Kalyana Karnataka | 30 ಸಾವಿರ ಹುದ್ದೆ ಭರ್ತಿಗೆ ಕ್ರಮ: ಸಿಎಂ ಸಿದ್ದರಾಮಯ್ಯ ಘೋಷಣೆ
ಪ್ರಾದೇಶಿಕ ಅಸಮಾನತೆ ಸರಿದೂಗಿಸುವ ಸಲುವಾಗಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಬಜೆಟ್ ನಲ್ಲಿ ಕಳೆದ ವರ್ಷ 3000 ಕೋಟಿ, ಈ ವರ್ಷ 5000 ಕೋಟಿ ರೂ. ಅನುದಾನ ಘೋಷಿಸಿದ್ದೇನೆ. 371 ಜೆ ಸ್ಥಾನಮಾನದಿಂದ ಇದೆಲ್ಲಾ ಸಾಧ್ಯವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು
ಕಲ್ಯಾಣ ಕರ್ನಾಟಕ ಕೋಟಾದಲ್ಲಿ ಇರುವ 109000 ಹುದ್ದೆಗಳಲ್ಲಿ 79000 ಹುದ್ದೆ ಭರ್ತಿ ಮಾಡಿದ್ದೇವೆ. ಉಳಿದ 30 ಸಾವಿರ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಸಿಂಧನೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಆರಂಭಿಸಲಾದ ವೈಭವದ ಸಿಂಧನೂರು ದಸರಾ ಉತ್ಸವ ಉದ್ಘಾಟಿಸಿ, ಅವರು ಮಾತನಾಡಿದರು.
ಪ್ರಾದೇಶಿಕ ಅಸಮಾನತೆ ಸರಿದೂಗಿಸುವ ಸಲುವಾಗಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಬಜೆಟ್ ನಲ್ಲಿ ಕಳೆದ ವರ್ಷ 3000 ಕೋಟಿ, ಈ ವರ್ಷ 5000 ಕೋಟಿ ರೂ. ಅನುದಾನವನ್ನು ಘೋಷಿಸಿದ್ದೇನೆ. 371 ಜೆ ಸ್ಥಾನಮಾನದಿಂದ ಇದೆಲ್ಲಾ ಸಾಧ್ಯವಾಗಿದೆ. ವಿಶೇಷ ಸ್ಥಾನಮಾನ ಜಾರಿಗೆ ಸಹಕರಿಸಿದ ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರನ್ನು ನಾವೆಲ್ಲರೂ ಸ್ಮರಿಸಬೇಕು ಎಂದರು.
371 ಜೆ ಜಾರಿಗಾಗಿ ಕಲ್ಯಾಣ ಕರ್ನಾಟಕದ ಎಲ್ಲ ಜಾತಿ, ಧರ್ಮದ ಮಂದಿ ಒಟ್ಟಾಗಿ ಹೋರಾಟ ನಡೆಸಿದರು. ಈ ಜನ ಹೋರಾಟದ ಬೆನ್ನಿಗೆ ನಿಂತು ಮಲ್ಲಿಕಾರ್ಜುನ ಖರ್ಗೆ ಅವರು 371 ಜೆ ಜಾರಿ ಮಾಡಿಸಿದರು ಎಂದು ವಿವರಿಸಿದರು.
371 ಜೆ ಜಾರಿಯಾಗಿ ದಶಮಾನೋತ್ಸವ ಪ್ರಯುಕ್ತ ನಾವು ಕಲ್ಬುರ್ಗಿಯಲ್ಲಿ ವಿಶೇಷ ಕ್ಯಾಬಿನೆಟ್ ನಡೆಸಿ ಅದೊಂದೇ ದಿನ 11770 ಕೋಟಿ ರೂಪಾಯಿ ಯೋಜನೆಗಳಿಗೆ ಮಂಜೂರಾತಿ ನೀಡಿದ್ದೇವೆ ಎಂದು ಮುಖ್ಯಮಂತ್ರಿಗಳು ವಿವರಿಸಿದಾಗ ಜನತೆ ಜೋರು ಚಪ್ಪಾಳೆಯ ಮೂಲಕ ಸ್ವಾಗತಿಸಿದರು.
