BJP Infighting | ವಕ್ಫ್ ಹೋರಾಟದ ನಡುವೆ ಸಿಎಂ ಗಿರಿಗೆ ಟವೆಲ್ ಹಾಕಿದ ಮುಖಂಡರು!
ಒಂದು ಕಡೆ ವಕ್ಫ್ ಆಸ್ತಿ ನೋಂದಣಿ ವಿರುದ್ಧ ಹೋರಾಟದಂತೆ ಮೇಲ್ನೋಟಕ್ಕೆ ಕಾಣುತ್ತಿರುವ ಬಿಜೆಪಿಯ ಹೋರಾಟ, ವಾಸ್ತವವಾಗಿ ಮುಂದಿನ ಮುಖ್ಯಮಂತ್ರಿಗಿರಿಗಾಗಿ ನಡೆಯುತ್ತಿರುವ ಅಂತರ್ಯುದ್ಧದಂತೆ ಭಾಸವಾಗುತ್ತಿದೆ.;
ಉಪ ಚುನಾವಣೆಯ ಸೋಲಿನ ಬಳಿಕ ಪರಾಮರ್ಶೆಯ ಮಾತನಾಡುತ್ತಿರುವ ಬಿಜೆಪಿ ರಾಜ್ಯ ನಾಯಕರ ನಡುವೆ ಈಗಾಗಲೇ ಮುಖ್ಯಮಂತ್ರಿ ರೇಸಿನ ಪೈಪೋಟಿ ಆರಂಭವಾದಂತಿದೆ.
ಮಂಗಳವಾರ ಏಕ ಕಾಲಕ್ಕೆ ಬಿಜೆಪಿಯ ಎರಡೂ ಬಣಗಳ ನಾಯಕರು ಮುಖ್ಯಮಂತ್ರಿ ಹುದ್ದೆಗೆ ಟವಲ್ ಹಾಕುವ ಹೇಳಿಕೆ ನೀಡಿದ್ದಾರೆ. ಬೀದರ್‌ನಲ್ಲಿ ಬೆಳಿಗ್ಗೆ ವಕ್ಫ್ ಆಸ್ತಿ ನೋಂದಣಿ ವಿರುದ್ಧ ಹೋರಾಟ ಸಭೆಯಲ್ಲಿ ಮಾತನಾಡಿದ್ದ ಭಿನ್ನಮತೀಯ ಗುಂಪಿನ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ನಮ್ಮವರೇ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ. ಪಕ್ಷವನ್ನು ರಾಜ್ಯಾದ್ಯಂತ ಸಂಘಟಿಸಿ ನಮ್ಮವರನ್ನೇ ಮುಖ್ಯಮಂತ್ರಿ ಮಾಡುತ್ತೇವೆ ಎಂದು ಹೇಳುವ ಮೂಲಕ ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಗೆ ಟಾಂಗ್ ನೀಡಿದ್ದರು.
ತಮ್ಮ ವಿರೋಧಿ ಬಣದ ಆ ಹೇಳಿಕೆಗೆ ತಕ್ಷಣವೇ ಪ್ರತಿಕ್ರಿಯಿಸಿರುವ ಬಿ ವೈ ವಿಜಯೇಂದ್ರ ಬಣ, ಮುಂದಿನ ಮುಖ್ಯಮಂತ್ರಿ ಕುರ್ಚಿಗೆ ತನ್ನ ಹಕ್ಕುದಾರಿಕೆಯನ್ನು ಪ್ರತಿಪಾದಿಸಿದೆ. ದಾವಣಗೆರೆಯಲ್ಲಿ ಮಾತನಾಡಿರುವ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ, ಮುಂದಿನ ಮುಖ್ಯಮಂತ್ರಿ ವಿಜಯೇಂದ್ರ ಅವರೇ ಆಗಲಿದ್ದಾರೆ ಎಂದು ಹೇಳುವ ಮೂಲಕ ಯತ್ನಾಳ್ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ದಾವಣಗೆರೆಯಲ್ಲಿ ಶಿರಮಗೊಂಡನಹಳ್ಳಿಯಲ್ಲಿ ಮಾಜಿ ಸಚಿವ ಎಸ್ ಎ ರವೀಂದ್ರನಾಥ್ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಎಂ ಪಿ ರೇಣುಕಾಚಾರ್ಯ, ವಿಜಯೇಂದ್ರ ಅವರನ್ನೇ ಮುಂದಿನ ಮುಖ್ಯಮಂತ್ರಿ ಮಾಡುತ್ತೇವೆ. ಯಾವುದೇ ದುಷ್ಟ ಶಕ್ತಿ ಬಂದರೂ ಅದನ್ನು ತಡೆಯಲು ಸಾಧ್ಯವಿಲ್ಲ. ವಿಜಯೇಂದ್ರ ಮುಖ್ಯಮಂತ್ರಿ ಆಗಬೇಕು ಅಂದ್ರೆ ಎರಡು ಕೈ ಎತ್ತಿ ಬೆಂಬಲ ಕೊಡುತ್ತೇವೆ ಎಂದು ಹೇಳಿದ್ದಾರೆ.
