The Federal Series -5 | ಟನಲ್ ರಸ್ತೆ ಎಂಬ ಮಾಯೆಯ ಬೆನ್ನತ್ತಿ... ಸುರಂಗ ಮಾರ್ಗದ ಜಪದಲ್ಲಿ ಮುಳುಗಿದ ಸರ್ಕಾರ
ರೋಡಿಕ್ಸ್ ಕನ್ಸಲ್ಟೆನ್ಸಿ ಎಂಬ ಸಂಸ್ಥೆ ಡಿಪಿಆರ್ (ಸಮಗ್ರ ವಿಸ್ತೃತ ವರದಿ) ಸಿದ್ಧಪಡಿಸಿದ್ದರೂ ಹಣಕಾಸು, ತಂತ್ರಜ್ಞಾನ ಹಾಗೂ ಭೂಸ್ವಾಧೀನದ ಸಮಸ್ಯೆಯಿಂದ ಯೋಜನೆ ಇನ್ನಷ್ಟು ವಿಳಂಬವಾಗುತ್ತಿದೆ. ಈ ಮಧ್ಯೆ, ಯೋಜನೆಗೆ ಐಐಎಸ್ಸಿ tಕಳವಳ ವ್ಯಕ್ತಪಡಿಸಿದೆ.;
ಸಿಲಿಕಾನ್ ಸಿಟಿಯಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ರಾಜ್ಯ ಸರ್ಕಾರ “ಸಿದ್ಧಸೂತ್ರ”ದಂತೆ ಸುರಂಗ ಮಾರ್ಗ ಯೋಜನೆಯ (ಟನಲ್ ರಸ್ತೆ) ಜಪ ಮಾಡುತ್ತಿದೆ. ಆದರೆ, ಯೋಜನೆ ಜಾರಿಗೂ ಮೊದಲೇ ಕಾರ್ಯಸಾಧ್ಯತೆಗಳ ಅಪಸ್ವರ ಕೇಳಿ ಬರುತ್ತಿದೆ.
ಕಳೆದ ಒಂದೂವರೆ ವರ್ಷದಿಂದ ಯೋಜನೆ ಕುರಿತು ಹೇಳಿಕೊಂಡು ಬರುತ್ತಿದೆಯಾದರೂ, ಅದು ಡಿಪಿಆರ್ (Detailed Project Report) ಹಂತದಲ್ಲೇ ಇದೆ. 2025 ಫೆಬ್ರುವರಿ ಅಂತ್ಯದೊಳಗೆ ಟನಲ್ ರಸ್ತೆಗೆ ಜಾಗತಿಕ ಟೆಂಡರ್ ಕರೆದು, ಕಾಮಕಾರಿ ಆರಂಭಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದರೂ ಈವರೆಗೆ ಪ್ರಕ್ರಿಯೆ ಆರಂಭವಾಗಿಲ್ಲ.
ರೋಡಿಕ್ಸ್ ಕನ್ಸಲ್ಟೆನ್ಸಿ ಎಂಬ ಸಂಸ್ಥೆ ಡಿಪಿಆರ್ (ಸಮಗ್ರ ವಿಸ್ತೃತ ವರದಿ) ಸಿದ್ಧಪಡಿಸಿದ್ದರೂ ಹಣಕಾಸು, ತಂತ್ರಜ್ಞಾನ ಹಾಗೂ ಭೂಸ್ವಾಧೀನದ ಸಮಸ್ಯೆಯಿಂದ ಯೋಜನೆ ಇನ್ನಷ್ಟು ವಿಳಂಬವಾಗುತ್ತಿದೆ. ಈ ಮಧ್ಯೆ, ಯೋಜನೆಗೆ ಭಾರತೀಯ ವಿಜ್ಞಾನ ಸಂಸ್ಥೆಯ(ಐಐಎಸ್ಸಿ) ಸುಸ್ಥಿರ ಸಂಚಾರ ಪ್ರಯೋಗಾಲಯವು (ಐಎಸ್‌ಟಿ ಲ್ಯಾಬ್) ಕಳವಳ ವ್ಯಕ್ತಪಡಿಸಿದ್ದು, ಪ್ರತಿಪಕ್ಷ ಬಿಜೆಪಿ ಯೋಜನೆಯನ್ನು ವಿರೋಧಿಸುತ್ತಿದೆ.
