Cabinet Meeting | ಸಚಿವ ಸಂಪುಟದ ಮುಂದೆ ಒಳ ಮೀಸಲಾತಿ ವರದಿ ಮಂಡನೆ ಇಂದು; ಅಂಗೀಕಾರದ ವಿಶ್ವಾಸ
ಒಳ ಮೀಸಲಾತಿಗಾಗಿ ಪರಿಶಿಷ್ಟ ಜಾತಿಯ ಸಮುದಾಯಗಳು ನಡೆಸಿದ ಮೂರೂವರೆ ದಶಕದ ಹೋರಾಟವು ಅಂತೂ ಫಲ ಕೊಡುವ ಸಮಯ ಸನ್ನಿಹಿತವಾಗಿದೆ.;
ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವ ಸಲುವಾಗಿ ನಿವೃತ್ತ ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಏಕ ಸದಸ್ಯ ಆಯೋಗ ಸಿದ್ಧಪಡಿಸಿರುವ ಪರಿಶಿಷ್ಟ ಜಾತಿಗಳ ಸಮಗ್ರ ಸಮಿಕ್ಷಾ ವರದಿ ಇಂದು ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಲಿದೆ.
ಒಳ ಮೀಸಲಾತಿಗಾಗಿ ಪರಿಶಿಷ್ಟ ಜಾತಿಯ ಸಮುದಾಯಗಳು ನಡೆಸಿದ ಮೂರೂವರೆ ದಶಕದ ಹೋರಾಟವು ಅಂತೂ ಫಲ ಕೊಡುವ ಸಮಯ ಸನ್ನಿಹಿತವಾಗಿದೆ.
ನಾಗಮೋಹನ್ ವರದಿಯನ್ನು ಸಂಪುಟದಲ್ಲಿ ಮಂಡಿಸಿ, ಅಂಗೀಕರಿಸುವ ಸಾಧ್ಯತೆಗಳಿವೆ. ಈಗಾಗಲೇ ವರದಿಯನ್ನು ಯಾವುದೇ ಆಕ್ಷೇಪಣೆಗಳಿಗೆ ಆಸ್ಪದ ನೀಡದಂತೆ ಒಪ್ಪಿಕೊಳ್ಳುವ ಕುರಿತು ಸರ್ಕಾರದಲ್ಲಿನ ದಲಿತ ಸಮುದಾಯದ ಶಾಸಕರು, ಸಚಿವರು ತೀರ್ಮಾನಿಸಿರುವ ಕಾರಣ ಸಂಪುಟ ಸಭೆಯ ಅಂಗೀಕಾರ ಸುಲಭವಾಗಲಿದೆ ಎನ್ನಲಾಗಿದೆ.
ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಿ ಮಾಹಿತಿ ಬಹಿರಂಗಪಡಿಸಿದ ಬಳಿಕ ಸಾರ್ವಜನಿಕರ ಆಕ್ಷೇಪಣೆಗೆ ಕಾಲಾವಕಾಶ ನೀಡುವ ಸಾಧ್ಯತೆ ಇದೆ. ಮೀಸಲಾತಿ ಹಂಚಿಕೆಗೆ ಕಗ್ಗಂಟಾಗಿದ್ದ ಜಾತಿ ಸೂಚಕ ಗುಂಪುಗಳನ್ನೇ ಪ್ರತ್ಯೇಕ ವರ್ಗವಾಗಿ ರಚಿಸಿದ್ದು, ಶೇ 1 ರಷ್ಟು ಮೀಸಲಾತಿ ಕಲ್ಪಿಸಿರುವುದು ಆಯೋಗದ ಜಾಣ್ಮೆಯ ನಡೆ ಎಂದು ವಿಶ್ಲೇಷಿಸಿದರೂ ಕೆಲವರ ಅಸಮಾಧಾನವಿದ್ದು, ಆತಂಕ ತಂದಿದೆ.
ವರದಿ ಅಂಗೀಕರಿಸಿದರೂ ವಿರೋಧದ ಅಲೆ
ನಾಗಮೋಹನ್ ದಾಸ್ ಆಯೋಗದಲ್ಲಿ ಎಡಗೈ ಸಮುದಾಯಕ್ಕೆ ಶೇ 6, ಬಲಗೈನವರಿಗೆ ಶೇ 5, ಲಂಬಾಣಿ, ಕೊರಚ, ಕೊರಮ ಸೇರಿದಂತೆ ಸ್ಪೃಶ್ಯ ಜಾತಿಗಳಿಗೆ ಶೇ 4, ಅಲೆಮಾರಿ ಹಾಗೂ ಸಣ್ಣ ಜಾತಿಗಳಿಗೆ ಶೇ 1 ಹಾಗೂ ಆದಿಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಜಾತಿಗಳ ಪ್ರತ್ಯೇಕ ಗುಂಪಿಗೆ ಶೇ 1 ರಷ್ಟು ಮೀಸಲಾತಿ ಹಂಚಿಕೆ ಮಾಡಿರುವ ಬಗ್ಗೆ ಕೆಲ ಸಮುದಾಯಗಳಿಂದ ಆಕ್ಷೇಪವೂ ಕೇಳಿಬಂದಿದೆ.
ಎಡಗೈ ಸಮುದಾಯದ ಜನಸಂಖ್ಯೆ ಹೆಚ್ಚಾಗಿದ್ದು, ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿದ್ದಾರೆ. ಹಾಗಾಗಿ ಎಡಗೈನವರಿಗೆ ಶೇ 8 ರಷ್ಟು ಮೀಸಲಾತಿ ಒದಗಿಸಬೇಕು ಎಂದು ಮಾದಿಗ ಸಮುದಾಯಗಳ ಸ್ವಾಭಿಮಾನದ ಒಕ್ಕೂಟ ಆಗ್ರಹಿಸಿ, ಆ.11 ರಿಂದ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿರುವುದು ಒಳ ಮೀಸಲಾತಿ ವರದಿ ಜಾರಿಗೆ ತೊಡಕಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇನ್ನು ಪ್ರತ್ಯೇಕ ಗುಂಪಿನಲ್ಲಿರುವ ಆದಿ ದ್ರಾವಿಡ ಜಾತಿಯವರಿಗೆ ಕಡಿಮೆ ಮೀಸಲಾತಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದು, ಕಾನೂನು ಹೋರಾಟ ನಡೆಸಲು ಚಿಂತನೆ ನಡೆಸಿದ್ದಾರೆ. ಇದು ಕೂಡ ಸರ್ಕಾರದ ವರದಿ ಜಾರಿಯ ಆಶಯಕ್ಕೆ ಅಡ್ಡಿಯಾಗಲಿದೆ ಎನ್ನಲಾಗಿದೆ.
ಒಟ್ಟಾರೆ, ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳುವ ನಿರ್ಧಾರ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ.