ಗಾಂಧಿ ಜಯಂತಿಯಂದೇ ಮಹಾಲಯ ಅಮಾವಾಸ್ಯೆ| ಮದ್ಯ, ಮಾಂಸ ನಿಷೇಧದಿಂದ ಪಿತೃಪಕ್ಷಾಚರಣೆ ಗೊಂದಲ

ಅಕ್ಟೋಬರ್‌ 2 ರಂದು ಈ‌ ಬಾರಿಯ ಗಾಂಧಿ ಜಯಂತಿಯನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಮಾಂಸ ಮಾರಾಟಕ್ಕೆ ಅವಕಾಶ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಮನವಿ ಮಾಡಿದೆ.

Update: 2024-09-28 12:33 GMT

ಅಕ್ಟೋಬರ್‌ 2 ರಂದು ಗಾಂಧಿ ಜಯಂತಿ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಅಹಿಂಸಾ ದಿನ ಸಲುವಾಗಿ ಪ್ರಾಣಿವಧೆ ಹಾಗೂ ಮಾಂಸ ಮಾರಾಟವನ್ನು ನಿಷೇಧಿಸುವ ಕ್ರಮವನ್ನು ಪ್ರತಿ ಬಾರಿ ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಆದರೆ, ಈ ಬಾರಿ ಗಾಂಧಿ ಜಯಂತಿಯಂದೇ ಮಹಾಲಯ ಅಮಾವಾಸ್ಯೆ ಬಂದಿರುವುದರಿಂದ  ಪಿತೃಪಕ್ಷದ ಕೊನೆದಿನದಂದು ಮಾಂಸಾಹಾರದ ಎಡೆ ಇಡುವ ಸಂಪ್ರದಾಯ ಪಾಲಿಸುವ ಲಕ್ಷಾಂತರ ಮಂದಿಗೆ ಗೊಂದಲ ಸೃಷ್ಟಿಸಿದೆ.

ಗಾಂಧಿ ಜಯಂತಿಯಂದೇ ಮಹಾಲಯ ಅಮಾವಾಸ್ಯೆ ಬಂದಿರರುವುದು ಕಾಕತಾಳೀಯವಾಗಿದ್ದು.  ಸಂಪ್ರದಾಯಿಕ ಪಿತೃಪಕ್ಷ ಆಚರಣೆಗೆ ಅಡಚಣೆಯಾಗಿದ್ದು, ಈ ಸಂಬಂಧ ನಿರ್ಣಯ ತೆಗೆದುಕೊಳ್ಳಲು ಸರ್ಕಾರಕ್ಕೂ ಗೊಂದಲ ಸೃಷ್ಟಿಯಾಗಿದೆ!

ಮಹಾಲಯ ಅಮಾವಾಸ್ಯೆ ಅಂಗವಾಗಿ   ತಮ್ಮ ಕಳೆದುಹೋದ (ಮೃತಪಟ್ಟ) ಹಿರಿಯರಿಗೆ  ಮಾಂಸಹಾರದ ವಿವಿಧ ಭಕ್ಷ್ಯಗಳನ್ನು ಮಾಡಿ, ಮದ್ಯದ ಜತೆಗೆ  ಎಡೆಯನ್ನಿಟ್ಟು ಪೂಜೆ ಸಲ್ಲಿಸುವುದು  ಕರ್ನಾಟಕ ಮಾತ್ರವಲ್ಲದೆ ಬೇರೆ ರಾಜ್ಯಗಳಲ್ಲೂ ಮುಖ್ಯವಾಗಿ ಮಾಂಸಾಗಾರಿಗಳು ಪಾಲಿಸುತ್ತಿರುವ ಸಂಪ್ರದಾಯವಾಗಿದೆ. ಆದರೆ ಆ ದಿನ ಗಾಂಧಿಜಯಂತಿ ಬಂದಿರುವುದರಿಂದ ಮಾಂಸ ಮಾರಾಟಕ್ಕೆ ಸರ್ಕಾರದವತಿಯಿಂದ ನಿಷೇದ ಹೇರಲಾಗಿದೆ. ಹಾಗಾಗಿ ಮಾಂಸಾಹಾರದ ಭಕ್ಷ್ಯ ಭೋಜನ  ತಯಾರಿಸಿ ಎಡೆ ಇಡುವ ಕಾರ್ಯಕ್ಕೆ ಅಡಚಣೆಯಾಗಿದೆ.