ಟ್ವಿನ್ ಟನಲ್ ರಸ್ತೆ ಏನು?
ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗಾಗಿ ರಾಜ್ಯ ಸರ್ಕಾರ ಟ್ವಿನ್ ಟನಲ್ ರಸ್ತೆ ಯೋಜನೆ ರೂಪಿಸಿದೆ. ಮೊದಲ ಹಂತದಲ್ಲಿ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗೆ ಒಟ್ಟು 18 ಕಿ.ಮೀ.ಉದ್ದದ ಸುರಂಗ ಮಾರ್ಗ ನಿರ್ಮಾಣ ಯೋಜನೆ ಕೈಗೆತ್ತಿಕೊಂಡಿದೆ.
ಎರಡನೇ ಹಂತದಲ್ಲಿ ಕೆ.ಆರ್.ಪುರನಿಂದ ನಾಯಂಡಹಳ್ಳಿವರೆಗೆ ಒಟ್ಟು 22ಕಿ.ಮೀ. ಉದ್ದದ ಕಾರಿಡಾರ್ ನಿರ್ಮಿಸುವ ಯೋಜನೆಯೂ ಇದೆ. ರಾಜ್ಯ ಸರ್ಕಾರ ಅವಳಿ ಸುರಂಗ ಮಾರ್ಗ ಯೋಜನೆಗಾಗಿ ಬಜೆಟ್‌ನಲ್ಲಿ 40 ಸಾವಿರ ಕೋಟಿ ರೂ. ಅನುದಾನ ಮೀಸಲಿರಿಸಿದೆ. ಬಂಡವಾಳ ವೆಚ್ಚವಾಗಿ ರಾಜ್ಯ ಸರ್ಕಾರ 19ಕೋಟಿ ರೂ. ತೆಗೆದಿರಿಸಿದೆ.
ಭೂಸ್ವಾಧೀನ ದೊಡ್ಡ ಸಂಕಷ್ಟ
ಮೊದಲ ಹಂತದ ಟನಲ್ ರಸ್ತೆಯನ್ನು 12,690 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿದೆ. ಈ ಸುರಂಗ ಮಾರ್ಗದಲ್ಲಿ ಪ್ರವೇಶ, ನಿರ್ಗಮನ ಹಾಗೂ ರ್ಯಾಂಪ್ ನಿರ್ಮಾಣಕ್ಕೆ 45 ಎಕರೆ ಭೂಮಿ ಅಗತ್ಯವಾಗಿದೆ. ಆದರೆ, ಉದ್ದೇಶಿತ ಮಾರ್ಗದಲ್ಲಿ ಭೂಸ್ವಾಧೀನ ದುಬಾರಿಯಾಗಿದೆ. ಇಲ್ಲಿ ಪ್ರತಿ ಚದರಡಿಗೆ 25,750 ರೂ. ಪಾವತಿಸುವ ಅನಿವಾರ್ಯತೆ ಇದೆ. ಈ ರೀತಿಯಾದರೆ ಭೂ ಸ್ವಾಧೀನ ಪರಿಹಾರಕ್ಕಾಗಿಯೇ 45 ಸಾವಿರ ಕೋಟಿ ಅಗತ್ಯವಿದೆ. 12,690 ಕೋಟಿ ರೂ. ವೆಚ್ಚದ ಯೋಜನೆ ಅನುಷ್ಠಾನಕ್ಕೆ ಪರಿಹಾರ ರೂಪವಾಗಿ 45ಸಾವಿರ ಕೋಟಿ ರೂ. ಪಾವತಿಸಬೇಕಾಗಿರುವುದರಿಂದ ಯೋಜನಾ ಅತ್ಯಂತ ದುಬಾರಿ ವೆಚ್ಚದದ್ದಾಗಿದೆ ಎಂಬುದು ಪ್ರತಿಪಕ್ಷಗಳ ವಾದವಾಗಿದೆ.
ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ 16.78 ಕಿ.ಮೀ. ಟನೆಲ್ ರಸ್ತೆಗೆ ದುಬಾರಿ ಹಣ ಖರ್ಚು ಮಾಡಿದರೆ ಟನೆಲ್ ರಸ್ತೆ ಬಳಕೆದಾರರಿಂದ ಪ್ರತೀ ಕಿ.ಮೀ.ಗೆ 282 ರೂ. ಟೋಲ್ ಸಂಗ್ರಹಿಸಬೇಕಾಗುತ್ತದೆ. ಮಾರುಕಟ್ಟೆ ದರದಂತೆ ಪರಿಹಾರ ನೀಡಿ ಯೋಜನೆ ಅನುಷ್ಠಾನಗೊಳಿಸಿದರೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಿಶ್ವದ ಎಂಟನೇ ಅದ್ಭುತವಾಗಲಿದೆ ಎನ್ನುತ್ತಾರೆ ಬಿಜೆಪಿ ಶಾಸಕ ಮುನಿರತ್ನ. ಬಿಜೆಪಿ ಶಾಸಕ ಈ ಹೇಳಿಕೆ ಇದೀಗ ಯೋಜನೆಯನ್ನು ಅನುಮಾನದಿಂದ ನೋಡುವಂತಾಗಿದೆ.
20 ವರ್ಷದ ಅವಧಿಗೆ ಗುತ್ತಿಗೆ
ಟನಲ್ ರಸ್ತೆ ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ(ಪಿಪಿಪಿ) ಅನುಷ್ಠಾನಗೊಳಿಸಲಾಗುತ್ತಿದೆ. ಗುತ್ತಿಗೆ ಪಡೆಯುವ ಖಾಸಗಿ ಕಂಪನಿ ಹಾಗೂ ಬಿಬಿಎಂಪಿ 60:40ರ ಅನುಪಾತದಲ್ಲಿ ಯೋಜನಾ ವೆಚ್ಚ ಭರಿಸಲಿವೆ.
ಹೆಬ್ಬಾಳದ ಎಸ್ಟೀಮ್ ಮಾಲ್ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್‌ವರೆಗಿನ ಸುರಂಗ ರಸ್ತೆ ನಿರ್ಮಾಣ ಯೋಜನೆಗೆ 14,981.39 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಈ ಪೈಕಿ 8 ಸಾವಿರ ಕೋಟಿ ರೂ.ಗಳನ್ನು ಪಾಲಿಕೆ ಒದಗಿಸಬೇಕಿದೆ. ಉಳಿದ ವೆಚ್ಚವನ್ನು ಗುತ್ತಿಗೆ ಪಡೆದ ಕಂಪನಿ ಭರಿಸಲಿದೆ.
ಸುರಂಗ ಮಾರ್ಗ ನಿರ್ಮಾಣ, ಕಾರ್ಯಾಚರಣೆ, ಹಸ್ತಾಂತರವನ್ನು BOT(ಬಿಲ್ಡ್ ಆಪರೇಟ್ ಟ್ರಾನ್ಸ್‌ಫರ್) ಮಾದರಿಯಲ್ಲಿ ನಡೆಸಲಾಗುತ್ತಿದೆ. ಜಾಗತಿಕ ಟೆಂಡರ್‌ನಲ್ಲಿ ಅರ್ಹವಾಗುವ ಗುತ್ತಿಗೆ ಕಂಪನಿಗೆ 20 ವರ್ಷ ಟೋಲ್ ಶುಲ್ಕ ಸಂಗ್ರಹಿಸಿ, ಬಳಿಕ ಆ ರಸ್ತೆಯನ್ನು ಪಾಲಿಕೆಗೆ ಹಸ್ತಾಂತರಿಸಲಿದೆ.
