Caste Census | ನಮ್ಮ ಮನೆ, ತಾತನ ಮನೆಗೇ ಗಣತಿಗೆ ಬಂದಿರಲಿಲ್ಲ; ನಿಖಿಲ್‌ ಕುಮಾರಸ್ವಾಮಿ

ಜಾತಿಗಣತಿ ವರದಿಯಲ್ಲಿ ಏನಿದೆ ಎನ್ನುವುದನ್ನು ಬಹಿರಂಗಪಡಿಸಬೇಕು. ಆದಾದ ನಂತರ ನಮ್ಮ ಪಕ್ಷದ ನಿರ್ಧಾರ ತಿಳಿಸುತ್ತೇವೆ. ಒಂದಂತೂ ಸತ್ಯ, ಈ ಜಾತಿ ಜನಗಣತಿ ವೈಜ್ಞಾನಿಕವಾಗಿ ನಡೆದಿಲ್ಲ. ನಮ್ಮ ಮನೆಗೆ ಗಣತಿದಾರರು ಬಂದಿರಲಿಲ್ಲ ಎಂದು ನಿಖಿಲ್‌ ಕುಮಾರಸ್ವಾಮಿ ಆರೋಪಿಸಿದ್ದಾರೆ.;

Update: 2025-04-11 14:43 GMT

ಜಾತಿ ಜನಗಣತಿಯನ್ನು ಕ್ರಮಬದ್ಧವಾಗಿ ಮತ್ತು ವೈಜ್ಞಾನಿಕವಾಗಿ ನಡೆಸಿಲ್ಲ. ನಮ್ಮ ಮನೆಗೆ, ನಮ್ಮ ಅಜ್ಜನ ಮನೆಗೆ ಯಾರೂ ಬಂದು ಗಣತಿ ಮಾಡಿಲ್ಲ ಎಂದ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಆರೋಪಿಸಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಾಳೆ ನಡೆಯುವ ಪ್ರತಿಭಟನೆ ಹಿನ್ನೆಲೆಯಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದರು. 

ಜಾತಿಗಣತಿ ವರದಿಯಲ್ಲಿ ಏನಿದೆ ಎನ್ನುವುದನ್ನು ಬಹಿರಂಗಪಡಿಸಬೇಕು. ಆದಾದ ನಂತರ ನಮ್ಮ ಪಕ್ಷದ ನಿರ್ಧಾರ ತಿಳಿಸುತ್ತೇವೆ. ಒಂದಂತೂ ಸತ್ಯ, ಈ ಜಾತಿ ಜನಗಣತಿ ವೈಜ್ಞಾನಿಕವಾಗಿ ನಡೆದಿಲ್ಲ. ನಮ್ಮ ಮನೆಗೆ ಗಣತಿದಾರರು ಬಂದಿರಲಿಲ್ಲ ಅವರು ಹೇಳಿದ್ದಾರೆ.

ರಾಜಕೀಯ ಸಂಕಷ್ಟ ಕಾಲ ಬಂದಾಗ ಕೆಲವರಿಗೆ ಇಂಥ ವಿಚಾರಗಳು ನೆನಪಿಗೆ ಬರುತ್ತವೆ. ಐದು ವರ್ಷ ಮುಖ್ಯಮಂತ್ರಿ, ಎರಡನೇ ಬಾರಿ ಸಿಎಂ ಆಗಿ ಎರಡು ವರ್ಷ ಆಗಿದೆ. ಹಣಕಾಸು ಸಚಿವರು, ಉಪ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಇಷ್ಟೆಲ್ಲಾ ಆಗಿದ್ದರೂ ಸಿದ್ದರಾಮಯ್ಯ ಅವರಿಗೆ ಅಹಿಂದ ಜನರನ್ನು ಉದ್ಧಾರ ಮಾಡಲು ಆಗಿಲ್ಲ. ರಾಜಕೀಯ ಗಿಮಿಕ್ ಮಾಡಿಕೊಂಡು ತಿರುಗಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕಮಿಷನ್‌ಗೆ ಲಿಮಿಟೆಷನ್ ಇಲ್ಲ

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ನಾಯಕರು ಬಿಜೆಪಿ ಸರ್ಕಾರದ ವಿರುದ್ಧ ಪೇ ಸಿಎಂ ಅಭಿಯಾನ ಮಾಡಿದ್ದರು. ಶೇ 40 ಕಮಿಷನ್ ಆರೋಪ ಮಾಡಿದ್ದರು. ನಮಗೊಂದು ಅವಕಾಶ ಕೊಡಿ, ನಾವು ಸಂಪೂರ್ಣವಾಗಿ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ ಎಂದು ಹೇಳಿದ್ದರು. ಈಗ ಕಾಂಗ್ರೆಸ್‌ ಪಕ್ಷವೇ ಅಧಿಕಾರಕ್ಕೆ ಬಂದಿದೆ. ಪರ್ಸೆಂಟೇಜ್ ಅನ್ನುವುದಕ್ಕೆ ಲಿಮಿಟೆಷನ್ ಇಲ್ಲದಾಗಿದೆ ಎಂದು ದೂರಿದ್ದಾರೆ. 

ರಾಯರೆಡ್ಡಿಗೆ ಅಭಿನಂದನೆ ಸಲ್ಲಿಸುತ್ತೇನೆ

ಬಸವರಾಜ ರಾಯರೆಡ್ಡಿ ಅವರು ಸರ್ಕಾರದ ಭ್ರಷ್ಟಾಚಾರದ ವಿಚಾರವಾಗಿ ಮಾತನಾಡಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಭ್ರಷ್ಟಾಚಾರ ಅನೇಕ ಸರ್ಕಾರಗಳಲ್ಲಿ ಇದೆ. ಇಲ್ಲ ಅಂತ ಹೇಳೋದಿಲ್ಲ. ಆದರೆ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಅಂತ ರಾಯರೆಡ್ಡಿ ಅವರೇ ತಿಳಿಸಿದ್ದಾರೆ. ಅವರು ಹೇಳಿರುವುದನ್ನು ಗೌರವಿಸುತ್ತೇವೆ. ಆ ವ್ಯವಸ್ಥೆಯಿಂದ ಹೊರಬರುವುದಕ್ಕೆ ಈ ಹೋರಾಟ ಮಾಡುತ್ತಿದ್ದೇವೆ. ಬಿಜೆಪಿ ಜೆಡಿಎಸ್ ಸರ್ಕಾರದ ವಿಚಾರವಾಗಿ ಅವರು ಮಾತನಾಡಿರುವುದು ಕೇವಲ ರಾಜಕೀಯ ಅಷ್ಟೇ ಎಂದು ತಿಳಿಸಿದ್ದಾರೆ.

Tags:    

Similar News