ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ | ಡಿಸೆಂಬರ್‌ ಒಳಗೆ ಸಮೀಕ್ಷೆ ಪೂರ್ಣಗೊಳಿಸಲು ಆಯೋಗಕ್ಕೆ ಸಿಎಂ ಸೂಚನೆ

7 ಕೋಟಿ ಜನರ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಅರಿಯುವ ಸಲುವಾಗಿ ಹೊಸದಾಗಿ ಸಮೀಕ್ಷೆ ನಡೆಸಲಾಗುತ್ತಿದೆ. ಅತ್ಯಂತ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಿ ವರದಿ ನೀಡಲು ಆಯೋಗಕ್ಕೆ ಸೂಚಿಸಲಾಗಿದೆ ಎಂದು ಸಿಎಂ ಹೇಳಿದರು.;

Update: 2025-09-12 08:14 GMT

ರಾಜ್ಯದಲ್ಲಿ ಸೆ.22 ರಿಂದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸಲಿರುವ ಮಧುಸೂದನ್ ನಾಯಕ್‌ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು ಡಿಸೆಂಬರ್‌ ಅಂತ್ಯದೊಳಗೆ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

7 ಕೋಟಿ ಜನರ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಅರಿಯುವ ಸಲುವಾಗಿ ಹೊಸದಾಗಿ ಸಮೀಕ್ಷೆ ನಡೆಸಲಾಗುತ್ತಿದೆ. ಅತ್ಯಂತ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಿ ವರದಿ ನೀಡಲು ಆಯೋಗಕ್ಕೆ ಸೂಚಿಸಲಾಗಿದೆ. ಡಿಸೆಂಬರ್‌ ಒಳಗೆ ವರದಿ ನೀಡುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

ಬೆಂಗಳೂರಿನ ಸಿಎಂ ಅಧಿಕೃತ ನಿವಾಸ ಕೃಷ್ಣಾದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೆ.22 ರಿಂದ ಅ.7 ರವರೆಗೆ ಸಮೀಕ್ಷೆ ನಡೆಯಲಿದೆ.  ಸಮೀಕ್ಷೆಗಾಗಿ 1,75,000 ಸರ್ಕಾರಿ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ. ಎಲ್ಲಾ ಜಾತಿ-ಧರ್ಮದವರ ದತ್ತಾಂಶ ಲಭ್ಯವಾದರೆ ಸಾಮಾಜಿಕ ನ್ಯಾಯದಡಿ ವಿಶೇಷ ಕಾರ್ಯಕ್ರಮ ರೂಪಿಸಲು ಸರ್ಕಾರಗಳಿಗೆ ಸಾಧ್ಯವಾಗಲಿದೆ ಎಂದರು.

ಅಮೆರಿಕದಲ್ಲಿ ವರ್ಣಬೇಧದಿಂದ ಹಿಂದುಳಿದಿರುವ ಕರಿಯರಿಗೆ affirmative action ( ಆದ್ಯತೆಯ ಸೌಲಭ್ಯ) ಅಡಿಯಲ್ಲಿ ಸೌಲಭ್ಯ ಒದಗಿಸಲಾಗುತ್ತದೆ. ಭಾರತದಲ್ಲಿ ಹಿಂದುಳಿದವರಿಗೆ ಮೀಸಲಾತಿ ಒದಗಿಸಲಾಗಿದೆ. ಬಡತನ, ನಿರುದ್ಯೋಗ, ಅನಕ್ಷರತೆ ಹೋಗಲಾಡಿಸಲು ಸಂವಿಧಾನದ ಕಲಂ 15, 16(5) ಅಡಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ ಎಂದು ಸಿಎಂ ಹೇಳಿದರು.

