ಅನರ್ಹರಿಗೆ ಸಾಲ | ಬ್ಯಾಂಕ್‌ನ ಮೂವರಿಗೆ ಶಿಕ್ಷೆ ವಿಧಿಸಿದ ಸಿಬಿಐ ನ್ಯಾಯಾಲಯ

ಅಧಿಕಾರ ದುರುಪಯೋಗ ಮಾಡಿಕೊಂಡು ಅನರ್ಹ ವ್ಯಕ್ತಿಗಳಿಗೆ ಸಾಲ ವಿತರಣೆ ಮಾಡಿ, ಬ್ಯಾಂಕ್‌ಗೆ ಕೋಟ್ಯಾಂತರ ರೂ. ನಷ್ಟ ಉಂಟು ಮಾಡಿದ್ದ ಸಿಂಡಿಕೇಟ್‌ ಬ್ಯಾಂಕಿನ ಇಬ್ಬರು ಸೇರಿ ಮೂವರಿಗೆ ಸಿಬಿಐ ನ್ಯಾಯಾಲಯ ಶಿಕ್ಷೆ ವಿಧಿಸಿದೆ.;

Update: 2024-11-24 10:37 GMT

ಸುಳ್ಳು ದಾಖಲೆ ಸೃಷ್ಟಿಸಿ ಅನರ್ಹ ವ್ಯಕ್ತಿಗಳಿಗೆ ಸಾಲ ನೀಡಿದ್ದ ಪ್ರಕರಣದಲ್ಲಿ ಸಿಂಡಿಕೇಟ್‌ ಬ್ಯಾಂಕಿನ ಇಬ್ಬರು ಸಿಬ್ಬಂದಿ ಸೇರಿ ಮೂವರಿಗೆ ಸಿಬಿಐ ನ್ಯಾಯಾಲಯ ಕನಿಷ್ಠ 1 ರಿಂದ 3 ವರ್ಷ ಜೈಲು ಶಿಕ್ಷೆ ಹಾಗೂ 52 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.

2009 ರಲ್ಲಿ ಕೃಷಿ ಹಾಗೂ ಇತರ ಸಾಲ ವಿತರಣೆಯಲ್ಲಿ 12.63 ಕೋಟಿ ರೂ. ಅವ್ಯವಹಾರ ನಡೆದಿರುವ ಆರೋಪ ಸಂಬಂಧ ಅಂದಿನ ಕೊಳ್ಳೇಗಾಲದ ಸಿಂಡಿಕೇಟ್ ವ್ಯವಸ್ಥಾಪಕ ವಿಠಲ್‌ ದಾಸ್‌ ಹಾಗೂ ಮಂಡ್ಯದ ವ್ಯವಸ್ಥಾಪಕ ಎಚ್‌.ಎಂ.ಸ್ವಾಮಿ ವಿರುದ್ಧ ಬ್ಯಾಂಕಿನ ಮುಖ್ಯ ಜಾಗೃತ ಅಧಿಕಾರಿಯು ಸಿಬಿಐಗೆ ದೂರು ನೀಡಿದ್ದರು.

ಸಿಂಡಿಕೇಟ್‌ ಬ್ಯಾಂಕಿನ ಜೈ ಕಿಸಾನ್‌ ಯೋಜನೆ ಹಾಗೂ ಇತರೆ ಸಾಲ ಯೋಜನೆಗಳಡಿ ಈ ಇಬ್ಬರು ವ್ಯವಸ್ಥಾಪಕರು ಅಕ್ರಮ ಎಸಗಿದ್ದಾರೆ. ಅಧಿಕಾರ ದುರುಪಯೋಗ ಮಾಡಿಕೊಂಡು ಅನರ್ಹ ವ್ಯಕ್ತಿಗಳಿಗೆ ಸಾಲ ವಿತರಣೆ ಮಾಡಿ, ಬ್ಯಾಂಕ್‌ಗೆ ಕೋಟ್ಯಾಂತರ ರೂ. ನಷ್ಟ ಉಂಟು ಮಾಡಿದ್ದರು. ಈ ಸಂಬಂಧ 2009 ಏಪ್ರಿಲ್‌ ತಿಂಗಳಲ್ಲಿ ಸಿಬಿಐ ಎಫ್‌ಐಆರ್‌ ದಾಖಲಿಸಿಕೊಂಡಿತ್ತು.

ಅಕ್ರಮದಲ್ಲಿ ಮತ್ತೊಬ್ಬ ಖಾಸಗಿ ವ್ಯಕ್ತಿ ಭಾಗಿಯಾಗಿರುವುದು ಸಿಬಿಐ ತನಿಖೆಯಿಂದ ತಿಳಿದುಬಂದಿತ್ತು. 2010 ರಲ್ಲಿ ಸಿಬಿಐ ಮೂವರ ವಿರುದ್ಧ ಆರೋಪಪಟ್ಟಿ ಸಲ್ಲಿಸಿ, ಈಚೆಗೆ ತೀರ್ಪು ನೀಡಿತ್ತು.

ಈಗ ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ. ಮಂಡ್ಯ ಶಾಖೆಯ ಸಿಂಡಿಕೇಟ್‌ ವ್ಯವಸ್ಥಾಪಕ ಎಚ್‌.ಎಂ.ಸ್ವಾಮಿಗೆ 3 ವರ್ಷ ಜೈಲು ಹಾಗೂ 1.50 ಲಕ್ಷ ದಂಡ ವಿಧಿಸಿದೆ. ಅದೇ ರೀತಿ ಕೊಳ್ಳೇಗಾಲ ಸಿಂಡಿಕೇಟ್‌ ಬ್ಯಾಂಕ್‌ ವ್ಯವಸ್ಥಾಪಕ ವಿಠ್ಠಲ್‌ ದಾಸ್‌ 1 ವರ್ಷ ಜೈಲು ಹಾಗೂ 50 ಸಾವಿರ ದಂಡ ವಿಧಿಸಿ ಆದೇಶಿಸಿದೆ. ಮೂರನೇ ಆರೋಪಿ ಅಸಾದುಲ್ಲಾ ಖಾನ್‌ ಗೆ 3 ವರ್ಷ ಜೈಲು ಹಾಗೂ 50 ಲಕ್ಷ ದಂಡ ವಿಧಿಸಿದೆ.

Tags:    

Similar News