ಹಿಂದೂ-ಕ್ರೈಸ್ತ' ಉಲ್ಲೇಖಕ್ಕೆ ಸಿಎಂ ತಡೆ: ಜಾತಿ ಸಮೀಕ್ಷೆ ಪಟ್ಟಿಯಿಂದ ತೆಗೆದುಹಾಕಲು ಸಿದ್ದರಾಮಯ್ಯ ಸೂಚನೆ
"ಯಾವುದೇ ಪೂರ್ವಸಿದ್ಧತೆ ಇಲ್ಲದೆ ತರಾತುರಿಯಲ್ಲಿ ಸಮೀಕ್ಷೆ ಆರಂಭಿಸಿರುವುದು ಗೊಂದಲಕ್ಕೆ ಕಾರಣವಾಗಿದೆ. ಹೀಗಾಗಿ ಸದ್ಯಕ್ಕೆ ಸಮೀಕ್ಷೆಯನ್ನು ಮುಂದೂಡಬೇಕು" ಎಂದು ಹಲವು ಸಚಿವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿ ಗಣತಿ) ಜಾತಿ ಪಟ್ಟಿಯಲ್ಲಿ ಕೆಲವು ಹಿಂದೂ ಜಾತಿಗಳ ಹೆಸರಿನ ಮುಂದೆ 'ಕ್ರಿಶ್ಚಿಯನ್' ಪದವನ್ನು ಸೇರಿಸಿರುವುದಕ್ಕೆ ಸಚಿವ ಸಂಪುಟ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ, ಅಂತಹ ಪಟ್ಟಿಯನ್ನು ತಕ್ಷಣವೇ ತೆಗೆದುಹಾಕುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸಂಪುಟ ಸಭೆಯಲ್ಲಿ ನಡೆದದ್ದೇನು?
ಸಚಿವ ಸಂಪುಟ ಸಭೆಯಲ್ಲಿ ಈ ವಿಷಯದ ಬಗ್ಗೆ ಹಲವು ಸಚಿವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. 'ಕುರುಬ ಕ್ರಿಶ್ಚಿಯನ್', 'ಲಿಂಗಾಯತ ಕ್ರಿಶ್ಚಿಯನ್' ಮುಂತಾದ ಜಾತಿಗಳನ್ನು ಪಟ್ಟಿಯಲ್ಲಿ ಸೇರಿಸಿರುವುದು ಸರಿಯಲ್ಲ. ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದ ಜಾತಿಗಳು ಮಾತ್ರ ಪಟ್ಟಿಯಲ್ಲಿರಬೇಕು. ಮತಾಂತರಗೊಂಡವರನ್ನು ಪ್ರತ್ಯೇಕ ಕಾಲಂನಲ್ಲಿ ಗುರುತಿಸುವುದು ಸೂಕ್ತ ಎಂದು ಹಲವು ಸಚಿವರು ಸಲಹೆ ನೀಡಿದರು. ಸುದೀರ್ಘ ಚರ್ಚೆಯ ನಂತರ, ವಿವಾದಿತ ಪಟ್ಟಿಯನ್ನು ಕೈಬಿಡುವಂತೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದರು.
ಸಮೀಕ್ಷೆ ಮುಂದೂಡಲು ಸಚಿವರ ಮನವಿ
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿಯೂ ಈ ಬಗ್ಗೆ ಚರ್ಚೆ ನಡೆದಿದೆ. "ಯಾವುದೇ ಪೂರ್ವಸಿದ್ಧತೆ ಇಲ್ಲದೆ ತರಾತುರಿಯಲ್ಲಿ ಸಮೀಕ್ಷೆ ಆರಂಭಿಸಿರುವುದು ಗೊಂದಲಕ್ಕೆ ಕಾರಣವಾಗಿದೆ. ಹೀಗಾಗಿ ಸದ್ಯಕ್ಕೆ ಸಮೀಕ್ಷೆಯನ್ನು ಮುಂದೂಡಬೇಕು" ಎಂದು ಹಲವು ಸಚಿವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಹಿಂದುಳಿದ ವರ್ಗಗಳ ಆಯೋಗದ ಸ್ಪಷ್ಟನೆ
ಸಭೆಯಲ್ಲಿ ಹಾಜರಿದ್ದ ಹಿಂದುಳಿದ ವರ್ಗಗಳ ಆಯೋಗದ ಪ್ರತಿನಿಧಿಗಳು, "ಈ ಜಾತಿಗಳನ್ನು ನಾವು ಸೃಷ್ಟಿಸಿಲ್ಲ. ಹಿಂದಿನ ಆಯೋಗಗಳು ಸಿದ್ಧಪಡಿಸಿದ್ದ ಪಟ್ಟಿಯಲ್ಲೇ ಇಂತಹ ಹೆಸರುಗಳಿದ್ದವು. ಅದನ್ನೇ ಮುಂದುವರಿಸಿದ್ದೇವೆ" ಎಂದು ಸ್ಪಷ್ಟನೆ ನೀಡಿದ್ದಾರೆ.
ಎಲ್ಲರಿಗೂ ನ್ಯಾಯ ಒದಗಿಸುವುದು ನಮ್ಮ ಉದ್ದೇಶ: ಡಿ.ಕೆ. ಶಿವಕುಮಾರ್
ಸಚಿವರ ಸಭೆಯ ನಂತರ ಮಾತನಾಡಿದ ಡಿ.ಕೆ. ಶಿವಕುಮಾರ್, "ನಮ್ಮ ಸರ್ಕಾರ ಯಾವುದೇ ಸಮಾಜವನ್ನು ವಿಭಜಿಸಲು ಇಚ್ಛಿಸುವುದಿಲ್ಲ. ಎಲ್ಲರಿಗೂ ನ್ಯಾಯ ಒದಗಿಸುವ ಉದ್ದೇಶದಿಂದ ಈ ಸಮೀಕ್ಷೆ ನಡೆಸುತ್ತಿದ್ದೇವೆ. ಅನೇಕ ಸಮುದಾಯದವರು ತಮಗೆ ಪ್ರತ್ಯೇಕ ಗುರುತು ಬೇಕೆಂದು ಕೇಳಿದ್ದಾರೆ, ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾವು ಎಲ್ಲರ ಅಭಿಪ್ರಾಯವನ್ನು ಸಂಗ್ರಹಿಸುತ್ತಿದ್ದೇವೆ. ಈ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ" ಎಂದು ಹೇಳಿದರು.