ಜಾತಿ ಸಮೀಕ್ಷೆ|ಇನ್ಫೋಸಿಸ್‌ ಮುಖ್ಯಸ್ಥರೇನು ಬೃಹಸ್ಪತಿಗಳಾ: ಸಿಎಂ ಪ್ರಶ್ನೆ

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಪಾದಯಾತ್ರೆ ಸಂದರ್ಭದಲ್ಲಿ ಜನರಿಂದ ಅಭೂತಪೂರ್ವ ಪ್ರತಿಕ್ರಿಯೆ ಲಭಿಸಿದ್ದು ಗೆಲುವು ನಮ್ಮದಾಗಲಿದೆ. ಚುನಾವಣಾ ಪ್ರಚಾರಕ್ಕೆ ಕರೆದರೆ ನಾನು ಹೋಗುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Update: 2025-10-17 11:20 GMT
Click the Play button to listen to article

ನಾವು ಹಿಂದುಳಿದ ಜಾತಿಯವರಲ್ಲ, ರಾಜ್ಯ ಸರ್ಕಾರದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಮಾಹಿತಿ ನೀಡುವುದಿಲ್ಲ ಎಂದಿರುವ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ಅವರ ವಿರುದ್ಧ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದು, ಅವರೇನು ಬೃಹಸ್ಪತಿಗಳಾ ಎಂದು ಪ್ರಶ್ನಿಸಿದ್ದಾರೆ.

ಶುಕ್ರವಾರ ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ಕೇವಲ ಹಿಂದುಳಿದವರಿಗಾಗಿ ಮಾತ್ರ ಸಮೀಕ್ಷೆ ಮಾಡುತ್ತಿಲ್ಲ. ಇದು ಎಲ್ಲಾ ಸಮುದಾಯಗಳನ್ನು ಒಳಗೊಂಡಿರುವ ಸಮೀಕ್ಷೆ. ಈಗ ಶಕ್ತಿ ಯೋಜನೆಯನ್ನು ಬಡವರು , ಮೇಲ್ಜಾತಿಯವರು ಸಹ ಬಳಸುತ್ತಾರೆ. ಸಮೀಕ್ಷೆಯ ಬಗ್ಗೆ ಈಗಾಗಲೇ ಜಾಹೀರಾತುಗಳ ಮೂಲಕ ಸಚಿವರು ಹಾಗೂ ಮುಖ್ಯಮಂತ್ರಿಗಳ ಸಂದೇಶವನ್ನು ಜನರಿಗೆ ತಲುಪಿಸಲಾಗಿದೆ ಎಂದು ಹೇಳಿದ್ದಾರೆ.

ರಾಜ್ಯದ ಏಳು ಕೋಟಿ ಜನರ ಸಮೀಕ್ಷೆ

ಸಮೀಕ್ಷೆಯನ್ನು ಹಿಂದುಳಿದವರ ಸಮೀಕ್ಷೆಯೆಂದು ಭಾವಿಸುವುದು ತಪ್ಪು. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರವೂ ಜಾತಿಗಣತಿ ಮಾಡುತ್ತದೆ. ಆಗಲೂ ಇವರು ಸಹಕರಿಸುವುದಿಲ್ಲವೇ? ಅವರಿಗಿರುವ ತಪ್ಪು ಮಾಹಿತಿಯಿಂದಾಗಿ ಈ ರೀತಿ ಅಸಹಕಾರ ತೋರುತ್ತಿರಬಹುದು. ರಾಜ್ಯದಲ್ಲಿ ಸುಮಾರು 7 ಕೋಟಿ ಜನಸಂಖ್ಯೆಯಿದ್ದು, ಈ ಜನರ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆಯಾಗಿದೆ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವೆಂಬರ್ ಕ್ರಾಂತಿ ನಿರ್ಲಕ್ಷಿಸಿ

ಸರ್ಕಾರ ಎರಡುವರೆ ವರ್ಷ ಪೂರೈಸಿದ್ದು, ನವೆಂಬರ್‌ನಲ್ಲಿ ಕ್ರಾಂತಿಯಾಗಲಿದೆ ಎಂದು ಪ್ರತಿಪಕ್ಷಗಳ ನಾಯಕರು ಸೇರಿದಂತೆ ಕೆಲವು ರಾಜಕೀಯ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಸರ್ಕಾರದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಕ್ರಾಂತಿಯ ಬಗ್ಗೆ ಯಾರೇ ಹೇಳಿಕೆ ನೀಡಿದರೂ ಮಾಧ್ಯಮದವರು ಅದನ್ನು ನಿರ್ಲಕ್ಷಿಸಬೇಕು ಎಂದು ತಿಳಿಸಿದ್ದಾರೆ.

