮೂಡಾ ಹಗರಣದಲ್ಲಿ ಭಾಗಿಯಾದ ಆರೋಪ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ವಿರೋಧ ಪಕ್ಷಗಳು ಪಟ್ಟು ಹಿಡಿದಿವೆ. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಪ್ರತಿಭಟನೆಯನ್ನೂ ಆರಂಭಿಸಿವೆ. ಈ ಮಧ್ಯೆ, ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಬೆಂಬಲಕ್ಕೆ ನಿಂತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡದಿರಲು ನಿರ್ಧರಿಸಿ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ನಿರಂತೆ ವಾಗ್ದಾಳಿ ನಡೆಸುತ್ತಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮೂಡಾ ಹಗರಣದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ ಗೋದ್ರಾ ಹತ್ಯಾಕಾಂಡ ಜರುಗಿತು. ನೂರಾರು ಜನ ಪ್ರಾಣ ಕಳೆದುಕೊಂಡರು. ಆಗ ನರೇಂದ್ರ ಮೋದಿಯವರೇಕೆ ರಾಜೀನಾಮೆ ನೀಡಿಲ್ಲ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಗಣಿ ಹಗರಣದಲ್ಲಿ ಭಾಗಿಯಾದ ಆರೋಪ ಕೇಳಿಬಂದಿತ್ತು, ಅವರೇಕೆ ರಾಜೀನಾಮೆ ಕೊಡಲಿಲ್ಲ ಎಂದು ಪ್ರಶ್ನಿಸಿದರು.
ಈ ಮಧ್ಯೆ ಸಿಎಂ ಹೇಳಿಕೆಗೆ ಟ್ವೀಟರ್ ಮೂಲಕ ತಿರುಗೇಟು ನೀಡಿರುವ ಕೇಂದ್ರ ಸಚಿವ ಕುಮಾರ ಸ್ವಾಮಿ ಅವರು, ಊಸರವಳ್ಳಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮುಚ್ಚಿಕೊಳ್ಳುವ “ಕಳ್ಳಾಟ” ಶುರು ಮಾಡಿದೆ ಎಂದು ಟೀಕಿಸಿದ್ದಾರೆ.
ನಾನು ತಪ್ಪೇ ಮಾಡಿಲ್ಲ, ಯಾರಿಗೂ ಹೆದರಲ್ಲ ಎಂದು ಬಡಾಯಿ ಕೊಚ್ಚಿಕೊಳ್ಳುವ ಮುಖ್ಯಮಂತ್ರಿಗೆ ಸಿಬಿಐ ಕಂಡರೆ ಭಯವೇಕೆ..? ಬಾಯಿ ಬಿಟ್ಟರೆ ಸಂವಿಧಾನ ಉಳಿಸುತ್ತೇವೆ, ರಕ್ಷಿಸುತ್ತೇವೆ ಎನ್ನುವುದು ಬರೀ ಬೊಗಳೆಯೇ ಎಂದು ಮೂದಲಿಸಿದ್ದಾರೆ.
ಭ್ರಷ್ಟಾಚಾರಿ ಸಿದ್ದರಾಮಯ್ಯ ಅವರೇ, ನಿಮ್ಮ ಭ್ರಷ್ಟಾಚಾರಗಳನ್ನು ಮುಚ್ಚಿಕೊಳ್ಳಲು ಹಿಂದೆ ಲೋಕಾಯುಕ್ತ ಸಂಸ್ಥೆಯ ಅಧಿಕಾರವನ್ನೇ ಕಿತ್ತುಕೊಂಡಿರಿ. ಮುಡಾ ಪ್ರಕರಣದಲ್ಲಿ, ಮುಕ್ಕಿ ತಿಂದಿರುವ "ವೈಟ್ನರ್"ರಾಮಯ್ಯ ಹಾಗೂ ಕುಟುಂಬದ ವಿರುದ್ಧ ಸಿಬಿಐ ವಿಚಾರಣೆ ನಡೆದರೆ, ಎಲ್ಲಿ ತಮ್ಮ "ಮುಡಾ" ನಿಗೂಢ "ರಹಸ್ಯ" ಬಯಲಾಗುತ್ತೋ ಎಂಬ ಆತಂಕ ಕಾಡುತ್ತಿದೆ. ಸಿಬಿಐ ಅನ್ನು ಕಟ್ಟಿಹಾಕಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ನಿಜಬಣ್ಣ ಬಯಲಾಗುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.