ಸುರಂಗ ಮಾರ್ಗದಲ್ಲಿ ಪ್ರತಿ ಕಿ.ಮೀ.ಗೆ 18 ರಿಂದ 24 ರೂ.ವರೆಗೆ ಟೋಲ್ ಶುಲ್ಕ ಸಂಗ್ರಹಿಸಲು ಚಿಂತಿಸಲಾಗಿದೆ. ಆದರೆ, ಇದು ಅಂತಿಮವಾಗಿ ಯೋಜನಾ ವೆಚ್ಚ ಆಧರಿಸಿ ನಿರ್ಧರಿಸಲಾಗುತ್ತದೆ. ನಿರ್ಗಮನ ಮತ್ತು ಪ್ರವೇಶ ದ್ವಾರ ನಿರ್ಮಾಣಕ್ಕಾಗಿ ಅಗತ್ಯವಿರುವ ಭೂಸ್ವಾಧೀನಕ್ಕೆ 800 ಕೋಟಿ ರೂ.ನಿಗದಿಪಡಿಸಲಾಗಿದೆ.
ಕಿ.ಮೀ. ಗೆ 898 ಕೋಟಿ ರೂ. ವೆಚ್ಚ
ಹೆಬ್ಬಾಳದ ಎಸ್ಟೀಮ್ ಮಾಲ್ ಜಂಕ್ಷನ್‌ಗಳಿಂದ ಸಿಲ್ಕ್‌ಬೋರ್ಡ್ ಜಂಕ್ಷನ್‌ವರೆಗಿನ 16.67 ಕಿ.ಮೀ. ಉದ್ದದ ಪ್ರತಿ ಟನಲ್‌ನಲ್ಲಿ 10.500 ಮೀಟರ್ ಅಗಲದ ತಲಾ 3 ಪಥಗಳನ್ನು ನಿರ್ಮಿಸಲಾಗುತ್ತಿದೆ. ಟ್ವಿನ್ ಟನಲ್‌ನ ಆರೂ ಪಥಗಳ ಪೈಕಿ ಎರಡು ಪಥಗಳನ್ನು ಆಂಬ್ಯುಲೆನ್ಸ್, ಬಿಎಂಟಿಸಿ ಬಸ್ ಹಾಗೂ ಪೊಲೀಸ್ ವಾಹನಗಳ ಸಂಚಾರಕ್ಕೆ ಮೀಸಲಿಡಲು ಉದ್ದೇಶಿಸಿದೆ.
ಯೋಜನೆ ಪ್ರಸ್ತಾವದ ವೇಳೆ ಪ್ರತಿ ಕಿ.ಮೀ. ಸುರಂಗ ರಸ್ತೆ ನಿರ್ಮಾಣಕ್ಕೆ 500 ಕೋಟಿ ರೂ. ವೆಚ್ಚ ಅಂದಾಜಿಸಲಾಗಿತ್ತು. ಆದರೆ, ವಿಸ್ತೃತ ಯೋಜನಾ ವರದಿ ಬಳಿಕ ಆ ವೆಚ್ಚವು ಪ್ರತಿ ಕಿ.ಮೀ. ಗೆ 898 ಕೋಟಿ ರೂ.ಗಳಿಗೆ ಏರಿಕೆಯಾಗಿದೆ.
ಎದುರಾಗಲಿದೆ ನೀರಿನ ಸಮಸ್ಯೆ?
