ಕೆಪಿಎಸ್‌ಸಿ ಅನ್ಯಾಯದ ವಿರುದ್ಧ ಹೋರಾಟ; ಸುಪ್ರೀಂಕೋರ್ಟ್ ಮೆಟ್ಟಿಲೇರಲು ಕೆಎಎಸ್ ಮುಖ್ಯ ಪರೀಕ್ಷೆ ವಂಚಿತ ಅಭ್ಯರ್ಥಿಗಳ ನಿರ್ಧಾರ
ರಾಜ್ಯ ಬಿಜೆಪಿ ನಾಯಕರು ಕಾನೂನು ಹೋರಾಟಕ್ಕೆ ಸಹಾಯ ಮಾಡುವ ಭರವಸೆ ನೀಡಿದ್ದಾರೆ ಎಂಬುದಾಗಿ 'ದ ಪೆಡರಲ್ ಕರ್ನಾಟಕ'ದ ಜತೆ ವಿಡಿಯೊ ಸಂದರ್ಶನದಲ್ಲಿ ಪಾಲ್ಗೊಂಡ ಅಭ್ಯರ್ಥಿಗಳು ಹೇಳಿದ್ದಾರೆ.;
ʼದ ಪೆಢರಲ್ ಕರ್ನಾಟಕʼದೊಂದಿಗೆ ನಡೆದ ವಿಡಿಯೋ ಸಂವಾದ.
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸುತ್ತಿರುವ ಗೆಜೆಟೆಡ್ ಪ್ರೊಬೇಷನರಿ ಮುಖ್ಯಪರೀಕ್ಷೆ ಆರಂಭವಾಗಿದ್ದು, ಕೆಎಟಿ ಮತ್ತು ಹೈಕೋರ್ಟ್‌ನಿಂದ ಅನುಮತಿ ಪಡೆದ ಸುಮಾರು 300 ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಆದರೆ, ಪರೀಕ್ಷೆಯಿಂದ ವಂಚಿತರಾದ ಸಾವಿರಾರು ಅಭ್ಯರ್ಥಿಗಳು ಕೆಎಎಸ್ ಮುಖ್ಯಪರೀಕ್ಷೆಯನ್ನು ರದ್ದುಪಡಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.
ಈ ಹಿನ್ನೆಲೆಯಲ್ಲಿ ' ದ ಫೆಡರಲ್ ಕರ್ನಾಟಕ' ನಡೆಸಿದ ವಿಶೇಷ ಸಂದರ್ಶನದಲ್ಲಿ ಪಾಲ್ಗೊಂಡ ಕೆಎಎಸ್ ಆಕಾಂಕ್ಷಿಗಳಾದ ಆದಿ ಮಂಜುನಾಥ್ ಹಾಗೂ ಶ್ರುತಿ, ಅಭ್ಯರ್ಥಿಗಳು ಕೆಪಿಎಸ್ಸಿಯಿಂದ ಆಗುತ್ತಿರುವ ಅನ್ಯಾಯ ಹಾಗೂ ತಾವು ಎದುರಿಸುತ್ತಿರುವ ತೊಳಲಾಟಗಳನ್ನು ವಿವರಿಸಿದ್ದಾರೆ.
ಕರ್ನಾಟಕ ಸಂಶೋಧಕರ ಸಂಘದ ಸದಸ್ಯರೂ ಆಗಿರುವ ಮಂಜುನಾಥ್ ಮಾತನಾಡಿ, ತಾವೆಲ್ಲರೂ ರಾಜ್ಯ ಬಿಜೆಪಿ ನಾಯಕರಾದ ಬಿ.ವೈ. ವಿಜಯೇಂದ್ರ, ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ವಿಧಾನಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ ರವಿಕುಮಾರ್ ಅವರನ್ನು ಭೇಟಿ ಮಾಡಿದ್ದೇವೆ. ಕಾನೂನು ಹೋರಾಟಕ್ಕೆ ಸಹಾಯ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಹೇಳಿದರು. ಕೆಎಎಸ್ ಮುಖ್ಯ ಪರೀಕ್ಷೆ ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಕಾನೂನು ಹೋರಾಟ ಮುಂದುವರಿಸುವುದಾಗಿ ಅವರು ಹೇಳಿದರು.
ಶ್ರುತಿ ಮಾತನಾಡಿ, "ನಮ್ಮದಲ್ಲದ ತಪ್ಪಿಗೆ ನಾವು ಮಾನಸಿಕ ಹಿಂಸೆ ಅನುಭವಿಸುತ್ತಿದ್ದೇವೆ. ಭಾಷಾಂತರ ದೋಷದಿಂದ 74 ಪ್ರಶ್ನೆಗಳು ತಪ್ಪಾಗಿವೆ ಎಂದು ನಾವು ಸಾಬೀತುಪಡಿಸಲು ಸಿದ್ಧರಿದ್ದೇವೆ. ಕೇವಲ ಕೋರ್ಟ್‌ಗೆ ಹೋದ ವಿದ್ಯಾರ್ಥಿಗಳಿಗೆ ಮಾತ್ರ ಮುಖ್ಯಪರೀಕ್ಷೆಗೆ ಅವಕಾಶ ನೀಡಲಾಗಿದೆ. ಹಣಕಾಸಿನ ಸಮಸ್ಯೆಯಿಂದಾಗಿ ನಾವು ಕೋರ್ಟ್‌ಗೆ ಹೋಗಲು ಸಾಧ್ಯವಾಗಲಿಲ್ಲ" ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಕೆಪಿಎಸ್‌ಸಿ ಎಡವಟ್ಟುಗಳೇನು?
