ಮುಖ್ಯಮಂತ್ರಿ ಕುರ್ಚಿ ವಿಷಯ ಚರ್ಚೆ ಆಗುವಂಥದ್ದೇ ಅಲ್ಲ: ದಿನೇಶ್ ಗುಂಡೂರಾವ್
"ಮುಖ್ಯಮಂತ್ರಿ ಕುರ್ಚಿ ವಿಷಯ ಚರ್ಚೆ ಆಗುವಂಥದ್ದೇ ಅಲ್ಲ. ಸಿದ್ದರಾಮಯ್ಯ ಗಟ್ಟಿಯಾಗಿದ್ದಾರೆ. ಮುಖ್ಯಮಂತ್ರಿ ಇದ್ದಾಗ ಈ ಚರ್ಚೆ ಅನಗತ್ಯʼʼ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.;
ʻʻಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಯಾವುದೇ ಚರ್ಚೆ ಆಗಿಲ್ಲ. ಮುಖ್ಯಮಂತ್ರಿ ಕುರ್ಚಿ ವಿಷಯ ಚರ್ಚೆ ಆಗುವಂಥದ್ದೇ ಅಲ್ಲ. ಸಿದ್ದರಾಮಯ್ಯ ಗಟ್ಟಿಯಾಗಿದ್ದಾರೆ. ಮುಖ್ಯಮಂತ್ರಿ ಇದ್ದಾಗ ಈ ಚರ್ಚೆ ಅನಗತ್ಯʼʼ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಯಾವುದೇ ಚರ್ಚೆ ಆಗಿಲ್ಲ. ಮುಖ್ಯಮಂತ್ರಿ ಕುರ್ಚಿ ವಿಷಯ ಚರ್ಚೆ ಆಗುವಂಥದ್ದೇ ಅಲ್ಲ. ಸಿದ್ದರಾಮಯ್ಯ ಗಟ್ಟಿಯಾಗಿದ್ದಾರೆ. ಮುಖ್ಯಮಂತ್ರಿ ಇದ್ದಾಗ ಈ ಚರ್ಚೆ ಅನಗತ್ಯ. ಅರ್ಹತೆ, ಜನಪ್ರಿಯತೆ ಆಧಾರದಲ್ಲಿ ಮುಖ್ಯಮಂತ್ರಿ ಸ್ಥಾನ ಸಿಗಲಿದೆ. ಒಬ್ಬ ಅನುಭವಿ, ದಕ್ಷ ಆಡಳಿತಗಾರ, ಜನಪ್ರಿಯ ನಾಯಕರಾಗಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ' ಎಂದರು.
'ಮುಖ್ಯಮಂತ್ರಿ ಸ್ಥಾನದ ಆಸೆ ಇರುವುದು ತಪ್ಪೇನಲ್ಲ. 30-40 ವರ್ಷಗಳಿಂದ ಕೆಲಸ ಮಾಡಿರುವ ಕೆಲವು ನಾಯಕರು ಮುಖ್ಯಮಂತ್ರಿಯಾಗುವ ಆಸೆ ವ್ಯಕ್ತಪಡಿಸಿದ್ದಾರೆ' ಎಂದು ಕಾಂಗ್ರೆಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.
'ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ತೆಗೆಯಲು ಯಾರಿಂದಲೂ ಸಾಧ್ಯವಿಲ್ಲ. ಮುಂದೆ ಪಕ್ಷ ಅಧಿಕಾರಕ್ಕೆ ಬಂದ ನಂತರ ಯಾರು ಬೇಕಾದರೂ ಮುಖ್ಯಮಂತ್ರಿ ಆಗಲಿ. ಬೇಡ ಅಂದವರು ಯಾರು? ಡಿ.ಕೆ. ಶಿವಕುಮಾರ್ ಅವರಿಗೂ ಮುಖ್ಯಮಂತ್ರಿಯಾಗುವ ಆಸೆ ಇದೆ. ಮುಂದಿನ ಅವಧಿಗೆ ಸರ್ಕಾರ ತಂದು ಅವರು ಮುಖ್ಯಮಂತ್ರಿ ಆಗುತ್ತಾರೆ. ಆ ತಾಕತ್ತು ಅವರಿಗಿದೆ' ಎಂದರು. 'ಸಚಿವರು ಇಲ್ಲಸಲ್ಲದ ವಿಚಾರಗಳ ಕುರಿತು ಚರ್ಚಿಸಿ ವಿರೋಧ ಪಕ್ಷಕ್ಕೆ ಆಹಾರ ಆಗಬಾರದು' ಎಂದು ಕಾಂಗ್ರೆಸ್ ಶಾಸಕ ಡಾ.ಎಚ್.ಡಿ. ರಂಗನಾಥ್ ಹೇಳಿದರು.
'ಮುಖ್ಯಮಂತ್ರಿ ಹುದ್ದೆಯ ಕುರಿತು ಹೇಳಿಕೆಗಳನ್ನು ನೀಡದಂತೆ ಸಚಿವರಿಗೆ ಎಚ್ಚರಿಕೆ ನೀಡಬೇಕು' ಎಂದು ಆಗ್ರಹಿಸಿ ಕಾಂಗ್ರೆಸ್ ಮಾಜಿ ಸಚಿವರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಕೆಪಿಸಿಸಿ ಪದಾಧಿಕಾರಿಗಳು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದಾರೆ. ಇಂತಹ ಹೇಳಿಕೆಗಳು ಪಕ್ಷದ ವರ್ಚಸ್ಸಿನ ಮೇಲೆ ಪರಿಣಾಮ ಬೀರುತ್ತಿದೆ. ಕಾರ್ಯಕರ್ತರು ಭ್ರಮನಿರಸನಗೊಳ್ಳುವಂತಾಗಿದೆ. ಹೀಗಾಗಿ, ಈ ರೀತಿಯ ಹೇಳಿಕೆಗಳನ್ನು ನೀಡದಂತೆ ತಕ್ಷಣ ಕಡಿವಾಣ ಹಾಕಬೇಕು' ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಬಿ.ಎಲ್. ಶಂಕರ್, ವಿ.ಎಸ್. ಉಗ್ರಪ್ಪ, ಎಚ್.ಎಂ. ರೇವಣ್ಣ, ವಿ.ಆರ್. ಸುದರ್ಶನ್, ಎಲ್. ಹನುಮಂತಯ್ಯ, ಬಿ.ಎನ್. ಚಂದ್ರಪ್ಪ, ಪ್ರಕಾಶ್ ರಾಥೋಡ್, ಪಿ.ಆರ್. ರಮೇಶ್, ಸಿ.ಎಸ್. ದ್ವಾರಕನಾಥ್, ಎಚ್.ಎಸ್. ಚಂದ್ರಮೌಳಿ ಸೇರಿದಂತೆ 13 ಮಂದಿ ಈ ಪತ್ರಕ್ಕೆ ಸಹಿ ಹಾಕಿದ್ದಾರೆ.