ಒಂದು ಕಾರಿನ ಕತೆ...ಕಾರು ಬೇಕೆಂದ ಮಗನಿಗೆ ಎರಡು ತಟ್ಟಿದ್ದ ಯಡಿಯೂರಪ್ಪ
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೂ ಸಿ.ಕೆ.ಆರ್. 45 ಅಂಬಾಸಿಡರ್ ಕಾರಿಗೂ ಉಂಟು ಒಂದು ನಂಟು. ಅದು ಅವರ ರಾಜಕೀಯ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿದೆ ಹಾಗೂ ಇಡೀ ರಾಜ್ಯ ಸುತ್ತಾಡಿದೆ;
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೂ ಸಿ.ಕೆ.ಆರ್. 45 ಅಂಬಾಸಿಡರ್ ಕಾರಿಗೂ ಉಂಟು ಒಂದು ನಂಟು. ಅದು ಅವರ ರಾಜಕೀಯ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿದೆ ಹಾಗೂ ಇಡೀ ರಾಜ್ಯ ಸುತ್ತಾಡಿದೆ. ಮಾತ್ರವಲ್ಲ, ಹಿರಿಯ ನಾಯಕರಾದ ಎಚ್.ಎನ್. ಅನಂತಕುಮಾರ್, ವಿ.ಎಸ್. ಆಚಾರ್ಯ, ಡಿ.ಎಚ್. ಶಂಕರಮೂರ್ತಿ ಮತ್ತಿತರರು ಇದೇ ಕಾರಿನಲ್ಲಿ ಓಡಾಡಿದ್ದಾರೆ.
ಒಂದು ರೀತಿಯಲ್ಲಿ ಈ ಕಾರು ಬಿಜೆಪಿಯ ಕರ್ನಾಟಕದಲ್ಲಿ ಅಧಿಕಾರ ಹಿಡಿಯುವವರೆಗೂ ತನ್ನದೇ ರೀತಿಯಲ್ಲಿ ಪಾತ್ರ ವಹಿಸಿದೆ. ಹಾಗಾಗಿ ಆ ಅದೃಷ್ಟದ ಕಾರಿನಲ್ಲಿ ಈಗ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರು ತಂದೆಯ ಕಾರ್ಯಕ್ಷೇತ್ರ ಹಾಗೂ ಈಗ ತಾವು ಪ್ರತಿನಿಧಿಸುತ್ತಿರುವ ಶಿಕಾರಿಪುರ ಕ್ಷೇತ್ರದಲ್ಲಿ ಪ್ರಯಾಣಿಸುವ ಮೂಲಕ ಅದೃಷ್ಟ ಪರೀಕ್ಷೆಗೆ ಹೊರಟಿದ್ದಾರೆ!
ಈ ಬಗ್ಗೆ ಈಗ ಬಿಎಸ್. ಯಡಿಯೂರಪ್ಪ ಅವರ ಪುತ್ರ, ಈಗ ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವ ಬಿ.ವೈ. ವಿಜಯೇಂದ್ರ ಅವರೇ ತಮ್ಮ ಎಕ್ಸ್ ಜಾಲತಾಣದಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. "ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿದ್ದೆ. ತಂದೆಯವರಾದ ಬಿ.ಎಸ್.ಯಡಿಯೂರಪ್ಪನವರು ಪಕ್ಷದ ರಾಜ್ಯದ ಅಧ್ಯಕ್ಷರಾಗಿ ಆಯ್ಕೆಗೊಂಡ ನಂತರದಲ್ಲಿ ಈ ಅಂಬಾಸಿಡರ್ ಕಾರು ಬಳಸುತ್ತಿದ್ದರು," ಎಂದು ಹೇಳಿದ್ದಾರೆ.
"1988ರಲ್ಲಿ ಖರೀದಿಸಿದ ಅಂಬಾಸಿಡರ್ ಕಾರು ಅದಾಗಿದೆ. ಆ ಕಾರಿನ ಸಂಖ್ಯೆ ಸಿಕೆಆರ್ 45 ಆಗಿದ್ದು, ಇವತ್ತೂ ಅದು ನಮ್ಮ ಮನೆಯಲ್ಲಿದೆ. ಗುರುವಾರ ಶಿಕಾರಿಪುರದಲ್ಲಿ ಆ ಕಾರನ್ನು ಬಳಸಿದೆ. ರಾಜ್ಯದಲ್ಲಿ ಬಿಜೆಪಿ ಇಷ್ಟು ಎತ್ತರಕ್ಕೆ ಬೆಳೆದಿದ್ದರೆ, ರಾಜ್ಯದಲ್ಲಿ ಬಿಜೆಪಿಗೆ ಭದ್ರ ಬುನಾದಿ ಸಿಕ್ಕಿದ್ದರೆ, ತಂದೆಯವರು ಬಳಸುತ್ತಿದ್ದ ಈ ಕಾರು ಪ್ರಮುಖ ಪಾತ್ರ ವಹಿಸಿದೆ. ಯಡಿಯೂರಪ್ಪ, ಎಚ್.ಎನ್. ಅನಂತಕುಮಾರ್, ಅನೇಕ ಹಿರಿಯರು ಅದೇ ಅಂಬಾಸಿಡರ್ ಕಾರಿನಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ, ಹಳ್ಳಿ ಹಳ್ಳಿಗೆ ತೆರಳಿದ್ದರು. ರಾಯಚೂರು, ಗುಲ್ಬರ್ಗ, ಬಳ್ಳಾರಿ, ಯಾದಗಿರಿ ಸೇರಿ ಯಾವ ಜಿಲ್ಲೆಯನ್ನೂ ಬಿಟ್ಟಿಲ್ಲ ಎಂದು ನೆನಪಿಸಿದ್ದಾರೆ.
