Lakshmi Hebbalkar vs CT Ravi | ಅವಾಚ್ಯ ಪದ ಬಳಕೆ ದೃಢ; ಸಿ.ಟಿ.ರವಿಗೆ ಸಂಕಷ್ಟ

ಸದನದ ನಾಲ್ಕು ಗಂಟೆಗಳ ವಿಡಿಯೋದಲ್ಲಿ ಸಿ. ಟಿ. ರವಿ ಅವರು ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ಒಟ್ಟು ಏಳು ಬಾರಿ ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ ಎಂದು ಸಿಐಡಿ ಮೂಲಗಳು ತಿಳಿಸಿವೆ.;

Update: 2025-01-17 04:54 GMT

ಬೆಳಗಾವಿ ಅಧಿವೇಶನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​  ವಿರುದ್ಧ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ  ಅವಾಚ್ಯ ಶಬ್ದ ಬಳಸಿರುವುದು ಸಿಐಡಿ ತನಿಖೆಯಿಂದ ದೃಢಪಟ್ಟಿದೆ.

ವಿಧಾನ ಪರಿಷತ್ ಸಭಾಪತಿ ಬಸವರಾಜ ಬೊಮ್ಮಾಯಿ ಅವರ ಆಕ್ಷೇಪದ ನಡುವೆಯೂ ತನಿಖೆ ತೀವ್ರಗೊಳಿಸಿರುವ ಸಿಐಡಿ ಅಧಿಕಾರಿಗಳು ಸಿ.ಟಿ ರವಿ ಬಳಸಿದ ಅವಾಚ್ಯ ಪದದ ವಿಡಿಯೋವನ್ನು ರಾಜ್ಯ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ (ಡಿಎಪಿಆರ್​)ಯಿಂದ ಪಡೆದು ಫೋರೆನ್ಸಿಕ್ ಪರೀಕ್ಷೆಗೆ ಒಳಪಡಿಸಿದ್ದರು. ಇದರಲ್ಲಿ ಲಕ್ಷ್ಮಿ ಹೆಬ್ಬಾಳಕರ್ ವಿರುದ್ಧ ಸಿ.ಟಿ. ರವಿ ಅವರು ಅಶ್ಲೀಲ ಪದ ಬಳಕೆ ಮಾಡಿರುವುದು ದೃಢಪಟ್ಟಿದೆ.

ಸದನದ ನಾಲ್ಕು ಗಂಟೆಗಳ ವಿಡಿಯೋದಲ್ಲಿ  ಸಿ. ಟಿ. ರವಿ ಅವರು ಒಟ್ಟು ಏಳು ಬಾರಿ ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಧ್ವನಿ ಪರೀಕ್ಷೆಗೆ ನಿರ್ಧಾರ

ಸದನದ ವಿಡಿಯೋದಲ್ಲಿ ಸಿ. ಟಿ. ರವಿ ಅವರು ಲಕ್ಷ್ಮಿ ಹೆಬ್ಬಾಳಕರ್ ಅವರ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಧ್ವನಿ ಪರೀಕ್ಷೆಗಾಗಿ ಸಿ.ಟಿ ರವಿ ಅವರ ಧ್ವನಿ ಮಾದರಿಯನ್ನು ಪಡೆಯಲು ಸಿಐಡಿ ಮುಂದಾಗಿದೆ. ಆದರೆ, ತಾನು ಅವಾಚ್ಯ ಶಬ್ದ ಬಳಸಿಲ್ಲ ಎಂದು ಪುನರುಚ್ಚರಿಸಿರುವ ಸಿ.ಟಿ ರವಿ ಅವರು ಧ್ವನಿ ಮಾದರಿ ನೀಡಲು ನಿರಾಕರಿಸಿದ್ದಾರೆ. ಹಾಗಾಗಿ ಸಿ ಐ ಡಿ ಅಧಿಕಾರಿಗಳು, ನ್ಯಾಯಾಲಯದ ಮೂಲಕ ಸಿ. ಟಿ. ರವಿ ವಿಚಾರಣೆ ಹಾಗೂ ಧ್ವನಿ ಮಾದರಿ ಪಡೆಯಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ಹಿನ್ನೆಲೆ ಏನು?