ಎಲ್ಲಾ ಸಂಘ ಸಂಸ್ಥೆಗಳ ಚಟುವಟಿಕೆಗಳಿಗೆ ನಿರ್ಬಂಧ

ಶಾಲಾ ಆವರಣದಲ್ಲಿ ಸಂಘ ಸಂಸ್ಥೆಗಳ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ಬಗ್ಗೆ 2013 ರಲ್ಲಿ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಗಳಾಗಿದ್ದಾಗ ಆದೇಶ ಹೊರಡಿಸಲಾಗಿತ್ತು. ಕೇವಲ ಆರ್‌ಎಸ್ಎಸ್ ಚಟುವಟಿಕೆಗಳಿಗೆ ಮಾತ್ರವಲ್ಲ, ಎಲ್ಲಾ ಸಂಘ ಸಂಸ್ಥೆಗಳ ಚಟುವಟಿಕೆಗಳ ಮೇಲೂ ಸರ್ಕಾರಿ ಆದೇಶ ಅನ್ವಯವಾಗುತ್ತದೆ. ಸರ್ಕಾರಿ ಶಾಲೆ, ಆಟದ ಮೈದಾನ, ಸರ್ಕಾರಿ ಸ್ಥಳಗಳು, ಉದ್ಯಾನವನಗಳು, ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ ಎಂದು ಹೇಳಿದ್ದಾರೆ.

ಬಿಹಾರ ಚುನಾವಣೆಯಲ್ಲಿ ಗೆಲುವು

ಬಿಹಾರದಲ್ಲಿ ಜನ ಬದಲಾವಣೆ ಬಯಸುತ್ತಿದ್ದು, ಚುನಾವಣೆಯಲ್ಲಿ ಇಂಡಿಯಾ ಬ್ಲಾಕ್ ಅಭೂತಪೂರ್ವ ಗೆಲುವು ಸಾಧಿಸಲಿದೆ. ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಪಾದಯಾತ್ರೆಯ ಸಂದರ್ಭದಲ್ಲಿ ಜನರಿಂದ ಅಭೂತಪೂರ್ವ ಪ್ರತಿಕ್ರಿಯೆ ಲಭಿಸಿದ್ದು, ಗೆಲುವು ನಮ್ಮದಾಗಲಿದೆ. ಚುನಾವಣಾ ಪ್ರಚಾರಕ್ಕೆ ಕರೆದರೆ ನಾನು ಹೋಗುತ್ತೇನೆ. ಯಾವ ರಾಜ್ಯದ ಚುನಾವಣೆಯ ಫಲಿತಾಂಶವೂ ಯಾವ ರಾಜ್ಯದ ಮೇಲೂ ಪರಿಣಾಮ ಬೀರುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

ಬಂಡವಾಳ ಹೂಡಿಕೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ

ರಾಜ್ಯದಲ್ಲಿ ಬಹಳಷ್ಟು ಹೂಡಿಕೆದಾರರು ಬಂಡವಾಳ ಈಗಾಗಲೇ ಹೂಡಿಕೆ ಮಾಡಿದ್ದು, ಅವರಿಗೆ ಮೂಲಭೂತ ಸೌಕರ್ಯಗಳ ಕೊರತೆಯಾಗಿರುವ ಬಗ್ಗೆ ದೂರಿದ್ದಾರೆಯೇ? ಐಫೋನ್ ತಯಾರಿಕೆಯ ದೊಡ್ಡ ಹೂಡಿಕೆ ಕರ್ನಾಟಕದಲ್ಲಿಯೇ ಆಗಿದೆ. ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ದೇಶದ ಹೂಡಿಕೆಯಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ. 

