ಚನ್ನಪಟ್ಟಣ ಉಪ ಚುನಾವಣೆ | ವಾರದಲ್ಲೇ ಟಿಕೆಟ್‌ ಘೋಷಣೆ: ಕುಮಾರಸ್ವಾಮಿ

ಚುನಾವಣೆ ದಿನಾಂಕ 4-5 ದಿನಗಳಲ್ಲಿ ಯಾವಾಗ ಬೇಕಾದರೂ ಘೋಷಣೆ ಆಗಬಹುದು. ಕೂಡಲೇ ಬಿಜೆಪಿ ಹೈಕಮಾಂಡ್, ರಾಜ್ಯ ನಾಯಕರ ಜತೆ ಚರ್ಚೆ ಮಾಡಿ ಅಭ್ಯರ್ಥಿ ಫೈನಲ್ ಮಾಡುತ್ತೇವೆ ಎಂದು ಹೇಳಿದರು.;

Update: 2024-10-12 11:36 GMT
ಕೇಂದ್ರ ಸಚಿವ ಕುಮಾರಸ್ವಾಮಿ

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಇನ್ನೊಂದು ವಾರದಲ್ಲೇ ಎನ್‌ಡಿಎ ಅಭ್ಯರ್ಥಿ ಘೋಷಣೆಯಾಗಲಿದೆ ಎಂದು ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಹೇಳಿದರು.

ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಬಿಡದಿ ಸಮೀಪದ ಕೇತಿಗಾನಹಳ್ಳಿಯ ತಮ್ಮ ತೋಟದ ಮನೆಯಲ್ಲಿ ಕ್ಷೇತ್ರದ ಕಾರ್ಯಕರ್ತರು, ಮುಖಂಡರೊಂದಿಗೆ ಸಮಾಲೋಚನಾ ಸಭೆ ನಡೆಸಿದ ಅವರು, ಇನ್ನೊಂದು ವಾರದಲ್ಲಿ ಚುನಾವಣಾ ಟಿಕೆಟ್ ಫೈನಲ್ ಆಗುತ್ತದೆ. ಚುನಾವಣೆ ದಿನಾಂಕ ಕೂಡ 4-5 ದಿನಗಳಲ್ಲಿ ಯಾವಾಗ ಬೇಕಾದರೂ ಘೋಷಣೆ ಆಗಬಹುದು. ಕೂಡಲೇ ಬಿಜೆಪಿ ಹೈಕಮಾಂಡ್, ರಾಜ್ಯ ನಾಯಕರ ಜತೆ ಚರ್ಚೆ ಮಾಡಿ ಅಭ್ಯರ್ಥಿ ಫೈನಲ್ ಮಾಡುತ್ತೇವೆ ಎಂದು ಹೇಳಿದರು.

ಹಿನ್ನಲೆಯಲ್ಲಿ ಬಿಜೆಪಿ ಹೈಕಮಾಂಡ್, ರಾಜ್ಯ ನಾಯಕರು, ಕಾರ್ಯಕರ್ತರು ಎಲ್ಲರು ಸೇರಿ ಎರಡು ಪಕ್ಷದ ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಪಡೆದು ಅಭ್ಯರ್ಥಿ ಅಂತಿಮ ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು. 

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಯಮುತ್ತು ಸೇರಿದಂತೆ ಚನ್ನಪಟ್ಟಣ ಕ್ಷೇತ್ರದ ಎಲ್ಲಾ ಪ್ರಮುಖ ಮುಖಂಡರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು, ಈಗಾಗಲೇ 5 ಜಿಲ್ಲಾ ಪಂಚಾಯತಿ, ಕ್ಷೇತ್ರ ಹಾಗೂ ಪಟ್ಟಣ ಭಾಗದಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದೇವೆ. ಈ ಸಭೆಯಲ್ಲಿ ಹಳ್ಳಿ, ಹೋಬಳಿ, ಪಂಚಾಯಿತಿ ಮಟ್ಟದ ಮುಖಂಡರು ಬಂದಿದ್ದರು. ಚುನಾವಣೆಗೆ ಯಾವ ರೀತಿ ತಯಾರಿ ಮಾಡಿಕೊಳ್ಳಬೇಕು. ಅಭ್ಯರ್ಥಿ ಯಾರಾಗಬೇಕು ಎನ್ನುವುವ ಬಗ್ಗೆ ಸಮಾಲೋಚನೆ ನಡೆಸಿದ್ದೇನೆ. ಜೆಡಿಎಸ್- ಬಿಜೆಪಿ ಎರಡು ಪಕ್ಷಗಳು ಹೊಂದಾಣಿಕೆಯಿಂದ ಕೆಲಸ ಮಾಡಬೇಕು. ಮಿತ್ರಪಕ್ಷ ಬಿಜೆಪಿ ನಾಯಕರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಕೆಲಸ ಮಾಡಬೇಕು ಎಂದು ಮುಖಂಡರಿಗೆ ನಿರ್ದೇಶನ ನೀಡಿದ್ದೇನೆ ಎಂದು ತಿಳಿಸಿದರು.