ಬೆಳಗಾವಿ ಚಳಿಗಾಲದ ಅಧಿವೇಶನದ ಕೊನೆಯ ದಿನ ಡಿ.​ 19 ರಂದು ವಿಧಾನ ಪರಿಷತ್‌ನಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಕುರಿತು ಅಮಿತ್ ಶಾ ಬಳಸಿದ ಅವಹೇಳನಕಾರಿ ಹೇಳಿಕೆ ಕುರಿತಂತೆ

ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಸಿ.ಟಿ ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಮೀಪ ಬಂದು ಅವಾಚ್ಯ ಪದ ಬಳಸಿ ನಿಂದಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು.

ಈ ಕುರಿತು ಲಕ್ಷ್ಮೀ ಹೆಬ್ಬಾಳಕರ್ ಅವರು ಹಿರೇಬಾಗೇವಾಡಿ ಪೊಲೀಸ್​ ಠಾಣೆಯಲ್ಲಿ ರವಿ ವಿರುದ್ಧ ದೂರು ನೀಡಿದ್ದರು. ಪೊಲೀಸರು ಎಫ್​ಐಆರ್ ದಾಖಲಿಸಿ, ಬಂಧಿಸಿದ್ದರು.

ಸಿ. ಟಿ. ರವಿ ಬಂಧನ, ಪೊಲೀಸರ ಕಾರ್ಯವೈಖರಿ ಬಗ್ಗೆ ರಾಜಕೀಯ ಕೋಲಾಹಲ ಸೃಷ್ಟಿಸಿತ್ತು. ಬಳಿಕ ರಾಜ್ಯ ಸರ್ಕಾರ ಪ್ರಕರಣವನ್ನು ಸಿ ಐ ಡಿ ಗೆ ವಹಿಸಿತ್ತು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸಿಐಡಿ ಅಧಿಕಾರಿಗಳು, ಘಟನಾವಳಿ ಕುರಿತ ವಿಡಿಯೋ ನೀಡುವಂತೆ ಡಿಎಪಿಆರ್​ಗೆ ಪತ್ರ ಬರೆದಿದ್ದರು ಸಿಐಡಿ ಕೋರಿಕೆ ಹಿನ್ನೆಲೆಯಲ್ಲಿ ಡಿಎಪಿಆರ್ ಇಲಾಖೆ ವಿಡಿಯೋ ನೀಡಿತ್ತು.

ಪ್ರಕರಣ ಕುರಿತಂತೆ ಸಿ. ಟಿ. ರವಿ ಅವರು ತಾವು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ವಿರುದ್ಧ ಫ್ರಸ್ಟ್ರೇಟ್​ ಎಂಬ ಪದ ಬಳಸಿದ್ದೇ ಹೊರತು ನಿಂದಿಸಿರಲಿಲ್ಲ. ಅಲ್ಲದೇ ತಾನು ನಿಂದಿಸಿದ್ದಕ್ಕೆ ಅಸಲಿ ವಿಡಿಯೋ ಇಲ್ಲ ಎಂದು ಹೇಳಿದ್ದರು. ಇದಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಕೂಡ ಲಕ್ಷ್ಮಿ ಹೆಬ್ಬಾಳಕರ್ ಕುರಿತು ಸಿ. ಟಿ. ರವಿ ಅವರು ಅವಾಚ್ಯ ಪದ ಬಳಸಿರುವ ಕುರಿತು ಯಾವುದೇ ಆಡಿಯೋ-ವಿಡಿಯೋ ಇಲ್ಲ. ಈ ಪ್ರಕರಣದಲ್ಲಿ ನನ್ನ ತೀರ್ಪು ಅಂತಿಮ ಎಂದು ಹೇಳಿದ್ದರು. ಸಿಐಡಿ ತನಿಖೆಯ ಅಗತ್ಯತೆ ಕುರಿತು ಗೃಹ ಸಚಿವರಿಗೆ ಪತ್ರ ಬರೆದಿದ್ದರು.

Tags:    

Similar News