ಪೋಕ್ಸೋ ಪ್ರಕರಣ | ಯಡಿಯೂರಪ್ಪ ಬಂಧನ ಸಾಧ್ಯತೆ: ಗೃಹ ಸಚಿವ ಡಾ ಜಿ ಪರಮೇಶ್ವರ್​ ಹೇಳಿದ್ದೇನು?

ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿ ಎದುರಿಸುತ್ತಿರುವ ಯಡಿಯೂರಪ್ಪ ಅವರ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಗೃಹ ಸಚಿವರು, ಅಗತ್ಯವಿದ್ದರೆ ಸಿಐಡಿಯವರು ಯಡಿಯೂರಪ್ಪರನ್ನು ಬಂಧಿಸಲಿದ್ದಾರೆ ಎಂದು ಹೇಳುವ ಮೂಲಕ ಬಂಧನ ‌ಸೂಚನೆ ನೀಡಿದ್ದಾರೆ

Update: 2024-06-13 07:13 GMT
ಗೃಹ ಸಚಿವ ಡಾ. ಜಿ ಪರಮೇಶ್ವರ್‌
Click the Play button to listen to article

ಪೋಕ್ಸೋ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಬಂಧನ ಸಾಧ್ಯತೆಗಳ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ ಪ್ರತಿಕ್ರಿಯೆ ನೀಡಿದ್ದು, ಅಗತ್ಯವಿದ್ದರೆ ಸಿಐಡಿಯವರು ಯಡಿಯೂರಪ್ಪರನ್ನು ಬಂಧಿಸಲಿದ್ದಾರೆ ಎಂದು ಹೇಳಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದ ಬಗ್ಗೆ ಪೊಲೀಸ್ ಅಧಿಕಾರಿಗಳು ಜೂನ್ 15ರ ಒಳಗೆ ಚಾರ್ಜ್ ಶೀಟ್ ಸಲ್ಲಿಸಬೇಕಿದೆ. ಅಷ್ಟರಲ್ಲಿ ಎಲ್ಲಾ ಪ್ರಕ್ರಿಯೆಗಳು ಮುಗಿಯಬೇಕಾಗಿದೆ. ಹೀಗಾಗಿ ಯಡಿಯೂರಪ್ಪನವರಿಗೆ ಸಿಐಡಿ ನೋಟಿಸ್‌ ಜಾರಿ ಮಾಡಲಾಗಿದೆ. ಅಗತ್ಯ ಬಿದ್ದರೆ ಸಿಐಡಿಯವರು ಯಡಿಯೂರಪ್ಪರನ್ನು ಬಂಧಿಸುತ್ತಾರೆ. ಈ ಬಗ್ಗೆ ನಾನು ಏನೂ ಹೇಳಲು ಆಗದು. ಸ್ವಾಭಾವಿಕವಾಗಿ ಯಡಿಯೂರಪ್ಪ ಅವರು ಬಂಧಿಸದಂತೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ಪರಮೇಶ್ವರ ಪ್ರತಿಕ್ರಿಯಿಸಿದ್ದಾರೆ.

ಅಂತರ ಜಿಲ್ಲಾ ವರ್ಗಾವಣೆ

ಪೊಲೀಸರ ಅಂತರ ಜಿಲ್ಲಾ ವರ್ಗಾವಣೆ ಪೋರ್ಟಲ್ ಅರ್ಜಿ ಪ್ರಕಾರ ಆಗುತ್ತಿಲ್ಲ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ. ಶಿಸ್ತು ಬದ್ಧವಾಗಿ ನಿಯಮದ ಚೌಕಟ್ಟಿನಲ್ಲಿ ನಡೆಯಬೇಕಾಗುತ್ತದೆ ಎಂದು ಹೇಳಿದರು.

ವರ್ಗಾವಣೆಗೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ಮಾಡಿದ್ದಾರೆ. ಅದನ್ನು ಮೀರಿ ವರ್ಗಾವಣೆ ಮಾಡಲು ಬರುವುದಿಲ್ಲ. ಅಕಸ್ಮಾತ್ ಮಾಡಬೇಕಾದರೆ ನಿಯಮಗಳನ್ನು ಬದಲಾಯಿಸಬೇಕಾಗುತ್ತದೆ ಎಂದರು.

ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ‌ ಕನಿಷ್ಟ ಒಂದು ವರ್ಷ ಸೇವೆಯ ನಿಯಮವಿತ್ತು. ಸದನದಲ್ಲಿ ಕಾನೂನು ಬದಲಾಲಿಸಿ ಎರಡು ವರ್ಷ ಮಾಡಲಾಗಿದೆ. ಈ ರೀತಿ ಕಾನೂನು ಬದಲಾವಣೆ ಮಾಡಬಹುದು. ಇರುವಂತಹ ನಿಯಮ ಉಲ್ಲಂಘನೆ ಮಾಡಿ, ವರ್ಗಾವಣೆ ಮಾಡುವುದಕ್ಕೆ ಅವಕಾಶವಿಲ್ಲ. ಡಿಜಿ ಅವರಾಗಲಿ, ನಾನು ಅಥವಾ ಮತ್ತೊಬ್ಬರು ಇರಬಹುದು. ಕಾನೂನು ನಿಯಮದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂದು ತಿಳಿಸಿದರು.

ವರ್ಗಾವಣೆಗೆ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿರುವುದಕ್ಕೆ ಏನಾದರು ಸಣ್ಣಪುಟ್ಟ ತೊಂದರೆಗಳು ಸಿಬ್ಬಂದಿಗಳಿಗೆ ಆಗಿದ್ದರೆ ಸರಿಪಡಿಸುವುದಕ್ಕೆ ಸೂಚನೆ ನೀಡುತ್ತೇನೆ. ಅವರಿಗೂ ಕುಟುಂಬಗಳಿವೆ. ಇದನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದರು.

Tags:    

Similar News