CM Fund Issue | ಸಿಎಂ ಪರಿಹಾರ ನಿಧಿ ಅರ್ಜಿ ತಿರಸ್ಕಾರ: ಮಲೆನಾಡು ಕರಾವಳಿ ಒಕ್ಕೂಟ ಆರೋಪ

ಮಲೆನಾಡು-ಕರಾವಳಿ ಹಾಗೂ ಇತರೆ ಭಾಗದ ನೆಲವಾಸಿಗಳು ಮುಖ್ಯಮಂತ್ರಿ ಪರಿಹಾರ ನಿಧಿಗೆ ವೈದ್ಯಕೀಯ ನೆರವು ಕೋರಿ ಅರ್ಜಿ ಸಲ್ಲಿಸುತ್ತಿದ್ದು, ಬಹುತೇಕ ಅರ್ಜಿಗಳು ತಿರಸ್ಕೃತವಾಗುತ್ತಿದ್ದು, ನಿಜವಾಗಿಯೂ ಬಡವರಿಗೆ ಸಲ್ಲಬೇಕಾದ ಸಹಾಯ ತಲುಪುತ್ತಿಲ್ಲ.

Update: 2024-11-19 08:33 GMT
ಮುಖ್ಯಮಂತ್ರಿ ಸಿದ್ದರಾಮಯ್ಯ

ಅಮಾಯಕರು, ಬಡವರು ವೈದ್ಯಕೀಯ ನೆರವು ಕೋರಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಲ್ಲಿಸುವ ಅರ್ಜಿಯನ್ನು ಕ್ಷುಲ್ಲಕ ಕಾರಣಗಳಿಗಾಗಿ ತಿರಸ್ಕರಿಸಿ, ಬಡ ಜನರನ್ನು ವೈದ್ಯಕೀಯ ನೆರವಿನಿಂದ ವಂಚಿಸಲಾಗುತ್ತಿದೆ ಎಂದು ಮಲೆನಾಡು ಕರಾವಳಿ ಒಕ್ಕೂಟದ ರಾಜ್ಯ ಪ್ರಧಾನ ಸಂಚಾಲಕ ಅನಿಲ್ ಹೊಸಕೊಪ್ಪ ಆರೋಪಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಮಲೆನಾಡು-ಕರಾವಳಿ ಹಾಗೂ ಇತರೆ ಭಾಗದ ನೆಲವಾಸಿಗಳು ಮುಖ್ಯಮಂತ್ರಿ ಪರಿಹಾರ ನಿಧಿಗೆ ವೈದ್ಯಕೀಯ ನೆರವು ಕೋರಿ ಅರ್ಜಿ ಸಲ್ಲಿಸುತ್ತಿದ್ದು, ಬಹುತೇಕ ಅರ್ಜಿಗಳು ಅಕಾರಣ ತಿರಸ್ಕೃತವಾಗುತ್ತಿದ್ದು, ನಿಜವಾಗಿಯೂ ಬಡವರಿಗೆ ಸಲ್ಲಬೇಕಾದ ಸಹಾಯ ತಲುಪುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ನಮ್ಮ ಹಳ್ಳಿಗಾಡು ಪ್ರದೇಶಗಳಲ್ಲಿ ಆರೋಗ್ಯ ಸಮಸ್ಯೆಯಾದಾಗ ಜನ ಮೊದಲು ಸ್ಥಳೀಯ ಆಸ್ಪತ್ರೆಗೆ ಹೋಗುತ್ತಾರೆ. ಅಲ್ಲಿ 2 ದಿನಗಳಾದ ಮೇಲೆ ಇಲ್ಲಿ ಚಿಕಿತ್ಸೆ ಸಿಗುವುದಿಲ್ಲ. ದೊಡ್ಡ ಆಸ್ಪತ್ರೆಗಳಿಗೆ ಹೋಗಿ ಬೇರೆ ಕಡೆ ತೋರಿಸಿ ಎಂದರೆ, ಈ ಮೊದಲು ಸೇರಿದ ಆಸ್ಪತ್ರೆಯಲ್ಲಿ 5 ಸಾವಿರದಿಂದ 10 ಸಾವಿರದವರೆಗೆ ಬಿಲ್ ಆಗಿರುತ್ತದೆ. ಆಯುಷ್‌ಮಾನ್ ಅಥವಾ ಬೇರೆ ಬಿ.ಪಿ.ಎಲ್ ಕಾರ್ಡ್‌ಗಳ ಮೂಲಕ ಸ್ವಲ್ಪ ಹಣ ಜಮಾ ಆಗಿರುತ್ತದೆ. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಗ್ರಾಮೀಣ ಭಾಗದ ಜನ ಅದರಲ್ಲೂ ಮಲೆನಾಡು ಕರಾವಳಿ ಭಾಗದ ಜನ ನಗರ ಪ್ರದೇಶದ ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಅಥವಾ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಅಲ್ಲಿ 15 ರಿಂದ 20 ದಿನಗಳವರೆಗೆ ಆಸ್ಪತ್ರೆಗಳಲ್ಲಿ ಇದ್ದುಎರಡು ಮೂರು ಲಕ್ಷದಷ್ಟು ಸಂಪೂರ್ಣ ಹಣ ಕಟ್ಟಿ ನಂತರ ಮುಖ್ಯಮಂತ್ರಿ ಪರಿಹಾರ ನಿಧಿಗೆ ಅರ್ಜಿ ಕೊಟ್ಟರೆ ಈಗಾಗಲೇ ನಿಮಗೆ ಆಯುಷ್ಮಾನ್ ಅಥವಾ ಬಿ.ಪಿ.ಎಲ್ ಸೌಲಭ್ಯದಿಂದ 5 ಸಾವಿರ ಡ್ರಾ ಆಗಿದೆ. ಹಾಗಾಗಿ ಈ ಬಿಲ್ ಕೊಡಲು ಬರುವುದಿಲ್ಲ ಎಂದು ತಿರಸ್ಕರಿಸುತ್ತಾರೆ ಎಂದು ಅನಿಲ್‌ ಹೊಸಕೊಪ್ಪ ಆರೋಪಿಸಿದ್ದಾರೆ. 

