ಜಾತಿಗಣತಿ 2.0 |ತೆಲಂಗಾಣದ ಸಮೀಕ್ಷೆ ಮಾದರಿ ಅಧ್ಯಯನಕ್ಕೆ ಉನ್ನತ‌‌ ಮಟ್ಟದ ಸಮಿತಿ; ರಾಜ್ಯದ ಮಾದರಿಗಿಂತ ಹೇಗೆ ಭಿನ್ನ?

ವೈಜ್ಞಾನಿಕ ಹಾಗೂ ಕರಾರುವಕ್ಕಾದ ಸಮೀಕ್ಷೆ ನಡೆಸಲು ತೀರ್ಮಾನಿಸಿರುವ ಹಿಂದುಳಿದ ವರ್ಗಗಳ ಆಯೋಗವು ಅದಕ್ಕಾಗಿ ದೇಶ-ವಿದೇಶದ ಪರಿಣತರ ಸಹಕಾರ, ನೀತಿ-ನಿರೂಪಣೆ ಸಂಸ್ಥೆಗಳ ನೆರವಿನ ಮೊರೆ ಹೋಗಿದೆ.;

Update: 2025-07-29 05:21 GMT

ರಾಜ್ಯದಲ್ಲಿ ಸೆ.22ರಿಂದ ಹಿಂದುಳಿದ ವರ್ಗಗಳ ಆಯೋಗದ ನೇತೃತ್ವದಲ್ಲಿ ನಡೆಯಲಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಅರ್ಥಾತ್ ಜಾತಿವಾರು ಜನಗಣತಿಗೆ ಭರದ ಸಿದ್ಧತೆಗಳು ನಡೆಯುತ್ತಿವೆ.

ವೈಜ್ಞಾನಿಕ ಹಾಗೂ ಕರಾರುವಕ್ಕಾದ ಸಮೀಕ್ಷೆ ನಡೆಸಲು ತೀರ್ಮಾನಿಸಿರುವ ಹಿಂದುಳಿದ ವರ್ಗಗಳ ಆಯೋಗವು ಅದಕ್ಕಾಗಿ ದೇಶ-ವಿದೇಶದ ಪರಿಣತರ ಸಹಕಾರ, ನೀತಿ-ನಿರೂಪಣೆ ಸಂಸ್ಥೆಗಳ ನೆರವು, ಬೇರೆ ರಾಜ್ಯಗಳಲ್ಲಿ ಕೈಗೊಂಡಿರುವ ಜಾತಿಗಣತಿ ಸಮೀಕ್ಷೆಯ‌ ಮಾದರಿ ಹಾಗೂ ವಿಶ್ವದರ್ಜೆಯ ಸಮೀಕ್ಷಾ ವ್ಯವಸ್ಥೆಗಳ ಮೊರೆ ಹೋಗಿದೆ.  

ತೆಲಂಗಾಣಕ್ಕೆ ಆಯೋಗದ ತಂಡ

ಹಿಂದುಳಿದ ವರ್ಗಗಳ ಆಯೋಗದ ಕಾರ್ಯದರ್ಶಿ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ತೆಲಂಗಾಣಕ್ಕೆ ಭೇಟಿ ನೀಡಲಿದ್ದು, ಅಲ್ಲಿನ ಜಾತಿಗಣತಿ ಸಮೀಕ್ಷೆಯ ಮಾದರಿ ಕುರಿತಂತೆ ಅಧ್ಯಯನ ನಡೆಸಲಿದೆ.‌

ನಿಯೋಗವು ಎರಡು ದಿನಗಳ ಕಾಲ ತೆಲಂಗಾಣದಲ್ಲಿ ವಾಸ್ತವ್ಯ ಹೂಡಲಿದ್ದು, ಅಲ್ಲಿ ನಡೆಸಿರುವ ಸಮೀಕ್ಷೆ ಕುರಿತಂತೆ ತೆಲಂಗಾಣ ಯೋಜನಾ ಆಯೋಗದ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಲಿದೆ.

