C T Ravi Case | ಅಶ್ಲೀಲ ಪದ ಪ್ರಯೋಗ: ಸಿ.ಟಿ. ರವಿ ಪ್ರಕರಣದ ಬಗ್ಗೆ ಪರಿಷತ್ ಸಭಾಪತಿ ಹೇಳಿದ್ದೇನು?
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರು ಮಾತನಾಡಿರುವುದಕ್ಕೆ ಯಾವುದೇ ರೆಕಾರ್ಡ್ ಇಲ್ಲ. ಕಲಾಪ ಮುಂಡೂಡಿದ್ದ ವೇಳೆಯಾದ್ದರಿಂದ ಮೈಕ್ ಆಫ್ ಆಗಿತ್ತು ಎಂದು ಹೊರಟ್ಟಿ ಹೇಳಿದ್ದಾರೆ.
ಬೆಳಗಾವಿ ಅಧಿವೇಶನದ ಕೊನೆಯ ದಿನ ವಿಧಾನ ಪರಿಷತ್ ಕಲಾಪದ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಲೈಂಗಿಕ ಕಿರುಕುಳದ ಭಾಷೆ ಪ್ರಯೋಗಿಸಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯ ಸಿ ಟಿ ರವಿ ಬಂಧನವಾಗಿದೆ. ಇದೀಗ ಈ ಪ್ರಕರಣ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಸದನದ ಒಳಗೇ ಹಿರಿಯ ಮಹಿಳಾ ನಾಯಕಿಯ ಕುರಿತು ಬಿಜೆಪಿಯ ಮಾಜಿ ಸಚಿವರೊಬ್ಬರು ಆಡಿದ್ದಾರೆ ಎನ್ನಲಾಗುತ್ತಿರುವ ಮಾತುಗಳ ಬಗ್ಗೆ ಸಾರ್ವಜನಿಕ ವಲಯದಲ್ಲೂ ಆಕ್ರೋಶ ವ್ಯಕ್ತವಾಗಿದೆ. ಜೊತೆಗೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಈ ಪ್ರಕರಣ ತೀವ್ರ ಆರೋಪ- ಪ್ರತ್ಯಾರೋಪಗಳಿಗೆ ವೇದಿಕೆ ಒದಗಿಸಿದೆ.
ಈ ನಡುವೆ ಸದನದಲ್ಲಿ ನಡೆದ ಈ ಅಶ್ಲೀಲ ನಿಂದನೆಯ ಕುರಿತು ಸದನದ ಮುಖ್ಯಸ್ಥರಾದ ಸಭಾಪತಿ ಬಸವರಾಜ ಹೊರಟ್ಟಿ ಅವರು ಏನು ಹೇಳಿದರು? ವಾಸ್ತವವಾಗಿ ಅಲ್ಲಿ ನಡೆದಿದ್ದು ಏನು ಎಂಬುದರ ಕುರಿತು ಅವರ ಅಭಿಪ್ರಾಯ ಏನು? ಎಂಬುದು ಭಾರೀ ಕುತೂಹಲ ಕೆರಳಿಸಿದೆ.
ಸಭಾಪತಿಗಳು ಗಲಾಟೆಯ ಕುರಿತು ಏನೆಂದರು?
ಸಿ ಟಿ ರವಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಸದನದಲ್ಲಿ ನಡೆದ ವಾಕ್ಸಮರದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸಭಾಪತಿ ಹೊರಟ್ಟಿ ಅವರು, “ಸದನದಲ್ಲಿ ಪ್ರಶ್ನೋತ್ತರ ವೇಳೆ ಮುಗಿದ ಬಳಿಕ, ಕಾಂಗ್ರೆಸ್ನವರು ಕೇಂದ್ರ ಸಚಿವ ಅಮಿತ್ ಶಾ ಅವರ ವಿರುದ್ದ ಪ್ರತಿಭಟನೆಗೆ ಮುಂದಾದರು. ಈ ವೇಳೆ ಗಲಾಟೆ ಆಯ್ತು, ಗಲಾಟೆ ನಿಯಂತ್ರಣಕ್ಕೆ ಬರದ ಹಿನ್ನಲೆಯಲ್ಲಿ ಕಲಾಪ ಮುಂದೂಡಲಾಗಿತ್ತು. ಆಗ ಈ ಗಲಾಟೆ ಆಗಿದೆ. ಸಂಜೆ 6 ಗಂಟೆಗೆ ಸಿ ಟಿ ರವಿ ಬಂಧನವಾಗಿರುವ ಬಗ್ಗೆ ನನಗೆ ಮಾಹಿತಿ ಬಂದಿತ್ತು” ಎಂದು ಹೇಳಿದ್ದಾರೆ.