ದಸರಾ ಸರ್ವ ಜನಾಂಗದ ಹಬ್ಬ
ದಸರಾ ಯಾವುದೇ ಒಂದು ಜಾತಿ, ಒಂದು ಧರ್ಮಕ್ಕೆ ಸೀಮಿತವಾದ ವೈಭವ ಅಲ್ಲ, ಇದು ಸರ್ವ ಜನಾಂಗದ ಸಂಭ್ರಮದ ಹಬ್ಬ. ಅಂಬಾ ದೇವಿ ಕೂಡ ಚಾಮುಂಡೇಶ್ವರಿಯ ಅವತಾರ. ಇದು ಸಾಂಸ್ಕೃತಿಕ ಹಿರಿಮೆ ಮತ್ತು ಚರಿತ್ರೆಯನ್ನು ಸಾರುವ ಹಬ್ಬ ಎಂದು ಸಿದ್ದರಾಮಯ್ಯ ತಿಳಿಸಿದರು.
ತಾಯಿ ಅಂಬಾದೇವಿ ಮತ್ತು ಚಾಮುಂಡಿ ತಾಯಿಯ ಕೃಪೆಯಿಂದ ರಾಜ್ಯದಲ್ಲಿ ಮಳೆ, ಬೆಳೆ ಉತ್ತಮವಾಗಿದೆ. ಜಲಾಶಯ, ಕೆರೆ ಕಟ್ಟೆಗಳು ತುಂಬಿವೆ. ಹೀಗಾಗಿ ಈ ಬಾರಿ ಸಮೃದ್ಧಿ ಕಾಣಲಿದ್ದೇವೆ ಎನ್ನುವ ನಂಬಿಕೆ ನನಗಿದೆ ಎಂದರು.
ಮತ್ತೆ ಇದೆಂಗಾಯ್ತು ಹೇಳ್ರಪಾ: ಬಿಜೆಪಿಗೆ ಸಿಎಂ ವ್ಯಂಗ್ಯ
ಗ್ಯಾರಂಟಿಗಳಿಂದಾಗಿ ಬೇರೆ ಅಭಿವೃದ್ಧಿಗೆ ಹಣ ಇಲ್ಲ, ಹಣ ಇಲ್ಲ ಅಂತ ಬಿಜೆಪಿ ನಾಯಕರು ಅಪಪ್ರಚಾರ ಮಾಡ್ತಿದಾರಲ್ಲಾ, ಹಾಗಿದ್ರೆ ಈಗ ಉದ್ಘಾಟಿಸಿದ 1695 ಕೋಟಿ ಹಣ ಎಲ್ಲಿಂದ ಬಂತು? ಒಂದೇ ವಿಶೇಷ ಕ್ಯಾಬಿನೆಟ್ ನಲ್ಲಿ 11770 ಕೋಟಿ ಕಾಮಗಾರಿಗೆ ಅನುಮೋದನೆ ಕೊಟ್ಟೆವಲ್ಲಾ, ಅದೆಲ್ಲಾ ಹೇಗಾಯ್ತು ಹೇಳ್ರಪಾ ಎಂದು ವ್ಯಂಗ್ಯವಾಗಿ ಬಿಜೆಪಿ ನಾಯಕರನ್ನು ಪ್ರಶ್ನಿಸಿದರು.
ಇದೇ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ 371 ಜೆ ಜಾರಿಗೆ ಆಗ್ರಹಿಸಿ ಹೋರಾಟ ಸಂಘಟಿಸಿದ ಎಲ್ಲಾ ಜಾತಿ, ಧರ್ಮಗಳ ಹಿರಿಯ ಹೋರಾಟಗಾರರನ್ನು ದಸರಾ ವೇದಿಕೆಯಲ್ಲಿ ಸನ್ಮಾನಿಸಿದ ಬಳಿಕ 371 ಜೆ ಸೃಷ್ಟಿಸಿದ ಅವಕಾಶದಲ್ಲಿ ಪ್ರಮುಖ ಹುದ್ದೆಗಳನ್ನು ಪಡೆದ ಸಿಂಧನೂರಿನ 10 ಮಂದಿಯನ್ನು ಸನ್ಮಾನಿಸಲಾಯಿತು.
ಸಿಂಧನೂರು ಶಾಸಕರಾದ ಹಂಪನಗೌಡ ಬಾದರ್ಲಿ ಅವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಪ್ರಕಾಶ್ ಪಾಟೀಲ್, ಕಾನೂನು ಸಚಿವರಾದ ಹೆಚ್.ಕೆ.ಪಾಟೀಲ್, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಬೋಸರಾಜು ಸೇರಿ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.