Caste Census | ಜಾತಿ ಗಣತಿ: ರಾಜ್ಯ ಸರ್ಕಾರಕ್ಕೆ ನಿಲುವು ತಿಳಿಸಲು ಹೈಕೋರ್ಟ್‌ ನಿರ್ದೇಶನ

“10 ವರ್ಷಗಳಷ್ಟು ಹಳೆಯದಾದ ಜಾತಿ ಗಣತಿ ಜಾರಿಗೆ ರಾಜ್ಯ ಸರ್ಕಾರ ಅವಸರ ಮಾಡುತ್ತಿದೆ. ಆದರೆ, ವಾಸ್ತವವಾಗಿ ಜಾತಿ ಗಣತಿ ಮಾಡುವ ಅಧಿಕಾರವೇ ರಾಜ್ಯ ಸರ್ಕಾರಕ್ಕೆ ಇಲ್ಲ” ಎಂದು ಅರ್ಜಿದಾರ ಶಿವರಾಜ್‌ ಕಣಶೆಟ್ಟಿ ಮತ್ತಿತರರು ಹೈಕೋರ್ಟ್‌ ಮೊರೆ ಹೋಗಿದ್ದರು.;

Update: 2025-04-23 15:12 GMT

ರಾಜ್ಯದ ರಾಜಕೀಯ ಮತ್ತು ಸಾಮಾಜಿಕ ವಲಯಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಜಾತಿ ಗಣತಿ ವರದಿ ಕುರಿತು ರಾಜ್ಯ ಸರ್ಕಾರ ಮುಂದಿನ ವಿಚಾರಣೆ ವೇಳೆಗೆ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ರಾಜ್ಯದಲ್ಲಿ‌ ಜಾತಿ ಗಣತಿ ಪ್ರಶ್ನಿಸಿ ಶಿವರಾಜ್‌ ಕಣಶೆಟ್ಟಿ ಮತ್ತಿತರರು ಹಾಗೂ ಜಾತಿ ಗಣತಿ ವರದಿ ಜಾರಿ ಕೋರಿ ಮುಖ್ಯಮಂತ್ರಿ ಚಂದ್ರ ಮತ್ತಿತರರು ಸಲ್ಲಿಸಿರುವ ಪ್ರತ್ಯೇಕ ಐದು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ವಿಭಾಗೀಯ ಪೀಠ ನಡೆಸಿತು.

ಅರ್ಜಿದಾರರ ಪರ ವಕೀಲರು “10 ವರ್ಷಗಳಷ್ಟು ಹಳೆಯದಾದ ಜಾತಿ ಗಣತಿ ಜಾರಿಗೆ ರಾಜ್ಯ ಸರ್ಕಾರ ಅವಸರ ಮಾಡುತ್ತಿದೆ. ಆದರೆ, ವಾಸ್ತವವಾಗಿ ಜಾತಿ ಗಣತಿ ಮಾಡುವ ಅಧಿಕಾರವೇ ರಾಜ್ಯ ಸರ್ಕಾರಕ್ಕೆ ಇಲ್ಲ” ಎಂದರು.

“ಗಣತಿ ಸಂಬಂಧ ಸುಪ್ರೀಂ ಕೋರ್ಟ್‌ಗೆ ನೀಡಿದ್ದ ಮುಚ್ಚಳಿಕೆಯನ್ನೂ ಸರ್ಕಾರ ಉಲ್ಲಂಘಿಸುತ್ತಿದೆ. ರಾಜ್ಯ ಸರ್ಕಾರ 2002ರ ಮಾರ್ಚ್‌ 30ರಂದು ರೂಪಿಸಿದ ಮೀಸಲಾತಿಯನ್ನು ಮುಂದುವರಿಸುವುದಾಗಿ ಸುಪ್ರೀಂ ಕೋರ್ಟ್‌ಗೆ ವಾಗ್ದಾನ ನೀಡಿತ್ತು. ಇದೀಗ ಅವೈಜ್ಞಾನಿಕವಾಗಿರುವ ಜಾತಿಗಣತಿ ಆಧರಿಸಿ ಮೀಸಲಾತಿ ಮರುರೂಪಿಸಲು ಮುಂದಾಗಿದೆ” ಎಂದು ಆಕ್ಷೇಪಿಸಿದರು.

“ಜಾತಿಗಣತಿ ಕುರಿತು ನಿರ್ಧಾರ ಕೈಗೊಳ್ಳುವ ಕುರಿತು ಇದೇ 17ರಂದು ಸಚಿವ ಸಂಪುಟ ಸಭೆ ಚರ್ಚೆ ನಡೆಸಿದೆ. ಆದರೆ, ಆ ಸಭೆಯಲ್ಲಿನಿರ್ಧಾರ ಕೈಗೊಳ್ಳದೆ ಮೇ 2ರಂದು ಆ ಬಗ್ಗೆ ತೀರ್ಮಾನಿಸಲು ವಿಶೇಷ ಸಂಪುಟ ಸಭೆ ಕರೆಯಲಾಗಿದೆ. ಹೀಗಾಗಿ, ಅಧಿಕಾರವಿಲ್ಲದಿದ್ದರೂ ನಡೆಸಿರುವ ಜಾತಿ ಗಣತಿ ವರದಿಯನ್ನು ತಡೆ ಹಿಡಿಯುವಂತೆ ಮತ್ತು ಅದನ್ನು ಜಾರಿಗೊಳಿಸದಂತೆ ಆದೇಶ ಹೊರಡಿಸಬೇಕು,’’ ಎಂದು ಕೋರಿದರು.

ಆಗ ಪೀಠವು ಜಾತಿ ಗಣತಿ ಕುರಿತು ಸರ್ಕಾರ ಮುಂದಿನ ವಿಚಾರಣೆ ವೇಳೆಗೆ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಸೂಚಿಸಿ, ವಿಚಾರಣೆಯನ್ನು ಏಪ್ರಿಲ್‌ 24ಕ್ಕೆ ನಿಗದಿಪಡಿಸಿತು.

Tags:    

Similar News