ಗುತ್ತಿಗೆದಾರರಿಂದ ಉದ್ದೇಶಪೂರ್ವಕ ಆರೋಪ

ಗುತ್ತಿಗೆದಾರರ ಸಂಘದ ಅಧ್ಯಕ್ಷರು ಕಾಂಗ್ರೆಸ್ ಸರ್ಕಾರದಲ್ಲಿಯೂ ಕಮೀಷನ್ ದಂಧೆ ನಡೆಯುತ್ತಿದೆ ಎಂದು ಉದ್ದೇಶಪೂರ್ವಕವಾಗಿ ಆರೋಪಿಸಲಾಗುತ್ತಿದೆ. ಬೇಕಾದರೆ ಗುತ್ತಿಗೆ ಮಾಡುತ್ತಿರುವವರು ನ್ಯಾಯಾಲಯದ ಮೊರೆ ಹೋಗಲಿ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಉದ್ಯೋಗ ಸಿಕ್ಕ ಬಳಿಕ ಯುವನಿಧಿ ಇಲ್ಲ

ನಾವು ನುಡಿದಂತೆ ನಡೆದಿರುವ, ನಡೆಯುತ್ತಿರುವ ಸರ್ಕಾರ. ಕೌಶಲ್ಯ ತರಬೇತಿಗೆ ಬಂದರೆ ಯುವನಿಧಿ ಭತ್ಯೆ ನಿಲ್ಲಿಸ್ತಾರೆ ಎನ್ನುವ ಬಿಜೆಪಿಯ ಸುಳ್ಳುಗಳಿಗೆ ಕಿವಿಗೊಡಬೇಡಿ. ಉದ್ಯೋಗ ಸಿಕ್ಕ ಬಳಿಕ ಮಾತ್ರ ಉದ್ಯೋಗ ಪಡೆದವರ ಯುವನಿಧಿ ನಿಲ್ಲಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

 

ಮಾತು ತಪ್ಪಿದ ಪ್ರಧಾನಿ ಮೋದಿ

ಕೊಟ್ಟ ಮಾತು ತಪ್ಪಿ ನಡೆಯಲು ನಾನು ಪ್ರಧಾನಿ ಮೋದಿ ಅಲ್ಲ. ಮೋದಿಯವರು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿ ಮಾತು ತಪ್ಪಿದರು. ಈ 11 ವರ್ಷದಲ್ಲಿ 22 ಕೋಟಿ ಉದ್ಯೋಗ ಸೃಷ್ಟಿಸಬೇಕಿದ್ದ ಮೋದಿಯವರು ಸುಳ್ಳು ಹೇಳಿದರು. ನಾವು ಅವರಂತೆ ಸುಳ್ಳು ಹೇಳುವುದಿಲ್ಲ. ಕಳೆದ ಎರಡೂವರೆ ವರ್ಷಗಳಲ್ಲಿ ನಮ್ಮ‌ ಸರ್ಕಾರ ಬೆಂಗಳೂರಿನಲ್ಲಿ ನಡೆಸಿದ ಉದ್ಯೋಗ ಮೇಳದಿಂದಾಗಿ 58,892 ಮಂದಿ ಉದ್ಯೋಗಾಕಾಂಕ್ಷಿಗಳು ಉದ್ಯೋಗ ಮೇಳದಲ್ಲಿ ಭಾಗಿಯಾಗಿ ಅನುಕೂಲ, ಅರಿವು ಪಡೆದುಕೊಂಡಿದ್ದಾರೆ. ಇವರಲ್ಲಿ 11,507 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲಾಗಿದೆ, 22,819 ಅಭ್ಯರ್ಥಿಗಳ ಹೆಸರನ್ನು ಪಟ್ಟಿ ಮಾಡಲಾಗಿದೆ. ವಿವಿಧ ಜಿಲ್ಲೆಗಳಲ್ಲಿ ನಡೆದ ಉದ್ಯೋಗ ಮೇಳದಲ್ಲಿ 1,20,563 ಅಭ್ಯರ್ಥಿಗಳು ಭಾಗವಹಿಸಿ, 24,391 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲಾಗಿದೆ, 48,232 ಅಭ್ಯರ್ಥಿಗಳ ಹೆಸರನ್ನು ಪಟ್ಟಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

35 ಸಾವಿರ ಹುದ್ದೆಗಳಿಗೆ ಅನುಮೋದನೆ

ಹಿಂದಿನ ಸರ್ಕಾರ ಉದ್ಯೋಗಾಕಾಂಕ್ಷಿಗಳನ್ನು ಸಂಪೂರ್ಣ ನಿರ್ಲಕ್ಷಿಸಿತ್ತು. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಎರಡೂವರೆ ವರ್ಷಗಳಲ್ಲಿ ಸರ್ಕಾರದಲ್ಲಿ ಖಾಲಿ ಇದ್ದ 28,000 ಉದ್ಯೋಗಗಳನ್ನು ಈಗಾಗಲೇ ಭರ್ತಿ ಮಾಡಿದೆ. 35 ಸಾವಿರ ಹುದ್ದೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ವಿವರಿಸಿದರು.

Tags:    

Similar News