ಕೆಪಿಎಸ್‌ಸಿ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಫೆಬ್ರವರಿ 27ರಂದು ಅಧಿಸೂಚನೆ ಹೊರಡಿಸಿತ್ತು. ಆಗಸ್ಟ್ 27 ರಂದು ನಡೆದ ಪೂರ್ವಭಾವಿ ಪರೀಕ್ಷೆಯಲ್ಲಿ ಭಾಷಾಂತರ ದೋಷದಿಂದಾಗಿ 70ಕ್ಕೂ ಹೆಚ್ಚು ಪ್ರಶ್ನೆಗಳು ತಪ್ಪಾಗಿದ್ದವು. ನಾಡಿನ ಹಿರಿಯ ಸಾಹಿತಿಗಳು, ವಿದ್ಯಾರ್ಥಿಗಳು ಹಾಗೂ ಕನ್ನಡಪರ ಹೋರಾಟಗಾರರು ಕೆಪಿಎಸ್‌ಸಿ ಭಾಷಾಂತರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದ್ದರು. ಇದರ ಫಲವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮರುಪರೀಕ್ಷೆ ನಡೆಸುವಂತೆ ಆದೇಶಿಸಿದ್ದರು.
ಕೆಪಿಎಸ್‌ಸಿ ತನ್ನ ತಪ್ಪಿನಿಂದ ಪಾಠ ಕಲಿಯದೆ ಮರುಪರೀಕ್ಷೆಯಲ್ಲಿಯೂ ಎಡವಟ್ಟು ಮಾಡಿತ್ತು. ಎರಡು ಪ್ರಶ್ನೆ ಪತ್ರಿಕೆಗಳಲ್ಲಿ 74 ಪ್ರಶ್ನೆಗಳು ಭಾಷಾಂತರ ದೋಷದಿಂದ ತಪ್ಪಾಗಿದ್ದವು. ಇದರಿಂದ ಕನ್ನಡ ಮಾಧ್ಯಮ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಅರ್ಥೈಸಿಕೊಳ್ಳುವುದೇ ಕಷ್ಟವಾಗಿತ್ತು. ನಿಗದಿತ ಸಮಯದಲ್ಲಿ ಪ್ರಶ್ನೆಪತ್ರಿಕೆಗೆ ಉತ್ತರಿಸಲು ಸಾಧ್ಯವಾಗದ ಕನ್ನಡ ಮಾಧ್ಯಮದ ಅಭ್ಯರ್ಥಿಗಳು ಕೆಪಿಎಸ್‌ಸಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಕೆಪಿಎಸ್‌ಸಿ ಭಾಷಾಂತರ ದೋಷದಿಂದ ಮುಖ್ಯಪರೀಕ್ಷೆಗೆ ಅವಕಾಶ ವಂಚಿತರಾದ ಕೆಲ ಅಭ್ಯರ್ಥಿಗಳು ಕೆಎಟಿ ಹಾಗೂ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದ ಮೊರೆ ಹೋದ ಅಭ್ಯರ್ಥಿಗಳಿಗೆ ಮಾತ್ರ ಮುಖ್ಯಪರೀಕ್ಷೆಗೆ ಅವಕಾಶ ನೀಡಲಾಗಿದ್ದು, ಉಳಿದ ಅಭ್ಯರ್ಥಿಗಳಿಗೆ ಅವಕಾಶ ನಿರಾಕರಿಸಲಾಗಿತ್ತು.
ಬಜೆಟ್ ಅಧಿವೇಶನದಲ್ಲಿ ಕೆಎಎಸ್ ಮರುಪರೀಕ್ಷೆಯ ವಿಷಯವನ್ನು ಪ್ರಸ್ತಾಪಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈಗಾಗಲೇ ಕೆಲ ಅಭ್ಯರ್ಥಿಗಳು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್ ತೀರ್ಪು ಬಂದ ನಂತರ ಸರ್ವಪಕ್ಷಗಳ ಸಭೆ ಕರೆದು ಯಾರಿಗೂ ಅನ್ಯಾಯವಾಗದಂತೆ ನ್ಯಾಯ ಒದಗಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಕೋರ್ಟ್ ತೀರ್ಪು ಬಂದು ಬಹಳ ಸಮಯ ಕಳೆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅಭ್ಯರ್ಥಿಗಳು ದೂರಿದ್ದಾರೆ.