Cabinet Meeting | ಅರಮನೆ ಮೈದಾನ ಸಂಪೂರ್ಣ ಸುಪರ್ದಿಗೆ ಸುಗ್ರೀವಾಜ್ಞೆ ಜಾರಿಗೆ ನಿರ್ಧಾರ
ಬೆಂಗಳೂರು ಅರಮನೆ ಮೈದಾನದ ಜಾಗದ ಬಳಕೆ ಮತ್ತು ನಿಯಂತ್ರಣದ ಅಧಿಕಾರವನ್ನು ತನ್ನ ಬಳಿಯೇ ಇಟ್ಟುಕೊಳ್ಳುವುದಕ್ಕಾಗಿ ಸುಗ್ರೀವಾಜ್ಞೆ ತರಲು ಸರ್ಕಾರ ಮುಂದಾಗಿದೆ.
ಅರಮನೆ ಮೈದಾನದ ಜಾಗದ ಮೇಲೆ ಸರ್ಕಾರ ಸಂಪೂರ್ಣ ಹಿಡಿತ ಹೊಂದಲು ಸುಗ್ರೀವಾಜ್ಞೆ ಹೊರಡಿಸುವ ಬಗ್ಗೆ ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ಸಂಪುಟ ಸಭೆ ಬಳಿಕ ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು, ಬೆಂಗಳೂರು ಅರಮನೆ ರಸ್ತೆ ಅಗಲೀಕರಣ ಯೋಜನೆ ವಿಚಾರವಾಗಿ ಟಿಡಿಆರ್ ವಿಸ್ತರಣೆಗೆ ಸಂಪುಟ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಗಿದ್ದು, ವಾರಸುದಾರರಿಗೆ ಟಿಡಿಆರ್ ನೀಡದಿರಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
1996ರಲ್ಲಿ ಅರಮನೆ ಮೈದಾನ ವಶಕ್ಕೆ ಪಡೆಯಲು ಕಾನೂನು ಮಾಡಲಾಗಿತ್ತು. ಅದನ್ನು ರಾಜ್ಯಪಾಲರು, ರಾಷ್ಟ್ರಪತಿಗಳ ಅನುಮೋದನೆಗೆ ಕಳಿಸಲಾಗಿತ್ತು. ಅಲ್ಲಿ ಅಂಗೀಕಾರವಾಗಿರುವ ಕಾನೂನಿನಂತೆ 472 ಎಕರೆ ಭೂಮಿಯನ್ನು ಗೊತ್ತುಪಡಿಸಲಾಗಿತ್ತು. ಅಂದಿನ ದರ, ವಿವಿಧ ಅಂಶ ಪರಿಗಣಿಸಿ 11ಕೋಟಿ ರೂ. ಮೌಲ್ಯ ನಿರ್ಧರಿಸಿತ್ತು. ಇದೀಗ ಆ ಕಾನೂನು ಜಾರಿಯಾಗಿ 28 ವರ್ಷ ಗತಿಸಿದೆ ಎಂದು ಪಾಟೀಲ್ ಮಾಹಿತಿ ನೀಡಿದರು.
1996ರ ಭೂಸ್ವಾಧೀನ ಕಾನೂನನ್ನು ಮೈಸೂರು ಮಹಾರಾಜರು ಪ್ರಶ್ನೆ ಮಾಡಿದ್ದರು. ಅದನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಬಳಿಕ ಸುಪ್ರೀಂಕೋರ್ಟ್ಗೆ ಸಿವಿಲ್ ಅಪೀಲು ಹೋಗಿದ್ದರು. ಟಿಡಿಆರ್ ವ್ಯವಸ್ಥೆ ಬಂದ ಮೇಲೆ ಜಯಮಹಲ್ ರಸ್ತೆ, ಬಳ್ಳಾರಿ ರಸ್ತೆ ಅಗಲೀಕಣ ವೇಳೆ ಮತ್ತೆ ಪ್ರಕರಣ ಚರ್ಚೆಗೆ ಬಂದಿತ್ತು. ಪ್ರತಿ ಎಕರೆಗೆ 2.30 ಲಕ್ಷ ರೂ. ಪರಿಹಾರ ಕೊಡಬೇಕು ಎಂದು ಆಗ ತೀರ್ಮಾನವಾಗಿತ್ತು. ಇಷ್ಟು ವರ್ಷ ವ್ಯಾಜ್ಯ ನಡೆಯುತ್ತಿದ್ದರೂ ತಡೆ ಆದೇಶ ಇಲ್ಲ ಎಂದರು.
2004ರಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗುತ್ತದೆ. ಅರಮನೆ ಮೈದಾನವನ್ನು ಅಗಲೀಕರಣ ಉದ್ದೇಶಕ್ಕೆ ಮೌಲೀಕರಿಸಿ ವರ್ಗಾವಣೆ ಮಾಡಲು ಕೋರ್ಟ್ ಆದೇಶ ಮಾಡುತ್ತೆ. 15.36 ಎಕರೆ ಭೂಮಿ, ಪ್ರತಿ ಎಕರೆಗೆ 200 ಕೋಟಿಯಂತೆ 3014 ಕೋಟಿ ರೂ. ಕೊಡಬೇಕಾಗುತ್ತೆ. ಎರಡು ಲಕ್ಷ ಮೂವತ್ತು ಸಾವಿರ ಎಲ್ಲಿ, 3014 ಕೋಟಿ ರೂ ಎಲ್ಲಿ. ಇದರಿಂದಾಗಿ ಅಭಿವೃದ್ದಿಗೆ ತೊಡಕಾಗಲಿದೆ ಎಂದು ಪಾಟೀಲ್ ವಿವರಿಸಿದರು.
ಈ ಎಲ್ಲಾ ಹಿನ್ನೆಲೆಯಲ್ಲಿ ಅರಮನೆ ಮೈದಾನದ ಮೇಲೆ ಸರ್ಕಾರ ಬಳಕೆ ಮತ್ತು ನಿಯಂತ್ರಣದ ಸಂಪೂರ್ಣ ಹಕ್ಕು ಹೊಂದಲು ಪೂರಕವಾಗಿ ಸುಗ್ರೀವಾಜ್ಞೆ ಜಾರಿ ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.