Waqf Asset Issue | ಸಚಿವ ಜಮೀರ್‌ ಸೂಚನೆಯಂತೆ ವಕ್ಫ್‌ ಆಸ್ತಿ ಒತ್ತುವರಿ ತೆರವು; ಡಿ ಸಿ ಭೂಬಾಲನ್‌ ಸ್ಪಷ್ಟನೆ

ವಕ್ಫ್ ಆಸ್ತಿಗಳ ಇಂದೀಕರಣ ಪ್ರತಿವರ್ಷದಂತೆ ನಡೆಯುತ್ತಿದೆ. ನೋಟಿಸ್ ನೀಡದೆಯೂ ಇಂದೀಕರಣ ಮಾಡಿರುವ ಹಲವು ಉದಾಹರಣೆಗಳಿವೆ. ವಕ್ಫ್‌ ಆಸ್ತಿ ಎಂದು ನೋಟಿಸ್ ನೀಡಿದ ತಕ್ಷಣವೇ ಯಾವುದೇ ಖಾತೆ ಬದಲಾವಣೆ ಆಗುವುದಿಲ್ಲ.

Update: 2024-10-30 11:33 GMT

ವಿಜಯಪುರ ಜಿಲ್ಲೆಯಲ್ಲಿ ರೈತರಿಗೆ ವಕ್ಫ್‌ ಬೋರ್ಡ್‌ ಆಸ್ತಿ ಕುರಿತ ನೋಟಿಸ್‌ ಹಾಗೂ ಒತ್ತುವರಿ ತೆರವು ಕಾರ್ಯಾಚರಣೆಯನ್ನು ವಕ್ಫ್‌ ಖಾತೆ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರ ಸೂಚನೆ ಮೇರೆಗೆ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್‌ ಅವರು ಬಿಜೆಪಿ ಸತ್ಯಶೋಧನಾ ಸಮಿತಿಯ ಎದುರು ಹೇಳಿಕೆ ದಾಖಲಿಸಿದ್ದಾರೆ.

ವಕ್ಫ್ ಆಸ್ತಿಗಳ ಇಂದೀಕರಣ ಪ್ರತಿವರ್ಷದಂತೆ ನಡೆಯುತ್ತಿದೆ. ನೋಟಿಸ್ ನೀಡದೆಯೂ ಇಂದೀಕರಣ ಮಾಡಿರುವ ಹಲವು ಉದಾಹರಣೆಗಳಿವೆ. ವಕ್ಫ್‌ ಆಸ್ತಿ ಎಂದು ನೋಟಿಸ್ ನೀಡಿದ ತಕ್ಷಣವೇ ಯಾವುದೇ ಖಾತೆ ಬದಲಾವಣೆ ಆಗುವುದಿಲ್ಲ. ಈ ಪ್ರಕ್ರಿಯೆ 2018 ರಿಂದಲೂ ನಡೆದುಕೊಂಡು ಬಂದಿದೆ ಎಂದು ವಿವರಿಸಿದ್ದಾರೆ. 

ವಕ್ಫ್‌ ಆಸ್ತಿ ಕುರಿತ ನೋಟಿಸನ್ನು ರೈತರ ಜೊತೆಗೆ ವಕ್ಫ್‌ ಮಂಡಳಿ ಅಧಿಕಾರಿಗಳಿಗೂ ನೀಡುತ್ತೇವೆ. ಎರಡೂ ಕಡೆಯವರನ್ನು ಜಮೀನಿಗೆ ಸಂಬಂಧಿಸಿದ ದಾಖಲಾತಿ ಪರಿಶೀಲನೆ ಮಾಡಿ, ವಿಚಾರಣೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

ರೈತರ ಪಹಣಿಯ ಕಾಲಂ 9 ಹಾಗೂ ಮಾಲೀಕತ್ವ ಜಾಗದಲ್ಲಿ ವಕ್ಫ್ ಹೆಸರು ಹಾಕಿಲ್ಲ. ಕಾಲಂ 11ರಲ್ಲಿ ಮಾತ್ರ ವಕ್ಫ್‌ ಆಸ್ತಿ ಎಂದು ನಮೂದಿಸಲಾಗಿದೆ. ದಾಖಲೆಗಳ ಪರಿಷ್ಕರಣೆ ಸಲುವಾಗಿ ಈ ಕ್ರಮ ನಡೆಯುತ್ತದೆ. ಈವರೆಗೆ 44 ಆಸ್ತಿಗಳಿಗೆ ನೋಟಿಸ್ ನೀಡದೆಯೂ ಇಂದೀಕರಣ ಮಾಡಿದ್ದೇವೆ. ಇಂಡಿ ತಾಲೂಕಿನಲ್ಲಿ 41 ಆಸ್ತಿಗಳ ಇಂದೀಕರಣ ರದ್ದು ಮಾಡಿದ್ದೇವೆ ಎಂದು ವಿವರಿಸಿದ್ದಾರೆ.

ರೈತರು ಹಾಗೂ ವಕ್ಫ್‌ ಆಸ್ತಿಗಳ ಕುರಿತ ತನಿಖೆಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ಕಾರ್ಯಪಡೆ ರಚಿಸಿದ್ದಾರೆ. ಒಟ್ಟು 250 ಎಕರೆ ವ್ಯಾಪ್ತಿಯ ಭೂ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಈಗ ಅವುಗಳನ್ನು ಸರ್ಕಾರದ ಸೂಚನೆ ಮೇರೆಗೆ ವಾಪಸ್ ಪಡೆಯುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಭೂಬಾಲನ್ ತಿಳಿಸಿದ್ದಾರೆ.

ಈ ಮಧ್ಯೆ, ನೋಟಿಸ್‌ ಹಿಂಪಡೆಯುವಂತೆ ಹಾಗೂ ಪಹಣಿಗಳಲ್ಲಿ ವಕ್ಫ್ ಬೋರ್ಡ್ ಹೆಸರು ತೆರವು ಮಾಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರೈತರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ ಬುಧವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. 

ಮಂಗಳವಾರ ಸಂಜೆಯಿಂದ ಪ್ರತಿಭಟನೆ ಆರಂಭಿಸಿರುವ ರೈತರು, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೇ ಕರಾಳ ದೀಪಾವಳಿ ಕೂಡ ಆಚರಿಸಿದ್ದಾರೆ. ಸಿಎಂ ಸಿದ್ದರಾಮಯ್ಯ, ಸಚಿವ ಜಮೀರ್ ಅಹ್ಮದ್ ಖಾನ್ ಅವರ ಭಾವಚಿತ್ರದ ಬಳಿ ದೀಪವಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಮಂಗಳವಾರ  ಸ್ಥಳದಲ್ಲೇ ಅಡುಗೆ ಮಾಡಿ ಊಟ ಸೇವಿಸುವ ಮೂಲಕ ರಾತ್ರಿಪೂರ್ತಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೇ ವಾಸ್ತವ್ಯ ಹೂಡಿದ್ದರು. ರೈತರ ಪಹಣಿಗಳಲ್ಲಿ ವಕ್ಪ್ ಬೋರ್ಡ್ ಹೆಸರು ತೆಗೆಯುವವರೆಗೂ ಹೋರಾಟ ಕೈಬಿಡದಿರಲು ರೈತರು ನಿರ್ಧರಿಸಿದ್ದಾರೆ.

Tags:    

Similar News