ತೆಲಂಗಾಣದಲ್ಲಿ ಜಾತಿವಾರು ಜನಗಣತಿಯನ್ನು ಕರಾರುವಕ್ಕಾಗಿ ನಡೆಸಲು ಅನುಸರಿಸಿದ ಮಾನದಂಡಗಳು, ಕಾರ್ಯ ಯೋಜನೆ, ಅನುಷ್ಠಾನ, ತಂತ್ರಜ್ಞಾನಗಳ ಬಳಕೆ ಸೇರಿದಂತೆ ಹಲವು ಅಂಶಗಳ ಮಾಹಿತಿ ಸಂಗ್ರಹಿಸಲಿದೆ ಎಂದು ಮೂಲಗಳು ತಿಳಿಸಿವೆ.

ಸಮೀಕ್ಷೆಗೆ 600 ಕೋಟಿ ವೆಚ್ಚದ ಬಜೆಟ್ ಸಲ್ಲಿಕೆ

ಜಾತಿಗಣತಿ ಸಮೀಕ್ಷೆಯನ್ನು ಒಟ್ಟು 600 ಕೋಟಿ ರೂ. ವೆಚ್ಷದಲ್ಲಿ ತಯಾರಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ರಾಜ್ಯ ಹಿಂದುಳಿದ ವರ್ಗಗಳ ಆಯೋಗ 600 ಕೋಟಿ ಸಮೀಕ್ಷೆ ವೆಚ್ಚದ ಬಜೆಟ್ ಅನ್ನು ಸರ್ಕಾರಕ್ಕೆ ಸಲ್ಲಿಸಿದೆ.

ಗಣತಿಯಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಯ ಭತ್ಯೆ ಕಳೆದ ಬಾರಿಗಿಂತ ಹೆಚ್ಚಳವಾಗಲಿದೆ. ಸಮೀಕ್ಷೆಯಲ್ಲಿ ತಂತ್ರಜ್ಞಾನ ಬಳಕೆ, ಪರಿಣತರ ನೆರವು ಇತ್ಯಾದಿ ವೆಚ್ಚಗಳನ್ನು ಭರಿಸಲು ತೀರ್ಮಾನಿಸಿದೆ.

ಈ ಹಿಂದೆ ಕಾಂತರಾಜ್ ಹಾಗೂ ಜಯಪ್ರಕಾಶ್ ಹೆಗ್ಡೆ ನೇತೃತ್ವದಲ್ಲಿ ನಡೆದ ಸಾಮಾಜಿಕ ಹಾಗೂ ಶೈಕ್ಷಣಿಕ‌ ಸಮೀಕ್ಷೆಗೆ ರಾಜ್ಯ ಸರ್ಕಾರ 186 ಕೋಟಿ ರೂ. ಖರ್ಚು ಮಾಡಿತ್ತು. ಆದರೆ, ವರದಿ ಕೈ ಬಿಡುವ ಮೂಲಕ ಸಾರ್ವಜನಿಕ ತೆರಿಗೆ ಹಣವನ್ನು ವ್ಯರ್ಥ ಮಾಡಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಹೊಸ ಸಮೀಕ್ಷೆಗಾಗಿ 600 ಕೋಟಿಯ ಬಜೆಟ್ ಸಲ್ಲಿಸಿರುವುದು ಹೊಸ ಚರ್ಚೆಗೆ ಆಸ್ಪದ ನೀಡಿದೆ.

ಕರ್ನಾಟಕದ ಮಾದರಿ ಮೂಲೆಗುಂಪು

ಕರ್ನಾಟಕ ಮಾದರಿ ಹೆಚ್ಚು ವೈಜ್ಞಾನಿಕ ಎಂದು ಬಿಂಬಿಸಿದ್ದ ರಾಜ್ಯ ಸರ್ಕಾರವೇ ಈಗ ವರದಿಯ‌ನ್ನು ಕಸದ ಬುಟ್ಟಿಗೆ ಎಸೆದಿದೆ. ಈ ಹಿಂದೆ ಸಿಎಂ‌ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರ ಜಾತಿಗಣತಿ ನಡೆಸಲು ನಿರ್ಧಾರಕ್ಕೆ ಪ್ರತಿಕ್ರಿಯಿಸಿ, ಕರ್ನಾಟಕದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಮಾದರಿ ಅಳವಡಿಸಿಕೊಳ್ಳಲು ಸಲಹೆ ನೀಡಿದ್ದರು. ಆದರೆ, ಇದೀಗ ತಾವೇ ತೆಲಂಗಾಣ ಮಾದರಿ ಅನುಸರಿಸಲು‌ ಮುಂದಾಗಿರುವುದು ಸರ್ಕಾರಕ್ಕೆ ಮುಜುಗರ ಸೃಷ್ಟಿಸಿದೆ.