ಉದ್ದೇಶಿತ ಟನಲ್ ರಸ್ತೆಯ ಮಾರ್ಗದಲ್ಲಿ ಸಾವಿರಾರು ಸಂಖ್ಯೆಯ ಬೋರ್‌ವೆಲ್‌ಗಳಿದ್ದು, ಬೆಂಗಳೂರಿನ ನೀರಿನ ಬವಣೆ ನೀಗಿಸುತ್ತಿವೆ. ಸುರಂಗ ಮಾರ್ಗದ ನಿರ್ಮಾಣದಿಂದ ಈ ಬೋರ್‌ವೆಲ್‌ಗಳು ಮುಚ್ಚುವ ಆತಂಕ ಎದುರಾಗಲಿದೆ. ಈಗಾಗಲೇ ನೀರಿನ ಸಮಸ್ಯೆ ಎದುರಿಸುತ್ತಿರುವ ಬೆಂಗಳೂರಿಗೆ ಜಲ ಗಂಡಾಂತರ ಎದುರಾಗಬಹುದು ಎಂಬುದು ನಗರ ತಜ್ಞರ ಆತರಂಕವಾಗಿದೆ.
ಇನ್ನು ಹೆಬ್ಬಾಳ ಕೆರೆಯ ಬಳಿಯೇ ಸುರಂಗ ನಿರ್ಮಾಣವಾಗುವುರಿಂದ ಕೆರೆಯ ಒಡಲಿಗೂ ಅಪಾಯ ಎದುರಾಗುವ ಸಾಧ್ಯತೆ ಇದೆ. ಲಾಲ್‌ಬಾಗ್ ಸಮೀಪ ನಿರ್ಗಮನ ದ್ವಾರ ಬರುವುದರಿಂದ ಸಾಕಷ್ಟು ಮರಗಳ ಹನನವಾಗಲಿದೆ. ಇಲ್ಲಿನ ಪರಿಸರಕ್ಕೂ ಧಕ್ಕೆಯಾಗಲಿದೆ ಎಂದು ಹೇಳಲಾಗಿದೆ.
ಪ್ರಯಾಣದ ಅವಧಿ ಉಳಿತಾಯ
ಸುರಂಗ ಮಾರ್ಗ ನಿರ್ಮಾಣದಿಂದ ಪ್ರಯಾಣದ ಅವಧಿ ಉಳಿತಾಯವಾಗುವುದರಲ್ಲಿ ಎರಡು ಮಾತಿಲ್ಲ. ಸದ್ಯ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ವರೆಗೆ ಪ್ರಯಾಣಿಸಲು ಒಂದು ಗಂಟೆಗೂ ಹೆಚ್ಚು ಸಮಯ ಹಿಡಿಯಲಿದೆ. ಸುರಂಗ ರಸ್ತೆಯಾದರೆ ಇದು 20 ರಿಂದ 25 ನಿಮಿಷಕ್ಕೆ ತಗ್ಗಲಿದೆ. ವಾಹನಗಳು ಗಂಟೆಗೆ 40 ರಿಂದ 60 ಕಿಲೋಮೀಟರ್ ಗರಿಷ್ಠ ವೇಗದಲ್ಲಿ ಓಡಾಟ ನಡೆಸಲು ಸಾಧ್ಯವಾಗುವಂತೆ ಸುರಂಗವನ್ನು ನಿರ್ಮಿಸಲಾಗುತ್ತಿದೆ.
ಯೋಜನೆಗೆ ಸಾಕಷ್ಟು ಅಧ್ಯಯನ ಅಗತ್ಯ
ಸುರಂಗ ಮಾರ್ಗ ರಸ್ತೆ ನಿರ್ಮಾಣಕ್ಕೆ ಗೆ ಕಾರ್ಯಾದೇಶ ದೊರೆತ ಬಳಿಕ ಆಡಿಟಿಂಗ್ (ಸಾರಿಗೆ ವ್ಯವಸ್ಥೆಯಲ್ಲಿ ಆಡಿಟಿಂಗ್ ಎಂದರೆ ಜನರನ್ನು ಸುರಕ್ಷಿತವಾಗಿ ಪಾರು ಮಾಡುವ ವಿಧಾನಗಳು) ಆಗಬೇಕು. ಎಲ್ಲಾ ಮಾನದಂಡಗಳನ್ನು ಪೂರೈಸಿದ ಬಳಿಕ ಸುರಕ್ಷತಾ ಅನುಮತಿ ನೀಡಬೇಕಿದೆ.
