KPSC Controversy | ಪ್ರವೇಶ ಪತ್ರಕ್ಕಾಗಿ ಮಳೆಯಲ್ಲೇ ತಡರಾತ್ರಿವರೆಗೆ ಅಭ್ಯರ್ಥಿಗಳ ಪರದಾಟ; ಟೀಕೆಗೆ ಗುರಿಯಾದ ಕೆಪಿಎಸ್‌ಸಿ ಚೆಲ್ಲಾಟ
ಹೈಕೋರ್ಟ್ ಆದೇಶ ಪಡೆದ 119 ಅಭ್ಯರ್ಥಿಗಳು ಶುಕ್ರವಾರ ರಾತ್ರಿ ಸುರಿಯುವ ಮಳೆ ಲೆಕ್ಕಿಸದೆ ಕೆಪಿಎಸ್‌ಸಿ ಕಚೇರಿ ಬಳಿ ದಾಖಲಾತಿ ಪತ್ರಗಳನ್ನು ಸಲ್ಲಿಸಿ ಪ್ರವೇಶ ಪತ್ರ ಪಡೆಯಲು ಪರದಾಡಿದ ಪ್ರಸಂಗವು ಕೆಪಿಎಸ್‌ಸಿ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ.;
ಮಳೆಯ ನಡುವೆಯೂ ಅಭ್ಯರ್ಥಿಗಳು ಕೆಪಿಎಸ್‌ಸಿ ಕಚೇರಿ ಬಳಿ ಕಾಯುತ್ತಿರುವ ದೃಶ್ಯ.
ಸ್ವಾಯತ್ತ ಸಂಸ್ಥೆಯಾಗಿರುವ ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ತನ್ನ ತಪ್ಪುಗಳಿಂದ ಇನ್ನೂ ಪಾಠ ಕಲಿತಂತಿಲ್ಲ. ಗೆಜೆಟೆಡ್ ಪ್ರೊಬೇಷನರಿ ಪೂರ್ವಭಾವಿ ಪರೀಕ್ಷೆಯಲ್ಲಿ ತೀವ್ರ ಮುಜುಗರ ಅನುಭವಿಸಿದ್ದ ಕೆಪಿಎಸ್‌ಸಿ ಮತ್ತದೇ ಲೋಪಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಇಂದಿನಿಂದ (ಶನಿವಾರ) ಆರಂಭವಾಗಿರುವ ಗೆಜೆಟೆಡ್ ಪ್ರೊಬೇಷನರಿ ಮುಖ್ಯ ಪರೀಕ್ಷೆಗೆ ತಡರಾತ್ರಿಯವರೆಗೂ ಪ್ರವೇಶ ಪತ್ರಗಳನ್ನು ವಿತರಿಸುವ ಮೂಲಕ ಟೀಕೆಗೆ ಗುರಿಯಾಗಿದೆ.
ಶುಕ್ರವಾರ (ಮೇ 2 ) ಮಧ್ಯರಾತ್ರಿಯವರೆಗೂ ಮುಖ್ಯ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಅರ್ಜಿ ಸ್ವೀಕರಿಸಿ, ಪ್ರವೇಶ ಪತ್ರಗಳನ್ನು ನೀಡಿದೆ. ಇದಕ್ಕಾಗಿ ಅಭ್ಯರ್ಥಿಗಳು ತಡರಾತ್ರಿಯವರೆಗೂ ಕೆಪಿಎಸ್‌ಸಿ ಕಚೇರಿ ಎದುರು ನಿಲ್ಲುವ ಅನಿವಾರ್ಯತೆ ಎದುರಾಗಿತ್ತು.