ತೆಲಂಗಾಣ ಮಾದರಿಯನ್ನು ವೈಜ್ಞಾನಿಕ‌ ಎನ್ನುವುದಾದರೆ ಕರೆಯುವುದಾದರೆ ರಾಜ್ಯದ ಸಾಮಾಜಿಕ‌ ಹಾಗೂ ಶೈಕ್ಷಣಿಕ ಸಮೀಕ್ಷೆ ವರದಿ ಏನು ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಕಾಂತರಾಜು ಆಯೋಗದ ವರದಿ ಪ್ರಬಲ ಜಾತಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಹೊಸದಾಗಿ ಸಮೀಕ್ಷೆ ನಡೆಸುವಂತೆ ಸಿಎಂ ಹಾಗೂ ಡಿಸಿಎಂ ಅವರಿಗೆ ಸೂಚಿಸಿತ್ತು. ಅಲ್ಲದೇ ಕಾಂಗ್ರೆಸ್ಸಿನ ಒಬಿಸಿ ಸಲಹಾ ಮಂಡಳಿ ಕೂಡ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಸಿದ ಮೊದಲ ಸಭೆಯಲ್ಲಿ ತೆಲಂಗಾಣ ಮಾದರಿಯ ಜಾತಿಗಣತಿ ಅನುಸರಿಸಲು ನಿರ್ಣಯ ತೆಗೆದುಕೊಂಡಿತ್ತು.

ತೆಲಂಗಾಣದ ಸಮೀಕ್ಷೆ ಏನು, ಎತ್ತ?

ದೇಶದ ಎಲ್ಲಾ ರಾಜ್ಯಗಳಲ್ಲಿ ಜಾತಿಗಣತಿ ಮಾಡುವ ಕುರಿತು ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದ ರಾಹುಲ್ ಗಾಂಧಿ ಅವರು ಪೂರ್ಣ ಪ್ರಮಾಣದ ಜಾತಿಗಣತಿಯನ್ನು ತೆಲಂಗಾಣದಲ್ಲಿ ನಡೆಯುವಂತೆ ನೋಡಿಕೊಂಡಿದ್ದರು. "ಜಿತ್ನಿ ಅಬಾದಿ, ಉತ್ನಾ ಹಕ್" ( ಜನಸಂಖ್ಯೆಗೆ ಅನುಗುಣವಾಗಿ ಹಕ್ಕುಗಳು) ಅಭಿಯಾನದಂತೆ ಎಲ್ಲಾ ರಾಜ್ಯಗಳಲ್ಲಿ ಜಾತಿಗಣತಿ ನಡೆಸುವುದಾಗಿ ಆಶ್ವಾಸನೆ ನೀಡಿತ್ತು.

ಅದರಂತೆ ತೆಲಂಗಾಣದಲ್ಲಿ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ಅಧ್ಯಕ್ಷತೆಯಲ್ಲಿ ಪ್ರೊ. ಕಾಂಚ ಇಲಯ್ಯ, ಪ್ರೊ. ಶಾಂತಾ ಸಿನ್ಹಾ ಮತ್ತು ಫ್ರೆಂಚ್ ಅರ್ಥಶಾಸ್ತ್ರಜ್ಞ ಥಾಮಸ್ ಪಿಕೆಟ್ಟಿ ಅವರಂತಹ ಸದಸ್ಯರನ್ನು ಒಳಗೊಂಡ ಸ್ವತಂತ್ರ ತಜ್ಞರ ಕಾರ್ಯನಿರತ ಗುಂಪಿನ ಮೂಲಕ (IEWG) ಸಮೀಕ್ಷೆ ನಡೆಸಿತ್ತು. ಸಮೀಕ್ಷೆಯ ಒಟ್ಟಾರೆ ಹೊಣೆಯನ್ನು ಯೋಜನಾ ಆಯೋಗ ವಹಿಸಿಕೊಂಡಿತ್ತು.

