ಸಿಎಂ ಔತಣಕೂಟ ನೆಪದಲ್ಲಿ ಸಚಿವರ ಸಭೆ; ಸಂಪುಟ ಪುನಾರಚನೆ ಚರ್ಚೆ, ಕೆಎನ್‌ಆರ್ ಕರೆತರಲು ಪ್ಲಾನ್‌

ಸಿಎಂ ಸಿದ್ದರಾಮಯ್ಯ ಅ.13ರಂದು ಎಲ್ಲಾ ಸಚಿವರಿಗೆ ಔತಣಕೂಟ ನೀಡುವ ನೆಪದಲ್ಲಿ ಸಭೆ ಕರೆದಿದ್ದು, ಈ ವೇಳೆ ಸಚಿವ ಸಂಪುಟ ಪುನರ್‌ ರಚನೆಯ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

Update: 2025-10-09 06:23 GMT

ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು. 

Click the Play button to listen to article

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟ ಪುನಾರಚನೆ ಕುರಿತು ವಾಲ್ಮೀಕಿ ಜಯಂತಿಯಂದು ನೀಡಿದ್ದ ಹೇಳಿಕೆ ಇದೀಗ ರಾಜ್ಯ ಕಾಂಗ್ರೆಸ್‌ ಪಾಳಯದಲ್ಲಿ ಚಟುವಟಿಕೆ ತೀವ್ರಗೊಳ್ಳುವಂತೆ ಮಾಡಿದೆ. ಮುಂದಿನ ಸಚಿವ ಸಂಪುಟ ವಿಸ್ತರಣೆ ವೇಳೆ ವಾಲ್ಮೀಕಿ ಸಮುದಾಯದ ನಾಯಕರಾದ ಬಿ.ನಾಗೇಂದ್ರ ಹಾಗೂ ಕೆ.ಎನ್‌. ರಾಜಣ್ಣ ಅವರನ್ನು ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳುವ ಕುರಿತು ಚಿಂತನೆ ನಡೆಸಲಾಗಿದೆ.

ಇನ್ನೂ ಪಕ್ಷದ ಆಂತರಿಕ ಮೌಲ್ಯಮಾಪನದಲ್ಲಿ ಕಳಪೆ ಸಾಧನೆ ತೋರಿರುವ ಹಲವು ಸಚಿವರಿಗೆ ಕೊಕ್‌ ನೀಡುವ ಸಾಧ್ಯತೆ ಇದ್ದು, ಆ ಜಾಗಕ್ಕೆ ಹೊಸಬರಿಗೆ ಅವಕಾಶ ನೀಡುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹಾಗಾಗಿ ಕಾಂಗ್ರೆಸ್‌ ಪಾಳಯದಲ್ಲಿ ಮಂತ್ರಿಗಿರಿಗಾಗಿ ಹಲವು ಶಾಸಕರು ಹೈಕಮಾಂಡ್‌ ನಾಯಕರಿಗೆ ದುಂಬಾಲು ಬಿದ್ದಿದ್ದಾರೆ. 

ಸಚಿವ ಸಂಪುಟ ಪುನಾರಚನೆಗೆ ಹೈಕಮಾಂಡ್‌ ನಾಯಕರು ಸಿಎಂ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಅ.13ರಂದು ಎಲ್ಲಾ ಸಚಿವರಿಗೆ ಔತಣಕೂಟ ಏರ್ಪಡಿಸಲಾಗಿದೆ. ಇದೇ ಸಭೆಯಲ್ಲಿ ಸಚಿವ ಸಂಪುಟ ಪುನಾರಚನೆ ಕುರಿತು ಚರ್ಚಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. 

13 ಸಚಿವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ

ರಾಜ್ಯ ಸರ್ಕಾರಕ್ಕೆ ಎರಡೂವರೆ ವರ್ಷ ಪೂರ್ಣವಾಗುತ್ತಿರುವ ಹೊತ್ತಿನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಆರಂಭವಾಗಿದೆ. ನವೆಂಬರ್ ಇಲ್ಲವೇ ಡಿಸೆಂಬರ್‌ನಲ್ಲಿ ಸಂಪುಟಕ್ಕೆ ಮೇಜರ್ ಸರ್ಜರಿ ನಡೆಯುವ ಸಾಧ್ಯತೆ ಇದೆ. ಈ ವೇಳೆ 13ಕ್ಕೂ ಹೆಚ್ಚು ನಿಷ್ಕ್ರಿಯ ಹಾಗೂ ಭ್ರಷ್ಟಾಚಾರ ಆರೋಪ ಹೊತ್ತಿರುವ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಇದರ ಜೊತೆಗೆ ಮುಂದಿನ ಎರಡೂವರೆ ವರ್ಷ ಚುನಾವಣೆಗೂ ಗಮನ ಹರಿಸಬೇಕಿರುವುದು ಸಿಎಂ ಹಾಗೂ ಸಚಿವರಿಗಿರುವ ಪ್ರಮುಖ ಸವಾಲಾಗಿದೆ.