ಸಮೀಕ್ಷೆಗೆ 425 ಕೋಟಿ ರೂ. ಬಿಡುಗಡೆ 

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸಲು 1.75 ಲಕ್ಷ ಶಿಕ್ಷಕರನ್ನು ನಿಯೋಜಿಸಲಾಗಿದೆ. ದಸರಾ ರಜೆ ಅವಧಿಯಲ್ಲಿ ಶಿಕ್ಷಕರ ಸೇವೆ ಬಳಸಿಕೊಂಡು ಸಮೀಕ್ಷೆ ಕಾರ್ಯ ನಡೆಸಲಾಗುವುದು. ಅವರಿಗೆ 20ಸಾವಿರ ರೂ.ವರೆಗೆ ಗೌರವ ಸಂಭಾವನೆ ನೀಡಲಾಗುವುದು. ಇದಕ್ಕಾಗಿ 325 ಕೋಟಿ ರೂ. ಖರ್ಚಾಗಲಿದೆ. ಸದ್ಯ ಸಮೀಕ್ಷೆಗಾಗಿ 425 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಹೇಳಿದ್ದೇವೆ. ಹೆಚ್ಚಿನ‌ ಹಣದ ಅಗತ್ಯವಿದ್ದರೂ ನೀಡಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮನೆ ಮನೆಯಲ್ಲೂ ವಿದ್ಯುತ್‌ ಸಂಪರ್ಕವಿದೆ. ಮೀಟರ್ ರೀಡರ್ ಗಳನ್ನು ಜಿಯೋ ಟ್ಯಾಗ್‌ ಮಾಡಲಾಗುವುದು. ಜತೆಗೆ 2 ಕೋಟಿ ಮನೆಗಳಿಗೆ ಪ್ರತ್ಯೇಕ ಗುರುತಿನ ನಂಬರ್ ನೀಡಿ ಸ್ಟಿಕ್ಕರ್ ಅಂಟಿಸಲಾಗುತ್ತದೆ. ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಅನ್ನು ಮೊಬೈಲ್‌ಗೆ ಲಿಂಕ್ ಮಾಡಲಾಗುವುದು. ಮೊಬೈಲ್ ಇಲ್ಲದ ಮನೆಗಳಿಗೂ ಹೋಗಿ ಸಮೀಕ್ಷೆ ನಡೆಸಲಾಗುವುದು ಎಂದು ವಿವರಿಸಿದರು.

ಸಮೀಕ್ಷೆಗಾಗಿ ಒಟ್ಟು 60 ಪ್ರಶ್ನೆಗಳನ್ನು ಅಂತಿಮಗೊಳಿಸಲಾಗಿದೆ. ಗಣತಿದಾರರು ಈ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದು ಸಮೀಕ್ಷೆ ನಡೆಸಲಿದ್ದಾರೆ. ಯಾರೊಬ್ಬರೂ ತಪ್ಪಿಸಿಕೊಳ್ಳದೇ ಕಡ್ಡಾಯವಾಗಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಿಎಂ ಮನವಿ ಮಾಡಿದರು.

ಆನ್‌ಲೈನ್‌ ಸಮೀಕ್ಷೆಯೂ ಇರಲಿದೆ 

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಖುದ್ದು ಭಾಗವಹಿಸಲು ಸಾಧ್ಯವಾಗದವರು ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಪಾಲ್ಗೊಳ್ಳಬಹುದು. ಆನ್‌ಲೈನ್‌ ಮೂಲಕವೂ, ವೆಬ್‌ಸೈಟ್‌ ಮೂಲಕವೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು. ಆಶಾ ಕಾರ್ಯಕರ್ತೆಯರು ನಾಳೆಯಿಂದಲೇ (ಸೆ.13) ಮನೆ ಮನೆಗೆ ಭೇಟಿ ನೀಡಿ 60 ಪ್ರಶ್ನೆಗಳ ನಮೂನೆಯನ್ನು ತಲುಪಿಸುತ್ತಾರೆ. ಸಮೀಕ್ಷೆ ಅಧಿಕೃತವಾಗಿ ಆರಂಭವಾದಾಗ ಶಿಕ್ಷಕರು ಹೋಗಿ ಮಾಹಿತಿ ಪಡೆಯುತ್ತಾರೆ. ಯಾರೂ ಕೂಡ ಸಮೀಕ್ಷೆಯಿಂದ ಹೊರಗೆ ಉಳಿಯದಂತೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಜಾತಿಯ ಹೆಸರು ಹೇಳಿಕೊಳ್ಳದವರು ಸಹಾಯವಾಣಿಗೆ ಕರೆ ಮಾಡಿ ತಿಳಿಸಬಹುದು. ಯಾವುದೇ ನ್ಯೂನ್ಯತೆ ಇಲ್ಲದಂತೆ, ಹಿಂದಿನ ಸಮೀಕ್ಷೆಗಳಲ್ಲಿ ಎದುರಾದ ಯಾವುದೇ ತಾಂತ್ರಿಕ ಸಮಸ್ಯೆ ಮರುಕಳುಹಿಸದಂತೆ ಸಿದ್ಧತೆ ಮಾಡಿಕೊಂಡಿದ್ದೇವೆ. ಮತಾಂತರಗೊಂಡವರು ಅಥವಾ ಜಾತಿ ಗೊಂದಲ ಇದ್ದವರನ್ನು ಆಯೋಗದ ತಜ್ಞರ ತಂಡ ವಿಶ್ಲೇಷಣೆ ಮಾಡಿ ತೀರ್ಮಾನಿಸಲಿದೆ ಎಂದು ಹೇಳಿದರು. 

