CET ಗೊಂದಲ | ಮರು ಪರೀಕ್ಷೆ ಇಲ್ಲ; ಪಠ್ಯೇತರ ಪ್ರಶ್ನೆ ಕೈಬಿಡಲು ತೀರ್ಮಾನ

ಸಿಇಟಿ ಪರೀಕ್ಷೆಯಲ್ಲಿ ಪಠ್ಯೇತರ ಪ್ರಶ್ನೆಗಳನ್ನು ಕೇಳಿದ್ದರಿಂದಾಗಿ ಉಂಟಾಗಿದ್ದ ಗೊಂದಲ ಮತ್ತು ಆ ಹಿನ್ನೆಲೆಯಲ್ಲಿ ಮರುಪರೀಕ್ಷೆ ನಡೆಸಬೇಕು ಎಂಬ ಒತ್ತಾಯದ ಹಿನ್ನೆಲೆಯಲ್ಲಿ ಸರ್ಕಾರ ಅಂತಿಮ ತೀರ್ಮಾನ ಪ್ರಕಟಿಸಿದೆ.

Update: 2024-04-29 06:22 GMT
ಸಿಇಟಿ ಪಠ್ಯೇತರ ಪ್ರಶ್ನೆಗಳನ್ನು ಕೈಬಿಡಲು ತೀರ್ಮಾನ
Click the Play button to listen to article

ಬೆಂಗಳೂರು: ಸಿಇಟಿ ಪರೀಕ್ಷೆಯಲ್ಲಿ ಪಠ್ಯೇತರ ಪ್ರಶ್ನೆಗಳನ್ನು ಕೇಳಿದ್ದರಿಂದಾಗಿ ಉಂಟಾಗಿದ್ದ ಗೊಂದಲ, ಮರುಪರೀಕ್ಷೆಗಳ ನಡೆಸುವ ಕುರಿತ ಊಹಾಪೋಹಗಳಿಗೆ ಸರ್ಕಾರ ತೆರೆ ಎಳೆದಿದೆ.

ಪಠ್ಯೇತರ ಪ್ರಶ್ನೆಗಳನ್ನು ಪರಿಗಣಿಸದೆ, ಪಠ್ಯದ ಆಧಾರಿತ ಪ್ರಶ್ನೆಗಳನ್ನು ಮಾತ್ರ ಪರಿಗಣಿಸಿ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) ಅಂಕಗಳನ್ನು ಮೌಲ್ಯಮಾಪನ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅಲ್ಲದೆ ಪಠ್ಯೇತರ ಪಶ್ನೆಗಳ ಗೊಂದಲದ ಹಿನ್ನೆಲೆಯಲ್ಲಿ ಮರು ಪರೀಕ್ಷೆಯನ್ನು ನಡೆಸಬೇಕು ಎಂಬ ಒತ್ತಾಯವನ್ನೂ ಸರ್ಕಾರ ತಳ್ಳಿಹಾಕಿದೆ.

ಪಠ್ಯಕ್ಕೆ ಹೊರತಾದ ಪ್ರಶ್ನೆಗಳು ಎಷ್ಟು ಸೇರಿವೆ ಎನ್ನುವ ಮಾಹಿತಿ ನೀಡಲು ವಿಷಯವಾರು ತಲಾ ಮೂವರು ತಜ್ಞರಿದ್ದ ನಾಲ್ಕು ಸಮಿತಿಗಳನ್ನು ರಚಿಸಿ ಏ.22ರಂದು ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಈ ಸಮಿತಿ ನೀಡಿದ್ದ ವರದಿಯನ್ನು ಆಧರಿಸಿ ಇಲಾಖೆ ಈ ಕ್ರಮ ತೆಗೆದುಕೊಂಡಿದೆ.

ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟು, 2023-24ರ ಪಠ್ಯಕ್ರಮದಿಂದ ಹೊರತಾದ ಪ್ರಶ್ನೆಗಳನ್ನು ಮೌಲ್ಯಮಾಪನದಿಂದ ಕೈಬಿಟ್ಟು, ಉಳಿದ ಪಠ್ಯ ಆಧಾರಿತ ಪ್ರಶ್ನೆಗಳನ್ನು ಮಾತ್ರ ಪರಿಗಣಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ನಿರ್ದೇಶನ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಶ್ರೀಕ‌ರ್ ತಿಳಿಸಿದ್ದಾರೆ.

ಕೆಇಎ ಏ.18 ಮತ್ತು 19ರಂದು ಸಿಇಟಿ ನಡೆಸಿತ್ತು. ಸುಮಾರು 3 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಪರೀಕ್ಷೆಯಲ್ಲಿ ಭೌತವಿಜ್ಞಾನ ವಿಷಯದ 9, ರಾಸಾಯನ ವಿಜ್ಞಾನ ಮತ್ತು ಗಣಿತ ವಿಷಯದ ತಲಾ 15, ಜೀವವಿಜ್ಞಾನ ವಿಷಯದ 11 ಪ್ರಶ್ನೆಗಳು ಪಠ್ಯಕ್ಕೆ ಹೊರತಾಗಿದ್ದವು ಎಂದೂ ಅವರು ತಿಳಿಸಿದ್ದಾರೆ.

ಪಿಯುಸಿ-2 ಮತ್ತು ಪಿಯುಸಿ-3 ಪರೀಕ್ಷೆಗಳು, ಕಾಮೆಡ್ ಕೆ, ಜೆಇಇ ಮುಖ್ಯಪರೀಕ್ಷೆ, ನೀಟ್ ಸೇರಿ ವಿವಿಧ ಪರೀಕ್ಷೆಗಳು ಮೇ ಮತ್ತು ಜೂನ್ ತಿಂಗಳಲ್ಲಿ ನಡೆಯಲಿವೆ. ಈ ನಡುವೆ ಸಿಇಟಿ ಮರು ಪರೀಕ್ಷೆ ನಡೆಸಿದರೆ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಹೊರೆಯ ಜೊತೆಗೆ, ವೃತ್ತಿಪರ ಕೋರ್ಸ್‌ಗಳ ಶೈಕ್ಷಣಿಕ ವೇಳಾಪಟ್ಟಿಯ ಮೇಲೂ ಪರಿಣಾಮ ಬೀರಲಿದೆ. ಹೀಗಾಗಿ ಮರು ಪರೀಕ್ಷೆ ನಡೆಸದಿರಲು ತೀರ್ಮಾನಿಸಲಾಗಿದೆ ಎಂದೂ ಅವರು ವಿವರಿಸಿದ್ದಾರೆ.

Tags:    

Similar News