"ಅದೇ ಅಂಬಾಸಿಡರ್ ಕಾರಿನಲ್ಲಿ ಲಕ್ಷಾಂತರ ಕಿಮೀ ಪ್ರವಾಸ ಮಾಡಿದ್ದಾರೆ. ಸಿಕೆಆರ್ 45 ಕಾರಿನ ಜೊತೆ ಬಹಳಷ್ಟು ಹಿರಿಯ ನಾಯಕರ ಒಡನಾಟ ಇದೆ. ಒಂದು ಆತ್ಮೀಯತೆ ಇದೆ. ನಿನ್ನೆ ನಾನು ವಿಡಿಯೋ ಹಂಚಿಕೊಂಡಾಗ ಸಾಕಷ್ಟು ಹಿರಿಯ ಕಾರ್ಯಕರ್ತರು ನಾನು ನೆನಪು ಮಾಡಿಕೊಂಡಿದ್ದಕ್ಕೆ ನನಗೆ ಅಭಿನಂದನೆ ಸಲ್ಲಿಸಿದ್ದಾರೆ," ಎಂದು ವಿಜಯೇಂದ್ರ ತಿಳಿಸಿದ್ದಾರೆ.
"ಆ ಕಾರಿನ ಜೊತೆ ಭಾವನಾತ್ಮಕ ಸಂಬಂಧವಿದೆ. ಅದೊಂದು ರೀತಿ ಕಮಲ ರಥ ಎಂದರೆ ತಪ್ಪಾಗಲಾರದು. ಹಿಂದೆ ಯಡಿಯೂರಪ್ಪನವರು ಶಿವಮೊಗ್ಗದಿಂದ ಬೆಂಗಳೂರಿಗೆ ಪ್ರವಾಸ ಹೊರಟಿದ್ದರು. ನಾಯಕ್ ಎಂಬವರು ಚಾಲಕರಾಗಿದ್ದರು. ತರೀಕೆರೆಯಲ್ಲಿ ಬೆಳಿಗ್ಗೆ ಇದೇ ಕಾರು ಪಲ್ಟಿಯಾಗಿ ಅಪಘಾತ ಆಗಿತ್ತು. ಆದರೆ, ಯಾರಿಗೂ ಸಣ್ಣ ಗಾಯವೂ ಆಗಿರಲಿಲ್ಲ. ಅಪಘಾತವಾದ ವೇಳೆ, ಯಡಿಯೂರಪ್ಪನವರು ದಿನಪತ್ರಿಕೆ ಓದುತ್ತಿದ್ದರು. ಯಾರಿಗೂ ಸಣ್ಣ ಗಾಯವೂ ಆಗಿರಲಿಲ್ಲ," ಎಂದು ನೆನಪಿಸಿಕೊಂಡರು.
ವಿಜಯೇಂದ್ರ ಅವರಿಗೆ ತಟ್ಟಿದ್ದರು ಯಡಿಯೂರಪ್ಪ!
"ಆ ಕಾರು ಅಷ್ಟೇ ಗಟ್ಟಿಮುಟ್ಟಾಗಿತ್ತು ಎಂದ ಅವರು, ಸ್ನೇಹಿತರ ಜೊತೆ ಪ್ರವಾಸ ಹೋಗಬೇಕಿತ್ತು. ಆ ಕಾಲದಲ್ಲಿ ಯಾವುದೇ ವ್ಯವಸ್ಥೆ ಇರಲಿಲ್ಲ. ಕಾರಿಗಾಗಿ ತಂದೆಯವರ ಜೊತೆ ಗಲಾಟೆ ಮಾಡಿದ್ದೆ; ಆಗ ಅವರು ಅದು ಪಕ್ಷದ ಕಾರು; ಹಾಗೆಲ್ಲ ಬಳಸಲು ಬರುವುದಿಲ್ಲ," ಎಂದು ತಿಳಿಸಿದ್ದರು. ಶಿಕಾರಿಪುರದಲ್ಲಿ ಕೆಲವು ಬಡವರು ಆಸ್ಪತ್ರೆಗೆ ಶಿವಮೊಗ್ಗಕ್ಕೆ ಹೋಗಬೇಕಿತ್ತು. ಆ ಕಾರನ್ನು ಕಳಿಸಿಕೊಡುತ್ತಿದ್ದರು. ಅದನ್ನು ತಂದೆಯವರಿಗೆ ನೆನಪಿಸಿದ್ದೆ. ಮಕ್ಕಳು ಕೇಳಿದರೆ ಕೊಡುವುದಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ನನಗೆರಡು ತಟ್ಟಿದ್ದರು ಎಂದು ನಗುತ್ತ ಮನದಾಳದ ನೆನಪುಗಳನ್ನು ಮಾಧ್ಯಮಗಳ ಮುಂದಿಟ್ಟರು.