ಸಿಎಂ-ಡಿಸಿಎಂ ವಿವಾದ | ಬಾಯಿಗೆ ಬೀಗ ಹಾಕೊಂಡು ತೆಪ್ಪಗೆ ಇರಿ: ಡಿಕೆ ಶಿವಕುಮಾರ್ ಖಡಕ್ ವಾರ್ನಿಂಗ್

Update: 2024-06-29 10:15 GMT

ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಸುವ ವಿಚಾರವಾಗಿ ನಾಯಕರು, ಸಚಿವರು, ಶಾಸಕರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ, ಇದು ಪಕ್ಷಕ್ಕೆ ಮುಜುಗರ ತಂದಿಟ್ಟಿದ್ದು, ಇದೀಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರೇ ಪಕ್ಷದ ಮುಖಂಡರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ʻʻಹೆಚ್ಚುವರಿ ಡಿಸಿಎಂ ಬಗ್ಗೆ ಯಾರೂ ಮಾತನಾಡುವಂತಿಲ್ಲ. ಒಂದು ವೇಳೆ ಮಾತನಾಡಿದರೆ ಅಂಥವರಿಗೆ ನೋಟಿಸ್ ನೀಡಲಾಗುವುದು. ಬಾಯಿಗೆ ಬೀಗ ಹಾಕೊಂಡು ತೆಪ್ಪಗೆ ಇರಿʼʼ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.

ʻʻಯಾವ ಡಿಸಿಎಂ ಚರ್ಚೆಯೂ ಇಲ್ಲ, ಸಿಎಂ ಪ್ರಶ್ನೆಯೂ ಇಲ್ಲ. ಯಾರ ಶಿಫಾರಸು ಸಹ ಅವಶ್ಯಕತೆ ಇಲ್ಲ. ನಾನು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಒಂದು ತೀರ್ಮಾನಕ್ಕೆ ಬಂದಿದ್ದೇವೆ. ಯಾವ ಶಾಸಕರು ಕೂಡ ಮಾತನಾಡುವ ಅವಶ್ಯಕತೆ ಇಲ್ಲ. ಒಂದು ವೇಳೆ ಮಾತನಾಡಿದರೆ, ಎಐಸಿಸಿ ಹಾಗೂ ನಾನು ವಿಧಿಯಿಲ್ಲದೇ ನೊಟೀಸ್ ನೀಡಬೇಕಾಗುತ್ತದೆ. ಪಕ್ಷದ ಶಿಸ್ತು ಕಾಪಾಡಲು ಅನಿವಾರ್ಯವಾಗಿ ನೋಟಿಸ್​ ನೀಡುತ್ತೇವೆʼʼ ಎಂದು ಎಚ್ಚರಿಸಿದ್ದಾರೆ.

ರಾಜಕಾರಣದ ಸುದ್ದಿಗೆ ನೀವು ಬರಬೇಡಿ

ʻʻಪಕ್ಷ ಕಟ್ಟಲು ಬಹಳ ಕಷ್ಟಪಟ್ಟಿದ್ದೇವೆ. ಪಕ್ಷವನ್ನು ಅಧಿಕಾರಕ್ಕೆ ತರಲು ಎಷ್ಟು ಕಷ್ಟಪಟ್ಟಿದ್ದೇವೆ ಎಂಬುದು ನಮಗೇ ಗೊತ್ತು. ಪಕ್ಷದ ಹಿತದೃಷ್ಟಿಯಿಂದ ಬಾಯಿಗೆ ಬೀಗ ಹಾಕಿಕೊಂಡಿದ್ದರೆ ಒಳ್ಳೆಯದು. ಯಾವ ಸ್ವಾಮೀಜಿಗಳೂ ಮಾತಾಡಿಲ್ಲ. ಎಲ್ಲರಿಗೂ ಕೈ ಮುಗಿಯುತ್ತೇನೆ. ನಮ್ಮ ರಾಜಕಾರಣದ ಸುದ್ದಿಗೆ ನೀವು ಬರಬೇಡಿ. ಸ್ವಾಮೀಜಿ ನನ್ನ ಮೇಲಿನ ಅಭಿಮಾನದಿಂದ ಮಾತಾಡಿದ್ದಾರೆʼʼ ಎಂದು ಅವರು ಹೇಳಿದ್ದಾರೆ.

ಕಳೆದ ಕೆಲವು ದಿನಗಳಿಂದ ಸಿದ್ದರಾಮಯ್ಯ ಬಣದ ಸಚಿವರು, ಶಾಸಕರು ಮತ್ತು ಪಕ್ಷದ ಅನೇಕ ನಾಯಕರು ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಮತ್ತೊಂದೆಡೆ ಡಿಕೆ ಶಿವಕುಮಾರ್‌ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಬೇಕೆಂದು ಒಕ್ಕಲಿಗ ಸ್ವಾಮೀಜಿ ಆಗ್ರಹಿಸಿದ್ದು ಬಹಳಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೆಲ್ಲ ಪ್ರತಿಪಕ್ಷ ಬಿಜೆಪಿಗೆ ಪ್ರಮುಖ ಅಸ್ತ್ರವನ್ನು ಒದಗಿಸಿದಂತಾಗಿತ್ತು. ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಬಿಂಬಿಸಲು ಬಿಜೆಪಿ ಮುಂದಾಗಿತ್ತು. ಹಾಗಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ

Tags:    

Similar News