“ಈ ಪ್ರಕರಣದ ಕುರಿತು ನಾನು ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಿಟಿ ರವಿ ಅವರನ್ನು ಕರೆದು ಮಾತನಾಡಿದೆ. ಇದನ್ನು ಇಲ್ಲಿಗೆ ಮುಗಿಸೋಣ ಅಂತ ಸಲಹೆ ನೀಡಿದೆ. ನಾನು ಅವರು (ಹೆಬ್ಬಾಳ್ಕರ್) ಹತಾಶ(frustrated)ರಾಗಿದ್ದಾರೆ ಎಂದಿದ್ದೇನೆ. ಅದನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ ಎಂದು . ರವಿ ಅವರು ನನಗೆ ಹೇಳಿದರು” ಎಂದು ಸಭಾಪತಿಗಳು ಹೇಳಿದ್ದಾರೆ.
“ಸದನದ ಒಳಗೆ ಈ ರೀತಿ ಆಗಿರುವುದು ಇದೇ ಮೊದಲ ಸಲ. 45 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಇಂತಹ ಘಟನೆ ಆಗಿರಲಿಲ್ಲ. ಒಂದೊಂದು ಸಲ ಯಾಕಾದರೂ ಅಲ್ಲಿ ಕೂತಿದ್ದೇನೆ ಅನಿಸುತ್ತೆ. ನಾನು ಯಾರ ಪರವೂ ಇಲ್ಲ, ಎರಡು ಕಡೆ ಯೋಚನೆ ಮಾಡಿದ್ದೇನೆ. ಇದು ಕಡ್ಡಿ ಹೋಗಿ ಗುಡ್ಡ ಆಯ್ತು. ಬೇಲಿಯೇ ಎದ್ದು ಹೊಲ ಮೇಯ್ದರೆ ಏನಾಗತ್ತೆ. ಜನ ನಮ್ಮನ್ನು ನೋಡುತ್ತಾರೆ. ಶಾಸಕರು ನಡುವಳಿಕೆ ತಿದ್ದುಕೊಳ್ಳಬೇಕು” ಎಂದೂ ಸಭಾಪತಿಗಳು ಕಿವಿಮಾತು ಹೇಳಿದ್ದಾರೆ.
ಯಾವುದೇ ದಾಖಲೆ ಇಲ್ಲ ಎಂದ ಸಭಾಪತಿ
“ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರು ಮಾತನಾಡಿರುವುದಕ್ಕೆ ಯಾವುದೇ ರೆಕಾರ್ಡ್ ಇಲ್ಲ. ಕಲಾಪ ಮುಂಡೂಡಿದ್ದ ವೇಳೆಯಾದ್ದರಿಂದ ಮೈಕ್ ಆಫ್ ಆಗಿತ್ತು. ಆದರೆ, ಅಶ್ಲೀಲ ಪದ ಬಳಸಿದ್ದಾರೆ ಎಂದು ನಾಲ್ವರು ಸಾಕ್ಷಿ ಹೇಳಿದ್ದಾರೆ. ಆಡಿಯೋ ರೆಕಾರ್ಡ್ ಆಗಿಲ್ಲ ಸಾಕ್ಷಿಗಳು ಮಾತ್ರ ಇವೆ. ನಮಗೆ ಆಡಿಯೋ ಸಿಕ್ಕಿಲ್ಲ” ಎಂದೂ ಹೇಳಿದ್ದಾರೆ.