ತೆಲಂಗಾಣದ ಜಾತಿ ಸಮೀಕ್ಷೆ ( SEEEPC) 2024 ನವೆಂಬರ್ 6 ರಂದು ಪ್ರಾರಂಭಿಸಲಾಯಿತು. 2025 ಜುಲೈ 19 ರಂದು SEEEPC ಸಮೀಕ್ಷೆಯ ಕುರಿತು 300 ಪುಟಗಳ ಸಾಮಾಜಿಕ-ಆರ್ಥಿಕ, ಶಿಕ್ಷಣ, ಉದ್ಯೋಗ, ರಾಜಕೀಯ ಮತ್ತು ಜಾತಿ ಸಮೀಕ್ಷೆ ವರದಿಯನ್ನು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರಿಗೆ ಸಲ್ಲಿಸಿತ್ತು. ಇಡೀ ಸಮೀಕ್ಷೆಗೆ ಮೂರು ತಿಂಗಳ ಕಾಲಾವಕಾಶ ಇದ್ದರೂ ಕೇವಲ 50 ದಿನದಲ್ಲಿ ಗಣತಿ ನಡೆಸಲಾಗಿತ್ತು. 

ತೆಲಂಗಾಣದ ಒಟ್ಟು 1.12 ಕೋಟಿ ಮನೆಗಳಲ್ಲಿ 3.55 ಕೋಟಿ ವ್ಯಕ್ತಿಗಳನ್ನು ಸಮೀಕ್ಷೆಗೆ ಒಳಪಡಿಸುವ ಮೂಲಕ ಶೇ. 96.9 ರಷ್ಟು ಗಣತಿ ಸಾಧಿಸಿತ್ತು. 1,03,889 ಕ್ಕೂ ಹೆಚ್ಚು ಗಣತಿದಾರರು ಮತ್ತು ಮೇಲ್ವಿಚಾರಕರೊಂದಿಗೆ ಎರಡು ಹಂತಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು. ತೆಲಂಗಾಣ ಜಾತಿ ಸಮೀಕ್ಷೆಯನ್ನು ಭಾರತದ ಮೊದಲ ಸಮಗ್ರ ಜಾತಿ ಆಧಾರಿತ ಸಮೀಕ್ಷೆ ಎಂದು ಪರಿಗಣಿಸಲಾಗಿದೆ.

ತೆಲಂಗಾಣ ಸಮೀಕ್ಷೆ ವೈಶಿಷ್ಟ್ಯವೇನು?

ತೆಲಂಗಾಣದಲ್ಲಿ ಜಾತಿಗಣತಿಗೆ ಪ್ರಬಲ ಜಾತಿಗಳಾದ ರೆಡ್ಡಿ, ಕಮ್ಮ, ಕಾಪು, ವೇಲಮ ಇತ್ಯಾದಿ ಜಾತಿಗಳು ಹಾಗೂ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ಆದಾಗ್ಯೂ, ಜಾತಿವಾರು ಜನಗಣತಿ ನಡೆಸುವ ಮೂಲಕ ಅಲ್ಲಿನ ಕಾಂಗ್ರೆಸ್ ಸರ್ಕಾರ ಪ್ರಬಲ ಸಮುದಾಯಗಳಿಗೆ ಸೆಡ್ಡು ಹೊಡೆದಿತ್ತು. 

ಜಾತಿಗಣತಿಯಿಂದ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಅರ್ಥಿಕ, ಉದ್ಯೋಗದ ಸ್ಥಿತಿಗತಿಯ ಮಾಹಿತಿ ಲಭ್ಯವಾಗಿದೆ. ಜತೆಗೆ ಸಮಾಜದ ಸೂಕ್ಷ್ಮ ಹಾಗೂ ಅತಿ ಸಣ್ಣ ಸಮುದಾಯಗಳನ್ನು ಕೂಡ ಸಮೀಕ್ಷೆಯ ವ್ಯಾಪ್ತಿಗೆ ತಂದು ಅವರಿಗೆ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಿದೆ. ಇನ್ನು 3.55 ಕೋಟಿ‌ ಜನಸಂಖ್ಯೆಯಲ್ಲಿ ಶೇ 96 ರಷ್ಟು ಜನರು ಸಮೀಕ್ಷೆಯಲ್ಲಿ ಭಾಗವಹಿಸಿ‌ ಮಾಹಿತಿ ನೀಡಿರುವುದರಿಂದ ಹೆಚ್ಚು ವೈಜ್ಞಾನಿಕ ಸಮೀಕ್ಷೆ ಎಂದು ಪರಿಗಣಿಸಲಾಗಿದೆ. 

ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರಗಳಲ್ಲಿ ದತ್ತಾಂಶ ಆಧಾರಿತ ಕಲ್ಯಾಣ ಮತ್ತು ದತ್ತಾಂಶ ಆಧರಿತವಾಗ ಬಡವರ, ದುರ್ಬಲರು ಹಾಗೂ ಅಂಚಿನಲ್ಲಿರುವ ವರ್ಗಗಳಿಗೆ ಅವಕಾಶ ಒದಗಿಸಲು ಸಾಧ್ಯವಾಗಲಿದೆ ಎಂಬುದು ಸರ್ಕಾರದ ವಾದ.

ಸಮೀಕ್ಷೆಯು 3,54,77,554 ವ್ಯಕ್ತಿಗಳಿಂದ ಮಾಹಿತಿ ಸಂಗ್ರಹಿಸಿದೆ. ಜನಸಂಖ್ಯೆಯ ಶೇ. 3.1 ರಷ್ಟು (16 ಲಕ್ಷ) ಜನರು ಸಮೀಕ್ಷೆಯಿಂದ ಹೊರಗುಳಿದಿದ್ದಾರೆ. ಇವರಲ್ಲಿ ಕೆಲವರು ಸಮೀಕ್ಷೆಯಲ್ಲಿ ಭಾಗವಹಿಸಲು ಆಸಕ್ತಿ ತೋರದಿರುವುದು ಬಹಿರಂಗವಾಗಿದೆ.  

ತೆಲಂಗಾಣ ವರದಿಗೆ ಆಕ್ಷೇಪವೇನು?

ರಾಜ್ಯದಲ್ಲಿ ಜಾತಿಗಣತಿ ಸರಿಯಾಗಿ ನಡೆದಿಲ್ಲ. ರಾಜ್ಯದಲ್ಲಿ ಶೇ.60ಕ್ಕೂ ಹೆಚ್ಚು ಹಿಂದುಳಿದವರಿದ್ದು, ಹಲವರ ಹೆಸರು ಬಿಟ್ಟುಹೋಗಿದೆ ಎಂದು ಬಿಆರ್ ಎಸ್ ಹಾಗೂ ಬಿಜೆಪಿ ಆರೋಪಿಸಿದ್ದವು. 

ರಾಜ್ಯದಲ್ಲಿ ಕೇವಲ ಶೇ.56.33ರಷ್ಟು ಮಂದಿ ಹಿಂದುಳಿದ ವರ್ಗಗಳದವರು ಇದ್ದಾರೆ ಎಂದು ವರದಿ ಹೇಳಿತ್ತು. ತೆಲಂಗಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಳಿದ ವರ್ಗಗಳಿದ್ದು, ಅನ್ಯ ಸಮುದಾಯಗಳ ಜನಸಂಖ್ಯೆಯನ್ನು ಹೆಚ್ಚು ತೋರಿಸಲಾಗಿದೆ ಎಂದು ದೂರಿದ್ದವು.

ತೆಲಂಗಾಣ- ಕರ್ನಾಟಕದ ಮಾದರಿ ವ್ಯತ್ಯಾಸಗಳೇನು?

ತೆಲಂಗಾಣದ ಜಾತಿಗಣತಿ ಸಮೀಕ್ಷೆಯಲ್ಲಿ ಎಲ್ಲ ದುರ್ಬಲ ವರ್ಗಗಳ ಮಾಹಿತಿ ಸಂಗ್ರಹಿಸುವ ಮೂಲಕ ಶೇ 100 ರಷ್ಟು ಪ್ರಗತಿ ಸಾಧಿಸಿತ್ತು. 1.12ಕೋಟಿ ಕುಟುಂಬಗಳ 3.55 ಕೋಟಿ ವ್ಯಕ್ತಿಗಳನ್ನು ಸಮೀಕ್ಷೆ ವ್ಯಾಪ್ತಿಗೆ ತರಲಾಗಿತ್ತು. ಒಟ್ಟು ಜನಸಂಖ್ಯೆಯ‌ 96 ರಷ್ಟು ಜನರು ಮಾಹಿತಿ ನೀಡಿದ್ದರು. 16 ಲಕ್ಷ ಜನ ಸಮೀಕ್ಷೆಯಲ್ಲಿ ಭಾಗವಹಿಸಲು ಇಷ್ಟಪಟ್ಟಿರಲಿಲ್ಲ. 