ಕೆ.ಎನ್‌. ರಾಜಣ್ಣ,ಬಿ. ನಾಗೇಂದ್ರ ಕರೆತರಲು ಯತ್ನ

ವಾಲ್ಮೀಕಿ ನಿಗಮ ಮಂಡಳಿ ಹಗರಣದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಹಾಗೂ ಮತಕಳವು ವಿಚಾರದಲ್ಲಿ ಹೈಕಮಾಂಡ್‌ಗೆ ಮುಜುಗರವಾಗುವ ರೀತಿಯಲ್ಲಿ ಮಾತನಾಡಿ ಸಂಪುಟದಿಂದ ವಜಾಗೊಂಡಿದ್ದ ಸಿಎಂ ಆಪ್ತ, ಮಧುಗಿರಿ ಶಾಸಕ ಕೆ. ಎನ್‌ ರಾಜಣ್ಣ ಅವರನ್ನು ಮತ್ತೆ ಸಂಪುಟಕ್ಕೆ ಕರೆತರಲು ಪ್ರಯತ್ನ ನಡೆಯುತ್ತಿದೆ. ಖಾಲಿ ಉಳಿದಿರುವ ಸಚಿವ ಸ್ಥಾನಕ್ಕೆ ನಾಯಕ ಸಮುದಾಯದ ಶಾಸಕರನ್ನು ಪರಿಗಣಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದರು. 

ಸಚಿವ ಸ್ಥಾನದ ಪ್ರಮುಖ ಆಕಾಂಕ್ಷಿಗಳು

ಹಳಿಯಾಳ ಶಾಸಕ ಆರ್‌.ವಿ ದೇಶಪಾಂಡೆ, ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್, ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್‌, ಕೊಪ್ಪಳ ಶಾಸಕ ಹಾಗೂ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ವಿಜಯನಗರ ಶಾಸಕ ಲೇಔಟ್ ಕೃಷ್ಣಪ್ಪ, ಶಿರಾ ಶಾಸಕ ಟಿ.ಬಿ.ಜಯಚಂದ್ರ, ಕೆಜಿಎಫ್ ಶಾಸಕಿ ರೂಪ ಶಶಿಧರ್, ಅರಸೀಕೆರೆ ಶಾಸಕ ಶಿವಲಿಂಗೇಗೌಡ, ಬಳ್ಳಾರಿ ಶಾಸಕ ಬಿ. ನಾಗೇಂದ್ರ, ಮುದ್ದೆಬಿಹಾಳ ಶಾಸಕ ಅಪ್ಪಾಜಿ ನಾಡಗೌಡ, ಅಥಣಿ ಶಾಸಕ ಲಕ್ಷ್ಮಣ್ ಸವದಿ, ತರೀಕೆರೆ ಶಾಸಕ ಶ್ರೀನಿವಾಸ್‌, ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್, ವಿಧಾನಸಭಾಧ್ಯಕ್ಷ ಯು.ಟಿ. ಖಾದ‌ರ್, ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ, ಚಳ್ಳಕೆರೆ ಶಾಸಕ ರಘುಮೂರ್ತಿ, ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರ ಸ್ವಾಮಿ, ಆನೇಕಲ್ ಶಾಸಕ ಶಿವಣ್ಣ, ಜೇವರ್ಗಿ ಶಾಸಕ ಅಜಯ್ ಸಿಂಗ್ ಅವರು ಸಚಿವ ಸ್ಥಾನದ  ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. 

ಬಿಹಾರ ಚುನಾವಣೆ ನಂತರ ಪುನಾರಚನೆ ಸಾಧ್ಯತೆ

ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್‌ ರಾಷ್ಟ್ರೀಯ ನಾಯಕರು ಸದ್ಯ ಬಿಹಾರ ಚುನಾವಣೆ ಕಡೆ ಹೆಚ್ಚು ಗಮನ ಹರಿಸಿರುವುದರಿಂದ ರಾಜ್ಯ ರಾಜಕಾರಣದ ವಿಷಯಗಳಿಗೆ ಹೆಚ್ಚು ಗಮನ ಕೊಡುತ್ತಿಲ್ಲ. ಸಚಿವ ಸಂಪುಟ ಪುನಾರಚನೆಯಂತಹ ಮಹತ್ವದ ವಿಷಯಗಳನ್ನು ಎಲ್ಲಾ ನಾಯಕರು ಸೇರಿ ತೀರ್ಮಾನ ಮಾಡಬೇಕಾಗಿರುವುದರಿಂದ ಬಿಹಾರ ಚುನಾವಣೆ(ನ.14) ಮುಗಿದ ನಂತರ ಸಂಪುಟ ವಿಸ್ತರಣೆಗೆ ಮುಂದಾಗಬಹುದು ಎಂದು ಮೂಲಗಳು ತಿಳಿಸಿವೆ. 

Tags:    

Similar News