ಸಂಪುಟ ಸರ್ಜರಿ ಸನ್ನಿಹಿತ | ಮಧು ಬಂಗಾರಪ್ಪ ಔಟ್, ಬಿ ಕೆ ಹರಿಪ್ರಸಾದ್ ಇನ್?

ಕಳೆದ ವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೂಡ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳೇ ಕೆಲವು ಸಚಿವರಿಗೆ ಪರೋಕ್ಷ ಸಂದೇಶ ನೀಡಿದ್ದು, ಕೆಲವು ಖಾತೆಗಳ ನಿರ್ವಹಣೆಯಲ್ಲಿ ಸಚಿವರ ವೈಫಲ್ಯದಿಂದಾಗಿ ಸರ್ಕಾರ ಇಕ್ಕಟ್ಟಿಗೆ ಸಿಲುಕುತ್ತಿದೆ. ಅಂತಹ ವೈಫಲ್ಯಗಳ ಕುರಿತು ಪಕ್ಷ ಸುಮ್ಮನೇ ಕೂರಲು ಸಾಧ್ಯವಿಲ್ಲ. ಹಾಗಾಗಿ ಬದಲಾವಣೆಗೆ ಸಜ್ಜಾಗಿ ಎಂದು ಸಚಿವರಿಗೆ ಸೂಚನೆ ನೀಡಿದ್ದಾರೆ.;

Update: 2024-06-18 13:38 GMT

Siddaramaiah Cabinet | ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಸ್ಥಾನ ಗಳಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ನಲ್ಲಿ ಆಂತರಿಕ ಬೇಗುದಿ ಬೂದಿಮುಚ್ಚಿದ ಕೆಂಡದಂತಿದ್ದು, ಸದ್ಯದಲ್ಲೇ ರಾಜ್ಯ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ಮಾಡುವ ಮೂಲಕ ಆ ಬೇಗುದಿ ಶಮನದ ಯತ್ನ ಆರಂಭವಾಗಿದೆ.

ಸಚಿವ ಸ್ಥಾನ ವಂಚಿತರಾಗಿರುವ ಪಕ್ಷದ ಅನುಭವಿ ಹಿರಿಯ ನಾಯಕರು ಮತ್ತು ಪ್ರಾದೇಶಿಕ ಹಾಗೂ ಸಮುದಾಯವಾರು ಪ್ರಾತಿನಿಧ್ಯ ಸಿಗದೆ ಅಸಮಾಧಾನಗೊಂಡಿರುವ ಶಾಸಕರಿಗೆ ಅವಕಾಶ ಕಲ್ಪಿಸುವುದು ಮತ್ತು ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಹೆಚ್ಚಿನ ಪ್ರಯತ್ನ ಮಾಡದೇ ಇರುವ ಸಚಿವರಿಗೆ ಬಿಸಿ ಮುಟ್ಟಿಸುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಕಠಿಣ ನಿಲುವು ಹೊಂದಿದೆ. ಅದರಲ್ಲೂ ಕೊಟ್ಟಿರುವ ಖಾತೆಗಳನ್ನು ಸರಿಯಾಗಿ ನಿಭಾಯಿಸದೆ ಸರ್ಕಾರ ಮತ್ತು ಪಕ್ಷಕ್ಕೆ ಮುಜಗರ ತಂದಿರುವ ಸಚಿವರನ್ನು ಹೊರ ಹಾಕದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಹಾನಿಯಾಗಲಿದೆ ಎಂಬುದು ಹೈಕಮಾಂಡ್ ಚಿಂತೆ.

ಆ ಹಿನ್ನೆಲೆಯಲ್ಲಿ ಈಗಾಗಲೇ ಹೈಕಮಾಂಡ್ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯೊಂದಿಗೆ ಮಾತುಕತೆ ನಡೆಸಿದ್ದು, ಕಳೆದ ವಾರ ಬೆಂಗಳೂರಿಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿಯವರು ಕೂಡ ಇದೇ ವಿಷಯದ ಕುರಿತು ಸ್ಪಷ್ಟ ಸೂಚನೆ ನೀಡಿ ಹೋಗಿದ್ದಾರೆ ಎನ್ನಲಾಗಿದೆ.