ಹೈಕೋರ್ಟ್ ಆದೇಶದ ಮೇರೆಗೆ 119 ಅಭ್ಯರ್ಥಿಗಳಿಗೆ ಮುಖ್ಯ ಪರೀಕ್ಷೆಗೆ ಅವಕಾಶ ನೀಡಲಾಗಿತ್ತು. ಈ ಅಭ್ಯರ್ಥಿಗಳು ಮುಖ್ಯಪರೀಕ್ಷೆಗೆ ಹೊಸದಾಗಿ ಅರ್ಜಿ ಸಲ್ಲಿಸಿ, ಪ್ರವೇಶ ಪತ್ರ ಪಡೆಯಲು ರಾತ್ರಿ ಪೂರ್ತಿ ಸುರಿವ ಮಳೆಯಲ್ಲೇ ಕೆಪಿಎಸ್‌ಸಿ ಕಚೇರಿ ಎದುರು ದಾಖಲಾತಿಗಳನ್ನು ಹಿಡಿದು ನಿಲ್ಲಬೇಕಾಯಿತು. ಉದ್ಯೋಗದ ಕನಸು ಹೊತ್ತ ಅಭ್ಯರ್ಥಿಗಳು ಮಳೆಯಲ್ಲಿ ತೋಯ್ದರೂ ಕೆಪಿಎಸ್‌ಸಿ ಮಾತ್ರ ಮೊಂಡುತನ ಮುಂದುವರಿಸಿ, ರಾತ್ರಿ 12 ರವರೆಗೂ ಪ್ರವೇಶ ಪತ್ರ ವಿತರಿಸಿದೆ. ನ್ಯಾಯಾಲಯದ ಕೃಪೆಯಿಂದ ಮುಖ್ಯ ಪರೀಕ್ಷೆಗೆ ಅವಕಾಶ ಪಡೆದ ಅಭ್ಯರ್ಥಿಗಳು ಮಧ್ಯರಾತ್ರಿವರೆಗೆ ಪ್ರವೇಶ ಪತ್ರ ಪಡೆದು, ಒತ್ತಡದಲ್ಲೇ ಬೆಳಿಗ್ಗೆ ಪರೀಕ್ಷೆಗೆ ಹಾಜರಾದರು. ಶನಿವಾರ ಬೆಳಿಗ್ಗೆ 9.30 ರಿಂದ ಮೈಸೂರು ರಸ್ತೆಯಲ್ಲಿರುವ ಕಸ್ತೂರಬಾ ನಗರದ ಬಿಬಿಎಂಪಿ ಪಿಯು ಕಾಲೇಜಿನಲ್ಲಿ ಪರೀಕ್ಷೆ ಕೆಪಿಎಸ್‌ಸಿ ಮುಖ್ಯ ಪರೀಕ್ಷೆ ನಡೆಯುತ್ತಿದೆ.
ಕೆಪಿಎಸ್‌ಸಿ ಎರಡು ಬಾರಿ ಗೆಜೆಟೆಡ್ ಪ್ರೊಬೇಷನರಿ ಪೂರ್ವಬಾವಿ ಪರೀಕ್ಷೆ ನಡೆಸಿತ್ತು. ಎರಡೂ ಅವಧಿಯಲ್ಲೂ ಭಾಷಾಂತರ ದೋಷದಿಂದ 79 ಕ್ಕೂ ಹೆಚ್ಚು ಪ್ರಶ್ನೆಗಳು ತಪ್ಪಾಗಿದ್ದವು. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳು ಕೆಪಿಎಸ್‌ಸಿ ವಿರುದ್ಧ ಹೋರಾಟ ನಡೆಸಿದ್ದರು. ವಿಧಾನಸಭೆ ಅಧಿವೇಶನದಲ್ಲಿ ಈ ಕುರಿತ ಚರ್ಚೆಯ ವೇಳೆ ಸಿಎಂ ಸಿದ್ದರಾಮಯ್ಯ ಅವರು ಕನ್ನಡ ಮಾಧ್ಯಮ ಹಾಗೂ ಗ್ರಾಮೀಣ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸುವ ಭರವಸೆ ನೀಡಿದ್ದರು.
