ಚನ್ನಪಟ್ಟಣ ಉಪಚುನಾವಣೆ | ಟಿಕೆಟ್ ಸಿಗದಿದ್ರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ: ಸಿಪಿ ಯೋಗೇಶ್ವರ್

Update: 2024-08-12 13:03 GMT

ಚನ್ನಪಟ್ಟಣ ಉಪಚುನಾವಣೆಯಲ್ಲಿ ಎನ್‌ಡಿಎ ಯಿಂದ ಟಿಕೆಟ್ ನೀಡದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಬಿಜೆಪಿ ಎಂಎಲ್​ಸಿ ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ.

ಉಪ ಚುನಾವಣೆ ಹಿನ್ನೆಲೆಯಲ್ಲಿ ಸಮಾನ ಮನಸ್ಕರ ಸಭೆ ಕರೆದಿದ್ದ ಯೋಗೇಶ್ವರ್ ಅವರಿಗೆ ಹೈಕಮಾಂಡ್​ ಬುಲಾವ್ ಬಂದಿದ್ದು, ಸೋಮವಾರ (ಆ.12) ದೆಹಲಿಗೆ ತೆರಳಿದ್ದಾರೆ. ಆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʻʻನಾನು ಚನ್ನಪಟ್ಟಣ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕು ಎನ್ನುವ ಆಸೆ ಇದೆ. ಒಂದು ವೇಳೆ ಅದು ಸಾಧ್ಯವಾಗದಿದ್ದರೆ, ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆʼʼ ಎಂದು ಘೋಷಿಸಿದ್ದಾರೆ.

ʻʻಈಗಾಗಲೇ ನಮ್ಮ ಕ್ಷೇತ್ರದ ಜನರು ಹಲವು ಬಾರಿ ಸ್ವತಂತ್ರವಾಗಿ ನಿಂತರೂ ನನ್ನನ್ನು ಗೆಲ್ಲಿಸಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಲು ಸಾಧ್ಯವಿಲ್ಲ ಎಂದಾದರೆ ಸ್ವತಂತ್ರವಾಗಿ ಸ್ಪರ್ಧಿಸುತ್ತೇನೆ ಹೊರತು; ಕಾಂಗ್ರೆಸ್‌ಗೆ ಸೇರಲ್ಲ. ಇದುವರೆಗೆ ನನ್ನನ್ನು ಯಾವುದೇ ಕಾಂಗ್ರೆಸ್ ನಾಯಕರು ಸಂಪರ್ಕಿಸಿಲ್ಲʼʼ ಎಂದು ಯೋಗೇಶ್ವರ್‌ ಸ್ಪಷ್ಟಪಡಿಸಿದ್ದಾರೆ.

ʻʻಚನ್ನಪಟ್ಟಣ ಕ್ಷೇತ್ರದ ಜನರು ನನಗೆ ಸ್ಪರ್ಧಿಸುವಂತೆ ಒತ್ತಡ ಹಾಕುತ್ತಿದ್ದಾರೆ. ನಾವೆಲ್ಲರೂ ಸಮಾನ ಮನಸ್ಕರು ಸಭೆ ಸೇರಿದ್ದೇವೆ. ಯಾವುದೇ ಕಾರಣಕ್ಕೂ ಚನ್ನಪಟ್ಟಣ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟು ಕೊಡಬಾರದು. ಆ ಕ್ಷೇತ್ರವನ್ನು ಎನ್‌ಡಿಎ ವಶಕ್ಕೆ ತಗೊಳ್ಳಬೇಕು ಎಂದು ನಿರ್ಣಯಿಸಿದ್ದೇವೆ. ಇದೇ ಕಾರಣಕ್ಕೆ ನಾನು ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮನಸ್ಸು ಮಾಡಿದ್ದೇನೆ. ಅದಕ್ಕಾಗಿ ಇಂದು ದಿಲ್ಲಿಗೆ ತೆರಳುತ್ತಿದ್ದೇನೆ. ಅಲ್ಲಿ ವರಿಷ್ಠರನ್ನು ಭೇಟಿಯಾಗಿ ಚರ್ಚೆ ನಡೆಸುತ್ತೇನೆ. ಆ.16ರಂದು ಮತ್ತೆ ದಿಲ್ಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗುವ ಯೋಜನೆಯೂ ಇದೆʼʼ ಎಂದು ತಿಳಿಸಿದರು.

ʻʻನಮ್ಮ ರಾಜ್ಯ ನಾಯಕರು ನನ್ನ ಸ್ಪರ್ಧೆಯ ಬಗ್ಗೆ ಭರವಸೆ ನೀಡಿದ್ದಾರೆ. ಅದಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಅಡ್ಡಿಯಾದರೆ ಅವರ ಜತೆ ವರಿಷ್ಠರು ಮಾತಾಡಿದ ಬಳಿಕ ನನ್ನ ಸ್ಪರ್ಧೆಗೆ ಅವರೂ ಒಪ್ಪಿಗೆ ಸೂಚಿಸುವ ಭರವಸೆ ಇದೆ. ಅವರಿಗೆ ಸ್ವಲ್ಪ ಮುಂಗೋಪ ಅಷ್ಟೇ. ಕಳೆದ ಬಾರಿ ಮೈತ್ರಿ ಮಾಡಿಕೊಳ್ಳುವಂತೆ ಹೇಳಿದವನೇ ನಾನು. ಬಿಜೆಪಿ ಮೈತ್ರಿ ಮಾಡಿಕೊಳ್ಳದಿದ್ದರೆ ನಮ್ಮ ಭಾಗದಲ್ಲಿ ಜೆಡಿಎಸ್ ಕಥೆ ಏನಾಗುತ್ತಿತ್ತು? ಹೀಗಾಗಿ ಎರಡು ಪಕ್ಷಗಳ ಒಮ್ಮತದ ಅಭ್ಯರ್ಥಿ ನಾನೇ ಆಗುವ ವಿಶ್ವಾಸ ಇದೆʼʼ ಎಂದು ಹೇಳಿದರು.

ಸ್ವತಂತ್ರವಾಗಿ ಗೆದ್ದು ಬಂದಿದ್ದ ಸಿಪಿವೈ

1999ರಲ್ಲಿ ಯೋಗೇಶ್ವರ್‌ ಮೊದಲ ಬಾರಿಗೆ ಚನ್ನಪಟ್ಟಣ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಲು ತಯಾರಿ ನಡೆಸಿದ್ದರು. ಈ ಸಮಯದಲ್ಲಿಅವರಿಗೆ ಕಾಂಗ್ರೆಸ್ ಟಿಕೆಟ್‌ ನೀಡಲಿಲ್ಲ. ಹಾಗಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ‌ ಮಾಡಿ ಗೆಲುವು ಸಾಧಿಸಿದ್ದರು. ಬಳಿಕ 2013ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದರು. ಆದರೆ ಕಾಂಗ್ರೆಸ್‌ ನಾಯಕರು ಮತ್ತೆ ಇವರಿಗೆ ಟಿಕೆಟ್‌ ನಿರಾಕರಿಸಿದರು. ಆಗ ಸಮಾಜವಾದಿ ಪಕ್ಷ ಚಿಹ್ನೆಯಡಿ ಸ್ಪರ್ಧೆಮಾಡಿ ಗೆಲುವು ಸಾಧಿಸಿದ್ದರು.

Tags:    

Similar News