Caste Census | ಜಾತಿ ಗಣತಿ ಅವಲೋಕನಕ್ಕೆ ಒಕ್ಕಲಿಗ ಶಾಸಕ, ಸಚಿವರ ಸಭೆ: ಡಿಕೆಶಿ

ಒಕ್ಕಲಿಗ ಶಾಸಕರ, ಸಚಿವರ ಸಭೆ ಕರೆದಿರುವುದು ಜಾತಿ ಗಣತಿ ವಿವರಗಳ ಬಗ್ಗೆ ಚರ್ಚಿಸಿ ಅವಲೋಕಿಸಲು ಸಭೆ ಕರೆದಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.;

Update: 2025-04-15 12:55 GMT

ಒಕ್ಕಲಿಗ ಶಾಸಕರ, ಸಚಿವರ ಸಭೆ ಕರೆದಿರುವುದು ಜಾತಿ ಗಣತಿ ವಿವರಗಳ ಬಗ್ಗೆ ಚರ್ಚಿಸಿ ಅವಲೋಕಿಸಲು ಸಭೆ ಕರೆದಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಅವರು, "ನಾನು ಈ ಸಮಾಜದ ಪ್ರತಿನಿಧಿಯಾಗಿ, ಸಚಿವ ಸಂಪುಟ ಸಭೆಯಲ್ಲಿ ನಮ್ಮ ವಿಚಾರವನ್ನು ಹೇಗೆ ಮಂಡಿಸಬೇಕು, ಯಾವ ರೀತಿ ಸಲಹೆ ನೀಡಬೇಕು ಎಂದು ಚರ್ಚೆ ಮಾಡಬೇಕಲ್ಲವೇ? ಏಕಾಏಕಿ ನಾನೊಬ್ಬನೇ ಸರ್ವಜ್ಞನಲ್ಲ. ದೊಡ್ಡ ಪಂಡಿತನೂ ಅಲ್ಲ. ನಾನು ಹಳ್ಳಿಯಿಂದ ಬಂದು ಬೆಂಗಳೂರು ಸೇರಿರುವವನು. ಹಿರಿಯರು, ಸ್ನೇಹಿತರು, ಶಾಸಕರ ಅನುಭವ, ತಮ್ಮ ಕ್ಷೇತ್ರಗಳಲ್ಲಿ ಜನ ಏನು ಹೇಳುತ್ತಿದ್ದಾರೆ, ಮಾಧ್ಯಮಗಳು ನೀಡಿರುವ ವರದಿ ಎಲ್ಲವನ್ನು ಚರ್ಚೆ ಮಾಡಿ ಅವಲೋಕಿಸಿ ಚರ್ಚೆ ಮಾಡಬೇಕಿದೆ. ನಾನು ಈ ವಿಚಾರವನ್ನು ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ” ಎಂದು ತಿಳಿಸಿದರು.

ಜಾತಿಗಣತಿ ವಿಚಾರವಾಗಿ ನಿರ್ಮಲಾನಂದ ಶ್ರೀಗಳ ಜತೆ ಚರ್ಚೆ ಮಾಡಲಾಗಿದೆಯೇ ಎಂದು ಕೇಳಿದಾಗ,  ಉತ್ತರಿಸಲು ನಿರಾಕರಿಸಿದರು.  “ಸರ್ವರಿಗೂ ಸಮಬಾಳು, ಸಮಪಾಲು ಎಂಬ ಬಸವಣ್ಣನವರ ಆಚಾರ ವಿಚಾರ ನಮ್ಮ ಪಕ್ಷದಲ್ಲಿ ಬೆರೆತಿದೆ. ನಾವು ಸಂವಿಧಾನದಲ್ಲಿ ನಂಬಿಕೆ ಇಟ್ಟುಕೊಂಡಿದ್ದೇವೆ. ಯಾರಿಗೆ ನ್ಯಾಯ ಒದಗಿಸಿಕೊಡಬೇಕೋ ಅವರಿಗೆ ನ್ಯಾಯ ಒದಗಿಸಿಕೊಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಕುಮಾರಸ್ವಾಮಿಗೆ ಉತ್ತರ

ಇದು ಜಾತಿಗಣತಿಯೋ ಅಥವಾ ದ್ವೇಷ ಗಣತಿಯೋ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಮಾಡಿರುವ ಟ್ವೀಟ್ ಬಗ್ಗೆ ಕೇಳಿದಾಗ, “ಅವರು ಬಹಳ ದೊಡ್ಡವರು. ದೊಡ್ಡ ಮಾತುಗಳನ್ನು ಆಡುತ್ತಾರೆ. ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾತನಾಡುತ್ತಾರೆ. ನಮ್ಮ ಪಕ್ಷ ತನ್ನದೇ ಆದ ತತ್ವ ಸಿದ್ಧಾಂತಗಳನ್ನು ಹೊಂದಿದ್ದು, ಪಕ್ಷದಲ್ಲಿ ಅನೇಕ ತೀರ್ಮಾನ ಮಾಡಲಾಗಿದ್ದು, ಕಾನೂನಿನಲ್ಲಿ ಯಾರು ಯಾವ ಕೆಲಸ ಮಾಡಬೇಕು ಎಂದು ಇದೆ. ಅದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಅನೇಕ ತೀರ್ಮಾನ ಮಾಡಲಿದೆ” ಎಂದು ತಿರುಗೇಟು ನೀಡಿದರು.

Tags:    

Similar News