ಕಳೆದ ವಾರ, ಸುಮಾರು ಮೂರು ತಿಂಗಳ ಬಳಿಕ ಕಳೆದ ವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೂಡ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳೇ ಕೆಲವು ಸಚಿವರಿಗೆ ಪರೋಕ್ಷ ಸಂದೇಶ ನೀಡಿದ್ದು, ಕೆಲವು ಖಾತೆಗಳ ನಿರ್ವಹಣೆಯಲ್ಲಿ ಸಚಿವರ ವೈಫಲ್ಯದಿಂದಾಗಿ ಸರ್ಕಾರ ಇಕ್ಕಟ್ಟಿಗೆ ಸಿಲುಕುತ್ತಿದೆ. ಅಂತಹ ವೈಫಲ್ಯಗಳ ಕುರಿತು ಪಕ್ಷ ಸುಮ್ಮನೇ ಕೂರಲು ಸಾಧ್ಯವಿಲ್ಲ. ಹಾಗಾಗಿ ಬದಲಾವಣೆಗೆ ಸಜ್ಜಾಗಿ ಎಂದು ಸಚಿವರಿಗೆ ಸೂಚನೆ ನೀಡಿದ್ದಾರೆ.

ಪೂರ್ಣ ಸಚಿವ ಸಂಪುಟ ಪುನರ್ ರಚನೆಗೆ ಕೈಹಾಕಿದರೆ ಅದರ ಪರಿಣಾಮ ಮುಂಬರುವ ಬಿಬಿಎಂಪಿ, ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆಗಳ ಮೇಲೆ ಆಗಬಹುದು ಎಂಬ ಹಿನ್ನೆಲೆಯಲ್ಲಿ ಎಚ್ಚರಿಕೆಯ ಹೆಜ್ಜೆ ಇಡಲು ನಿರ್ಧರಿಸಿರುವ ಪಕ್ಷದ ನಾಯಕತ್ವ, ಸದ್ಯಕ್ಕೆ ಖಾತೆ ನಿರ್ವಹಣೆಯಲ್ಲಿ ನಿರೀಕ್ಷಿತ ಮಟ್ಟದ ಸಾಧನೆ ತೋರದಿರುವ ಮತ್ತು ವಿವಾದಗಳಿಗೆ ಸಿಲುಕಿರುವ 4-5 ಮಂದಿ ಸಚಿವರನ್ನು ಕೈಬಿಟ್ಟು ಆ ಸ್ಥಾನಗಳಿಗೆ ಪಕ್ಷದ ಅನುಭವಿ ಶಾಸಕರಿಗೆ ಬಡ್ತಿ ನೀಡುವ ಲೆಕ್ಕಾಚಾರ ಹಾಕಿದೆ ಎನ್ನಲಾಗಿದೆ.

ಒಂದೆರಡು ವಾರಗಳಲ್ಲೇ ಈ ಪ್ರಕ್ರಿಯೆ ಮುಗಿಸಿ ಸ್ಥಳೀಯ ಸಂಸ್ಥೆ ಚುನಾವಣೆಗೆ ತಯಾರಿ ಆರಂಭಿಸಲು ಪಕ್ಷದ ಪ್ರಮುಖರು ನಿರ್ಧರಿಸಿದ್ದು, ಮೂವರು ಕಿರಿಯ ಸಚಿವರು ಮತ್ತು ಇಬ್ಬರು ಹಿರಿಯ ಸಚಿವರಿಗೆ ಮಂತ್ರಿಗಿರಿ ಕೈತಪ್ಪುವ ಸಾಧ್ಯತೆ ಇದೆ. ಕಿರಿಯ ಸಚಿವರ ಪೈಕಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಖಾತೆಯ ಮಧು ಬಂಗಾರಪ್ಪ, ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್, ಕೃಷಿ ಸಚಿವ ಚೆಲುವರಾಯಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹೆಸರುಗಳು ಕೇಳಿಬರುತ್ತಿದ್ದು, ಹಿರಿಯ ಸಚಿವರ ಪೈಕಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಎಚ್ ಮುನಿಯಪ್ಪ, ಜವಳಿ ಮತ್ತು ಸಕ್ಕರೆ ಸಚಿವೆ ಶಿವಾನಂದ ಪಾಟೀಲ್ ಹೆಸರುಗಳು ಕೇಳಿಬರುತ್ತಿವೆ.