ಅಮಾಯಕ ಜನರಿಗೆ ಯಾವ ರೀತಿ ವೈದ್ಯಕೀಯ ನೆರವು ಪಡೆಯುವ ಅರ್ಜಿಗಳನ್ನು ಸಲ್ಲಿಸಬೇಕೆಂಬ ಮಾಹಿತಿ ಇರುವುದಿಲ್ಲ. ಬಂದಷ್ಟು ಹಣ ಬಂದರೆ ಸಾಕು ಎಂದು ಅರ್ಜಿ ಸಲ್ಲಿಸುತ್ತಾರೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಲಕ್ಷಗಟ್ಟಲೆ ವೆಚ್ಚವಾಗಿರುತ್ತದೆ. ಆದರೆ ಮೊದಲು ಸೇರಿದ ಆಸ್ಪತ್ರೆಯಲ್ಲಿ ಪರಿಹಾರ ಪಡೆದ ಐದೋ ಅಥವಾ ಹತ್ತು ಸಾವಿರಗಳಿಂದ ಹೆಚ್ಚಿನ ಪರಿಹಾರ ಪಡೆಯಲು ಅಮಾಯಕ ಗ್ರಾಮೀಣ ಜನ ವಂಚಿತರಾಗುತ್ತಿದ್ದಾರೆ. ಒಂದು ರೂಪಾಯಿನಷ್ಟೂ ಪರಿಹಾರ ಪಡೆದಿದ್ದರೂ ಸಹ ಒಂದು ಲಕ್ಷದಷ್ಟು ಪರಿಹಾರದ ಬಿಲ್ ಅನ್ನು ತಿರಸ್ಕರಿಸಲಾಗುತ್ತದೆ. ಇದರಿಂದ ಬಡ ಅಮಾಯಕ ಜನರಿಗೆ ನಿರಂತರ ಅನ್ಯಾಯವಾಗುತ್ತಿದೆ. ಸಣ್ಣ ಸಣ್ಣ ಕಾರಣಗಳನ್ನು ಮುಂದಿಟ್ಟು ಬಡ ಜನರ ಅರ್ಜಿಗಳನ್ನು ತಿರಸ್ಕರಿಸಿದರೆ ಸರ್ಕಾರದ ಖಜಾನೆಯಲ್ಲಿ ಹಣವಿಲ್ಲವೇನೋ, ಮುಖ್ಯಮಂತ್ರಿಗಳ ಪರಿಹಾರ ನಿಧಿ ಬರಿದಾಗಿದೆ ಎಂಬ ಭಾವನೆ ಮೂಡುತ್ತದೆ ಎಂದು ಅವರು ಹೇಳಿದ್ದಾರೆ. 

ಈ ಬಗ್ಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 2 ಲಕ್ಷ ಬಿಲ್‌ಗೆ ಎಷ್ಟು ಬರುತ್ತೋ ಅದರಲ್ಲಿ ಮೊದಲ ಆಸ್ಪತ್ರೆಗಳಲ್ಲಿ ನೀಡಿದ ಕಡಿಮೆ ಮೊತ್ತವನ್ನು; ಅಂದರೆ 5 ಸಾವಿರ ಕಡಿತಗೊಳಿಸಿ ಉಳಿದ ಹಣ ಬಿಡುಗಡೆ ಮಾಡಿ ಬಡವರಿಗೆ ಹೆಚ್ಚಿನ ಪರಿಹಾರ ನೀಡುವ ಮೂಲಕ ಸಹಾಯ ಮಾಡುವಂತೆ ಅವರು ಆಗ್ರಹಿಸಿದ್ದಾರೆ.

Tags:    

Similar News