ಅಸಮಾನತೆ ತೊಲಗಿಸಲು ಸಮೀಕ್ಷೆ

ಸ್ವಾತಂತ್ರ್ಯ ದೊರೆತು ಇಷ್ಟು ವರ್ಷಗಳಾದರೂ ಅಸಮಾನತೆಯನ್ನು ಸಂಪೂರ್ಣ ತೊಲಗಿಸಲು ಸಾಧ್ಯವಾಗಿಲ್ಲ. ಸಮಾನತೆ, ಸಮಾನ ಅವಕಾಶ ಒದಗಿಸುವ ನಿಟ್ಟಿನಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ಕೈಗೊಂಡಿದ್ದೇವೆ. ರಾಜ್ಯದಲ್ಲಿ ಸುಮಾರು 7ಕೋಟಿ ಜನಸಂಖ್ಯೆಯಿದ್ದು, 2ಕೋಟಿಯಷ್ಟು ಕುಟುಂಬಗಳಿವೆ. ಎಲ್ಲರಿಗೂ ಸಮಾನ ಅವಕಾಶ ಒದಗಿಸುವುದು ಸರ್ಕಾರದ ಕರ್ತವ್ಯ ಎಂದು ಸಿದ್ದರಾಮಯ್ಯ ಹೇಳಿದರು.

2015ರಲ್ಲಿ ಆಯೋಗದ ಅಧ್ಯಕ್ಷರಾಗಿದ್ದ ಎಚ್‌. ಕಾಂತರಾಜ್ ಅವರು ವರದಿ ಸಲ್ಲಿಸಿದ್ದರು. ವರದಿ ಸಲ್ಲಿಸಿ 10ವರ್ಷ ಆದ ಕಾರಣ ಹೊಸ ಸಮೀಕ್ಷೆಗೆ ತೀರ್ಮಾನ ಮಾಡಲಾಗಿತ್ತು. ಸಮಾಜದಲ್ಲಿ ಅನೇಕ ಜಾತಿಗಳಿದ್ದು, ವೈರುಧ್ಯತೆಯಿಂದ  ಇಂದಿಗೂ ಅಸಮಾನತೆ ಇದೆ. ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸಲು ಸಮೀಕ್ಷೆ ನಡೆಸಬೇಕಾಗಿದೆ ಎಂದು ಪ್ರತಿಪಾದಿಸಿದರು.   

ಅಸಮಾನತೆ ಕಡಿಮೆ ಮಾಡಲು ಪ್ರಯತ್ನ

ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದಲ್ಲಿ ಅಸಮಾನತೆ ಸ್ವಲ್ಪಮಟ್ಟಿಗೆ ಕಡಿಮೆ ಮಾಡಲು ಸರ್ಕಾರ ಪ್ರಯತ್ನ ಮಾಡಿದೆ. ನಾವು ಹಿಂದೆ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಭಾಗ್ಯ ಯೋಜನೆಗಳ ಮೂಲಕ ಇದನ್ನು ಸಾಧಿಸಲು ಪ್ರಯತ್ನಿಸಿದ್ದೇವೆ ಎಂದು ಸಿಎಂ ಹೇಳಿದರು.

ನಾಗಮೋಹನ ದಾಸ್ ಅವರು ಒಳಮೀಸಲಾತಿ ಸಮೀಕ್ಷೆಗೆ ಬಳಸಿದ ವಿಶೇಷ ತಂತ್ರಜ್ಞಾನವನ್ನೇ ಬಳಸಲಾಗುವುದು. ಪ್ರತಿಯೊಂದು ಮನೆಯ ವಿದ್ಯುತ್ ಮೀಟರ್ ಆಧಾರದಲ್ಲಿ ಮನೆಯ ಜಿಯೋ ಟ್ಯಾಗ್ ಮಾಡಿ UHID ವಿಶೇಷ ಸಂಖ್ಯೆ ನಮೂದಿಸಲಾಗುವುದು. ಈಗಾಗಲೇ 1.55 ಲಕ್ಷ ಮನೆಗಳಿಗೆ ಸಂಖ್ಯೆ ಅಳವಡಿಸಲಾಗಿದೆ. ವಿದ್ಯುತ್ ಸಂಪರ್ಕ ಇಲ್ಲದ ಮನೆಗಳ ಸಮೀಕ್ಷೆಯನ್ನೂ ಮಾಡಲಾಗುವುದು ಎಂದು ಹೇಳಿದರು. 

ಆಯೋಗದ ಸಹಾಯವಾಣಿ ಸಂಖ್ಯೆ 8050770004 ಗೆ ಕರೆ ಮಾಡಿ ಸಾರ್ವಜನಿಕರು ಸಮೀಕ್ಷೆ ಕುರಿತು ಯಾವುದೇ ದೂರು ಅಥವಾ ಮಾಹಿತಿ ಪಡೆಯಬಹುದು. ಆನ್‌ಲೈನ್‌ ಮೂಲಕ ಸಹ ಸಮೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ಶಿಕ್ಷಕರಿಗೆ 120ರಿಂದ 150ಮನೆಗಳ ವ್ಯಾಪ್ತಿ ನಿಗದಿಪಡಿಸಲಾಗಿದೆ ಎಂದು ಮುಖ್ಯಮಂತ್ರಿ ವಿವರಿಸಿದರು.

Tags:    

Similar News