ಈ ಸಚಿವರ ಸ್ಥಾನಕ್ಕೆ ಆಯಾ ಜಿಲ್ಲಾ ಮತ್ತು ಸಮುದಾಯವಾರು ಕೋಟಾದಡಿ ಅವಕಾಶವಂಚಿರ ಹಿರಿಯ ಶಾಸಕರನ್ನು ಆಯ್ಕೆ ಮಾಡಲು ಹೈಕಮಾಂಡ್ ಸೂಚಿಸಿದ್ದು, ಆ ಪ್ರಕಾರ ಆರ್ ವಿ ದೇಶಪಾಂಡೆ, ಬಿ ಕೆ ಹರಿಪ್ರಸಾದ್, ಲಕ್ಷ್ಮಣ ಸವದಿ, ಉಮಾಶ್ರೀ, ಬಿ ಕೆ ಸಂಗಮೇಶ್ ಅವರುಗಳಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ ಎಂದು ಪಕ್ಷದ ಮೂಲಗಳು ಹೇಳುತ್ತಿವೆ.

ಹರಿಪ್ರಸಾದ್ ಬಿಲ್ಲವ ಕಾರ್ಡ್ ಪ್ರಯೋಗ

ಈ ನಡುವೆ ಲೋಕಸಭಾ ಚುನಾವಣಾ ಫಲಿತಾಂಶದ ಬೆನ್ನಲ್ಲೇ ದೆಹಲಿಯಲ್ಲಿ ಹೈಕಮಾಂಡ್ ಜೊತೆ ಮಾತುಕತೆ ನಡೆಸಿರುವ ಬಿ ಕೆ ಹರಿಪ್ರಸಾದ್ ಅವರು, ಕರಾವಳಿಯ ದಕ್ಷಿಣಕನ್ನಡ, ಉಡುಪಿ ಹಾಗೂ ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯವಿಲ್ಲದೇ ಇರುವುದು ಹಾಗೂ ಆ ಭಾಗದ ಪ್ರಮುಖ ಸಮುದಾಯವಾದ ಬಿಲ್ಲವರಿಗೂ ಅವಕಾಶ ಇಲ್ಲದೇ ಇರುವುದನ್ನು ಮುಖ್ಯವಾಗಿ ಪ್ರಸ್ತಾಪಿಸಿ ರಾಜ್ಯ ಸಚಿವ ಸಂಪುಟದಲ್ಲಿ ಅವಕಾಶ ಪಡೆಯುವ ಯತ್ನ ನಡೆಸಿದ್ದಾರೆ.

ಆ ಹಿನ್ನೆಲೆಯಲ್ಲಿ ಬಿಲ್ಲವ ಸಮುದಾಯ ಮತ್ತು ಕರಾವಳಿ ಭಾಗದ ಪ್ರಾತಿನಿಧ್ಯದ ಭಾಗವಾಗಿ ಹರಿಪ್ರಸಾದ್ ಅವರಿಗೆ ಅವಕಾಶ ಸಿಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಸಂತೋಷ್ ಲಾಡ್, ಕೆ ವೆಂಕಟೇಶ್ ಗೆ ಬಡ್ತಿ?

ಇದರೊಂದಿಗೆ ಕೆಲವು ಸಚಿವರ ಖಾತೆಗಳನ್ನೂ ಬದಲಾಯಿಸುವ ಸಾಧ್ಯತೆ ಕೂಡ ಇದ್ದು, ಸಂತೋಷ್ ಲಾಡ್, ಕೆ ವೆಂಕಟೇಶ್ ಅವರುಗಳ ಖಾತೆಗಳನ್ನು ಬದಲಾಯಿಸಿ ಅವರಿಗೆ ಇನ್ನಷ್ಟು ಮಹತ್ವದ ಖಾತೆಗಳನ್ನು ನೀಡುವ ಯೋಚನೆ ಕೂಡ ಮುಖ್ಯಮಂತ್ರಿಗಳಿಗೆ ಇದೆ ಎನ್ನಲಾಗಿದೆ.