ನೀವು ಹಿಂದೂ ಹುಲಿ ಅಲ್ಲ; ಇಲಿ
ದಾವಣಗೆರೆಯಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸೋಲಿನ ಕುರಿತೂ ಈ ಸಂದರ್ಭದಲ್ಲಿ ಪ್ರಸ್ತಾಪಿಸಿದ ರೇಣುಕಾಚಾರ್ಯ, ಸರ್ವಾಧಿಕಾರ ದುರಂಕಾರದಿಂದ ಚುನಾವಣೆ ಸೋತರು. ಯಡಿಯೂರಪ್ಪ ಅವರಿಂದ ಉಂಡು, ತಿಂದು ಅವರಿಂದ ಸಾಕಷ್ಟು ಮಾಡಿಕೊಂಡು ಅವರ ವಿರುದ್ಧವೇ ಮಾತನಾಡ್ತಾರೆ. ದಾವಣಗೆರೆಯಲ್ಲಿ ನಿಮ್ಮ ಸೋಲಿಗೆ ನೀವೇ ಕಾರಣ; ಬೇರೆ ಯಾರೂ ಅಲ್ಲ ಎಂದು ಯತ್ನಾಳ್ ಬಣದಲ್ಲಿ ಗುರುತಿಸಿಕೊಂಡಿರುವ ಮಾಜಿ ಸಂಸದ ಜಿ ಎಂ ಸಿದ್ದೇಶ್ವರ ವಿರುದ್ಧ ಕಿಡಿಕಾರಿದರು.
ಅದೇ ಹೊತ್ತಿಗೆ ಯತ್ನಾಳ್ ವಿರುದ್ಧವೂ ಹರಿಹಾಯ್ದ ರೇಣುಕಾಚಾರ್ಯ, ನೀವು ಹಿಂದೂ ಹುಲಿ ಅಲ್ಲ; ಇಲಿ. ನೀವು ಮುಖವಾಡ ಹಾಕಿಕೊಂಡು ಬದುಕುತಿದ್ದೀರಿ. ಉಪ ಚುನಾವಣೆ ಸೋಲಿಗೆ ಕಾರಣ ಯಡಿಯೂರಪ್ಪ, ವಿಜಯೇಂದ್ರ ಅನ್ನುತ್ತಿದ್ದೀರಿ. ನೀನು ಹಿಂದೂ ಹುಲಿಯಾಗಿ ಶಿಗ್ಗಾವಿಯಲ್ಲಿ ಏನು ಮಾಡಿದೆ ಎಂದು ಕುಟುಕಿದರು.
ಒಟ್ಟಾರೆ, ಒಂದು ಕಡೆ ವಕ್ಫ್ ಆಸ್ತಿ ನೋಂದಣಿ ವಿರುದ್ಧ ಹೋರಾಟದಂತೆ ಮೇಲ್ನೋಟಕ್ಕೆ ಕಾಣುತ್ತಿರುವ ಬಿಜೆಪಿಯ ಹೋರಾಟ, ವಾಸ್ತವವಾಗಿ ಮುಂದಿನ ಮುಖ್ಯಮಂತ್ರಿಗಿರಿಗಾಗಿ ನಡೆಯುತ್ತಿರುವ ಅಂತರ್ಯುದ್ಧದಂತೆ ಭಾಸವಾಗುತ್ತಿದೆ.