ಸಾಮಾಜಿಕ-ಆರ್ಥಿಕ, ಶೈಕ್ಷಣಿಕ, ಉದ್ಯೋಗ, ರಾಜಕೀಯ ಮತ್ತು ಜಾತಿ ಸಮೀಕ್ಷೆಯಲ್ಲಿ ಮನೆ ಮನೆಗೆ ಭೇಟಿ ನೀಡಿ ಎಲ್ಲ ಕುಟುಂಬಗಳು ವಿವರ ಸಂಗ್ರಹಿಸಲಾಗಿದೆ. ಇದಲ್ಲದೇ ಸಾರ್ವಜನಿಕರೇ ಸ್ವಯಂಪ್ರೇರಿತರಾಗಿ ಭಾಗವಹಿಸಲು ಕರೆ ದೃಢೀಕರಣ ಸೌಲಭ್ಯವನ್ನೂ ಕಲ್ಪಿಸಲಾಗಿತ್ತು. ಸಾರ್ವಜನಿಕರು ಕರೆ ಮಾಡಿ ಗಣತಿಗೆ ಮನವಿ‌ ಮಾಡಿದರೆ, ನಿಯೋಜಿತ ಗಣತಿದಾರರು ಹೋಗಿ ಮಾಹಿತಿ ಪಡೆಯುತ್ತಿದ್ದರು. 

ಗ್ರಾಮೀಣ ಪ್ರದೇಶದಲ್ಲಿ ಮಂಡಲ‌ ಪರಿಷತ್ ಅಭಿವೃದ್ಧಿ ಅಧಿಕಾರಿ ಹಾಗೂ ನಗರದಲ್ಲಿ ಪ್ರಜಾಪಾಲನ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಸಮೀಕ್ಷಾ ನಮೂನೆಯಲ್ಲಿ ಮಾಹಿತು ದಾಖಲಿಸಬಹುದಾಗಿತ್ತು.

ಆನ್ಲೈನ್ ನಲ್ಲಿ ಸಮೀಕ್ಷಾ ನಮೂನೆ ಡೌನ್ ಲೋಡ್‌ ಮಾಡಿಕೊಂಡು ಮಾಹಿತಿ ಭರ್ತಿ ಮಾಡಿದ ಬಳಿಕ‌ ಅದನ್ನು ಪ್ರಜಾ ಪಾಲನ ಕೇಂದ್ರಕ್ಕೆ ನೀಡಬಹುದಾಗಿತ್ತು. 

ಕರ್ನಾಟಕದಲ್ಲಿ ಮನೆ ಮನೆಗೆ ಭೇಟಿ ಮಾಹಿತಿ ಸಂಗ್ರಹಿಸಿದರೂ ಸುಮಾರು 37 ಲಕ್ಷ ಜನರು ಗಣತಿಯಿಂದ ಹೊರಗುಳಿದಿದ್ದರು. ಸಮೀಕ್ಷೆ ವೇಳೆ ಸಾಕಷ್ಟು‌ ಮನೆಗಳಿಗೆ ಗಣತಿದಾರರು ಭೇಟಿ ನೀಡಿರಲಿಲ್ಲ ಎಂಬ ಆರೋಪಗಳೂ ಕೇಳಿಬಂದಿದ್ದವು. ಇನ್ನು 2015 ಏ.11 ರಂದು ಆರಂಭವಾದ ಸಮೀಕ್ಷೆ ಮೇ 30ಕ್ಕೆ‌ ಮುಕ್ತಾಯವಾಗಿತ್ತು. 2019 ರಲ್ಲಿ ಆಯೋಗದ ಅಧ್ಯಕ್ಷರ ಅವಧಿ ಮುಗಿದರೂ ಕಾಂತರಾಜು ಅವರು ವರದಿ ಸಲ್ಲಿಸಿರಲಿಲ್ಲ. ಬಳಿಕ ಸರ್ಕಾರ 2020 ರಲ್ಲಿ ವರದಿ ಪರಿಷ್ಕರಣೆಗೆ ಜಯಪ್ರಕಾಶ್ ಹೆಗಡೆ ನೇತೃತ್ವದ ಆಯೋಗ ರಚಿಸಿತು. ಅದು 2024 ರಲ್ಲಿ ವರದಿ ಸಲ್ಲಿಸಿತು. ವರದಿ ಬಹಿರಂಗವಾದ ಬಳಿಕ ಪ್ರಬಲ ಜಾತಿಗಳು ಅಂಕಿ ಅಂಶಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದವು. ಹಾಗಾಗಿ ಹೊಸ ಸಮೀಕ್ಷೆಗೆ ನಿರ್ಧರಿಸಲಾಯಿತು. ವಿಪರ್ಯಾಸವೆಂದರೆ ತೆಲಂಗಾಣದಲ್ಲೂ ಹಿಂದುಳಿದ ವರ್ಗಗಳ ಅಂಕಿ ಅಂಶಗಳ ಬಗ್ಗೆ ಪ್ರಬಲ‌ ಸಮುದಾಯಗಳು ಆಕ್ಷೇಪ ವ್ಯಕ್ತಪಡಿಸಿದರೂ ಸರ್ಕಾರ ಸೊಪ್ಪು ಹಾಕಿರಲಿಲ್ಲ. ವರದಿ ಒಪ್ಪಿಕೊಂಡಿತ್ತು.