ಕಳೆದ ಒಂದು ವರ್ಷದಿಂದಲೂ ಸಂತೋಷ್ ಲಾಡ್ ಅವರು ಹಲವು ಸಂದರ್ಶನ, ಮಾಧ್ಯಮ ಹೇಳಿಕೆಗಳ ಮೂಲಕ ತಮ್ಮ ತಿಳಿವಳಿಕೆ ಮತ್ತು ಪ್ರಬುದ್ಧತೆಯನ್ನು ಪ್ರದರ್ಶಿಸಿದ್ದಾರೆ. ಸ್ಪಷ್ಟ ಗ್ರಹಿಕೆ ಮತ್ತು ಜನಪರ ಕಾಳಜಿಯ ಅವರ ನಿಲುವುಗಳು ಹೈಕಮಾಂಡ್ ಗಮನಕ್ಕೂ ಬಂದಿದ್ದು, ಅವರಿಗೆ ಉತ್ತಮ ಖಾತೆ ನೀಡಬೇಕು ಎಂಬ ಒತ್ತಾಸೆ ಅತ್ತ ಕಡೆಯಿಂದಲೂ ಇದೆ. ಹಾಗೇ ಕೆ ವೆಂಕಟೇಶ್ ಅವರಿಗೂ ಉತ್ತಮ ಖಾತೆ ನೀಡುವ ಬಗ್ಗೆ ಸ್ವತಃ ಸಿದ್ದರಾಮಯ್ಯ ಆಸಕ್ತಿ ಹೊಂದಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.

ಅದೇ ಹೊತ್ತಿಗೆ ಡಾ ಜಿ ಪರಮೇಶ್ವರ್ ಅವರು ಗೃಹ ಖಾತೆಯನ್ನು ನಿಭಾಯಿಸುತ್ತಿರುವ ರೀತಿಯ ಬಗ್ಗೆ ಪಕ್ಷದೊಳಗೆ ಮತ್ತು ಹೈಕಮಾಂಡ್ ಮಟ್ಟದಲ್ಲಿ ಸಾಕಷ್ಟು ಅತೃಪ್ತಿ ಇದ್ದು, ಅವರ ಖಾತೆ ಕೂಡ ಬದಲಾಗುವ ಸಾಧ್ಯತೆ ಹೆಚ್ಚಿದೆ ಎಂದೂ ಹೇಳಲಾಗುತ್ತಿದೆ. ರಾಮೇಶ್ವರಂ ಕೆಫೆ ಸ್ಫೋಟ, ಹುಬ್ಬಳ್ಳಿ ನೇಹಾ ಹತ್ಯೆ, ಪ್ರಜ್ವಲ್ ಪ್ರಕರಣ, ಬಿ ಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣಗಳ ವಿಷಯದಲ್ಲಿ ಗೃಹ ಇಲಾಖೆಯ ಕಾರ್ಯವೈಖರಿ ಬಗ್ಗೆ ಹೈಕಮಾಂಡ್ ಕಳೆದ ವಾರ ಕೂಡ ಅಸಮಾಧಾನ ವ್ಯಕ್ತಪಡಿಸಿದೆ. ಆ ಹಿನ್ನೆಲೆಯಲ್ಲಿ ಗೃಹ ಖಾತೆ ಪರಮೇಶ್ವರ್ ಕೈತಪ್ಪುವುದು ಬಹುತೇಕ ಖಚಿತ ಎನ್ನಲಾಗಿದೆ.

ಮುಖವಾಗಿ ಗೃಹ, ಉನ್ನತ ಶಿಕ್ಷಣ ಮತ್ತು ಪ್ರಾಥಮಿಕ ಶಿಕ್ಷಣ ಖಾತೆಗಳ ನಿರ್ವಹಣೆಯ ವಿಷಯದಲ್ಲಿ ಸಚಿವರ ವೈಫಲ್ಯಗಳು ಮುಖ್ಯಮಂತ್ರಿ ಮತ್ತು ಪಕ್ಷದ ಹೈಕಮಾಂಡ್ ಅಸಮಾಧಾನಕ್ಕೆ ಕಾರಣವಾಗಿವೆ. ಆ ಹಿನ್ನೆಲೆಯಲ್ಲಿ ಈ ಮೂರೂ ಖಾತೆಗಳನ್ನು ಅನುಭವಿಗಳಿಗೆ ನೀಡಲು ತೀರ್ಮಾನಿಸಲಾಗಿದೆ. ಆ ಹಿನ್ನೆಲೆಯಲ್ಲಿ ಬಿ ಕೆ ಹರಿಪ್ರಸಾದ್, ಸಂತೋಷ್ ಲಾಡ್ ಮತ್ತು ಆರ್ ವಿ ದೇಶಪಾಂಡೆ ಅವರಿಗೆ ಅದೃಷ್ಟ ಒಲಿಯುವ ಸಾಧ್ಯತೆ ಇದೆ.

Tags:    

Similar News