ನವೆಂಬರ್ ಒಳಗೆ ಮಹಾರಾಷ್ಟ್ರ ಹಾಗೂ ಜಾರ್ಖಂಡ್ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಬೇಕಿದೆ. ಅದೇ ಸಮಯದಲ್ಲಿ ಚನ್ನಪಟ್ಟಣ ಉಪ ಚುನಾವಣೆ ನಡೆಯಬಹುದು. ಇನ್ನು ಒಂದು ವಾರದಲ್ಲಿ ಚುನಾವಣೆ ಘೋಷಣೆಯಾಗಬಹುದು. ಅಂತಿಮವಾಗಿ ದೆಹಲಿ ಮಟ್ಟದಲ್ಲಿ ಬಿಜೆಪಿಯ ಹೈಕಮಾಂಡ್ ಹಾಗೂ ನಾವು ಕೂತು ಚರ್ಚೆ ಮಾಡುತ್ತೇವೆ ಎಂದು ಕೇಂದ್ರ ಸಚಿವರು ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.

ನಿಖಿಲ್ ಅಭ್ಯರ್ಥಿ ಆಗಬೇಕು ಎಂಬ ಒತ್ತಡ ಇದೆ

ನಿಖಿಲ್ ಕುಮಾರಸ್ವಾಮಿ ಅವರು ಉಪ ಚುನಾವಣೆಯ ಅಭ್ಯರ್ಥಿ ಆಗಬೇಕು ಎಂಬ ಬಗ್ಗೆ ಕಾರ್ಯಕರ್ತರಿಂದ ಒತ್ತಡ ಇದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಒತ್ತಡ, ಒತ್ತಾಯ ಇರುವುದು ನಿಜ. ನಿಖಿಲ್ ಕುಮಾರಸ್ವಾಮಿ ನಿಲ್ಲಬೇಕು ಅಂತ 95% ನಾಯಕರು, ಮುಖಂಡರ ಅಭಿಪ್ರಾಯವಿದೆ. ಆದರೆ‌, ನಾವು ಈಗ ಇರುವ ಸನ್ನಿವೇಶ ನೋಡಿಕೊಂಡು ನಿರ್ಧಾರ ಕೈಗೊಳ್ಳಬೇಕು. ನಾನು ಈಗ ಎನ್ ಡಿಎ ಭಾಗ. ಎನ್ ಡಿಎ ಅಭ್ಯರ್ಥಿ ಗೆಲ್ಲಬೇಕು. ಯಾರೇ ನಿಂತು ಗೆದ್ದರೂ ಅದು ಎನ್ ಡಿಎ ಗೆಲುವು, ಆ ಮೂಲಕ ಕಾಂಗ್ರೆಸ್ ವಿರೋಧಿ ಹೋರಾಟಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಹೋರಾಟಕ್ಕೆ ನಾವೂ ಕೈಜೋಡಿಸಿದ ಹಾಗಾಗುತ್ತದೆ ಎಂದು ಅವರು ಹೇಳಿದರು.

ಪದೇ ಪದೆ ಭೇಟಿಯಿಂದ ಫಲ ಸಿಗಲ್ಲ

ಚನ್ನಪಟ್ಟಣಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪದೇ ಪದೆ ಭೇಟಿ ನೀಡುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು; ಅವರು ಎಷ್ಟು ಸಲ ಭೇಟಿ ಕೊಟ್ಟರೂ ಉಪಯೋಗ ಇಲ್ಲ. ಅವರು ಈ ಕ್ಷೇತ್ರಕ್ಕೆ ಕೊಟ್ಟ ಕಾಣಿಕೆ ಏನೆಂದು ಜನರಿಗೆ ಗೊತ್ತಿದೆ. ಚುನಾವಣೆ ಬಂದಿದೆ, ಅದಕ್ಕೆ ಪದೇ ಪದೆ ಬರುತ್ತಿದ್ದಾರೆ ಅಷ್ಟೇ. ಚುನಾವಣೆ ಮುಗಿದ ಮೇಲೆ ಆ ಕಡೆ ತಲೆ ಹಾಕುವುದಿಲ್ಲ ಅವರು ಎಂದು ಹೇಳಿದರು.

Tags:    

Similar News