ಕೆಪಿಎಸ್‌ಸಿ ವಿರುದ್ಧ ಪ್ರತಿಪಕ್ಷ ನಾಯಕ ಕಿಡಿ
ಕೆಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯಲ್ಲಿನ ಭಾಷಾಂತರ ಎಡವಟ್ಟಿನಿಂದ ಅನ್ಯಾಯಕ್ಕೊಳಗಾಗಿದ್ದ ಅಭ್ಯರ್ಥಿಗಳು ಹೈಕೋರ್ಟ್ ಮೊರೆ ಹೋಗಿ ಮುಖ್ಯ ಪರೀಕ್ಷೆಗೆ ಕುಳಿತುಕೊಳ್ಳುವ ಅವಕಾಶ ಪಡೆದಿದ್ದಾರೆ. ಆದರೆ, ಅಭ್ಯರ್ಥಿಗಳಿಗೆ ಪ್ರವೇಶ ಪತ್ರ ನೀಡಲು ಸತಾಯಿಸುವ ಮೂಲಕ ರಾಜ್ಯ ಸರ್ಕಾರ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಸಾಮಾಜಿಕ ಮಾಧ್ಯಮ ʼಎಕ್ಸ್ʼನಲ್ಲಿ ಪೋಸ್ಟ್ ಮಾಡಿರುವ ಅವರು, ಒಂದು ಕಡೆ ಧೋ.. ಎಂದು ಸುರಿಯುತ್ತಿರುವ ಮಳೆ. ಮತ್ತೊಂದು ಕಡೆ ಅರ್ಜಿ ತುಂಬಲು ಯಾವ ದಾಖಲಾತಿಗಳು ಬೇಕು ಎನ್ನುವ ಗೊಂದಲದಲ್ಲಿ ಅಭ್ಯರ್ಥಿಗಳು. ಕೆಪಿಎಸ್‌ಸಿ ಕಚೇರಿ ಬಳಿ ಜೆರಾಕ್ಸ್ ಅಂಗಡಿ ಇಲ್ಲ, ಕುಡಿಯೋಕೆ ನೀರಿಲ್ಲ, ಕಾಫಿ ತಿಂಡಿಗೆ ಒಂದು ಹೋಟೆಲ್ ಇಲ್ಲ, ಹೆಣ್ಣುಮಕ್ಕಳಿಗೆ ಶೌಚಾಲಯವಿಲ್ಲ, ಹಸುಗೂಸುಗಳಿಗೆ ಹಾಲುಣಿಸೋಕೆ ಜಾಗ ಇಲ್ಲ, ಮಧ್ಯರಾತ್ರಿ ಆದರೂ ಹಾಲ್ ಟಿಕೆಟ್ ಕೈಗೆ ಸಿಕ್ಕಿಲ್ಲ, ಬೆಳಗಾದರೆ ಪರೀಕ್ಷೆ, ಇಂತಹ ಅವಾಂತರದ ನಡುವೆ ಅಭ್ಯರ್ಥಿಗಳು ಪರೀಕ್ಷೆ ಬರೆಯುವುದಾದರೂ ಹೇಗೆ? ಎಂದು ಕೆಪಿಎಸ್‌ಸಿ ಹಾಗೂ ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರಿಗೆ ಗ್ರಾಮೀಣ ಭಾಗದ ಕನ್ನಡ ಮಾಧ್ಯಮ ಅಭ್ಯರ್ಥಿಗಳು ಅಂದರೆ ಯಾಕಿಷ್ಟು ದ್ವೇಷ? ಯಾಕಿಷ್ಟು ಅಸಡ್ಡೆ? ಬಡವರ ಮಕ್ಕಳು ಮುಂದೆ ಬರಬಾರದಾ? ಎಂದು ಅಶೋಕ್ ಪ್ರಶ್ನಿಸಿದ್ದಾರೆ.
ವಿಧಾನಸಭೆ ಅಧಿವೇಶನದಲ್ಲಿ ಕನ್ನಡ ಮಾಧ್ಯಮ ಅಭ್ಯರ್ಥಿಗಳ ಹಿತಾಸಕ್ತಿ ಕಾಪಡುವುದಾಗಿ ತಾವು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ. ಬೇರೆ ದಾರಿ ಇಲ್ಲದೆ ಅಭ್ಯರ್ಥಿಗಳು ಕೋರ್ಟ್ ಮೊರೆ ಹೋಗಿ ಆದೇಶ ತಂದರೆ ಹಾಲ್ ಟಿಕೆಟ್ ಕೊಡಲು ಸತಾಯಿಸಿ ನೆಮ್ಮದಿಯಾಗಿ ಪರೀಕ್ಷೆ ಬರೆಯಲೂ ತೊಂದರೆ ಮಾಡಿದ್ದೀರಿ. ನೂರಾರು ಕನಸುಗಳನ್ನು ಇಟ್ಟುಕೊಂಡು ಹಗಲು ರಾತ್ರಿ ಎನ್ನದೆ ವರ್ಷಗಟ್ಟಲೆ ತಯಾರಿ ನಡೆಸಿದ ಅಭ್ಯರ್ಥಿಗಳ ಶಾಪ ನಿಮ್ಮ ಸರ್ಕಾರಕ್ಕೆ ತಟ್ಟದೇ ಇರದು ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.