ಸಿದ್ದರಾಮಯ್ಯನವರ ಸಮಾಜವಾದಿ ಮುಖವಾಡ ಕಳಚಿದೆ, ರಾಜೀನಾಮೆ ನೀಡದೇ ವಿಧಿಯಿಲ್ಲ: ಬಿವೈ ವಿಜಯೇಂದ್ರ

Update: 2024-08-24 09:32 GMT

ʻʻಸಿಎಂ ಸಿದ್ದರಾಮಯ್ಯ ಅವರ ಸಮಾಜವಾದಿ ಮುಖವಾಡ ಕಳಚಿ ಬಿದ್ದಿದೆ, ಭ್ರಷ್ಟಾಚಾರದ ಕಳಂಕ ಮೆತ್ತಿದೆ. ಹಾಗಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದೇ ವಿಧಿಯಿಲ್ಲʼʼ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.

ಹುಬ್ಬಳ್ಳಿಗೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿಜಯೇಂದ್ರ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ನಿವಾಸಕ್ಕೆ ತೆರಳಿದ್ದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʻʻಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಮೂಡಾ ಹಗರಣ ಪ್ರಸ್ತುತದಲ್ಲಿ ಕೇವಲ 14 ನಿವೇಶನಗಳಿಗೆ ಸೀಮಿತವಾಗಿ ಚರ್ಚೆ ನಡೆಯುತ್ತಿದೆ. ಆದರೆ ಅದು 5,000 ಕೋಟಿಗೂ ಮೀರಿದ ಸಾವಿರಾರು ನಿವೇಶನಗಳ ಬಹುದೊಡ್ಡ ಹಗರಣʼʼ ಎಂದು ಹೇಳಿದರು.

ʻʻಸಿದ್ಧರಾಮಯ್ಯ ಅವರು ಸಿಎಂ ಆದ 18 ತಿಂಗಳಲ್ಲಿ ಇದೊಂದು ಬಹುದೊಡ್ಡ ಹಗರಣವಾಗಿದೆ. ಹಾಗಾಗಿ ಬಿಜೆಪಿ ಸಿಬಿಐ ತನಿಖೆಗೆ ಒತ್ತಾಯಿಸುತ್ತಲೇ ಬಂದಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರದಲ್ಲಿ SIT ನಾಗೇಂದ್ರ ಮತ್ತು ಬಸವರಾಜ ದದ್ದಲ್ ಮೇಲೆ ಚಾರ್ಜ್ ಶೀಟ್ ಹಾಕಿದರೂ ಸಿಎಂ ಮತ್ತು ಡಿಸಿಎಂ ಅವರನ್ನು ರಕ್ಷಿಸಲು ಯತ್ನಿಸಿದರು. ಹಾಗಾಗಿ ವಾಲ್ಮೀಕಿ ಮತ್ತು ಮೂಡಾ ಹಗರಣ ಎರಡರಲ್ಲೂ SIT ತನಿಖೆಯಿಂದ ನ್ಯಾಯ ನಿರೀಕ್ಷೆ ಅಸಾಧ್ಯʼʼ ಎಂದು ವಿಜಯೇಂದ್ರ ಕಿಡಿಕಾರಿದರು.

ʻʻಸಿಎಂ ನೇತೃತ್ವದ ಸಿಂಗಲ್ ಮ್ಯಾನ್ ವಿಚಾರಣಾ ಕಮಿಷನ್, ಎಸ್ಐಟಿಯಿಂದ ತನಿಖೆ ಸಾಧ್ಯವಿಲ್ಲ. ಹಾಗಾಗಿ ಮುಖ್ಯಮಂತ್ರಿಗಳು ಇದನ್ನು ಸಿಬಿಐ ತನಿಖೆಗೇ ವಹಿಸಬೇಕುʼʼ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ʻʻಕಾಂಗ್ರೆಸ್ ಏನೇ ಹೇಳಲಿ, ಎಚ್.ಡಿ ಕುಮಾರಸ್ವಾಮಿ ಅವರು NDA ಒಕ್ಕೂಟದ ಒಂದು ಭಾಗವಾಗಿದ್ದಾರೆ. NDAದಲ್ಲಿ ಇರುವ ಯಾರನ್ನೂ ಬಿಜೆಪಿ ಮುಗಿಸುವ ಅಥವಾ ಕೈ ಬಿಡುವ ಮಾತೇ ಇಲ್ಲʼʼ ಎಂದರು.

ʻʻಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಸೇರಿ ಶಾಸಕರ ರಾಜೀನಾಮೆ ಕೊಡಿಸಿ ಜೆಡಿಎಸ್ ಪಕ್ಷ ಮತ್ತು ಕುಮಾರಸ್ವಾಮಿ ಅವರನ್ನು ಮುಗಿಸಲು ಸಂಚು ರೂಪಿಸಿದ್ದು ನೆನಪಿಲ್ಲವೇ? ಮಾಜಿ ಸಿಎಂ ಕುಮಾರಸ್ವಾಮಿ ಅವಧಿಯಲ್ಲಿ ಹಗರಣಗಳು ನಡೆದಿದ್ದರೆ ತನಿಖೆ ನಡೆಸಲಿ. ಕುಮಾರಸ್ವಾಮಿಯವರೂ ತನಿಖೆ ನಡೆಸಿ ಎಂದಿದ್ದಾರೆ. ತಮ್ಮದೇ ಸರ್ಕಾರವಿದೆ. ತನಿಖೆ ನಡೆಸಿʼʼ ಎಂದು ಸವಾಲು ಹಾಕಿದರು.

ʻʻಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ಸರ್ಕಾರಕ್ಕೆ ಜನರ ಕ್ಷೇಮಕ್ಕಿಂತ ಅವರ ರಾಜಕೀಯ ಸ್ವಾರ್ಥವೇ ಹೆಚ್ಚಾಗಿದೆ. ಭ್ರಷ್ಟಾಚಾರದ ಜನಕ ಕಾಂಗ್ರೆಸ್ ಪಕ್ಷ ಅರಾಜಕತೆಯ ಬಗ್ಗೆ ಮಾತುಗಳನಾಡುತ್ತಿದೆʼʼ ಎಂದು ಕೇಂದ್ರ ಸಚಿವ ಜೋಶಿ ಖಂಡಿಸಿದ್ದಾರೆ.

Tags:    

Similar News