ಈ ಕಾರಣಕ್ಕಾಗಿ  ಈ‌ ಬಾರಿಯ ಗಾಂಧಿ ಜಯಂತಿಯನ್ನು  ವಿಶೇಷ ಪ್ರಕರಣ ಎಂದು ಪರಿಗಣಿಸಿ ಮಹಾಲಯ ಅಮವಾಸ್ಯೆ ದಿನ ಮಾಂಸ ಮಾರಾಟಕ್ಕೆ ಅವಕಾಶ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ನಗರಾಭಿವೃದ್ದಿ ಹಾಗೂ ಗೃಹ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಮನವಿ ಮಾಡಿದೆ. ಸರಕಾರದಿಂದ ಇದುವರೆಗೂ ಸ್ಪಷ್ಟ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ದೂರಿದ್ದಾರೆ. 


"ಒಂದು ವೇಳೆ ಮಹಾಲಯ ಅಮವಾಸ್ಯೆ ಆಚರಣೆಗೆ ಸರ್ಕಾರ ಮಾಂಸ ಮಾರಾಟಕ್ಕೆ ಅವಕಾಶ ನೀಡದಿದ್ದರೆ, ಪಿತೃಪಕ್ಷ ಆಚರಣೆ ದಿನ ಹಿರಿಯರಿಗೆ ಪೂಜೆ‌ ಮಾಡಿ ಮಾಂಸಾಹಾರದ ಎಡೆಯಿಡುವ ಬಾಂಧವರು ಭಾನುವಾರ (29-09-2024)ಅಥವಾ ಮಂಗಳವಾರದಂದು (01-10-2024) ಪಿತೃಗಳಿಗೆ ಮಾಂಸಾಹಾರದ ಎಡಯಿಟ್ಟು ಸಂಪ್ರದಾಯ ಪೂರ್ಣಗೊಳಿಸುವುದು ಉತ್ತಮ ಮಾರ್ಗವಾಗಿದೆ," ಎಂದು ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆ.ಎನ್.ನಾಗರಾಜು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಈ ನಡುವೆ ಗಾಂಧಿವಾದಿ ನಾರಾಯಣ  ಪ್ರತಿಕ್ರಿಯೆ ನೀಡಿ ರಾಷ್ಟ್ರಪಿತ ಮಹಾತ್ಮಾಗಾಂಧಿ ಜಯಂತಿಯನ್ನು ಅವರ ಹುಟ್ಟುಹಬ್ಬದ ಅಂಗಾವಾಗಿ ಜಗತ್ತಿನಾದ್ಯಂತ ವಿಶ್ವ ಅಹಿಂಸಾ ದಿನವಾಗಿ ಆಚರಿಸಲಾಗುತ್ತದೆ ಆ ಹಿನ್ನಲೆಯಲ್ಲಿ ಮದ್ಯ ಹಾಗೂ ಮಾಂಸ ಮಾರಾಟ ನಿಷೇದಿಸಲಾಗಿದೆ. ಒಂದು ವೇಳೆ ಅಪರೂಪದ ಪ್ರಕರಣವೆಂದು ಪರಿಗಣಿಸಿ ಮಾಂಸ ಮಾರಾಟಕ್ಕೆ ಅವಕಾಶ ನೀಡಿದರೆ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದಂತಾಗುತ್ತದೆ. ಭವಿಷ್ಯದಲ್ಲಿ ಬೇರೆ ಧರ್ಮಿಯರ ಹಬ್ಬ ಗಾಂಧಿ ಜಯಂತಿ ದಿನ‌ ಬಂದರೆ ಅವರಿಗೂ ಅವಕಾಶ ನೀಡಬೇಕಾಗುತ್ತದೆ ಆದರಿಂದ ಗಾಂಧಿಜಯಂತಿ ದಿನ ಮಾಂಸ ಮಾರಾಟಕ್ಕೆ ಅವಕಾಶ ನೀಡುವುದು ಸರಿಯಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ರಾಜ್ಯ ಒಕ್ಕಲಿಗರ ಒಕ್ಕೂಟ ಕರ್ನಾಟಕ ಅಧ್ಯಕ್ಷ ಸಿ.ವಿ.ದೇವರಾಜ್ ಅವರ ಪ್ರಕಾರ ಒಕ್ಕಲಿಗರ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಹಳೆಯ ಮೈಸೂರು ಪ್ರಾಂತ್ಯದಲ್ಲಿ ಮಹಾಲಯ ಅಮವಾಸ್ಯೆದಿನ ಪಿತೃಗಳಿಗೆ ಮಾಂಸಾಹರದ ಎಡೆಯಿಟ್ಟು ಪೂಜೆ ಮಾಡುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ ಆ ಹಿನ್ನಲೆಯಲ್ಲಿ ಅದನ್ನು ಮುಂದುವರಿಸಲು ಮಾಂಸ ಮಾರಾಟಕ್ಕೆ ಅವಕಾಶ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಎಷ್ಟು ಮಾರಾಟ?

ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆ.ಎನ್.ನಾಗರಾಜು ಅವರ ಪ್ರಕಾರ ಬೆಂಗಳೂರು ನಗರ ಒಂದರಲ್ಲಿಯೇ ಪ್ರತಿ ಭಾನುವಾರ ಎಂಟರಿಂದ ಹತ್ತು ಲಕ್ಷ ಕೆ.ಜಿ.ಕೋಳಿ ಮಾಂಸ ಮಾರಾಟವಾಗುತ್ತದೆ ಮಹಾಲಯ ಅಮವಾಸ್ಯೆ ದಿನ 12 ರಿಂದ 13 ಲಕ್ಷ ಕೆ.ಜಿ.ಮಾಂಸ‌ಮಾರಾಟ ವಾಗಬಹುದು ಎಂದು ಅಂದಾಜು ಮಾಡಲಾಗಿದೆ ಎಂದರು.

ಬೆಂಗಳೂರು ವ್ಯಾಪ್ತಿಯಲ್ಲಿ ಈ ಬಗ್ಗೆ ಹೆಚ್ಚಿನ ಸಮಸ್ಯೆ ಆಗುವುದರಿಂದ ಬಿಬಿಎಂಪಿ ಒಂದು ನಿರ್ಧಾರಕ್ಕೆ ಬರಬೇಕಾಗಿದೆ. ಈ ಕುರಿತು ಪ್ರತಿಕ್ರಿಯೆ ಪಡೆಯಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ತುಷಾರ ಗಿರಿನಾಥ್ ಅವರನ್ನು ʼದ ಫೆಡೆರಲ್‌ ಕರ್ನಾಟಕʼ ಸಂಪರ್ಕಿಸಲು  ಪ್ರಯತ್ನಿಸಿದರೂ  ಅವರು ಸಂಪರ್ಕಕ್ಕೆ ಲಭ್ಯವಾಗಿಲ್ಲ .  ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ನೀಡಿದ ಮನವಿಗೂ ಬಿಬಿಎಂಪಿ ಆಯುಕ್ತರಿಂದ ಯಾವುದೇ ರೀತಿಯಲ್ಲೂ  ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಅಧ್ಯಕ್ಷ ನಾಗರಾಜು ಆರೋಪಿಸಿದ್ದಾರೆ.

Tags:    

Similar News