Caste Census |ವಿರೋಧವಿಲ್ಲದೇ ಜಾತಿಗಣತಿ ವರದಿ ಮಂಡನೆ; ರಾಹುಲ್ ಗಾಂಧಿ ಹೆಸರು ಪ್ರಸ್ತಾಪಕ್ಕೆ ಸಚಿವರು ಗಪ್‌ಚುಪ್?
ಏ.17ರಂದು ನಡೆಯುವ ವಿಶೇಷ ಸಂಪುಟ ಸಭೆಯನ್ನು ಜಾತಿಗಣತಿ ವರದಿಯ ವಿಸ್ತೃತ ಚರ್ಚೆಗೆಂದೇ ಮೀಸಲಿರಿಸಿರುವುದು ಸಿಎಂ ಅವರ ಅಹಿಂದ ವರ್ಗಗಳ ಓಲೈಕೆ ತಂತ್ರವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.;
ಜಾತಿವಾರು ಜನಗಣತಿ ವರದಿ ಮಂಡನೆಗೆ ಈ ಹಿಂದೆ ಆಕ್ಷೇಪ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಪಕ್ಷದ ಸಚಿವರೇ ಬದಲಾದ ಬೆಳವಣಿಗೆಯಲ್ಲಿ ವರದಿ ಮಂಡನೆಗೆ ಸಹಮತ ವ್ಯಕ್ತಪಡಿಸಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡನೆಗೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೆಸರು ಪ್ರಸ್ತಾಪಿಸುತ್ತಿದ್ದಂತೆ ಯಾರೊಬ್ಬರು ವರದಿ ಮಂಡನೆಗೆ ಆಕ್ಷೇಪ ವ್ಯಕ್ತಪಡಿಸಲಿಲ್ಲ ಎಂದು ಮೂಲಗಳು ತಿಳಿಸಿವೆ.
ಸಂಪುಟ ಸಭೆಯ ಕೊನೆಯ ವಿಷಯವಾಗಿದ್ದ ಜಾತಿಗಣತಿ ವರದಿ ಕುರಿತು ಸಚಿವರ ಅಭಿಪ್ರಾಯ ಆಲಿಸಿದ ಸಿಎಂ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರೇ ಜಾತಿ ಗಣತಿ ವರದಿ ಮಂಡನೆಗೆ ಸೂಚಿಸಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಆಶ್ವಾಸನೆ ಕೂಡ ಆಗಿದೆ ಎಂದು ಹೇಳಿದರು. ಆಗ ಯಾರೊಬ್ಬರು ಮರು ಮಾತನಾಡಲಿಲ್ಲ. ಹಾಗಾಗಿ ಯಾವುದೇ ಪರ-ವಿರೋಧ ಚರ್ಚೆ ನಡೆಯದೇ ವರದಿ ಮಂಡನೆ ಮಾಡಲಾಯಿತು.
ಜಾತಿಗಣತಿ ವರದಿ ಮಂಡಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಅಹಿಂದ ವರ್ಗಗಳ ಕೆಂಗಣ್ಣಿನಿಂದ ಪಾರಾಗಲು ರಾಹುಲ್ ಗಾಂಧಿ ಹೆಸರು ಪ್ರಸ್ತಾಪಿಸಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.
ಏ.17ರಂದು ನಡೆಯುವ ವಿಶೇಷ ಸಂಪುಟ ಸಭೆಯನ್ನು ಜಾತಿಗಣತಿ ವರದಿಯ ವಿಸ್ತೃತ ಚರ್ಚೆಗೆಂದೇ ಮೀಸಲಿರಿಸಿರುವುದು ಕೂಡ ಸಿಎಂ ಅವರ ಅಹಿಂದ ವರ್ಗಗಳ ಓಲೈಕೆ ತಂತ್ರವಾಗಿದೆ ಎನ್ನಲಾಗಿದೆ.
ಏ.17 ರೊಳಗೆ ಸಂಪುಟದ ಸಹೋದ್ಯೋಗಿಗಳಿಗೆ ಜಾತಿಗಣತಿ ವರದಿ ಸಾರಾಂಶವನ್ನು ಕಳುಹಿಸಿ, ಯಾವುದೇ ಆಕ್ಷೇಪ ಸಲ್ಲಿಸದಂತೆ ಸೂಚಿಸುವ ಸಾಧ್ಯತೆ ಇದೆ. ಆದರೆ, ವಿಶೇಷ ಸಂಪುಟ ಸಭೆಯಲ್ಲಿ ನಡೆಯುವ ಚರ್ಚೆ ಆಧಾರದ ಮೇಲೆ ವರದಿ ಪರಿಶೀಲನೆಗೆ ಸಂಪುಟ ಉಪ ಸಮಿತಿ ರಚಿಸಿ ಮತ್ತೆ ಒಂದಷ್ಟು ದಿನ ವರದಿ ಜಾರಿಯನ್ನು ಮುಂದೂಡುವುದು ಸಿಎಂ ಮುಂದಿರುವ ತಂತ್ರವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಕಳೆದ ವರ್ಷ ಸಲ್ಲಿಸಿದ್ದ ಜಾತಿಗಣತಿ ವರದಿಯನ್ನು ಖಜಾನೆಯಲ್ಲಿ ಇರಿಸಲಾಗಿತ್ತು. ಮುಚ್ಚಿದ ಲಕೋಟೆಯನ್ನು ಸಚಿವ ಸಂಪುಟದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಅವರು ತೆರೆದರು. ಬಳಿಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಸಂಜಯ ಶೆಟ್ಟೆಣ್ಣನವರ ಅವರು ಸಭೆಯಲ್ಲಿ ವರದಿಯನ್ನು ಓದಿದರು. ಆ ಬಳಿಕ ವರದಿಯನ್ನು ಅಂಗೀಕರಿಸಿ, ವಿಸ್ತೃತ ಚರ್ಚೆಗಾಗಿ ಏ.17 ರಂದು ವಿಶೇಷ ಸಂಪುಟ ಸಭೆ ಕರೆಯುವುದಾಗಿ ಸಿಎಂ ಘೋಷಿಸಿದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ 2024 ಫೆ.2 ರಂದು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015ರ ದತ್ತಾಂಶಗಳ ಅಧ್ಯಯನ ವರದಿ 2024 ನ್ನು ಸಲ್ಲಿಸಿತ್ತು. ಈಗ ಆ ವರದಿಯನ್ನು ತೆರೆದು ಪರಿಶೀಲಿಸಲು ಸಚಿವ ಸಂಪುಟದ ಮುಂದೆ ಮಂಡಿಸಲಾಯಿತು.