"ಸುರಂಗ ಮಾರ್ಗದಿಂದ ಯಾವುದೇ ಸಮಸ್ಯೆ ಇಲ್ಲ. ಆದರೆ, ಎಷ್ಟು ಪೂರ್ವ ತಯಾರಿ ನಡೆಸುತ್ತೇವೆ ಎನ್ನುವುದೇ ಮುಖ್ಯವಾಗಿರುತ್ತದೆ. ಇಂಗ್ಲೆಂಡ್ ನಲ್ಲೂ ಸುರಂಗ ಮಾರ್ಗಗಳಿವೆ. ಪರಿಣಾಮಕಾರಿ ತಂತ್ರಜ್ಞಾನಗಳ ಬಳಕೆಯಿಂದ ಯೋಜನೆ ಸಾಧ್ಯವಾಗಿಸಬಹುದು. ಬಹುತೇಕ ಸುರಂಗ ಮಾರ್ಗಗಳಲ್ಲಿ ನೀರಿನದ್ದೇ ಸಮಸ್ಯೆ ಇರುತ್ತದೆ. ಮಳೆ ಬಂದಾಗ ನೀರು ಹೊರಹೋಗುವಂತೆ ಮಾಡುವುದು, ನೀರಿನ ಸೆಲೆಗಳನ್ನು ನಿಯಂತ್ರಿಸುವುದು, ಭೂಕಂಪ ಸಂಭವಿಸಿದಾಗ ನಿಭಾಯಿಸುವುದು ತಂತ್ರಜ್ಞಾನ ಅಳವಡಿಸಿಕೊಳ್ಳಬೇಕಿದೆ. ಉದ್ದೇಶಿತ ಮಾರ್ಗದಲ್ಲಿ ಬಂಡೆ ಸಮತಟ್ಟಾಗಿರುವುದರಿಂದ ಸುರಂಗ ಮಾರ್ಗ ಯೋಜನೆ ಕಾರ್ಯಗತಗೊಳಿಸುವುದು ಹೆಚ್ಚು ದುಬಾರಿಯಾಗಲಿದೆ. ಈ ಎಲ್ಲ ಅಡೆತಡೆಗಳನ್ನು ನಿವಾರಿಸಲು ಸಾಕಷ್ಟು ಸಮೀಕ್ಷೆಗಳನ್ನು ನಡೆಸಬೇಕು. ಅದಕ್ಕಾಗಿ ತಂತ್ರಜ್ಞರ ಸಮಿತಿ ರಚಿಸಿ, ಯಾವ ತಂತ್ರಜ್ಞಾನ ಬಳಸಬೇಕು. ಎಷ್ಟು ಅಡಿ ಕೆಳಗೆ ಸುರಂಗ ಮಾರ್ಗ ಸಾಗಬೇಕು ಎಂದು ಅಧ್ಯಯನ ಮಾಡಬೇಕಾಗುತ್ತದೆ. ಈಗಾಗಲೇ ನವದೆಹಲಿ ಸಮಿತಿ ಸರ್ವೇ ನಡೆಸುತ್ತಿದ್ದು, ಆಲೈನ್ಮೆಂಟ್ ಸರ್ವೇ ಮುಗಿದಿದೆ ಎಂದು ಸಮಿತಿಗೆ ತಾಂತ್ರಿಕ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ನಗರ ತಜ್ಞ ಪ್ರೊ. ಎಂ.ಎನ್. ಶ್ರೀಹರಿ ಅವರು "ದ ಫೆಡರಲ್ ಕರ್ನಾಟಕ"ಕ್ಕೆ ತಿಳಿಸಿದರು.