ದೇಶದಲ್ಲಿ ಎಲ್ಲೆಲ್ಲಿ ಜಾತಿಗಣತಿ?

ದೇಶದಲ್ಲಿ ಮೊದಲ ಬಾರಿಗೆ ಜಾತಿಗಣತಿ ನಡೆಸಿದ ಖ್ಯಾತಿ ತಮಿಳುನಾಡಿಗೆ ಸಲ್ಲಲಿದೆ. 1982ರಲ್ಲಿಯೇ ತಮಿಳುನಾಡಿನಲ್ಲಿ ಅಂಬಾಶಂಕರ್ ಆಯೋಗವು ಜಾತಿಗಣತಿ ನಡೆಸಿ ಸಮಗ್ರ ವರದಿ ನೀಡಿತ್ತು. ಅದನ್ನು ಆಧರಿಸಿಯೇ ತಮಿಳುನಾಡು ಸರ್ಕಾರ, ಮೀಸಲಾತಿ ಕೋಟಾವನ್ನು ಶೇ. 69ಕ್ಕೆ ಏರಿಸಿತು.

ಎರಡನೆಯದಾಗಿ ಕರ್ನಾಟಕದಲ್ಲಿ 2015 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶದ‌ ಮೇರೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲಾಯಿತು. ಹತ್ತು ವರ್ಷಗಳ ಬಳಿಕ ಅಂತಿಮ ವರದಿ ಸರ್ಕಾರಕ್ಕೆ ಸಲ್ಲಿಸಲಾಯಿತು. ಆದರೆ, ವರದಿಯ ಅಂಕಿ ಅಂಶಗಳ ಬಗ್ಗೆ ಆಕ್ಷೇಪಣೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸರ್ಕಾರ ವರದಿಯನ್ನೇ ಕೈ ಬಿಟ್ಟಿತು.

ಮೂರನೆಯದಾಗಿ ಬಿಹಾರ ಸರ್ಕಾರ ಜಾತಿಗಣತಿ ನಡೆಸಿತು. ಬಿಹಾರದಲ್ಲಿ ಶೇ 60ರಷ್ಟು ಹಿಂದುಳಿದ ವರ್ಗಗಳು ಇರುವುದು ವರದಿಯ ಅಂಕಿ ಅಂಶಗಳಿಂದ ತಿಳಿದು ಬಂದಿತ್ತು.

ನಾಲ್ಕನೆಯದಾಗಿ, ತೆಲಂಗಾಣ ರಾಜ್ಯದಲ್ಲಿ ಜಾತಿಗಣತಿ  ನಡೆಸಲಾಗಿದೆ. ಇಲ್ಲಿ ಯೋಜನಾ ಆಯೋಗದ ನೇತೃತ್ವದಲ್ಲಿ ಸಮೀಕ್ಷೆ ನಡೆದಿದ್ದು, ಕೇವಲ 50 ದಿನಗಳಲ್ಲಿ 3.55 ಕೋಟಿ ಜನರನ್ನು ಸಮೀಕ್ಷೆಗೆ ಒಳಪಡಿಸಿ, ವರದಿ ಸಲ್ಲಿಸಲಾಗಿದೆ.  

Tags:    

Similar News